ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಕಾರಣ? ಯಾರು ಹೊಣೆ?

Last Updated 21 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಹೆತ್ತ ಮಗಳಿಂದಲೇ ಅಮಾನುಷವಾಗಿ ಕೊಲೆಯಾದ ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ ಜೈನ್ ಪ್ರಕರಣದ ತನಿಖೆಯಲ್ಲಿ ಹೊರಬಂದ ಸಂಗತಿಗಳು ಸಮಾಜದ ಆರೋಗ್ಯವನ್ನೇ ಪ್ರಶ್ನಿಸುವಂತಿವೆ. ಈ ತಲ್ಲಣಕಾರಿ ಪ್ರಕರಣ ಅಪರಾಧದ ಪರಿಧಿಯನ್ನೂ ಮೀರಿ ಸಮಾಜೋ-ಸಾಂಸ್ಕೃತಿಕ ಆಯಾಮಗಳನ್ನು ಒಳಗೊಂಡಿರುವಂತೆ ಗೊಚರಿಸುತ್ತಿದೆ.

ಈ ದುರಂತ ಭವಿಷ್ಯದ ಪೀಳಿಗೆಯ ಒಂದು ವಲಯ ಆಯ್ಕೆ ಮಾಡಿಕೊಳ್ಳಬಹುದಾದ ಮಾರ್ಗದ ಸೂಚಕ ಅಷ್ಟೇ ಅಲ್ಲ, ಆರೋಗ್ಯವಂತ ಸಮಾಜ ಹಾಗೂ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಬಯಸುವವರಿಗೆ ಒಂದು ಎಚ್ಚರಿಕೆ ಗಂಟೆ ಎನ್ನುವುದು ಶಿಕ್ಷಣ, ಆರೋಗ್ಯ ಹಾಗೂ ಪೊಲೀಸ್ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವವರ ಒಟ್ಟಾರೆ ಅಭಿಪ್ರಾಯ.

‘ಈ ಘಟನೆ ಸಮಾಜದಲ್ಲಿ ಮೌಲ್ಯಗಳು ಪತನವಾಗುತ್ತಿರುವುದರ ಸ್ಪಷ್ಟ ಸಂಕೇತ’ ಎನ್ನುವುದು ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಜೆ ಎಂ ಮಲ್ಲಿಕಾರ್ಜುನಯ್ಯ ಅವರ ಸ್ಪಷ್ಟ ನಿಲುವು.

‘ಅಧಿಕಾರ ಹಾಗೂ ಹಣಗಳಿಕೆಯ ಉತ್ಸಾಹದಲ್ಲಿ ನಮ್ಮ ಮಕ್ಕಳ ಬೆಳವಣಿಗೆಯನ್ನು ನಿರ್ಲಕ್ಷಿಸುವ ಪಾಲಕರೇ ಇಂತಹ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಇಲ್ಲಿ ತಪ್ಪಿರುವುದು ಪಾಲಕರಲ್ಲಿಯೇ. ಮಕ್ಕಳಲ್ಲಿ ಅಲ್ಲ’ ಎಂದು ವಿವರಿಸುತ್ತಾರೆ.

ಮಕ್ಕಳ ವರ್ತನೆಗೆ ಯಾರು ಕಾರಣ?

ತಂದೆ-ತಾಯಿ ತಮ್ಮ ದೈನಂದಿನ ಜೀವನದಲ್ಲಿ ಎಷ್ಟು ಹೊತ್ತು ಮಕ್ಕಳ ಜೊತೆಗೆ ವಿನಿಯೋಗಿಸುತ್ತಾರೆ ಎಂಬುದರ ಮೇಲೆ ಮಕ್ಕಳ ನೈತಿಕ ಬದುಕು ಅವಲಂಬಿತವಾಗಿದೆ. ಹೇಗೆ ವರ್ತಿಸಬೇಕು ಎಂದು ಮಕ್ಕಳಿಗೆ ಹೇಳುವುದಕ್ಕಿಂತಲೂ ಹೆಚ್ಚಾಗಿ ಪಾಲಕರಿಗೆ ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ಹೇಳುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂಬುದು ಅವರ ನಿಲುವು.

ಮಕ್ಕಳು ಮಾಡಬಹುದಾದ ಚಿಕ್ಕ ಪುಟ್ಟ ತಪ್ಪುಗಳನ್ನು ಸಹ ಇಂದಿನ ಅನೇಕ ಪಾಲಕರು ಸಮರ್ಥಿಸುತ್ತಾರೆ. ಮೌಲ್ಯಾಧಾರಿತ ಜೀವನ ಹಾಗೂ ಸಮಯಪಾಲನೆಯಂತಹ ವಿಷಯಗಳಲ್ಲೂ ಮಕ್ಕಳ ಬಗೆಗೆ ಇಂತಹ ಪಾಲಕರ ನಡೆ ಬೇಜವಾಬ್ದಾರಿಯುತವಾಗಿದೆ ಎನ್ನುತ್ತಾರೆ. ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷಣದಲ್ಲೂ ಕೆಲ ಸಮಸ್ಯೆಗಳಿರುವುದನ್ನು ಅವರು ಗುರುತಿಸುತ್ತಾರೆ.

‘ನಮ್ಮ ಶಿಕ್ಷಣ ಕೌಶಲ್ಯದ ಅಭಿವೃದ್ದಿ ಹಾಗೂ ಜ್ಞಾನದ ಬೆಳವಣಿಗೆ ಕೇಂದ್ರಿತವಾಗಿದೆ. ಇಂದು ಮಕ್ಕಳು ಕಲಿಯುತ್ತಿರುವ ಪಾಠಗಳಲ್ಲಿ ನೈತಿಕ ಮೌಲ್ಯಗಳೇ ಇಲ್ಲ. ಅದೂ ಕೂಡ ಮಕ್ಕಳ ಮೌಲ್ಯರಹಿತ ಜೀವನಕ್ಕೆ ಕಾರಣವಾಗಿದೆ’ ಎನ್ನುವುದು ಅವರ ವಾದ.

‘ಆ ಮಗು ಮಾಡಿರುವ ಅಪರಾಧ ಅಕ್ಷಮ್ಯ. ಆದರೆ, ಮಕ್ಕಳು ಹಾಗೆ ವರ್ತಿಸಲು ಯಾರು ಕಾರಣ? ಆ ಮಗು ದೈಹಿಕವಾಗಿ ತಂದೆಯ ಸಾವಿಗೆ ಕಾರಣವಾಗಿರಬಹುದು. ಆದರೆ, ಆಕೆಯ ಕೊನೆಯತನಕ ಪ್ರತಿ ಕ್ಷಣದ ಮಾನಸಿಕೆ ಸಾವಿಗೆ ಯಾರು ಕಾರಣ? ಅಂತಹ ಮಕ್ಕಳು ಸಾಂತ್ವನಕ್ಕೆ ಅರ್ಹರೇ ಹೊರತು ನಮ್ಮ ಸಿಟ್ಟಿಗಲ್ಲ. ಇದು ನಮ್ಮನ್ನು ನಾವು ಚಿಂತನೆಗೆ ಒಳಪಡಿಸಿಕೊಳ್ಳಬೇಕಾದ ಸಮಯ’ ಎಂದು ಒತ್ತಿ ಹೇಳುತ್ತಾರೆ.

ಕೇವಲ ಮಾಧ್ಯಮಗಳ ಅಪರಾಧ ವೈಭವೀಕರಣದ ಪ್ರವೃತ್ತಿ ಮಾತ್ರ ಮಕ್ಕಳನ್ನು ಇಂತಹ ಕೃತ್ಯಕ್ಕೆ ಪ್ರೇರೇಪಿಸುತ್ತದೆ ಎಂಬ ವಾದವನ್ನು ಮಲ್ಲಿಕಾರ್ಜುನಯ್ಯ ಒಪ್ಪುವುದಿಲ್ಲ. ‘ಇಂತಹ ವಾದ ಸಂಪೂರ್ಣವಾಗಿ ಸತ್ಯವಲ್ಲ’ ಎಂದೇ ನನ್ನ ಅನಿಸಿಕೆ ಎನ್ನುತ್ತಾರೆ.

ಮಕ್ಕಳಲ್ಲೂ ಬಂಡಾಯ ಪ್ರವೃತ್ತಿ!

ಅಭಯ ಆಸ್ಪತ್ರೆಯ ಮನೋವೈದ್ಯರಾದ ಡಾ.ಎ.ಜಗದೀಶ್ ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸುತ್ತಾರೆ. ‘ಕೆಲಮಕ್ಕಳ ಮನೋವೃತ್ತಿಯಲ್ಲಿ ಸಮಸ್ಯೆಗಳಿರುತ್ತವೆ. ಆಪೋಜಿಷ್ನಲ್ ಡಿಫಾಯಂಟ್ ಡಿಸಾರ್ಡರ್ (ಓಡಿಡಿ) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಪಾಲಕರು ಏನೇ ಹೇಳಿದರು ಇಂತಹ ಮಕ್ಕಳಿಗೆ ಅದು ವರ್ಜ್ಯ. ಹೀಗಾಗಿ ಪಾಲಕರ ಮಾತುಗಳನ್ನು ವಿರೋಧಿಸುತ್ತಾರೆ. ಅವರು ಸಹಾನುಭೂತಿಗಳಾಗಿರದೇ ಹೆಚ್ಚು ಹಿಂಸಾತ್ಮಕ ಪ್ರವೃತ್ತಿಯವರಾಗಿರುತ್ತಾರೆ. ಮಕ್ಕಳ ಪಾಲನಾ ಕೌಶಲ್ಯ ಬಹಳ ಮುಖ್ಯ. ಅತಿಯಾದ ಶಿಸ್ತು ಮಕ್ಕಳಲ್ಲಿ ಬಂಡಾಯ ಪ್ರವೃತ್ತಿಗೆ ಕಾರಣವಾಗುತ್ತದೆ. ಸ್ನೇಹ ಸಂಪರ್ಕಕ್ಕೆ ಬರುವ ಇತರೆ ಮಕ್ಕಳ ಹಿನ್ನೆಲೆಯೂ ಬಹಳ ಮುಖ್ಯವಾದ ಅಂಶ. ಸಾಮಾಜಿಕ ಹಾಗೂ ದೃಶ್ಯ ಮಾದ್ಯಮಗಳ ಅಪರಾಧಗಳ ಅತಿ ರಂಜನೀಯತೆ ಮಕ್ಕಳನ್ನು ಇಂತಹ ಮಾರ್ಗಗಳಿಗೆ ಪ್ರಚೋದಿಸುತ್ತದೆ’ ಎಂದು ಡಾ ಜಗದೀಶ್ ವಿಶ್ಲೇಷಿಸುತ್ತಾರೆ.

ಹದಿಹರೆಯದ ಮಕ್ಕಳು ಸಂಬಂಧ ಹಾಗೂ ಸ್ನೇಹದ ನಡುವಿನ ತೆಳುವಾದ ರೇಖೆ ಎಳೆಯಲು ಅಸಮರ್ಥರಾಗಿರುತ್ತಾರೆ. ಅವರ ಮನೋವೃತ್ತಿಯ ಸುಧಾರಣಾ ಮಾರ್ಗ ಸರಿಯಾಗಿರದಿದ್ದರೆ ಮಕ್ಕಳು ಹಿಂಸಾಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸುತ್ತಾರೆ.

ಪೊಲೀಸ್ ಇಲಾಖೆಯ ಪ್ರಕಾರ ಅಪರಾಧ ಚುಟುವಟಿಕೆಗಳಲ್ಲಿ ತೊಡಗುವ ಪ್ರೌಢಾವಸ್ಥೆಯ ಮಕ್ಕಳ ಸಂಖ್ಯೆ ಕಳೆದ ಒಂದು ದಶಕದಲ್ಲಿ ತೀವ್ರಗತಿಯಲ್ಲಿ ಏರಿದೆ. ದೃಶ್ಯಮಾಧ್ಯಮ ಹಾಗೂ ಸಿನಿಮಾಗಳಲ್ಲಿ ಪ್ರಸಾರವಾಗುವ ಅಪರಾಧದ ವೈಭವೀಕರಣ ಈ ಬೆಳವಣಿಗೆಗೆ ಪ್ರಮುಖ ಕಾರಣವೆಂಬುದು ಪೊಲೀಸರ ಅಭಿಪ್ರಾಯ.

ಅಪರಾಧದ ವೈಭವೀಕರಣ

‘ಕೊಲೆ ಎಂದರೇನು, ಅದಕ್ಕಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಅದನ್ನು ಮಾಡುವ ರೀತಿ ಹೇಗಿರಬೇಕು, ಕೊಲೆಯ ನಂತರ ಹೇಗೆ ತಪ್ಪಿಸಿಕೊಳ್ಳಬೇಕು, ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು ಹಾಗೂ ಪೊಲೀಸರಿಗೆ ಯಾವ ರೀತಿ ಹೇಳಿಕೆ ನೀಡಬೇಕು ಎಂಬ ಅತಿ ಸೂಕ್ಷ್ಮ ವಿಷಯಗಳನ್ನು ಸುದ್ದಿ ವಾಹಿನಿಗಳು ಗಂಟೆಗಟ್ಟಲೆ ಪ್ರಸಾರ ಮಾಡುತ್ತವೆ. ಇದು ಮಕ್ಕಳಿಗೆ ಅಪರಾಧ ಮಾಡಲು ನೇರವಾದ ಮಾರ್ಗದರ್ಶನ.
ರಾಜಾಜಿನಗರದ ಘಟನೆಯಲ್ಲಿ ಹದಿನೈದು ವರ್ಷ ವಯಸ್ಸಿನ ಮಗುವಿಗೂ ಇಂತಹ ವಿಷಯಗಳು ಗೊತ್ತಿತ್ತು ಎಂದರೆ ಇದನ್ನು ಹೇಳಿ ಕೊಟ್ಟವರು ಯಾರು?’ ಎಂದು ಪ್ರಶ್ನಿಸುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿ ಬಿ ಬಿ ಅಶೋಕ್ ಕುಮಾರ್.

‘ಪಾಶ್ಚಾತ್ಯ ರಾಷ್ಟ್ರಗಳಲ್ಲೇನಾದರೂ ಇಂತಹ ಘಟನೆ ಸಂಭಿವಿಸದ್ದರೆ, ಇಷ್ಟೊತ್ತಿಗಾಗಲೇ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಮನೋವೈದ್ಯರು ಗಂಭೀರ ಚರ್ಚೆ ಆರಂಭಿಸಿ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದರು. ಇಂತಹ ಘಟನೆ ನಡೆದರೂ ನಾವು ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡುತ್ತಿರುವುದು ದುರಂತ. ಪೊಲೀಸ್ ಅಧಿಕಾರಿಗಳು ಆ ಇಬ್ಬರು ಮಕ್ಕಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು. ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. ಕಾನೂನು ಪರಿಧಿಯಾಚೆಗೆ ನಿಂತು ಯೋಚಿಸಬೇಕು’ ಎಂದು ಒತ್ತಿ ಹೇಳುತ್ತಾರೆ.

ಆ ಮಗುವಿಗೆ ಅಪರಾಧಿ ಪಟ್ಟ ಕಟ್ಟುವುದನ್ನು ಅಶೋಕ್ ಕುಮಾರ್ ಬಲವಾಗಿ ವಿರೋಧಿಸುತ್ತಾರೆ. ‘ಐ ರಿಗ್ರೆಟ್ ಫಾರ್ ದಿ ಸಿಸ್ಟಮ್, ನಾಟ್ ಫಾರ್ ದಿ ಕಿಡ್. ಅಪರಾಧ ಮಾಡುವ ಬಗೆಯನ್ನು ವಿವರವಾಗಿ ತೋರಿಸುವಲ್ಲಿ ಸಿನಿಮಾ-ಸುದ್ದಿ ಮಾಧ್ಯಮಗಳಿಗೆ ಇರುವ ಧಾವಂತ, ಅಪರಾಧದ ನಂತರ ಅಪರಾಧಿಗಳು ಪಡುವ ಬವಣೆ ಹಾಗೂ ಬಂದಿಖಾನೆಯಲ್ಲಿನ ನರಕ ಸದೃಶ್ಯ ತೋರಿಸುವಲ್ಲಿ ಏಕಿಲ್ಲ?’ ಎಂಬುದು ಅವರ ಪ್ರಶ್ನೆ.

ಫಲಪ್ರದವಾಗದ ಪ್ರಯತ್ನ

ಮಕ್ಕಳು ಮಾಡುವ ಕೊಲೆ ಹಾಗೂ ಮಕ್ಕಳ ಆತ್ಮಹತ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪೋಲೀಸರು ಈ ಹಿಂದೆ ಒಂದು ಚಕ್ಕಿ ಪ್ರಯತ್ನ ಮಾಡಿದರು. ಆದರೆ, ಪ್ರಯತ್ನ ಅಷ್ಟೇನೂ ಫಲಪ್ರದವಾದಂತೆ ಕಾಣಲಿಲ್ಲ.

2012ರಲ್ಲಿ ಇದ್ದಕ್ಕಿದ್ದಂತೆ ಪರೀಕ್ಷೆಯಲ್ಲಿ ಫೇಲಾಗಿ ಮಕ್ಕಳು ಮಾಡಿಕೊಳ್ಳುವ ಆತ್ಮಹತ್ಯೆಯ ವರದಿಗಳು ಪುಂಖಾನುಪುಂಖವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿದವು. ಅಂದಿನ ಬೆಂಗಳೂರು ನಗರ ಪೋಲಿಸ್ ಆಯುಕ್ತರಾಗಿದ್ದ ಬಿ ಜಿ ಜ್ಯೋತಿಪ್ರಕಾಶ್ ಮಿರ್ಜಿಯವರು ಸುದ್ದಿಮನೆಯ ಮುಖ್ಯಸ್ಥರ ಸಭೆ ನಡೆಸಿ ಮುಗ್ಧ ಮಕ್ಕಳ ಮನಸ್ಸನ ಮೇಲೆ ಗಂಭೀರವಾಗಿ ಪರಿಣಾಮ ಬೀರುವುದರಿಂದ ಹಾಗೂ ಸಮಾಜ ಸ್ವಾಸ್ಥ್ಯ ಹಾಳಾಗುವುದರಿಂದ ಮಕ್ಕಳು ಮಾಡಿಕೊಳ್ಳುವ ಆತ್ಮಹತ್ಯೆಯ ವರದಿಗಳನ್ನು ಅತಿರಂಜಿತವಾಗಿ ಪ್ರಕಟಿಸದಂತೆ; ಅದರಲ್ಲೂ ಮುಖ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಗಳನ್ನು ವಿವರಿಸದಂತೆ ಮನವಿ ಮಾಡಿಕೊಂಡಿದ್ದರು.

ಸುಮಾರು ಎರಡು ವರ್ಷಗಳ ನಂತರ ಮೂರನೇ ತರಗತಿಯ ಮಗು ತನ್ನ ಸಾವಿಗೆ ಕಾರಣಗಳನ್ನು ವಿವರಿಸಿ ಒಂದು ಪುಟದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿತು. ಆಗಲೂ ಪೋಲಿಸರು ಅದೇ ರೀತಿಯ ಮನವಿ ಮಾಡಿದ್ದರು.

2010ರಲ್ಲಿ ಬಿಕಾಂ ವಿದ್ಯಾರ್ಥಿನಿ 27 ಪುಟಗಳ ಡೆತ್‌ನೋಟ್ ಬರೆದಿಟ್ಟು ತನ್ನ ಮಲ್ಲೇಶ್ವರಂ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ತನ್ನನ್ನು ನಿರ್ಲಕ್ಷಿಸಿ ತನ್ನ ತಮ್ಮನನ್ನು ಪಾಲಕರು ಹೆಚ್ಚಾಗಿ ಇಷ್ಟಪಡುತ್ತಿದ್ದರೆಂಬುದು ಆಕೆಯ ಅಳಲಾಗಿತ್ತು. ಇದೇ ಜನವರಿಯಲ್ಲಿ ಪಿಯುಸಿ ಪ್ರಥಮ ವಿದ್ಯಾರ್ಥಿಯೊಬ್ಬ ತನ್ನ ಬಾಗಲಗುಂಟೆ ಕಾಲೇಜಿನ ಆವರಣದಲ್ಲಿ ತನ್ನ ಸಹಾಪಾಠಿಯನ್ನು ಇರಿದು ಸಾಯಿಸಿದ ವರದಿಗಳು ಪ್ರಸಾರವಾದವು. ಈ ಎರಡೂ ಘಟನೆಗಳ ನಂತರ ಮನೋವೈದ್ಯರು ಮಕ್ಕಳಲ್ಲಿನ ಹಿಂಸಾಪ್ರವೃತ್ತಿಗೆ ಅವರ ಪಾಲನೆಯ ರೀತಿ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಚರ್ಚಿಸಿದ್ದರು.

***

ಕುಟುಂಬದ ಒಬ್ಬ ಸದಸ್ಯನಾದರೂ ಮಕ್ಕಳಿಗೆ ಟ್ರಸ್ಟಿಂಗ್ ರಿಲೇಶನ್‌ಶಿಪ್ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಬೇಕು. ಆಗಲೂ ಮಕ್ಕಳಲ್ಲಿ ಬದಲಾವಣೆ ಕಾಣದಿದ್ದರೆ ಮೆಂಟಲ್ ಹೆಲ್ತ್ ಪ್ರೊಫೆಶನಲ್ಸ್‌ ಸಂಪರ್ಕಿಸಿದರೆ ಸೂಕ್ತ ಪರಿಹಾರ ಖಂಡಿವಾಗಿ ಸಿಗುತ್ತದೆ.

-ಡಾ. ಎ ಜಗದೀಶ್, ಅಭಯ ಆಸ್ಪತ್ರೆಯ ಮನೋವೈದ್ಯ

ಪರಿಹಾರ ಸುಲಭ. ರಿವರ್ಸ್ ದಿ ಸಿಸ್ಟಮ್. ಪಾಲಕರು ತಮ್ಮನ್ನು ತಾವೇ ಸುಧಾರಿಸಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಅವರ ಚಟುವಟಿಕೆಗಳ ಬಗೆಗೆ ಹೆಚ್ಚು ಗಮನ ಹರಿಸಬೇಕು.

- ಡಾ. ಜೆ ಎಂ ಮಲ್ಲಿಕಾರ್ಜುನಯ್ಯ, ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ

ಮನೆಯಲ್ಲಿ ಪಾಲಕರು ಮಕ್ಕಳಿಗೆ ನೈತಿಕ ಪಾಠಗಳನ್ನು ಹೇಳಬೇಕು. ಮಕ್ಕಳ ಸ್ನೇಹಿತರು ಯಾರು ಹಾಗೂ ಅವರ ಹಿನ್ನಲೆ ಏನು ಎಂದು ತಿಳಿದುಕೊಳ್ಳಬೇಕು. ಮುಖ್ಯವಾಗಿ ತಾಯಿ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿದಾಗ ಮಕ್ಕಳ ಮನಸ್ಸನ್ನು ಸುಲಭವಾಗಿ ಗೃಹಿಸಬಹುದು.

- ಬಿ. ಬಿ .ಅಶೋಕ್ ಕುಮಾರ್, ನಿವೃತ್ತ ಪೋಲಿಸ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT