ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಪೋರ್ಟ್‌ ರಸ್ತೆಯಲ್ಲೂ ಖಾಸಗಿ ವಾಹನಗಳ ಹಾವಳಿ

Last Updated 29 ಜನವರಿ 2020, 20:00 IST
ಅಕ್ಷರ ಗಾತ್ರ

ಏರ್‌ಪೋರ್ಟ್‌ ರಸ್ತೆಯುದ್ದಕ್ಕೂ ಸದಾ ಸಂಚಾರ ದಟ್ಟಣೆ. ಹೆಬ್ಬಾಳ ಸಮೀಪ ಪ್ರಮುಖ ರಸ್ತೆಯುದ್ದಕ್ಕೂ ಇರುವ ಕೆಲವು ಪ್ರದೇಶಗಳನ್ನು ಖಾಸಗಿ ಬಸ್‌ಗಳು ಜಂಕ್ಷನ್‌ ಮಾಡಿಕೊಂಡಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಒಂದು ಸಣ್ಣ ಇಣುಕು ನೋಟ.

ಕೆಂ ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಮಾಮೂಲು. ಈ ಮಾರ್ಗದಲ್ಲಿ ಬರುವ ಮೇಖ್ರಿ ಸರ್ಕಲ್‌ ಮತ್ತು ಹೆಬ್ಬಾಳ ಫ್ಲೈಓವರ್‌ ಆಚೆ–ಈಚೆಗಿನ ಪ್ರದೇಶದಲ್ಲಿ ಖಾಸಗಿ ಬಸ್‌ಗಳ ಹಾವಳಿ ಇತ್ತೀಚೆಗೆ ಹೆಚ್ಚು. ಹಲವು ಟ್ರಾವೆಲ್‌ ಕಂಪನಿಗಳ ಬಸ್‌ಗಳು ಪ್ರಮುಖ ರಸ್ತೆಯನ್ನೇ ಪ್ಲ್ಯಾಟ್‌ಫಾರ್ಮ್‌ನಂತೆ ಬಳಸುವ ಮೂಲಕ ಜಾಮ್‌ ಮಾಡುತ್ತಿವೆ. ಇದರಿಂದ ಏರ್‌ಪೋರ್ಟ್‌ ಮತ್ತಿತರ ಪ್ರದೇಶಗಳಿಗೆ ತೆರಳುವ ಇತರ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿದೆ.

ಸಂಜೆಯಾಗುತ್ತಿದ್ದಂತೆ ಗಾಲ್ಫ್‌ ಕ್ಲಬ್‌, ವಿಂಡ್ಸರ್‌ ಮ್ಯಾನರ್‌ ಸೇತುವೆ,ಕಾವೇರಿ ಥಿಯೇಟರ್‌, ಗುಟ್ಟಹಳ್ಳಿ ಪ್ಯಾಲೇಸ್‌ಸಮೀಪದ ಜಾಗದಿಂದ ಮೇಖ್ರಿ ಸರ್ಕಲ್‌ ಮತ್ತು ಹೆಬ್ಬಾಳದವರೆಗೆ ಸಂಚಾರ ದಟ್ಟಣೆ ಇರುತ್ತದೆ. ಸಹಕಾರ ನಗರ, ಯಲಹಂಕ, ಜಕ್ಕೂರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್‌ಗೆ ಪ್ರಯಾಣಿಸುವುದಕ್ಕೂ ಇದೇ ಮಾರ್ಗ ಬಳಕೆಯಾಗುವುದರಿಂದ ಈ ಪ್ರದೇಶದ ನಿವಾಸಿಗಳು ಪರದಾಡುವಂತಾಗಿದೆ.

ಮೇಖ್ರಿ ಸರ್ಕಲ್‌ಗೆ ಹತ್ತಿರದ ಭಾರತೀಯ ವಾಯುಪಡೆಯ ತರಬೇತಿ ಕೇಂದ್ರದ ಮುಂದಿನ ಜಾಗ ಈ ಹಿಂದೆ ಖಾಸಗಿ ವಾಹನಗಳ ಅಕ್ಷರಶಃ ತಂಗುದಾಣದಂತಾಗಿತ್ತು. ಇದು ಈಗ ಹೆಬ್ಬಾಳ ಫ್ಲೈಓವರ್‌ ಸಮೀಪದ ಬಿಎಂಟಿಸಿ ಬಸ್‌ ನಿಲ್ದಾಣ ಮತ್ತು ಫ್ಲೈಓವರ್‌ ದಾಟಿ ಮಿಲಿಟರಿಗೆ ಸೇರಿದ ಜಾಗದ ಹತ್ತಿರಕ್ಕೆ ಸ್ಥಳಾಂತರಗೊಂಡಿದೆ.

ಹೈದರಾಬಾದ್‌ಗೆ ಹೋಗುವ ಪ್ರಯಾಣಿಕರು ಈ ಜಾಗದಿಂದ ತಾವು ಟಿಕೆಟ್‌ ಕಾಯ್ದಿರಿಸಿದ ಖಾಸಗಿ ಬಸ್‌ಗಳಿಗಾಗಿ ಕಾಯುತ್ತಾರೆ. ಇಲ್ಲಿ ಬಿಎಂಟಿಸಿ ಬಸ್‌ಗಳ ಜೊತೆ ಹಿಂದುಪುರ, ದೊಡ್ಡಬಳ್ಳಾಪುರ ಮತ್ತು ಹೈದರಾಬಾದ್‌ಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ದಾಂಗುಡಿ ಇಡುತ್ತವೆ.

ಪ್ರಮುಖ ಜಂಕ್ಷನ್‌

ಇದೀಗ ಮೇಖ್ರಿ ಸರ್ಕಲ್‌ ಸಮೀಪದ ವಾಯುಪಡೆಯ ತರಬೇತಿ ಕೇಂದ್ರದ ಬಳಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲುತ್ತಿಲ್ಲ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಅಂದರೆ ಎಚ್‌ಎಂಟಿ ಭವನದ ಎದುರಿಗೆ ನಿಲ್ದಾಣ ರೂಪಿಸಿದ್ದರಿಂದ ಈ ಬಸ್‌ಗಳು ಅಲ್ಲಿ ನಿಲ್ಲುತ್ತವೆ. ಅಲ್ಲಿಗೂ ಈ ಖಾಸಗಿ ಬಸ್‌ಗಳು ನುಗ್ಗುವುದುಂಟು. ಅಲ್ಲಿಂದ ಮುಂದಕ್ಕೆ ಸಿಬಿಐ ಸ್ಟಾಪ್‌ ಬಿಟ್ಟರೆ ಫ್ಲೈಓವರ್‌ ಸಮೀಪದ ಹೆಬ್ಬಾಳ ನಿಲ್ದಾಣ ಇವುಗಳ ಪ್ರಮುಖ ಜಂಕ್ಷನ್‌.

ರಾತ್ರಿ ಆಗುತ್ತಿದ್ದಂತೆ ಇಲ್ಲಿಗೆ ಅನೇಕ ಟ್ರಾವೆಲ್‌ ಕಂಪೆನಿಗಳ ಬಸ್‌ಗಳು ದಂಡಿಯಾಗಿ ನಿಲ್ಲುತ್ತವೆ. ಪ್ರಮುಖ ರಸ್ತೆಯಲ್ಲಿಯೇ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಇದರ ಜೊತೆಗೆ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೂ ಇದೇ ನಿಲ್ದಾಣ. ಇದರಿಂದ ಏರ್‌ಪೋರ್ಟ್‌ ಕಡೆ ಸಾಗುವ ಇತರ ವಾಹನಗಳಿಗೆ ತೀವ್ರ ಅಡಚಣೆ ಉಂಟಾಗುತ್ತದೆ.

ಹೆಬ್ಬಾಳ ಫ್ಲೈಓವರ್‌ ನಂತರದ ಜಂಕ್ಷನ್‌ ಬಳಿ ಈ ಸ್ಥಿತಿ ಇನ್ನಷ್ಟು ಅದ್ವಾನಗೊಳ್ಳುತ್ತದೆ. ಎಸ್ಟೀಮ್‌ ಮಾಲ್‌ ಎದುರಿಗಿನ ಡಿಫೆನ್ಸ್‌ ಲ್ಯಾಂಡ್‌ ಮುಂದಿನ ಪ್ರದೇಶದಲ್ಲಿ ಒಂದು ಖಾಲಿ ಜಾಗವಿದೆ. ಅಲ್ಲಿ ರೂಪುಗೊಂಡ ಬಸ್‌ ನಿಲ್ದಾಣವನ್ನು ಖಾಸಗಿ ಬಸ್‌ಗಳು ಯಥೇಚ್ಛವಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಯಲಹಂಕ, ಏರ್‌ಪೋರ್ಟ್‌ ಮತ್ತು ಹೈದರಾಬಾದ್‌ನತ್ತ ಸಾಗಲು ರೂಪಿಸಿದ ಪ್ರಮುಖ ರಸ್ತೆ, ಫ್ಲೈಓವರ್‌ಗೆ ಹೊಂದಿಕೊಂಡಂತೆ ಇದೆ. ಇದಕ್ಕೆ ಪೂರಕವಾಗಿ ಖಾಲಿ ಕಚ್ಚಾ ರಸ್ತೆಯಂಥ ಪ್ರದೇಶವೂ ಇದ್ದುದರಿಂದ ಹತ್ತಾರು ಖಾಸಗಿ ಟ್ರಾವೆಲ್‌ ಬಸ್‌ಗಳು ನಿಲ್ಲುತ್ತವೆ. ಈ ಬಸ್‌ಗಳಿಗಾಗಿ ನೂರಾರು ಮಂದಿ ಕಾದು ನಿಲ್ಲುತ್ತಾರೆ.

ಇಲ್ಲಿ ಪುಟ್ಟ ಬಸ್‌ ಸ್ಟಾಪ್‌ ಶೆಲ್ಟರ್‌ ರೂಪಿಸಲಾಗಿದೆ. ಸ್ಕೈವಾಕ್‌ ಕೂಡ ಇದೆ. ಇಲ್ಲಿ ವಾರಾಂತ್ಯ ಅಥವಾ ಹಬ್ಬದ ಸೀಸನ್‌ನಲ್ಲಂತೂ ದಂಡಿಯಾಗಿ ಸೇರುವ ಖಾಸಗಿ ಬಸ್‌ಗಳ ಹಾವಳಿ ಹೇಳತೀರದು. ಇವುಗಳ ಹಿಂದಿನಿಂದ ಸಾಗಿ ಬರುವ ಇತರೆ ವಾಹನಗಳ ಸವಾರರಿಗೆ ದೊಡ್ಡ ತಲೆಬಿಸಿ. ಏರ್‌ಪೋರ್ಟ್‌ ಹೋಗುವವರ ಸ್ಥಿತಿಯಂತೂ ಹೇಳತೀರದು.

ಇದೆಲ್ಲದರಿಂದ ಉಂಟಾಗುವ ಸಂಚಾರ ದಟ್ಟಣೆಗೆ ಇಲ್ಲಿಗೆ ಸಮೀಪದ ಅಂದರೆ ಕೊಡಿಗೆಹಳ್ಳಿ ಗೇಟ್‌, ಕೆಂಪಾಪುರ, ಜಕ್ಕೂರು, ಯಲಹಂಕ, ಸಹಕಾರ ನಗರ, ಅಟ್ಟೂರು ಬಡಾವಣೆ, ಕೋಗಿಲು, ಜಿಕೆವಿಕೆ ಮತ್ತಿತರ ಪ್ರದೇಶಗಳಿಗೆ ಹಾಗೂ ವಿಶೇಷವಾಗಿ ಏರ್‌ಪೋರ್ಟ್‌ನತ್ತ ಸಾಗುವ ಜನರಿಗೆ ತುಂಬ ತೊಂದರೆಯಾಗುತ್ತದೆ.

ಅಡ್ಡಾದಿಡ್ಡಿಯಾಗಿ ನಿಲ್ಲುವ ಬಸ್‌ಗಳು

ಎಸ್ಟೀಮ್‌ ಮಾಲ್‌ ಎದುರಿನ ಮಿಲಿಟರಿ ಜಾಗಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಪ್ರದೇಶವನ್ನು ಯಾಕಾಗಿ ಹಾಗೆ ಖಾಲಿ ಬಿಟ್ಟಿದ್ದಾರೊ? ಅಲ್ಲಿ ಖಾಸಗಿ ಬಸ್‌ಗಳ ಜೊತೆ ಪ್ರಯಾಣಿಕರನ್ನು ಬೀಳ್ಕೊಡಲು ಬರುವವರ ಕಾರು, ಟ್ಯಾಕ್ಸಿ, ಬೈಕ್‌ಗಳು ನಿಂತಿರುತ್ತವೆ. ಇಲ್ಲಿಯೇ ಸಂಚಾರ ದಟ್ಟಣೆ ಹೆಚ್ಚುವುದು. ಖಾಸಗಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ಪ್ರಮುಖ ರಸ್ತೆಯನ್ನೇ ಆವರಿಸಿಕೊಳ್ಳುವುದರಿಂದ ಇತರ ವಾಹನಗಳು ಅದರಲ್ಲೂ ಏರ್‌ಪೋರ್ಟ್‌ಗೆ ಹೋಗುವ ವಾಹನಗಳು ಪರದಾಡಬೇಕಾಗಿ ಬರುತ್ತದೆ. ಇದಕ್ಕೆ ಪರಿಹಾರ ಇಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಇದೆಲ್ಲದರ ಜೊತೆಗೆ ಹೆಬ್ಬಾಳ, ನ್ಯಾಯಗ್ರಾಮ, ಕೃಷಿ ವಿವಿ, ಹೈನುವಿಜ್ಞಾನ ಮಹಾವಿದ್ಯಾಲಯ, ಪಶು ವೈದ್ಯಕೀಯ ವಿವಿ, ಸಿಬಿಐ, ಕಿರ್ಲೋಸ್ಕರ್ ಬಿಸಿನೆಸ್ ಪಾರ್ಕ್, ಕೊಡಿಗೆಹಳ್ಳಿ ಸಮೀಪದ ಬ್ರಿಗೇಡ್ ಒಪಸ್, ಆರ್‌ಎಂಝಡ್ ಅಜುರ್, ಬ್ರಿಗೇಡ್ ಮ್ಯಾಗ್ನಮ್, ಸೆಂಚುರಿ, ಜಕ್ಕೂರು ಸಮೀಪದ ರೈನ್ ಟ್ರೀ ಬುಲೇವಾರ್ಡ್ ಬೃಹತ್‌ ಅಪಾರ್ಟ್‌ಮೆಂಟ್‌ಗಳು ಮತ್ತು ಸಮೀಪದ ಇತರ ಜನವಸತಿ ಪ್ರದೇಶಗಳಿಗೆ ಓಡಾಡುವ ವಾಹನಗಳಿಗೂ ಬಳಕೆಗೆ ಇದೇ ಮಾರ್ಗ ಅನಿವಾರ್ಯವಾದ್ದರಿಂದ ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣಿಸುತ್ತದೆ.

ಇದಷ್ಟೇ ಅಲ್ಲ. ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಪ್ರಮುಖ ಆಸ್ಪತ್ರೆಗಳಿವೆ. ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ, ಕೆಂಪಾಪುರ ಸಮೀಪದ ಕೊಲಂಬಿಯಾ ಏಷ್ಯ, ಕೊಡಿಗೆಹಳ್ಳಿ ಗೇಟ್‌ ಸಮೀಪದ ಅಸ್ತರ್‌, ಪೀಪಲ್ಸ್‌ ಟ್ರೀ ಮತ್ತಿತರ ದೊಡ್ಡ ಆಸ್ಪತ್ರೆಗಳೂ ಇವೆ. ಇಲ್ಲಿಗೆ ಬರುವ ಆ್ಯಂಬುಲೆನ್ಸ್‌ಗಳ ಗತಿ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT