ಭಾನುವಾರ, ಅಕ್ಟೋಬರ್ 25, 2020
22 °C
ಟೀಚ್‌ ಫಾರ್‌ ಇಂಡಿಯಾ

ದೇಶಕ್ಕಾಗಿ ಪಾಠ ಮಾಡಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮೈ ಗೋಲ್‌ ಈಸ್‌ ಟು ಬಿಕಮ್‌ ಎ ಫುಟ್‌ಬಾಲ್‌ ಪ್ಲೇಯರ್‌’. ‘ಐ ವಾಂಟ್‌ ಟು ರೆಪ್ರೆಸೆಂಟ್‌ ಇಂಡಿಯಾ’. ‘ಐ ವಿಲ್‌ ಬಿಕಮ್‌ ರೋಬೋಟಿಕ್‌ ಸೈಂಟಿಸ್ಟ್‌’, ‘ಐ ವಿಲ್‌ ಬಿಕಮ್‌ ಎ ಟೀಚರ್‌’...
-ಹೀಗೆ ಸ್ಪಷ್ಟ, ನಿರರ್ಗಳ ಇಂಗ್ಲಿಷ್‌ನಲ್ಲಿ ತಮ್ಮ ಕನಸುಗಳನ್ನು ತೆರೆದಿಟ್ಟವರು ನಗರದ ಗಂಗೊಂಡನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಮಕ್ಕಳು.

ಇಲ್ಲಿನ ಶಿಕ್ಷಕರೋ, ಅದ್ಯಾವುದೋ ದೂರದ ಊರಿನಿಂದ, ಈ ಕೆಲಸಕ್ಕೆ ಸಂಬಂಧವೇ ಇಲ್ಲದ ಉನ್ನತ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರು. ಇನ್ನು ಕೆಲವರು ದೊಡ್ಡ ಕಂಪನಿಯ ಪ್ರಭಾವಶಾಲಿ ಹುದ್ದೆಗಳಿಗೆ ಗುಡ್‌ಬೈ ಹೇಳಿ ಮಕ್ಕಳೊಡನೆ ನೆಮ್ಮದಿ ಕಾಣಲು ಬಂದಿರುವವರು.

ಇಲ್ಲಿ ಸುಮ್ಮನೆ ತರಗತಿಯಷ್ಟೇ ನಡೆಯುವುದಿಲ್ಲ. ಬದಲಾಗಿ ಮಕ್ಕಳೊಂದಿಗೆ ಸಂವಾದ ನಡೆಯುತ್ತದೆ. ಪ್ರತಿ ಕ್ಷಣವೂ ತೊಡಗಿಕೊಳ್ಳುವಿಕೆಯಿದೆ. ಇದರ ಫಲಿತಾಂಶವೇ ಪರಿಣಾಮಕಾರಿ ಗ್ರಹಿಕೆ ಮತ್ತು ಕಲಿಕೆ.

‘ಟೀಚ್‌ ಫಾರ್‌ ಇಂಡಿಯಾ’ ಸಂಸ್ಥೆ ಇಂಥದ್ದೊಂದು ಪ್ರಯೋಗ ನಡೆಸಿ ಯಶಸ್ವಿ ಯಾಗಿದೆ. ಈ ತಂಡದಲ್ಲಿರುವವರು ಸಾಮಾನ್ಯ ಪದವೀಧರರು, ಎಂಜಿನಿಯರ್‌ಗಳು, ಲೆಕ್ಕ ಪರಿಣತರು, ಸಂಗೀತ ಬಲ್ಲವರು… ಹೀಗೆ ಅವರ ಜ್ಞಾನದ ಹಿನ್ನೆಲೆಗೆ ಇಂಥದ್ದೇ ಪರಿಮಿತಿ ಎಂಬುದಿಲ್ಲ. ಮಕ್ಕಳ ಖುಷಿಯಲ್ಲೇ ಇವರೆಲ್ಲ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಶಾಲೆಗಳೊಳಗೆ ಒಂದು ಸುತ್ತು

ಸರ್ಕಾರಿ ಶಾಲೆ ಎಂದಾಕ್ಷಣ ಒಂದು ಟಿಪಿಕಲ್‌ ಶಾಲೆಯ ಚಿತ್ರ ಕಲ್ಪನೆಗೆ ಬರುತ್ತದೆ. ಶಾಲೆಗಳು ಬದಲಾಗಿವೆ. ಮೇಲ್ದರ್ಜೆಗೇರಿವೆ ಎಂದು ಎಷ್ಟೇ ಹೇಳಿದರೂ ಒಮ್ಮೆಗೆ ಯಾರೂ ಆ ಮಾತನ್ನು ಸ್ವೀಕರಿಸುವುದಿಲ್ಲ. ಆದರೆ, ಬಣ್ಣ ಮಾಸಿದ ಕಾಂಪೌಂಡ್‌ ಗೋಡೆಗಳ ಒಳಗೆ ಅದ್ಭುತ ಬಣ್ಣದ ಕನಸುಗಳು ಚಿಗುರೊಡೆದಿವೆ. ಶಿಸ್ತುಬದ್ಧ ಕಲಿಕೆ, ಸ್ವಚ್ಛತೆ, ನೀಟಾದ ಕ್ಲಾಸ್‌ ರೂಮ್‌, ಪಠ್ಯ ಬೋಧನೆ ಮತ್ತು ಗ್ರಹಿಸುವಿಕೆಯಲ್ಲಿ ಸ್ಪಷ್ಟತೆ ಮಕ್ಕಳಲ್ಲಿದೆ.

ಇದು ಗಂಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ಯಾಟರಾಯನಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇದೇ ಪ್ರದೇಶದ ಸೋಮನಾಥ ಇಂಗ್ಲಿಷ್‌ ಮಾಧ್ಯಮ ಶಾಲೆ (ಜನಸಾಮಾನ್ಯನ ಕೈಗೆಟಕುವ ಶುಲ್ಕ ಪಡೆವ ಶಾಲೆಗಳಿಗೂ ಟೀಚ್‌ ಫಾರ್‌ ಇಂಡಿಯ ನೆರವು ನೀಡುತ್ತಿದೆ)ಗಳಲ್ಲಿ ಕಂಡ ನೋಟ.

ಪಾಠ ಮಾಡುತ್ತಿದ್ದಂತೆಯೇ ಮಕ್ಕಳ ತುಂಟತನವೂ ಮುಂದುವರಿದಿರುತ್ತದೆ. ಆ ತುಂಟಾಟವನ್ನೇ ಬಳಸಿಕೊಂಡು ಹೊಸ ವಿಷಯ ವೊಂದನ್ನು ಟೀಚ್‌ ಫಾರ್‌ ಇಂಡಿಯಾದ ಶಿಕ್ಷಕರು ಮಕ್ಕಳ ತಲೆಗೆ ತುಂಬುತ್ತಾರೆ. ತುಂಟಾಟಕ್ಕೆ ಬೈಗುಳ, ಏಟು ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿಧಾನವನ್ನು ಡಿ.ಇಡಿ, ಬಿ.ಇಡಿ ಶಿಕ್ಷಣ ಪಡೆದು ನೇಮಕಗೊಂಡ ಶಿಕ್ಷಕರೂ ಇಷ್ಟಪಡುತ್ತಾರೆ.

ಅತ್ಯಾಧುನಿಕ ಶಿಕ್ಷಣ

‘ಟೀಚ್‌ ಫಾರ್‌ ಇಂಡಿಯಾ’ ಶಾಲೆಯ ಮೂಲಸೌಕರ್ಯ ಗಳತ್ತಲೂ ಗಮನ ಹರಿಸುತ್ತದೆ. ಪ್ರಯೋಗಾಲಯ, ಪ್ರೊಜೆ ಕ್ಟರ್‌, ಬೋರ್ಡ್‌ ಪೀಠೋಪಕರಣ ಪೂರೈಸಲೂ ನೆರವಾಗಿದೆ. ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಜತೆ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಇಲಾಖೆಯ ನೆರವೂ ಸಿಕ್ಕಿದೆ.

ಪರಿಣಾಮ ರಾಜಧಾನಿಯಲ್ಲಿ ಮಾರುದೂರಕ್ಕೊಂದು ಖಾಸಗಿ, ಪ್ರತಿಷ್ಠಿತ ಶಾಲೆಗಳಿದ್ದರೂ ಇಲ್ಲಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 500ರ ಆಸುಪಾಸಿನಲ್ಲಿದೆ. ಶಾಲೆ ಅರ್ಧದಲ್ಲೇ ಬಿಟ್ಟು ಹೋಗುವವರ ಸಂಖ್ಯೆಯೂ ಬೆರಳೆಣಿಕೆಯಷ್ಟು.

ಕಡಿಮೆ ಆದಾಯ ಹೊಂದಿದವರ, ಅಲ್ಪಸಂಖ್ಯಾತರ, ಅಸಂಘಟಿತ ವಲಯದ ಉದ್ಯೋಗಿಗಳ ಮಕ್ಕಳೇ ಇಲ್ಲಿ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರದ ಶಿಕ್ಷಕರು, ಅತಿಥಿ ಶಿಕ್ಷಕರ ಜತೆಗೆ ಟೀಚ್‌ ಫಾರ್‌ ಇಂಡಿಯಾದಿಂದ ಪ್ರತಿ ಶಾಲೆಯಲ್ಲಿ ಮೂವರಿಂದ ಐವರು ಶಿಕ್ಷಕರು ಇದ್ದಾರೆ. ಹೀಗಾಗಿ ಶಿಕ್ಷಕರ ಕೊರತೆ ಎಂದೂ ಈ ಶಾಲೆಗಳನ್ನು ಬಾಧಿಸಿಲ್ಲ. ಸರ್ಕಾರದ ಮೇಲಿನ ಆರ್ಥಿಕ ಹೊರೆಯೂ ತಗ್ಗಿದೆ. ಗಂಗೊಂಡನಹಳ್ಳಿ, ಬ್ಯಾಟರಾಯನ ಪುರ ಶಾಲೆಗಳಲ್ಲಿ ಐದು ವರ್ಷಗಳಿಂದ ‘ಟೀಚ್‌ ಫಾರ್‌ ಇಂಡಿಯಾ’ ಸದ್ದಿಲ್ಲದೆ ಸೇವೆ ಮಾಡುತ್ತಿದೆ.

ಬಂದವರಿವರು…

ಟೀಚ್‌ ಫಾರ್‌ ಇಂಡಿಯಾಕ್ಕೆ ಶಿಕ್ಷಕರಾಗಿ ಬಂದವರ ಒಂದೊಂದು ಕಥೆಯೂ ಭಿನ್ನ ಮತ್ತು ಸ್ಫೂರ್ತಿದಾಯಕ.
ಗಂಗೊಂಡನಹಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಹಾಡು ಕಲಿಸುತ್ತಿದ್ದ ಗಿರಿಧರ್‌ ರಘುನಾಥ್‌ 20 ವರ್ಷಗಳ ಕಾಲ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿದವರು. ‘ಒಂದು ಹಂತಕ್ಕೆ ಹಣ, ಹೆಸರು, ಕೀರ್ತಿ ಬೇಕೆನಿಸುತ್ತದೆ. ಅದಾದ ಬಳಿಕ ಇನ್ನೇನೋ ಹೊಸತು ಮಾಡಬೇಕು. ನೆಮ್ಮದಿ ಕಾಣಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ನನಗೆ ಶಿಕ್ಷಣ ಕ್ಷೇತ್ರಕ್ಕಿಂತ ಒಳ್ಳೆಯ ಮಾರ್ಗ ಕಾಣಲಿಲ್ಲ’ ಎಂದು ಅವರು ಖುಷಿ ಹಂಚಿಕೊಂಡರು.

ಆರನೇ ಕ್ಲಾಸಿಗೆ ಲೆಕ್ಕ, ಇಂಗ್ಲಿಷ್‌ ಹೇಳಿಕೊಡುತ್ತಿದ್ದ ಗಾಯತ್ರಿ ಮೂಲತಃ ಮುಂಬೈಯವರು. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಅಮೆಜಾನ್‌ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಾ ಕೈತುಂಬಾ ಗಳಿಸುತ್ತಿದ್ದವರು. ಅವರಿಗೆ ಮಕ್ಕಳಿಗೆ ಇಂಗ್ಲಿಷ್‌ ಪಾಠ, ಹಿಂದೂಸ್ತಾನಿ ಸಂಗೀತ ಹೇಳಿಕೊಡುವುದರಲ್ಲೇ ಖುಷಿ.

ಉತ್ತರಾಂಚಲದಿಂದ ಬಂದ ಸುಕೃತಿ ಹೇಳುವುದು ಹೀಗೆ, ‘ನಾನು ಬಿಎ ಓದಿದಾಗ ಮನೆಯಿಂದಲೇ ವಿರೋಧ ಬಂದಿತ್ತು. ಆದರೆ, ನಾನು ಶಿಕ್ಷಕಿಯಾಗಲು ಅರ್ಹಳು ಎನ್ನುವುದು ಗೊತ್ತಿತ್ತು. ಹಾಗಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಫೆಲೋಷಿಪ್‌ ಅವಧಿ ಮುಗಿದ ನಂತರ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದಬೇಕು ಎಂದಿದ್ದೇನೆ’ ಎಂದರು.

‘ಸಮಾಜದಿಂದ ನಾನು ಬಹಳ ಪಡೆದಿದ್ದೇನೆ. ಅದಕ್ಕೇನಾದರೂ ಕೊಡಬೇಕಲ್ಲವೇ’ ಎನ್ನುತ್ತಾರೆ ಸುಕೃತಿ.

ಬ್ಯಾಟರಾಯನಪುರ ಶಾಲೆಯಲ್ಲಿ ಇಂಗ್ಲಿಷ್‌ ಹೇಳಿ ಕೊಡುತ್ತಿದ್ದ ರೂಪ್ಲಿಕಾ ಗುವಾಹಟಿಯವರು ‘ಚಹಾ ತೋಟಗಳಲ್ಲಿ ಲಿಂಗ ತಾರತಮ್ಯ ಕುರಿತು ಸಂಶೋಧನೆಯನ್ನೂ ಮಾಡಿದ್ದಾರೆ. ಮನಸ್ಸು ಮಾಡಿದ್ದರೆ ಯಾವುದಾದರೂ ಕಚೇರಿಯಲ್ಲಿ ಇರಬಹುದಿತ್ತು. ಆದರೆ, ನನಗೆ ಸಾಮಾಜಿಕ ಕ್ಷೇತ್ರ ಇಷ್ಟ ಇಲ್ಲೇ ಇರುತ್ತೇನೆ’ ಎನ್ನುತ್ತಾರೆ.

ಇಲ್ಲಿನ ಬಹುತೇಕ ಫೆಲೋ ಶಿಕ್ಷಕರು ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು. ಆದರೆ, ಶಿಕ್ಷಣ ವಂಚಿತ, ಬೇರುಮಟ್ಟದ ಜನರೆಡೆಗಿನ ಸೇವೆಯ ತುಡಿತ ಅನುಕರಣೀಯ.

ಅಂದ ಹಾಗೆ ಮಕ್ಕಳು ಇವರನ್ನು ಸರ್‌/ಮೇಡಂ/ಮಿಸ್‌ ಎಂದು ಕರೆಯುವುದಿಲ್ಲ. ಬದಲಾಗಿ ದೀದಿ (ಅಕ್ಕ), ಭಯ್ಯಾ (ಅಣ್ಣ) ಎಂದೇ ಕರೆಯುತ್ತಾರೆ. ಶಿಕ್ಷಕ ಎನ್ನುವ ಔಪಚಾರಿಕ ಸಂಬಂಧಕ್ಕಿಂತ ಬಂಧುತ್ವದ ಶಬ್ದಗಳೇ ಮಕ್ಕಳಿಗೆ ಆಪ್ತವಾಗಿವೆ.

ಏನಿದು ಟೀಚ್‌ ಫಾರ್‌ ಇಂಡಿಯಾ?

ದೇಶದ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ಕಾರ್ಯ ನಿರ್ವಹಿಸುತ್ತಿದೆ ‘ಟೀಚ್‌ ಫಾರ್‌ ಇಂಡಿಯಾ’ ಸಂಸ್ಥೆ. ಶಿಕ್ಷಣ ಕ್ಷೇತ್ರದಲ್ಲಿರುವ ತೀವ್ರ ಅಸಮಾನತೆಯನ್ನು ಗುರುತಿಸಿದ ಸಂಸ್ಥೆ ಈಗ ದೇಶದ 7 ಮಹಾ ನಗರಗಳಲ್ಲಿ ಅತಿದೊಡ್ಡ ಶೈಕ್ಷಣಿಕ ಕಾರ್ಯಜಾಲ ಹೊಂದಿದೆ.

ಒಂದು ದಿನ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದುವರಿದಿದೆ ‘ಟೀಚ್‌ ಫಾರ್‌ ಇಂಡಿಯಾ’

***

ಒಂದು ದಿನ ಎಲ್ಲ ಮಕ್ಕಳು ಅತ್ಯುತ್ತಮ ಶಿಕ್ಷಣವನ್ನು ಪಡೆಯುತ್ತಾರೆ ಎಂಬ ವಿಶ್ವಾಸದೊಂದಿಗೆ ಶೈಕ್ಷಣಿಕ ಅಭಿಯಾನವನ್ನು ಟೀಚ್‌ ಫಾರ್‌ ಇಂಡಿಯಾ ನಡೆಸುತ್ತಿದೆ. ಈ ಪ್ರಯಾಣದಲ್ಲಿ ಕಠಿಣ ವಾಸ್ತವಗಳನ್ನು ಎದುರಿಸಿದ್ದೇವೆ. ಎಲ್ಲ ಮಕ್ಕಳಿಗೆ ಸಮಾನ ಅವಕಾಶಕ್ಕಾಗಿ ಹೋರಾಟ ನಡೆಸುವುದು ಬಹಳ ಕಠಿಣ ಎಂಬುದೂ ಗೊತ್ತು. ಆದರೆ, ನಮ್ಮ ಫೆಲೋ ಶಿಕ್ಷಕರೊಂದಿಗೆ ಬದ್ಧತೆಯಿಂದ ಮುನ್ನಡೆದರೆ ಇದು ನನಸಾಗಬಹುದಾದ ಮತ್ತು ನನಸಾಗಬೇಕಾದ ಕನಸು. ಸಮಾನ ಶಿಕ್ಷಣ ಎಂಬುದು ಹೋರಾಟಕ್ಕೆ ಯೋಗ್ಯವಾದ ವಿಷಯ.
-ತುಲಿಕ ವರ್ಮಾ, ಟೀಚ್‌ ಫಾರ್‌ ಇಂಡಿಯಾದ ಬೆಂಗಳೂರು ನಗರದ ನಿರ್ದೇಶಕಿ

***
ದೇಶದ ಸಮಸ್ಯೆಗಳ ಬಗ್ಗೆ ಯುವಜನರು ತುಂಬಾ ದೂರುತ್ತಿರುತ್ತಾರೆ. ಆದರೆ, ತಾವೇ ಕಂಡುಕೊಳ್ಳುವ ಪರಿಹಾರದ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ನನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದ್ದೇನೆ.
–ರೂಪ್ಲಿಕಾ, ಟೀಚ್‌ ಫಾರ್‌ ಇಂಡಿಯಾ ಶಿಕ್ಷಕಿ

***

ಟಿಎಫ್‌ಐ ಬಂದ ಮೇಲೆ ನಾನು ಚೆನ್ನಾಗಿ ಓದುತ್ತಿದ್ದೇನೆ. ಇಂಗ್ಲಿಷ್‌ ಮೇಲೆ ಒಳ್ಳೆಯ ಹಿಡಿತ ಸಿಕ್ಕಿದೆ. ಮುಂದೆ ನಾನೂ ಇದೇ ಸಂಸ್ಥೆ ಮೂಲಕ ಮಕ್ಕಳಿಗೆ ಕಲಿಸುತ್ತೇನೆ.
-ಹಫೀಝಾ ಜೆ., ಗಂಗೊಂಡನಹಳ್ಳಿ ವಿದ್ಯಾರ್ಥಿನಿ

***

ಚಿತ್ರ, ವಿಡಿಯೋ ಮೂಲಕ ವಿಜ್ಞಾನ ಕಲಿಸುವುದರಿಂದ ನಮಗೆ ವಿಷಯಗಳು ಸುಲಭವಾಗಿ ಅರ್ಥವಾಗುತ್ತವೆ. ಗಾಯತ್ರಿ (ಟಿಎಫ್‌ಐ ಫೆಲೊ) ಅವರ ಪಾಠ ಇಷ್ಟವಾಗುತ್ತದೆ.
–ಆಫ್ರಿನ್‌, 7ನೇ ತರಗತಿ

***

ನನ್ನ ಕುಟುಂಬದವರೂ ಸೇವಾ ಕ್ಷೇತ್ರದಲ್ಲಿದ್ದವರು. ಹಾಗಾಗಿ ಸೇವಾ ಮನೋಭಾವ ಮೊದಲಿನಿಂದಲೂ ಬಂದಿದೆ. ಹಾಗಾಗಿ ಈ ಕ್ಷೇತ್ರ ಆಯ್ಕೆ ಮಾಡಿದೆ.
-ಗಾಯತ್ರಿ (ಟಿಎಫ್‌ಐ ಫೆಲೊ)

***

ಮಕ್ಕಳು ಹಂತಹಂತವಾಗಿ ಬೆಳೆಯುವುದನ್ನು ನೋಡುವುದೇ ಆನಂದ. ಅವರ ಖುಷಿಯಲ್ಲಿ ನಾನೂ ಸಂತೋಷ ಅನುಭವಿಸಿತ್ತಿದ್ದೇನೆ.
-ಪವನ್‌, ಬ್ಯಾಟರಾಯನಪುರ ಶಾಲೆಯ ಟಿಎಫ್‌ಐ ಫೆಲೊ.

***

ಟಿಎಫ್‌ಐ ಶಿಕ್ಷಕರು ಮತ್ತು ನಮ್ಮ ಶಿಕ್ಷಕರು ಎಂಬ ಭಿನ್ನತೆ ಇಲ್ಲ. ಅವರು ಕಲಿಸುವ ವಿಧಾನವೇ ವಿಶೇಷವಾದದ್ದು. ಹಾಗಾಗಿ ಪರಸ್ಪರ ಸಮನ್ವಯತೆಯಿಂದ ತರಗತಿಗಳು ಸಾಗಿವೆ. ಅವರ ಜತೆ ಕೆಲಸ ಮಾಡುವುದು ಒಳ್ಳೆಯ ಅನುಭವ
-ವಾಣಿ ಎಚ್‌.ವಿ. ಪ್ರಭಾರ ಮುಖ್ಯ ಶಿಕ್ಷಕಿ ಗಂಗೊಂಡನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

***

ಒಳ್ಳೆಯ ಶೈಕ್ಷಣಿಕ ಆಡಳಿತ ಕೊಡುವಲ್ಲಿ ಟಿಎಫ್‌ಐ ಶಿಕ್ಷಕರ ಪಾಲು ದೊಡ್ಡದು. ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದಾಗ ಇವರ ಸಹಕಾರ ಮರೆಯಲಾಗದು. ಇಲ್ಲವಾದರೆ ಆ ವಿಭಾಗ ನಿಭಾಯಿಸುವುದು ಕಷ್ಟವಾಗುತ್ತಿತ್ತು. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಹಕಾರ ಸಿಕ್ಕಿದೆ.
–ಆರ್‌. ರವೀಂದ್ರನಾಥ್‌, ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ಯಾಟರಾಯನಪುರ

***

ನಮಗೆ ನಿಗದಿತ ಪಠ್ಯ ವಿಷಯ ಮುಗಿಸುವುದಷ್ಟೇ ಗುರಿಯಾಗಿರುತ್ತದೆ. ಆದರೆ, ಟಿಎಫ್‌ಐಯವರು ಹೇಳಿಕೊಡುವ ವಿಧಾನವೇ ಭಿನ್ನವಾದದ್ದು. ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ, ಸರಳ ಮತ್ತು ಸುಲಲಿತ ಬೋಧನೆ ಅವರದ್ದು. ನಮಗೆ ತುಂಬಾ ಸಹಾಯಕವಾಗಿದೆ.
-ಮಹೇಶ್‌, ಪ್ರಾಂಶುಪಾಲ ಸೋಮನಾಥ ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ಶಾಲೆ
ಬ್ಯಾಟರಾಯನಪುರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು