ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯೇ ಬದುಕು ಬದುಕೇ ಭಾಷೆ

ಅನ್ಯ ಭಾಷೆ ಕಲಿಕೆಯ ಅನಿವಾರ್ಯದ ಬದುಕು
Last Updated 31 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬದುಕು ಮತ್ತು ಭಾಷೆಯ ನಡುವಿನ ಸಂಬಂಧ ಅನಾದಿಯದು. ಭಾಷೆಯಿಲ್ಲದೇ ಬದುಕಿಲ್ಲ. ಭಾಷೆಯೇ ಎರಡು ಹೊತ್ತಿನ ಊಟಕ್ಕೆ ದಾರಿ ಮಾಡಿಕೊಡುತ್ತದೆ. ಭಾಷೆ ಉತ್ತಮ ದುಡಿಮೆಗೆ ಕಾರಣವಾಗುತ್ತದೆ. ತಮ್ಮನ್ನು ಸಲಹಿದ ಭಾಷೆಯ ಕುರಿತಂತೆಕಾಯಕ ಜೀವಿಗಳ ಅಂತರಂಗದ ಮಾತುಗಳಲ್ಲಿ ವ್ಯಕ್ತವಾಗುವ ಭಾವವೇ ಅನನ್ಯ. ಕಾಯಕ ಜೀವಿಗಳು ಭಾಷೆಯನ್ನು ನಂಬಿ ಬದುಕುವ ರೀತಿಯೇ ಒಂದು ಬಗೆಯ ಅಧ್ಯಾತ್ಮವಾಗಿದೆ. ‘ಭಾಷೆಯ ಹೇರಿಕೆ’ ಎನ್ನುವ ಪದವೇ ಕರ್ಕಶ ಮತ್ತು ಒಟ್ಟು ಅರ್ಥದಲ್ಲಿ ಅಸಂಬದ್ಧ ಎನ್ನಿಸುವ ಸಂದರ್ಭದಲ್ಲಿ ಭಾಷೆಯೇ ಬದುಕಾದವರ ಅಂತರಂಗದ ದನಿಗೆ ಒಂದಷ್ಟು ಕಿವಿಯಾಗೋಣ ಬನ್ನಿ.

‘ನಾನು ಕೆಲಸಕ್ಕೆ ಇಳಿದಾಗ ಮೊದಲು ಎದುರಾದ ಸಮಸ್ಯೆಯೇ ಭಾಷೆ. ಮಾತೃಭಾಷೆ ಬಿಟ್ಟರೆ ಬೇರೆ ಭಾಷೆಯ ಜ್ಞಾನ ನನಗಿರಲಿಲ್ಲ. ಬಹುಭಾಷೆ ಅಗತ್ಯ ಬಂದದ್ದು ಡ್ರೈವಿಂಗ್‌ ಕೆಲಸ ಮಾಡುವಾಗ. ಅವರು ಹೇಳುವುದು ನನಗೆ ತಿಳಿಯುತ್ತಿರಲಿಲ್ಲ, ನಾನು ಹೇಳುವುದು ಅವರಿಗೆ ತಿಳಿಯುತ್ತಿರಲಿಲ್ಲ. ಇಂತಹ ಸಮಸ್ಯೆ ಎದುರಾದಾಗ ಭಾಷೆ ತಿಳಿದ ಸ್ನೇಹಿತರಿಗೆ ಫೋನ್‌ ಮಾಡಿ ಗ್ರಾಹಕರನ್ನು ಮಾತನಾಡಿಸಿ ಅವರು ಹೇಳಿದ್ದು ಏನೆಂದು ತಿಳಿದುಕೊಳ್ಳಬೇಕಿತ್ತು. ಇದು ಒಂದು ಅಥವಾ ಎರಡು ದಿನದ ಸಮಸ್ಯೆಯಾಗಿರಲಿಲ್ಲ. ಉತ್ತರ ಭಾರತದವರು ಹೆಚ್ಚಾಗಿ ಟ್ಯಾಕ್ಸಿಗಳನ್ನು ಬಳಸುತ್ತಾರೆ. ಹಾಗಾಗಿ ಈ ಸಮಸ್ಯೆ ಪ್ರತಿನಿತ್ಯ ನಡೆಯುತ್ತಿತ್ತು. ಬದುಕಿಗಾಗಿ ಭಾಷೆ ಕಲಿಕೆ ಅನಿವಾರ್ಯವಾಯ್ತು’ ಎನ್ನುತ್ತಾರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕ ಕನ್ನಡಿಗ ವೇಣು.

‘ನಮಗೆ ಕೆಲಸದ ಅಗತ್ಯ ಎಷ್ಟಿದೆಯೋ ಅಷ್ಟು ಬಹುಭಾಷೆ ಕಲಿಕೆ ಅನಿವಾರ್ಯ. ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು ಕಲಿಯಬೇಕು. ನಮ್ಮ ಪ್ರಾದೇಶಿಕ ಭಾಷೆ ನಮ್ಮಲ್ಲಿ ತಾಯಿಯ ಭಾವವನ್ನು ಹುಟ್ಟಿಸುತ್ತದೆ. ಆದರೆ, ಜೀವನಕ್ಕೆ ಬೇರೆ ಭಾಷೆಯೂ ಬೇಕು. ಚಾಲಕರಾಗಿ ಕೆಲಸ ಮಾಡುವವರಿಗೆ ಅನ್ಯ ಭಾಷೆ ಅರ್ಥ ಮಾಡಿಕೊಳ್ಳಲು ಮಾತನಾಡಲು ಸಾಧ್ಯವಾದರೆ ಒಳ್ಳೆಯದು. ಕೆಲವು ಬಾರಿ ಭಾಷೆಯ ಕಾರಣಕ್ಕಾಗಿಯೇ ಕೆಲವರು ಕಾರು ಚಾಲಕನ ವೃತ್ತಿ ತೊರೆದು ಹೋದದ್ದೂ ಇದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತ್ತೊಬ್ಬ ಚಾಲಕ ಮಂಜುನಾಥ್‌.

‘ನಾವು ಮಾತ್ರ ಬೇರೆ ಭಾಷೆ ಕಲಿಯಬೇಕು. ಬೇರೆ ರಾಜ್ಯದವರು ನಮ್ಮ ಭಾಷೆ ಯಾಕೆ ಕಲಿಯುವುದಿಲ್ಲ’ ಎಂಬ ಮಾತಿಗೆ ಆಂಧ್ರಪ್ರದೇಶದ ಉದ್ಯೋಗಿ ವೆಂಕಟ್‌ ತಮ್ಮ ಅನುಭವದ ಸುರುಳಿ ಬಿಚ್ಚಿಡುತ್ತಾರೆ. ‘ನಾನು ಹಿಂದಿ, ಇಂಗ್ಲಿಷ್, ತೆಲುಗು ಭಾಷೆಗಳು ಮಾತನಾಡುತ್ತಿದ್ದೆ. ಕನ್ನಡ ಬರುತ್ತಿರಲಿಲ್ಲ. ಕರ್ನಾಟಕಕ್ಕೆ ಬಂದಾಗ ಕನ್ನಡ ಕಲಿಯಲೇಬೇಕು ಎಂದು ಯಾರೂ ಒತ್ತಾಯ ಮಾಡಲಿಲ್ಲ. ಆದರೆ ನನಗೆ ಪ್ರಾದೇಶಿಕ ಭಾಷೆಯ ಕಲಿಕೆ ಅನಿವಾರ್ಯವಾಗಿತ್ತು. ಈ ಹಿಂದೆ ಪ್ರಾದೇಶಿಕ ಭಾಷೆ ಬಲ್ಲವರನ್ನು ಬ್ಯಾಂಕ್‌ಗಳಲ್ಲಿ ಕೆಲಸಕ್ಕೆ ನೇಮಿಸಬೇಕೆಂದು ಆಗ್ರಹಿಸಿ ಮುಷ್ಕರಗಳು ಕೂಡ ನಡೆದಿದ್ದವು. ವ್ಯಾವಹಾರಿಕ ಸಂವಹನಕ್ಕೆ ಪ್ರಾದೇಶಿಕ ಭಾಷೆ ಮುಖ್ಯ. ಈಗ ಕನ್ನಡ ಕಲಿತು ಸುಲಭವಾಗಿ ಮಾತಾಡುತ್ತಿದ್ದೇನೆ.ಕೆಲಸವೂ ಸರಳ. ಯಾವ ಸಮಸ್ಯೆಯೂ ಇಲ್ಲ’ ಎನ್ನುತ್ತಾರೆ.

‘ನನ್ನದು ತಮಿಳುನಾಡು. ಕರ್ನಾಟಕಕ್ಕೆ ಬಂದು ಹತ್ತು ವರ್ಷಗಳು ಕಳೆದಿವೆ. ಹೋಟೆಲ್‌ ನಡೆಸುತ್ತಿದ್ದೇನೆ. ಈ ಹೋಟೆಲ್‌ಗೆ ಬರುವವರು ಕರ್ನಾಟಕದವರೇ ಹೊರತು ಬೇರೆಯವರಲ್ಲ. ಆರಂಭದಲ್ಲಿ ನನಗೆ ಕನ್ನಡ ಬರುತ್ತಿರಲಿಲ್ಲ. ವ್ಯಾಪಾರದ ಸಮಸ್ಯೆ ಎದುರಾಗಿದ್ದು ನನಗೆ ಸ್ಥಳೀಯ ಭಾಷೆ ಬಾರದ ಕೊರತೆಯಿಂದ. ಹಾಗಾಗಿ ಹೋಟೆಲ್‌ ಮುಚ್ಚುವ ಹಂತಕ್ಕೆ ಬಂದಿತ್ತು. ಕನ್ನಡ ಕಲಿತೆ. ಈಗ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ. ಯಾವ ಭಾಷೆಯವರು ಬೇಕಾದರೂ ಹೋಟೆಲ್‌ಗೆ ಬರಬಹುದು, ಬಹುಭಾಷೆ ಇಂದಿನ ಅಗತ್ಯ’ ಎನ್ನುತ್ತಾರೆ ಜಯನಗರದಲ್ಲಿ ಹೋಟೆಲ್‌ ಉದ್ಯಮ ನಡೆಸುವ ಲಕ್ಷ್ಮಿ. ಯಾವುದೇ ಭಾಷೆಯಾಗಲಿ ಯಾರ ಮೇಲೂ ಹೇರುವ ಅಗತ್ಯವಿಲ್ಲ. ಬದುಕಿಗೆ ಅಗತ್ಯವೆನಿಸಿದಾಗ ಜಗದ ಯಾವುದೇ ಭಾಷೆಯ ಕಲಿಕೆ ತಪ್ಪಲ್ಲ. ನದಿಯ ಹರಿವಿನ ಹಾಗೆ ಮನುಷ್ಯನ ಬದುಕು ಕೂಡ.

*
ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ನಾಲ್ಕು ಭಾಷೆ ಕಲಿತಿದ್ದೇನೆ. ಅದು ಈ ಕೆಲಸದಲ್ಲಿ ಅನಿವಾರ್ಯವಾಗಿತ್ತು.
-ಮಂಜುನಾಥ ಡಿ. ವಿ. ಕಾರು ಚಾಲಕ

*
ಹಿಂದಿ ಕಲಿಯಲೇಬೇಕಾದ ಅಗತ್ಯವಿತ್ತು ಕಾರಣ, ಕಾರು ಬುಕ್‌ ಮಾಡುವ ಹೆಚ್ಚು ಜನರು ಹಿಂದಿ ಬಲ್ಲವರು. ಸ್ಥಳೀಯ ಭಾಷೆ ಮುಖ್ಯ. ಆದರೆ ಅದೇ ಜೀವನ ಎಂದರೆ ಬದುಕು ನಡೆಸಲು ಕಷ್ಟವೆನಿಸುತ್ತದೆ.
-ಮಂಜುನಾಥ್‌, ಕಾರು ಚಾಲಕ

*
ನಮ್ಮ ಸ್ಥಳೀಯ ಭಾಷೆಯೇ ಬದುಕು ಎಂದುಕೊಂಡಿದ್ದರೆ ಕರ್ನಾಟಕಕ್ಕೆ ಬಂದು ಬದುಕಲು ಆಗುತ್ತಿರಲಿಲ್ಲ. ಜೀವನಕ್ಕೆ ಬಹುಭಾಷೆ ಬೇಕೇಬೇಕು.
-ನಾರಾಯಣ ಸ್ವಾಮಿ, ಹಣ್ಣು ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT