ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕರ ಆಸರೆ ಸಮರ್ಥನಂ

Last Updated 6 ಮೇ 2013, 19:59 IST
ಅಕ್ಷರ ಗಾತ್ರ

ಕೆಲವರು ಹುಟ್ಟುತ್ತಲೇ ನತದೃಷ್ಟರಾಗಿರುತ್ತಾರೆ. ಅಂಗವೈಕಲ್ಯ ಜೊತೆಗೇ ಬಂದಿರುತ್ತದೆ. ಇನ್ನು ಕೆಲವರು ಬೆಳೆಯುತ್ತಾ ವಿಕಲಾಂಗರಾಗುತ್ತಾರೆ. ಇವೆಲ್ಲವನ್ನೂ ಮೀರಿ ಎಲ್ಲವೂ ಸರಿಯಾಗಿದ್ದೂ ಯಾವುದೋ ಕ್ರೂರ ಕೈಗಳಿಗೆ ಬಲಿಯಾಗಿ ಕೈ ಕಾಲು ಕಳೆದುಕೊಂಡು ಭಿಕ್ಷಾಟನೆ ಮಾಡುವ ನತದೃಷ್ಟರೂ ಇದ್ದಾರೆ. ಯಾವುದೋ ಕಾರಣದಿಂದ ಹಳ್ಳಿಗಳಿಂದ ನಗರಕ್ಕೆ ಓಡಿ ಬರುವ ಮಕ್ಕಳನ್ನು  ವಿಕಲಾಂಗರನ್ನಾಗಿಸಿ ಭಿಕ್ಷಾಟನೆಗೆ ತಳ್ಳುವ ಕ್ರೂರ ವ್ಯವಸ್ಥೆಯೊಂದು ನಗರದಲ್ಲಿದೆ.

ಆದರೆ ಅಂತಹ ನತದೃಷ್ಟರಿಗೆ ಬದುಕು ನೀಡುವ, ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡುವ ಅನೇಕ ಸಂಸ್ಥೆಗಳೂ ಇದೇ ನಗರದಲ್ಲಿದೆ ಎಂಬುದೇ ಆಶಾದಾಯಕ ಅಂಶ. ಅಂತಹದೊಂದು ಸ್ವಯಂಸೇವಾ ಸಂಸ್ಥೆ `ಸಮರ್ಥನಂ ಟ್ರಸ್ಟ್'. ಇಲ್ಲಿಗೆ ಬಂದ ಇಬ್ಬರು ಅನಾಥ ಮಕ್ಕಳ ಬದುಕು ಬದಲಾದ ಕಥೆ ಇಲ್ಲಿದೆ.

ಅಂದು ಭಿಕ್ಷುಕ ಇಂದು ವಿದ್ಯಾರ್ಥಿ
ಅರಸೀಕೆರೆಯವನಾದ ಅನಾಥ ಬಾಲಕ ಮನು ಹೇಗೋ ಮೆಜೆಸ್ಟಿಕ್‌ಗೆ ಬಂದು ಭಿಕ್ಷಾಟನೆ ಮಾಡುತ್ತಿರುತ್ತಾನೆ. ಈತ ಹುಟ್ಟು ಅಂಗವಿಕಲ. ಎರಡೂ ಕಾಲುಗಳು ಸೇರಿಕೊಂಡಂತಿದ್ದು ತೆವಳುತ್ತಾ ಭಿಕ್ಷಾಟನೆ ಮಾಡುತ್ತಿದ್ದ. ಮೆಜೆಸ್ಟಿಕ್‌ನಲ್ಲಿ ಈತನ ಸ್ಥಿತಿಯನ್ನು ಕಂಡ ಪೊಲೀಸರು ವಿಚಾರಿಸಿದಾಗ ಅರಸೀಕೆರೆಯವನೆಂದು ಹೇಳಿಕೊಂಡ. ಆದರೆ ಅಲ್ಲಿ ವಿಚಾರಿಸಿದಾಗ `ಇವ ನಮ್ಮವ' ಎಂದು ಹೇಳಿಕೊಳ್ಳುವವರು ಒಬ್ಬರೂ ಇರಲಿಲ್ಲ.

ಹೀಗಾಗಿ ಹಾಸನದ ಬಾಲ ಮಂದಿರಕ್ಕೆ ಸೇರಿಸಲಾಗುತ್ತದೆ. ಆದರೆ, ಸಮರ್ಥನಂ ಬಗ್ಗೆ ತಿಳಿದ ಅಲ್ಲಿನ ಸಿಬ್ಬಂದಿ ಮನುವನ್ನು ಸಮರ್ಥನಂಗೆ ಹಸ್ತಾಂತರಿಸುತ್ತಾರೆ. ಇಲ್ಲಿ ವಸತಿ ಶಾಲೆಗೆ ಸೇರಿಸಿದರಾದರೂ ತೆವಳುತ್ತಲೇ ಹೋಗುತ್ತಿದ್ದ. ಆದರೆ ಭಿಕ್ಷಾಟನೆ ಮಾಡಿ ಹಣದ ರುಚಿ ಕಂಡಿದ್ದ ಮನು ಅಲ್ಲಿಂದಲೂ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದ. ಆದರೆ ಸಮರ್ಥನಂ ಪ್ರಯತ್ನ ಫಲಪ್ರದವಾಗಿದೆ.

ಮನುವಿನ ಕರುಣಾಜನಕ ಸ್ಥಿತಿ ನೋಡಿದ ಐಟಿ ಉದ್ಯೋಗಿ ಶ್ರೀನಿವಾಸನ್ ಗೋವಿಂದನ್ ವೈದ್ಯರನ್ನು ಸಂಪರ್ಕಿಸಿ ಮನುವಿನ ಚಿಕಿತ್ಸೆಗೆ ನೆರವಾಗುತ್ತಾರೆ. ಮನು ವಾಕರ್‌ನಲ್ಲಿ ನಡೆಯುವುದರ ಜೊತೆಗೆ ಓದಿನ ಕಡೆ ಗಮನ ಹರಿಸುತ್ತಿದ್ದಾನೆ. ಎಲ್ಲರೊಂದಿಗೆ ಬೆರೆತು ಸಂತೋಷವಾಗಿದ್ದಾನೆ.

ಬಾಲೆಯ ಬಾಳಲ್ಲಿ ಜ್ಯೋತಿ
ಗುಲ್ಬರ್ಗಾದ ಜ್ಯೋತಿಯದು ಹೃದಯ ವಿದ್ರಾವಕ ಕಥೆ. ಈಕೆಯ ಅಪ್ಪ ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ತ್ಯಜಿಸಿ ಹೋಗುತ್ತಾನೆ. ಸ್ವಲ್ಪ ದಿನದ ನಂತರ ತಾಯಿ ಕೂಡಾ ಮೂವರು ಹೆಣ್ಣು ಮಕ್ಕಳನ್ನು ಗುಲ್ಬರ್ಗಾ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಾಳೆ. ಅಲ್ಲಿ ಅನಾಮಿಕನೊಬ್ಬ ಮಕ್ಕಳನ್ನು ಭಿಕ್ಷಾಟನೆಗೆ ಬಿಡುತ್ತಾನೆ. ಆದರೆ ಕೇವಲ ಐದು ವರ್ಷದ ಮಗು ಜ್ಯೋತಿ ಭಿಕ್ಷೆ ಬೇಡಲು ನಿರಾಕರಿಸಿದಾಗ ಆತ ಆಕೆಯ ಕೈ ಮುರಿದು ಭಿಕ್ಷೆ ಬೇಡುವಂತೆ ಹಿಂಸೆ ನೀಡುತ್ತಾನೆ. ನಂತರ ಸಾರ್ವಜನಿಕರ ಸಹಕಾರದಿಂದ ಮೂವರೂ ಸಹೋದರಿಯರು ಸರ್ಕಾರಿ ಬಾಲಮಂದಿರ ಸೇರುತ್ತಾರೆ.

ಕೈ ಮುರಿದು ನೋವು ಅನುಭವಿಸುತ್ತಿದ್ದ ಜ್ಯೋತಿಯನ್ನು `ಸಮರ್ಥನಂ'ಗೆ ಹಸ್ತಾಂತರಿಸುತ್ತಾರೆ. ಮೂರು ವರ್ಷಗಳಿಂದ `ಸಮರ್ಥನಂ'ನಲ್ಲಿ ಆಶ್ರಯ ಪಡೆದ ಜ್ಯೋತಿಯ ಕೈಗೆ ಈಗಾಗಲೇ ಎರಡು ಶಸ್ತ್ರಚಿಕಿತ್ಸೆಯಾಗಿದೆ. ಇನ್ನೂ ಆರು ಸರ್ಜರಿ ಆಗಬೇಕಾಗಿದೆ. ಆಕೆ ಈಗ ವಸತಿ ಶಾಲೆಯಲ್ಲಿ ಎರಡನೇ ತರಗತಿ ಮುಗಿಸಿದ್ದಾಳೆ.
`ಸಮರ್ಥನಂ'ನಲ್ಲಿ ಇಂತಹ ನೂರಾರು ಯಶಸ್ಸಿನ ಕಥೆಗಳಿವೆ.

ಸಮರ್ಥನಂ ಬಗ್ಗೆ
ಭಾರತದಲ್ಲಿನ ಅಂಗವಿಕಲರ ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ 1997ರಿಂದಲೂ ಶ್ರಮಿಸುತ್ತಿರುವ ಸಂಸ್ಥೆ ಸಮರ್ಥನಂ. ಪ್ರಮುಖವಾಗಿ ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಠಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರ ಸ್ವಾವಲಂಬನೆಗೆ ಸಹಕರಿಸುತ್ತಿದೆ.
`ಸಮರ್ಥನಂ' ಹೆಸರು ಕೇಳಿದ ತಕ್ಷಣ ಅಂಧರ ಕ್ರಿಕೆಟ್ ನೆನಪಾಗುತ್ತದೆ.

ಅಂಧರ ಕ್ರಿಕೆಟ್ ಅಸೋಸಿಯೇಷನ್ ಮೂಲಕ ಅಂಧರ ಕ್ರಿಕೆಟ್ ತಂಡ ಕಟ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಸಮರ್ಥನಂ. ಅಂಧರ ಸಂಗೀತ-ನೃತ್ಯ ತಂಡ ಕೂಡಾ ಇದೆ. ಹೀಗೆ ಸಮಾಜ ಅಸಹಾಯಕರು ಎಂದು ಅನುಕಂಪ ತೋರುವ ವಿಶೇಷ ಮಕ್ಕಳನ್ನೇ ಕಟ್ಟಿಕೊಂಡು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಸಮರ್ಥನಂ ಹೆಗ್ಗಳಿಕೆ.

ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸಮರ್ಥನಂ ವಸತಿ ಶಾಲೆ ಹೊಂದಿದೆ. ಇಲ್ಲಿಗೆ ರಾಜ್ಯದ ಬೇರೆ ಬೇರೆ ಊರಿನಿಂದ ಮಕ್ಕಳನ್ನು ಕರೆತರುತ್ತಾರೆ. ವೆಬ್‌ಸೈಟ್ ಮೂಲಕ ಅನೇಕರು ಇಂತಹ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಾರೆ.
ಕಾದು ನೋಡಬೇಕಾಗಿದೆ.

`ಗುಲ್ಬರ್ಗಾದಿಂದ ಬೆಂಗಳೂರಿಗೆ ಕರೆತಂದ ಜ್ಯೋತಿಯನ್ನು ಯಶೋಮತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯಕೀಯ ತಪಾಸಣೆ ನಂತರ ಜ್ಯೋತಿಗೆ ಬಲಗೈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೊದಲ ಹಂತದ ಶಸ್ತ್ರಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿಗಿಂತಲೂ ಅಧಿಕ ವೆಚ್ಚವಾಗಿದೆ. ಬಲಗೈಯ ಶಕ್ತಿಯನ್ನು ಮರಳಿ ಪಡೆಯಲು 8 ವರ್ಷದ ಬಾಲಕಿ ಜ್ಯೋತಿಗೆ ಸುಮಾರು 2 ತಿಂಗಳ ಕಾಲಾವಕಾಶ ಬೇಕಾಗಿದೆ. ಅಷ್ಟೇ ಅಲ್ಲ, ಬಲಗೈ ಶಸ್ತ್ರಚಿಕಿತ್ಸೆಯ ಪರಿಣಾಮದ ಪರಿಶೀಲನೆ ನಂತರ ಎಡಗೈಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ' ಎಂದು ವಿವರಿಸುತ್ತಾರೆ, ಸಮರ್ಥನಂನ ಮ್ಯಾನೇಜಿಂಗ್ ಟ್ರಸ್ಟಿ ಮಹಾಂತೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT