ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಪತ್ನಿಯ ಹುಡುಕುತ್ತ...

Last Updated 2 ಮಾರ್ಚ್ 2016, 19:30 IST
ಅಕ್ಷರ ಗಾತ್ರ

*ರಮಾಬಾಯಿ ಮತ್ತು ಅಂಬೇಡ್ಕರ್ ನಡುವೆ ಮಾತು ತುಂಬಾ ಕಡಿಮೆ ಎನ್ನುತ್ತಾರೆ. ಅದು ಸುಳ್ಳು. ಅವರಿಗೆ ಐದು ಮಂದಿ ಮಕ್ಕಳು. ಇಬ್ಬರ ನಡುವೆ ಅನ್ಯೋನ್ಯತೆ ಇತ್ತು. ರಮಾಬಾಯಿ ದೈವಭಕ್ತೆ. ಅಂಬೇಡ್ಕರ್ ಇದಕ್ಕೆ ವಿರುದ್ಧ. ನಂತರದ ದಿನಗಳಲ್ಲಿ ರಮಾಬಾಯಿ ಬದಲಾದರು.

*ರಮಾಬಾಯಿ ತೀರಿಕೊಂಡಾಗ ಅಂಬೇಡ್ಕರ್ ಮಾನಸಿಕವಾಗಿ ಕುಗ್ಗಿಹೋದರು. ಅವರ ಪ್ರತಿ ಹೋರಾಟಗಳಲ್ಲೂ ರಮಾಬಾಯಿಯ ನೆರಳು ಇತ್ತು. ಅಂಬೇಡ್ಕರ್ ಬ್ಯಾರಿಸ್ಟರ್ ಆದಾಗಲೂ ಹೆಂಡತಿ ಹರಿದ ಸೀರೆ ತೊಟ್ಟಿದ್ದ ಬಡವಿ. ಮನೆಯ ಆರ್ಥಿಕ ಸುಧಾರಣೆಗಾಗಿ ಸಗಣಿ ಆಯ್ದುಕೊಂಡು ಬಂದು ಪುಳ್ಳೆ ಮಾಡುತ್ತಿದ್ದರು.

ಹೀಗೆ ‘ರಮಾಬಾಯಿ ಮಿಸೆಸ್ ಅಂಬೇಡ್ಕರ್‌’ ಚಿತ್ರದ ವಿಶೇಷಗಳನ್ನು ಪಟ್ಟಿ ಮಾಡುತ್ತಾರೆ ಡಾ. ಸಿದ್ರಾಮ ಕಾರಣಿಕ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಕಾರಣಿಕ ಅವರ ನಾಟಕವನ್ನು ಆಧರಿಸಿ ಎಂ. ರಂಗನಾಥ್ ‘ರಮಾಬಾಯಿ ಮಿಸೆಸ್ ಅಂಬೇಡ್ಕರ್‌’ ಚಿತ್ರ ರೂಪಿಸಿದ್ದಾರೆ. ಇದು ಪುಸ್ತಕವಾಗಿಯೂ ಲಭ್ಯ. ಕಾರಣಿಕ ಅವರೇ ಅಂಬೇಡ್ಕರ್ ಪಾತ್ರಧಾರಿ. ರಮಾಬಾಯಿ ಪಾತ್ರದಲ್ಲಿ ಯಜ್ಞಾಶೆಟ್ಟಿ ನಟಿಸಿದ್ದಾರೆ.

ಅಂಬೇಡ್ಕರ್ ಪತ್ನಿ ರಮಾಬಾಯಿ ಅವರನ್ನು ಕೇಂದ್ರ ಸ್ಥಾನದಲ್ಲಿಟ್ಟು ಸಿನಿಮಾ ಕಟ್ಟಿರುವುದು ವಿಶೇಷ. ಐದು ವರ್ಷಗಳ ಅಧ್ಯಯನದ ನಂತರ ಕಾರಣಿಕ್ ‘ರಮಾಬಾಯಿ ಮಿಸೆಸ್ ಅಂಬೇಡ್ಕರ್‌’ ನಾಟಕ ರಚಿಸಿದ್ದರು. ಇದು ಉತ್ತರ ಕರ್ನಾಟಕದ ಭಾಗದಲ್ಲಿ ಏಳೆಂಟು ಪ್ರದರ್ಶನಗಳನ್ನೂ ಕಂಡಿದೆ. ‘ಅಂಬೇಡ್ಕರ್‌ ಅವರನ್ನು ನಾನು ಅಧ್ಯಯನ ಮಾಡುವಾಗ ರಮಾಬಾಯಿ ಧಾರವಾಡದಲ್ಲಿ ಕೆಲ ಕಾಲ ವಾಸವಾಗಿದ್ದರು ಎನ್ನುವುದನ್ನು ತಿಳಿದೆ. ಮರಾಠಿಯಲ್ಲಿ ಅವರನ್ನು ಓದಿಕೊಂಡೆ. ಅಕ್ಷರ ಗೊತ್ತಿಲ್ಲದ, ಯಾರ ನೆರವನ್ನೂ ಇಚ್ಛಿಸದ ಮಹಿಳೆ ಅವರು.

ಅಂಬೇಡ್ಕರ್ ಬ್ಯಾರಿಸ್ಟರ್ ಆಗಿದ್ದರೂ ರಮಾಬಾಯಿ ಬಳಿ ಉತ್ತಮ ಸೀರೆಗಳು ಇರಲಿಲ್ಲ. ಕಷ್ಟಗಳ ನಡುವೆಯೇ ಅಂಬೇಡ್ಕರರಿಗೆ ಹೆಗಲಿಗೆ ಹೆಗಲು ಕೊಟ್ಟಿದ್ದರು. ಅಂಬೇಡ್ಕರ್ ರೂಪುಗೊಳ್ಳಬೇಕಾದರೆ ಅವರ ತಂದೆಯ ಪಾತ್ರ ಎಷ್ಟು ಮುಖ್ಯವೋ ರಮಾಬಾಯಿ ಅವರ ಪಾತ್ರವೂ ಅಷ್ಟೇ ಮುಖ್ಯ’ ಎಂದು ಸಿದ್ರಾಮ ಕಾರಣಿಕ ಹೇಳುತ್ತಾರೆ.

‘ಅಂಬೇಡ್ಕರರ ಹೆಂಡತಿ–ಕುಟುಂಬದ ಬಗ್ಗೆ ಇಲ್ಲಿಯವರೆಗೂ ಏನು ಗೊತ್ತಿರಲಿಲ್ಲವೋ ಅದನ್ನು ತೋರಿಸುವುದು ನಮಗೆ ದೊಡ್ಡ ಸವಾಲಾಗಿತ್ತು. ಎಲ್ಲೆಲ್ಲಿ ಮಾಹಿತಿ ದೊರೆಯುತ್ತದೆಯೋ ಅಲ್ಲಿಗೆಲ್ಲ ಹೋಗಿದ್ದೇವೆ. ಚಿತ್ರದಲ್ಲಿ ಅಂದಿನ ಸನ್ನಿವೇಶಗಳ ಮತ್ತು ಕಾಲಘಟ್ಟದ ಬಗ್ಗೆ ಗಮನಹರಿಸಿದ್ದೇವೆ. ರಮಾಬಾಯಿ ನಾಟಕ ನೋಡಿದ್ದ ನಿರ್ದೇಶಕ ಎಂ. ರಂಗನಾಥ್ ‘ಸಿನಿಮಾ ಮಾಡೋಣ ಎಂದರು’ ಎಂದು ಚಿತ್ರದ ಬಗ್ಗೆ ಕಾರಣಿಕ್ ಮತ್ತಷ್ಟು ಮಾಹಿತಿ ನೀಡಿದರು. 

ಅಂಬೇಡ್ಕರ್ ಪಾತ್ರದಲ್ಲಿ ಕಾರಣಿಕ ಅವರೇ ನಟಿಸಿದ್ದಾರೆ. ಕಾರವಾರ ಮತ್ತು ಧಾರವಾಡದಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಡಿಟರ್ ಶ್ರೀನಿವಾಸ್ ‘ರಮಾಬಾಯಿ’ಯ ನಿರ್ಮಾಪಕರು. ಏಪ್ರಿಲ್ 14ರ ‘ಅಂಬೇಡ್ಕರ್ ಜಯಂತಿ’ಯಂದು ಸಿನಿಮಾವನ್ನು ತೆರೆ ಕಾಣಿಸಲು ಚಿತ್ರತಂಡ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT