ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ಭರವಸೆ ಇರಲಿ ಬದುಕಿನಲ್ಲಿ

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಅದು ಸದ್ದಿಲ್ಲದೆ ಆದ ಆರಂಭ, ಸಹಿಸಲಾರದಷ್ಟು ಹೊಟ್ಟೆನೋವು. ಮೂರು ಆಸ್ಪತ್ರೆಗಳು ಮತ್ತು ಹತ್ತಾರು ಪರೀಕ್ಷೆಗಳ ಬಳಿಕ, ನನ್ನ ಅಂಡಾಶಯದ ಕ್ಯಾನ್ಸರ್‌ ಕೊನೆಯ ಹಂತದಲ್ಲಿದೆ ಎಂದು ವೈದ್ಯರು ತಿಳಿಸಿದರು. ಅದ್ಯಾಕೊ ಸರಿ ಇಲ್ಲ ಅನ್ನಿಸಿತು ನನಗೆ. ಇನ್ನೊಬ್ಬ ವೈದ್ಯರ ಅಭಿಪ್ರಾಯ ಪಡೆಯಲು ಒತ್ತಾಯಿಸಿದೆ. ಪರಿಣಾಮ ಇನ್ನೊಂದು ಆಸ್ಪತ್ರೆ, ಮತ್ತಷ್ಟು ಪರೀಕ್ಷೆಗಳು ನಡೆದವು. ‘ಕ್ಯಾನ್ಸರ್‌ ಎರಡನೇ ಹಂತದಲ್ಲಿದೆ’ ಎಂದು ಇಲ್ಲಿನ ವೈದ್ಯರು ಹೇಳಿದರು. ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯವನ್ನು ತೆಗೆದರು. ಕಿಮೊ ಥೆರಪಿಗೆ ಒಳಗಾಗಲೇಬೇಕು ಎಂಬುದು ವೈದ್ಯರ ಸಲಹೆಯಾಗಿತ್ತು. ಮೊದಲ ಚಿಕಿತ್ಸೆ 2016ರ ಮೇ 19ರಂದು ನಡೆಯಿತು.

ಕಿಮೊ ಥೆರಪಿ ನನಗೆ ಇಷ್ಟವಿರಲಿಲ್ಲ. ಯಾಕೆಂದರೆ ಉದ್ದವಾದ ಕೂದಲುಗಳನ್ನು ಕಳೆದುಕೊಳ್ಳುವುದು ನನಗೆ ಬೇಕಿರಲಿಲ್ಲ. ಅನಿವಾರ್ಯವೇ ಆದಾಗ ತಲೆ ಬೋಳಿಸಲು ಒಪ್ಪಿದೆ. ನನ್ನ ಕಾಯಿಲೆಯ ಬಗ್ಗೆ ಮಾತನಾಡುವುದು, ನನ್ನ ಕತೆಯನ್ನು ಬೇರೆಯವರಿಗೆ ಹೇಳುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಯಾಕೆಂದರೆ, ಎಷ್ಟಾದರೂ ನಾನು ಇನ್ನೊಂದು ಮನೆ ಬೆಳಗಬೇಕಿರುವ ಮುದ್ದಿನ ಮಗಳಲ್ಲವೇ! ನನ್ನ ಕಾಯಿಲೆ ಗೊತ್ತಾದ ಬಳಿಕ ನಾನು ಅನೇಕ ಸ್ನೇಹಿತರನ್ನು ಕಳೆದುಕೊಂಡೆ. ಕೆಲವರು ನನ್ನ ಬೆಂಬಲಕ್ಕೆ ನಿಂತಿದ್ದರು.

ಇನ್ನು ಇರುವುದು ಆರು ತಿಂಗಳು ಮಾತ್ರ ಎಂದು ವೈದ್ಯರು ಹೇಳಿದ್ದರು. ಅದರೊಳಗೆ ಮದುವೆಯಾಗುವಂತೆ ಸೋದರನ ಮನವೊಲಿಸಿದೆ. ಈ ಮದುವೆಯ ಒಂದೊಂದು ಕ್ಷಣವನ್ನೂ ಮನಸಾರೆ ಅನುಭವಿಸಿದೆ. ಆದರೆ, ಒಂದು ದಿನ ಸಣ್ಣ ಮಗುವೊಂದು, ‘ನೀನು ಹುಟ್ಟಿನಿಂದಲೇ ಬೋಳು ತಲೆಯವಳೇ’ ಎಂದು ಪ್ರಶ್ನಿಸಿದಾಗ ಕುಸಿದುಹೋದೆ. ಕೊನೆಗೆ, 2016ರ ಸೆಪ್ಟೆಂಬರ್‌ 30ರಂದು ನನ್ನನ್ನು ‘ಕ್ಯಾನ್ಸರ್‌ ಮುಕ್ತೆ’ ಎಂದು ಘೋಷಿಸಲಾಯಿತು.

ಕ್ಯಾನ್ಸರ್‌ ವಿರುದ್ಧ ಹೋರಾಡುವುದಕ್ಕಿಂತ ಸಮಾಜವನ್ನು ಎದುರಿಸುವುದೇ ಕಷ್ಟ ಎಂಬುದು ನಾನು ಈ ಅವಧಿಯಲ್ಲಿ ಕಂಡುಕೊಂಡ ಪಾಠ. ನನಗೆ ಮಕ್ಕಳಾಗದು ಎಂಬುದು ನಿಚ್ಚಳ. ಹಾಗಾಗಿಯೇ, ಹೆಂಡತಿಯನ್ನು ಕಳೆದುಕೊಂಡವನು ಅಥವಾ ವಿಚ್ಛೇದಿತನನ್ನು ಮದುವೆ ಆಗುವಂತೆ ಎಲ್ಲರೂ ನನಗೆ ಹೇಳುತ್ತಿದ್ದರು. ‘ಕ್ಯಾನ್ಸರ್‌ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಹಾಗಾಗಿ, ನನ್ನ ಬಟ್ಟೆ, ತಟ್ಟೆಗಳನ್ನು ಬೇರೆಯೇ ಇರಿಸಿ’ ಎಂದು ನನ್ನ ಅಪ್ಪ–ಅಮ್ಮನಿಗೆ ಹೇಳಿದವರ ಸಂಖ್ಯೆ ಕಡಿಮೆಯೇನೂ ಅಲ್ಲ.

‘ಇನ್ನು ಇರುವುದು 24 ಗಂಟೆಗಳಷ್ಟೇ’ ಎಂದು ನನಗೆ ವೈದ್ಯರು ತಿಳಿಸಿದ್ದೂ ಈ ನಡುವೆ ನಡೆದುಹೋಗಿತ್ತು. ಸಂಗೀತ ಆಲಿಸುವುದು, ಸುದೀರ್ಘ ನಡಿಗೆಯಿಂದ ಒತ್ತಡ ಕಮ್ಮಿ ಮಾಡಲು ಯತ್ನಿಸಿದ್ದೆ. ದೇವರ ಜತೆ ಮಾತನಾಡುವುದು ನಡೆದೇ ಇತ್ತು. ಎಲ್ಲಕ್ಕಿಂತ ಹೆಚ್ಚು ನೆರವಾದದ್ದೂ ಅದೇ.

ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದೇ ಈಗ ನನ್ನ ಮುಖ್ಯ ಕೆಲಸ. ಮಕ್ಕಳ ಜತೆ ಆಟ, ಒಡನಾಟ ಇನ್ನೊಂದು ಹವ್ಯಾಸ. ಅವರಲ್ಲಿ ಭರವಸೆ ತುಂಬುವುದು ಇದರ ಉದ್ದೇಶ. ದೇಹದ ಮೇಲೆ ನಂಬಿಕೆ ಇರಿಸಿ ಎಂದು ಅವರಿಗೆ ಹೇಳುತ್ತೇನೆ; ಚೇತರಿಕೆಯ ಪವಾಡವೆಂಬುದು ಇದೆ ಎಂಬುದನ್ನು ಅವರಿಗೆ ನೆನಪಿಸುತ್ತೇನೆ. ನಾನೆಂದರೆ ನನ್ನ ಗರ್ಭಕೋಶ ಅಲ್ಲ. ನಾನೆಂಬ ವ್ಯಕ್ತಿಗಾಗಿ ನನ್ನನ್ನು ಇಷ್ಟಪಡುವ ಹುಡುಗನೊಬ್ಬನ ನಿಜ ಪ್ರೀತಿಯ ಕನಸು ನನ್ನಲ್ಲಿ ಈಗಲೂ ಇದೆ. ಮಕ್ಕಳನ್ನು ಹೆರುವ ಯಂತ್ರ ಎಂಬುದಕ್ಕಿಂತ ಹೆಚ್ಚಿನದ್ದು ಒಬ್ಬ ಹೆಣ್ಣಿನಲ್ಲಿ ಇದೆ ಎಂಬುದೇ ಸತ್ಯ.

**

‘ಬೀಯಿಂಗ್‌ ಯು’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌: beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT