ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಮಸ್ಯೆ ಎಚ್ಚರಿಸುವ ಮೆಟ್ರೊ ಗೋಡೆ

ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದಲ್ಲಿ ಇಂಗುಗುಂಡಿ ಮಣ್ಣಿನಿಂದಲೇ ಚಿತ್ತಾರ
Last Updated 25 ನವೆಂಬರ್ 2019, 5:20 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿಗೆ ಶೀಘ್ರದಲ್ಲೇ ನೀರಿನ ಸಮಸ್ಯೆ ಎದುರಾಗಲಿದೆ. ಅದನ್ನು ತಡೆಗಟ್ಟಲು ಬೆಂಗಳೂರಿಗರು ಏನು ಮಾಡಬಹುದು ಎಂಬುದನ್ನು ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದ ಒಳಗಿನ ಗೋಡೆಗಳ ಮೇಲೆ ಬಿತ್ತರವಾಗಿರುವ ಚಿತ್ರಗಳು ಉತ್ತರಿಸುತ್ತವೆ.

ತ್ವರಿತ ಅಭಿವೃದ್ಧಿ ಹಾದಿಯಲ್ಲಿ ಬೆಳೆಯುತ್ತಿರುವ ಸಿಲಿಕಾನ್‌ ಸಿಟಿಯಲ್ಲಿ ಜಲಮೂಲಗಳೆಲ್ಲಾ ಕಣ್ಮರೆಯಾಗುತ್ತಿವೆ. ಉಳಿದ ಅಲ್ವ ಸಲ್ಪ ಜಲಮೂಲಕ್ಕೆ ನಿತ್ಯ ಕಸ, ಕೊಳಚೆ ನೀರು ಸೇರಿ ಬಳಕೆಗೆ ಯೋಗ್ಯವಾಗದ ಸ್ಥಿತಿ ತಲುಪಿದೆ. ಇಂತಹ ಅಪಾಯ ಎದುರಿಸುತ್ತಿರುವ ಬೆಂಗಳೂರಿನ ಜಲಸ್ಥಿತಿಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ ಜಲ ನಮ್ಮಿಂದ ದೂರಾಗಿ, ಬರದ ನಗರ ಎಂಬ ಪಟ್ಟಿ ಸೇರುವುದು ಕಟ್ಟಿಟ್ಟಬುತ್ತಿ.

ಇದನ್ನು ಮನಗಂಡ ಸೃಷ್ಟಿ ಇನ್‌ಸ್ಟಿಟ್ಯೂಟ್‌ ಆಫ್ ಆರ್ಟ್‌, ಡಿಸೈನ್ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯು ‘ಆರ್ಟ್‌ ಇನ್ ಟ್ರಾನ್ಸಿಟ್‌’ ಶೀರ್ಷಿಕೆಯಡಿ ಬೆಂಗಳೂರು ಜಲಮೂಲಗಳ ಇತಿಹಾಸ, ಅದು ನಡೆದು ಬಂದ ಹಾದಿ, ಈಗಿನ ಜಲಸ್ಥಿತಿ ಹಾಗೂ ನೀರಿನ ಸಮಸ್ಯೆಗೆ ನೀವು ಮಾಡಬೇಕಾದ ಪರಿಹಾರ ಕ್ರಮಗಳೇನು ಎಂಬುದನ್ನು ನಗರದ ಕಬ್ಬನ್‌ ಪಾರ್ಕ್ ಉದ್ಯಾನದ ಮೆಟ್ರೊ ನಿಲ್ದಾಣದಲ್ಲಿಚಿತ್ರಸಹಿತ ವಿವರಣೆ ನೀಡಲು ಮುಂದಾಗಿದೆ.

ನಗರದಇತಿಹಾಸ, ಪ್ರಮುಖ ಸ್ಥಳಗಳು, ಪರಿಸರ ವೈವಿಧ್ಯತೆ, ಸಂಸ್ಕೃತಿ ಹಾಗೂ ಸಾಮಾಜಿಕ ಅಂಶಗಳನ್ನೇ ಚಿತ್ರಗಳಲ್ಲಿ ಬಳಸಿ, ಆ ಮೂಲಕ ಸಾರ್ವಜನಿಕರಿಗೆ ಜಲಮೂಲ ಸಂರಕ್ಷಣೆಯ ಸಂದೇಶ ಸಾರಲಿದೆ.

‘ನಂದಿ ಬೆಟ್ಟದಲ್ಲಿ ಉಗಮವಾಗುವ ಆರು ನದಿಗಳೇ ಬೆಂಗಳೂರಿನ ಹಳೆಯ ಜಲಮೂಲ. ಕೆರೆಗಳ ಒತ್ತುವರಿ ಹಾಗೂ ಕಟ್ಟಡಗಳ ನಿರ್ಮಾಣದಿಂದ ಹೇಗೆ ಬೆಂಗಳೂರು ಬರದ ಅಂಚಿಗೆ ಸಾಗಿದೆ ಎಂಬುದು ಸಾರ್ವಜನಿಕರ ಮನಸ್ಸಿಗೆ ನಾಟುವಂತೆಚಿತ್ರಗಳನ್ನು ಬಿಡಿಸಲಾಗಿದೆ. ಹಿಂದಿನ ಕಾಲದಲ್ಲಿ ಆಳವಾದ ಬಾವಿ ತೋಡುತ್ತಿದ್ದರಿಂದ ವರ್ಷವಿಡೀ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಬಾವಿಗಳುಇಂದು ಬೆರಳೆಣಿಕೆಯಷ್ಟಿದ್ದು, ಬತ್ತಿ ಹೋಗಿವೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆಆರ್ಟ್‌ ಇನ್ ಟ್ರಾನ್ಸಿಟ್‌ ಅಭಿಯಾನದ ಮುಖ್ಯಸ್ಥೆ ಆರ್ಜು ಮಿಸ್ಟ್ರಿ.

‘ಆಗ ಬಾವಿ ತೋಡುವವರದ್ದೇ ಒಂದು ವೃತ್ತಿ. ಆ ವೃತ್ತಿ ಇಂದು ಅವನತಿಯತ್ತ ಸಾಗಿದೆ. ಬೆಂಗಳೂರಿಗೆ ಎದುರಾಗಲಿರುವ ಜಲ ಕಂಟಕ ತಡೆಯಲು ಇಂಗು ಗುಂಡಿಗಳೇ ಸೂಕ್ತ ಪರಿಹಾರ. ಎಲ್ಲರೂ ತಮ್ಮ ಮನೆಯಲ್ಲಿ ಇಂಗು ಗುಂಡಿ ನಿರ್ಮಾಣ ಮಾಡುವ ಮೂಲಕ ನೀರಿನ ಸಮಸ್ಯೆ ತಡೆಯಬಹುದು. ಇಂಗುಗುಂಡಿಗಳಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಪುನಃ ಬಳಕೆ ಮಾಡಬಹುದು. ಈಗ ಇಂಗು ಬಾವಿಗಳನ್ನು ವೈಜ್ಞಾನಿಕವಾಗಿ ಅಳವಡಿಸಬಹುದು.ಇದರಿಂದ ಬಾವಿ ತೋಡುವವರ ವೃತ್ತಿಯೂ ಉಳಿಯಲಿದೆ’ ಎಂದು ಸಲಹೆ ನೀಡಿದರು.

‘ಬೆಂಗಳೂರು ಸಸ್ಟೇನೆಬಿಲಿಟಿ ಫೋರಂ ಹಾಗೂ ಇತರೆ ಸ್ವಯಂಸೇವಕ ಗುಂಪುಗಳು ಈ ಯೋಜನೆಗೆ ಕೈಜೋಡಿಸಿವೆ.ಮೆಟ್ರೊ ನಿಲ್ದಾಣದ ಎರಡೂ ಬದಿಯ ಗೋಡೆಗಳ ಮೇಲೆ ಚಿತ್ರ ಬಿಡಿಸಲುಬಿಎಂಆರ್‌ಸಿಎಲ್‌ ಅನುಮತಿ ನೀಡಿದೆ. ಕಳೆದ ಒಂದು ವಾರದಿಂದ ಸಂಸ್ಥೆಯ 50ಕ್ಕೂ ಹೆಚ್ಚು ಕಲಾವಿದರು ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದಾರೆ. ಡಿಸೆಂಬರ್‌ ತಿಂಗಳಾಂತ್ಯದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.ಚಿತ್ರ ಬಿಡಿಸಲು ಕಲಾವಿದರು ಹಾಗೂ ಸಾರ್ವಜನಿಕರಿಗೂ ಅವಕಾಶ ಇದೆ. ಆಸಕ್ತರು ತಮ್ಮ ಬಿಡುವಿನ ವೇಳೆ ಅಥವಾ ವಾರಾಂತ್ಯಗಳಲ್ಲಿ ಬಂದು ನಮ್ಮೊಂದಿಗೆ ಚಿತ್ರ ಬಿಡಿಸಬಹುದು’ ಎಂದು ವಿವರಿಸಿದರು.

ಮುಂದಿನ ಯೋಜನೆಗಳು ಎಲ್ಲೆಲ್ಲಿ?

ಮೊದಲ ಹಂತದಲ್ಲಿ ಕಬ್ಬನ್‌ ಉದ್ಯಾನ ಮೆಟ್ರೊ ನಿಲ್ದಾಣದಲ್ಲಿ ಈ ವರ್ಣಚಿತ್ರ ಯೋಜನೆ ನಡೆಯಲಿದೆ. ಬಳಿಕ ಇಂದಿರಾನಗರ, ರಾಜಾಜಿನಗರ, ಲಾಲ್‌ಬಾಗ್‌ ಹಾಗೂ ವಿಜಯನಗರ ಮೆಟ್ರೊ ನಿಲ್ದಾಣಗಳ ಗೋಡೆ ಮೇಲೆ ಆರ್ಟ್‌ ಇನ್ ಟ್ರಾನ್ಸಿಟ್‌ ಚಿತ್ರ ಮೂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT