ಶನಿವಾರ, ಫೆಬ್ರವರಿ 27, 2021
31 °C

ಎನ್‌ಜಿಒ ಹುಟ್ಟಿಗೆ ಕಾರಣವಾದ ಉಡುಗೊರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಣ್ಣು ಕಾಣದ ಮಗುವಿಗೆ ಏನು ಗಿಫ್ಟ್‌ ಕೊಡಬಹುದು?’ ಈ ಒಂದು ಪ್ರಶ್ನೆಯೇ ‘ಗಿಫ್ಟ್‌ ಏಬಲ್ಡ್‌’ ಎಂಬ ಸ್ವಯಂಸೇವಾ ಸಂಸ್ಥೆಯೊಂದರ ಆರಂಭಕ್ಕೆ ಕಾರಣವಾಯಿತು ಎಂಬ ಕತೆ ನಿಮಗೆ ಗೊತ್ತೆ? 

ಹೌದು! 2013ರಲ್ಲಿ ಆರಂಭವಾದ ‘ಗಿಫ್ಟ್‌ ಏಬಲ್ಡ್‌’ ಸಂಸ್ಥೆಯ ಆರಂಭದ ಹಿಂದೆ ಕುತೂಹಲದ ಕತೆಯಿದೆ. ಪ್ರಾರ್ಥನಾ ಹಾಗೂ ಪ್ರದೀಪ್‌ ಕೌಲ್‌ ದಂಪತಿ ಈ ಸಂಸ್ಥೆಯ ಸ್ಥಾಪಕರು. ಪ್ರಾರ್ಥನಾ 11 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರ ಪತಿ ಪ್ರತೀಕ್‌, ಒಮ್ಮೆ ತಮ್ಮ ಕಂಪನಿಯಲ್ಲಿ 5 ಜನ ದೃಷ್ಟಿಮಾಂದ್ಯ ಮಕ್ಕಳ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಏನು ಉಡುಗೊರೆ ಕೊಡಬಹುದು ಎಂದು ಪತ್ನಿಯನ್ನು ಪ್ರಶ್ನಿಸಿದರು. ಆಗ ಅವರು ಥಟ್ಟನೆ ‘ಸಂಗೀತ ಉಪಕರಣ’ ಎಂದರಂತೆ. ಮತ್ತೆ ಯೋಚನೆ ಮಾಡಿದಾಗ ‘ಅಂತಹ ಮಕ್ಕಳಿಗೆ ಸಂಗೀತ ಉಪಕರಣವೇ ಯಾಕೆ? ಬೇರೆ ಏನಾದರೂ ಕೊಡಬಹುದಲ್ಲಾ?’ ಎಂಬ ಆಲೋಚನೆಯೇ ಈ ಸಂಸ್ಥೆ ಆರಂಭಕ್ಕೆ ಕಾರಣ.

ಅಂಗವಿಕಲರ ಸಾಮರ್ಥ್ಯ ಗುರುತಿಸುವ ಜತೆಗೆ ಅವರು ತಯಾರಿಸಿದ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ‘ಗಿಫ್ಟ್‌ ಏಬಲ್ಡ್‌’ ಮಾಡುತ್ತಿದೆ.  ಕರಕುಶಲ ಮತ್ತು ಗುಡಿಕೈಗಾರಿಕೆ ತರಬೇತಿ, ಆರೋಗ್ಯ, ಸ್ವಚ್ಛತೆ ಬಗ್ಗೆ ಅರಿವು... ಹೀಗೆ ದೈಹಿಕವಾಗಿ ಅಸಮರ್ಥರಾದವರಿಗೆ ಹಲವಾರು ಕಾರ್ಯಕ್ರಮ ರೂಪಿಸುತ್ತ ಅವರಿಗೆ ಸ್ವಾವಲಂಬಿ ಜೀವನ ರೂಪಿಸುವ ಕಾರ್ಯದಲ್ಲಿ ತೊಡಗಿದೆ. 

ಅಂಗವಿಕಲ ಮಕ್ಕಳ ಏಳಿಗೆ, ಆರೋಗ್ಯ ಕಾಳಜಿ, ಸ್ವಾವಲಂಬನೆ, ಬೇರೆ ಬೇರೆ ಕೌಶಲಗಳ ತರಬೇತಿಯನ್ನು ಈ ಎನ್‌ಜಿಒ ಮಾಡುತ್ತಿದೆ. ಈ ಸಂಸ್ಥೆ ಇ ಕಾಮರ್ಸ್‌ ‘ಗಿಫ್ಟ್‌ ಏಬಲ್ಡ್‌. ಕಾಮ್‌’ ಮೂಲಕ ಅಂಗವಿಕಲರು ತಯಾರಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿದೆ. ಇಲ್ಲಿ ಅಂಗವಿಕಲರಿಗೆ ಸೂಕ್ತವಾದ ಉಡುಗೊರೆ, ಇಷ್ಟವಾಗುವ ವಸ್ತುಗಳ ಆಯ್ಕೆಯೂ ಇದೆ. ಕಣ್ಣು ಕಾಣದವರಿಗೆ ಚೆಸ್‌ ಬೋರ್ಡ್‌, ಬ್ರೈಲ್‌ ಗ್ರೀಟಿಂಗ್‌ ಕಾರ್ಡ್‌, ಬ್ರೈಲ್‌ ಸ್ಲೇಟ್‌ಗಳು, ಆಟದ ವಸ್ತು, ಡ್ರಾಯಿಂಗ್‌ ಬೋರ್ಡ್‌ ಹಾಗೂ ವರ್ಡ್‌ ಬ್ಲಾಕ್‌ ಇಂತಹ ಉಡುಗೊರೆ ಇಲ್ಲಿ ಸಿಗುತ್ತವೆ. 

‘ಗಿಫ್ಟ್‌ ಏಬಲ್ಡ್‌‘ ಸದಸ್ಯರು ಗ್ರಾಮೀಣ ಭಾಗಗಳಿಗೆ ತೆರಳಿ ಅಂಗವಿಕಲರ ವಿಶೇಷ ಸಾಮರ್ಥ್ಯವನ್ನು ಗುರುತಿಸಿ ಅವರ ಅಸಕ್ತಿಯ ಕ್ಷೇತ್ರದಲ್ಲಿ ತರಬೇತಿ ನೀಡುತ್ತಾರೆ. ಎರಡು ತಿಂಗಳ ತರಬೇತಿ ನೀಡಿದ ಬಳಿಕ ಅವರು ತಯಾರಿಸಿದ ವಸ್ತುಗಳನ್ನು ತಮ್ಮ ಇ ಕಾಮರ್ಸ್‌ ವೇದಿಕೆ ಮೂಲಕ ಮಾರಾಟ ಮಾಡುತ್ತದೆ. ಇಲ್ಲಿ ತಯಾರಾಗುವ ಬಹುತೇಕ ವಸ್ತುಗಳು ಪರಿಸರ ಸ್ನೇಹಿಯೂ ಹೌದು.

 ‘ಅಂಗವಿಕಲರಿಂದ ಅಂಗವಿಕಲರಿಗಾಗಿ ಎಂದು ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ವಿಭಿನ್ನ ವಿನ್ಯಾಸದ ಕ್ಯಾಂಡಲ್‌ಗಳು, ಜೂಟ್‌ ಬ್ಯಾಗ್‌ಗಳು, ಪೇಪರ್‌ ಬ್ಯಾಗ್‌, ಟೆರಕೋಟಾ ಕಿವಿಯೋಲೆ, ಕೀ ಚೈನ್‌, ಆಭರಣ ಬಾಕ್ಸ್‌, ಪೇಟಿಂಗ್‌ಗಳು ಇವೆಲ್ಲವೂ ಸಿಗುತ್ತವೆ. ಸುಮಾರು 1600 ಅಂಗವಿಕಲರು ಈ ಸಂಸ್ಥೆಯ ಮೂಲಕ ಹಣ ಗಳಿಸುತ್ತಿದ್ದಾರೆ.
ಕಾರ್ಪೊರೇಟ್‌ ಕಂಪನಿಗಳೇ ನಮ್ಮ ಗ್ರಾಹಕರು’ ಎಂದು ಗಿಫ್ಟ್‌ ಏಬಲ್ಡ್‌ ಕಾರ್ಯಕ್ರಮ ಸಂಯೋಜಕಿ ದೀಕ್ಷಿತ್‌ ತಿಳಿಸಿದರು. 

ಈ ಎನ್‌ಜಿಒ ಅಂಗವಿಕಲ ಮಕ್ಕಳ ಆರೋಗ್ಯ, ಬೆಳವಣಿಗೆ ಬಗ್ಗೆ ವಿಶೇಷ ಕಾರ್ಯಾಗಾರಗಳನ್ನು ಮಾಡುತ್ತದೆ. ರಾಜ್ಯದ  ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲ ಮಕ್ಕಳಿಗೆ ಅಗತ್ಯವಿರುವ ಕುರ್ಚಿ, ಹಿಯರಿಂಗ್‌ ಏಡ್‌ ಮೊದಲಾದವನ್ನು ಕಾರ್ಪೊರೇಟ್‌ ಕಂಪನಿಗಳ ನೆರವಿನೊಂದಿಗೆ ವಿತರಿಸುತ್ತದೆ. ವಿಶೇಷ ಮಕ್ಕಳಿಗೆ ಫಿಸಿಯೊ ಥೆರಪಿ, ಅಕ್ಯುಪ್ರೆಶರ್‌, ಬೇರೆ ಬೇರೆ ಥೆರಪಿಗಳನ್ನು ಕಡಿಮೆ ದರದಲ್ಲಿ ಮಾಡುತ್ತದೆ ಎಂದು ಸಂಸ್ಥೆಯ ಕೆಲಸದ ಬಗ್ಗೆ ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ಅಂಗವಿಕಲ ಮಹಿಳೆಯರಿಗಾಗಿ ಸ್ವಚ್ಛತಾ ಜಾಗೃತಿ ಕಾರ್ಯಾಗಾರಗಳನ್ನೂ ನಡೆಸುತ್ತದೆ. ಋತುಸ್ರಾವ, ಲೈಂಗಿಕ ಸ್ವಚ್ಛತೆ, ಬಾಣಂತನ, ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಮಾತು ಬಾರದ, ಕಿವಿ ಕೇಳದವರಿಗೆ ಸಂಜ್ಞಾ ಭಾಷೆಗಳ ಮೂಲಕವೇ ತಿಳಿಸಿಕೊಡಲಾಗುತ್ತದೆ.

ಇದಲ್ಲದೇ ಸಾಮಾನ್ಯರಿಗೆ ಅಂಗವಿಕಲರ ಜೊತೆ ಸಂವಹನ, ಹೇಗೆ ನಡೆದುಕೊಳ್ಳಬೇಕು ಬಗ್ಗೆ  ಕಾರ್ಯಾಗಾರ ನಡೆಸುತ್ತದೆ.

ಮಾಹಿತಿಗೆ: www.giftabled.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು