ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಫ್‌ಸಿ ಎಂಬ ಮಹಾ ಕಾಳಗ

ಲಾಸ್ ವೇಗಸ್‌ನಲ್ಲಿ ಜನವರಿ 18ರ ರಾತ್ರಿ ನಡೆಯುವ ‘ಮಹಾ ಕಾಳಗ’
Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಅಲ್ಟಿಮೇಟ್ ಫೈಟ್ ಚಾಂಪಿಯನ್‌ಶಿಪ್ (ಯುಎಫ್‌ಸಿ 246) ವೀಕ್ಷಿಸಲು ಜನರು ಕಾತರರಾಗಿದ್ದಾರೆ. ಲಾಸ್ ವೇಗಸ್‌ನ ಟಿ ಮೊಬೈಲ್ ಅರೇನಾದಲ್ಲಿ ಜನವರಿ 18ರ ರಾತ್ರಿ ನಡೆಯುವ ‘ಮಹಾ ಕಾಳಗ’ದ ವೆಲ್ಟರ್ ವೈಟ್ ವಿಭಾಗದಲ್ಲಿ ಕಾನರ್ ಮೆಕ್ರಾಗರ್ ಮತ್ತು ಡೊನಾಲ್ಡ್ ಸಿರೋನೆ ನಡುವಿನ ಹೋರಾಟ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

‘ನೋಟೊರಿಯಸ್’ ಮೆಕ್ರಾಗರ್ ಯುಎಫ್‌ಸಿಗೆ ಮತ್ತೆ ಮರಳಿರುವುದು ಈ ಹೋರಾಟದ ಮುಖ್ಯ ಆಕರ್ಷಣೆ. ಯುಎಫ್‌ಸಿ ಫೆದರ್ ವೈಟ್ ಮತ್ತು ಲೈಟ್ ವೈಟ್ ಮಾಜಿ ಚಾಂಪಿಯನ್ ಮೆಕ್ರಾಗರ್- ‘ಕೌ ಬಾಯ್’ ಸಿರೋನೆ ನಡುವಿನ ಈ ಹೋರಾಟ ಹೇಗಿರುತ್ತದೆ ಮತ್ತು ಯುಎಫ್‌ಸಿ ಅಭಿಮಾನಿಗಳ ನಿರೀಕ್ಷೆ ಏನು ಎಂಬುದರ ಬಗ್ಗೆ ಮಿಶ್ರ ಸಮರ ಕಲೆ ( ಮಿಕ್ಸೆಡ್ ಮಾರ್ಷಿಯಲ್‌ ಆರ್ಟ್‌ -ಎಂಎಂಎ) ಪಟು ಅಬ್ದುಲ್ ಮುನೀರ್ ಪ್ರಜಾವಾಣಿ ‘ಮೆಟ್ರೊ’ ಜತೆ ಮಾತನಾಡಿದ್ದಾರೆ.

ಹೇಗಿರುತ್ತದೆ ಯುಎಫ್‌ಸಿ ಕಾದಾಟ?

ಮಿಶ್ರ ಸಮರ ಕಲೆಯಲ್ಲಿ ಜಗತ್ತಿನ ಶ್ರೇಷ್ಠ ಪಟುಗಳ ಕಾದಾಟ ಯುಎಫ್‌ಸಿಯಲ್ಲಿ ನಡೆಯುತ್ತದೆ. ಇದೇ ರೀತಿಯ ಹಲವಾರು ಕಾರ್ಯಕ್ರಮಗಳು ನಡೆದರೂ ಯುಎಫ್‌ಸಿಯೇ ಇದರಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ಯಾಕೆಂದರೆ ಇಲ್ಲಿ ಮಿಶ್ರ ಸಮರ ಕಲೆಗೆ ಮಾತ್ರ ಆದ್ಯತೆ ನೀಡಲಾಗಿದೆ. ಈ ಹಿಂದೆ ಕೆಲವೇ ಕಾರ್ಯಕ್ರಮಗಳನ್ನು ಯುಎಫ್‌ಸಿ ಆಯೋಜಿಸುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಿಶ್ರ ಸಮರ ಕಲೆಯನ್ನು ಜನಪ್ರಿಯಗೊಳಿಸುತ್ತಿದೆ.

ಮೆಕ್ರಾಗರ್–ಸಿರೋನೆ ಹಣಾಹಣಿಯೇ ಯುಎಫ್‌ಸಿಯ ಕೇಂದ್ರ ಬಿಂದು. ಈ ಬಗ್ಗೆ ಏನು ಹೇಳುತ್ತೀರಿ?

ಕಾನರ್ ಮೆಕ್ರಾಗರ್‌ಗೆ ಭಾರತದಲ್ಲಿಯೂ ಅಭಿಮಾನಿಗಳಿದ್ದಾರೆ. ಕೌಬಾಯ್ ಶೀಘ್ರದಲ್ಲಿಯೇ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಫೈಟ್ ಇಬ್ಬರಿಗೂ ಮಹತ್ವದ್ದು. ಒಂದು ವೇಳೆ ಮೆಕ್ರಾಗರ್ ಈ ಕಾದಾಟದಲ್ಲಿ ಸೋತರೆ ಈ ವೃತ್ತಿಯಿಂದಲೇ ಹೊರಗೆ ಹೋಗಲಿದ್ದಾರೆ. ಹಾಗಾಗಿ ಇದು ಪ್ರತಿಷ್ಠೆಯ ಕಾದಾಟ. ಮೆಕ್ರಾಗರ್ ಮೊದಲು ಫೆದರ್ ವೈಟ್‌ನಲ್ಲಿ ಆಮೇಲೆ ಲೈಟ್ ವೈಟ್ ವಿಭಾಗದಲ್ಲಿ ಕಾದಾಡಿದ್ದರು. ಈಗ ವೆಲ್ಟರ್ ವೈಟ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಇದೊಂದು ಚಾಲೆಂಜಿಂಗ್ ಹಣಾಹಣಿ. ರಷ್ಯಾದ ಫೈಟರ್ ಕಬೀಬ್ ವಿರುದ್ಧದ ಸ್ಪರ್ಧೆಯಲ್ಲಿ ಸೋತಿದ್ದ ಮೆಕ್ರಾಗರ್ ಈ ಸ್ಪರ್ಧೆಯಲ್ಲಿ ಯಾವ ರೀತಿ ಕಾದಾಡಲಿದ್ದಾರೆ ಎನ್ನುವುದು ಕುತೂಹಲ.

ಕೌಬಾಯ್ ಬಗ್ಗೆ ಹೇಳುವುದಾದರೆ ಅವರಿಗೂ ಇದು ಪ್ರತಿಷ್ಠೆಯ ಕಣ. ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ ಇಬ್ಬರೂ ಸೋತಿದ್ದರಿಂದ ಇದು ಮಹತ್ವದ ಸ್ಪರ್ಧೆಯಾಗಲಿದೆ. ಮೆಕ್ರಾಗರ್‌ಗೆ ಹೋಲಿಸಿದರೆ ಕೌಬಾಯ್ ಶರೀರದ ತೂಕ ಮತ್ತು ಎತ್ತರ ಪ್ಲಸ್ ಪಾಯಿಂಟ್. ಇವರ ಟೇಕ್‌ಡೌನ್ ಕೌಶಲವೂ ಎಡಗೈ ಸ್ಟ್ರೈಕರ್ ಮೆಕ್ರಾಗರ್‌ಗೆ ಪೈಪೋಟಿ ಒಡ್ಡಲಿದೆ. ಇದೊಂದು ರಕ್ತಹರಿಸುವ ಕಾದಾಟ ಆಗಲಿದೆ.

ಮಹಿಳೆಯರ ವಿಭಾಗದಲ್ಲಿ ಹೋಲಿ ಹೋಮ್ ಮತ್ತು ರೇಕಲ್ ಪೆನ್ನಿಂಗ್ಟನ್ ನಡುವೆ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಹೋಲಿ ಹೋಮ್ ಮೇಲುಗೈ ಸಾಧಿಸಬಹುದು ಎಂಬುದು ನನ್ನ ಅನಿಸಿಕೆ.

ಭಾರತದಲ್ಲಿ ಎಂಎಂಎ

ಭಾರತದಲ್ಲಿ ಮಿಶ್ರ ಸಮರ ಕಲೆಯನ್ನು ಹೆಚ್ಚು ಜನಪ್ರಿಯಗೊಳಿಸಿದ್ದೇ ಯುಎಫ್‌ಸಿ. ಗೂಡಿನೊಳಗೆ ನಡೆಯುವ ಕಾಳಗ ಎಂದು ಇಲ್ಲಿನ ಜನರು ನೋಡುತ್ತಿದ್ದರೇ ಹೊರತು ಅದು ಎಂಎಎ ಫೈಟ್ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಎಂಎಂಎ ಪ್ರಚುರ ಪಡಿಸಲು ಸಿನಿಮಾಗಳು ಸಹಕಾರಿಯಾದವು.

ಅಬ್ದುಲ್ ಮುನೀರ್ ಪರಿಚಯ

ಯುಎಫ್‌ಸಿ ಫೈಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊತ್ತ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ ಫೈಟರ್ ಅಬ್ದುಲ್ ಮುನೀರ್. ಕೇರಳದ ಕೋಯಿಕ್ಕೋಡ್ ರಾಮನಾಟ್ಟುಕರ ಕೊಡಂಬುಳ ನಿವಾಸಿಯಾಗಿರುವ ಇವರು ‘ಮುನೀರ್ ದಿ ಕಟ್ ಮ್ಯಾನ್’ ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ. 6 ಬಾರಿ ಕೇರಳ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಮುನೀರ್ 2016ರಲ್ಲಿ ಭಾರತದ ಶ್ರೇಷ್ಠ ಮಿಶ್ರ ಸಮರ ಕಲೆ ಫೈಟರ್ ಆಗಿ ಆಯ್ಕೆಯಾಗಿದ್ದರು.

ಯುಎಫ್‌ಸಿ 246 ಲೈವ್ ಪ್ರಸಾರ- ಸೋನಿ ಟೆನ್‌2 ಮತ್ತು ಸೋನಿ ಟೆನ್‌ 3ರಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT