ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದೋತ್ಸಾಹದ ನೃತ್ಯ ದಿನಾಚರಣೆ

ಲಯ - ಲಾಸ್ಯ
Last Updated 8 ಮೇ 2013, 19:59 IST
ಅಕ್ಷರ ಗಾತ್ರ

ಅಂತಾರಾಷ್ಟ್ರೀಯ ನೃತ್ಯ ದಿನ (ಏ.29) ಆಚರಣೆಗೆ ಈ ಬಾರಿ ರಾಜ್ಯದ ಹಾಗೂ ಹೊರರಾಜ್ಯಗಳ ಕಲಾವಿದರು ಮತ್ತು ಕಲೋತ್ಸಾಹಿಗಳು ಸಾಕ್ಷಿಯಾದರು. ನಗರದ ಮೂರು ಸಂಸ್ಥೆಗಳು ವೈವಿಧ್ಯಮಯವಾಗಿ ನೃತ್ಯ ದಿನವನ್ನು ಆಚರಿಸಿದವು.

ಸೃಷ್ಟಿ ಸೆಂಟರ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್ ಅಂಡ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಥೆರಪಿ ಸಂಸ್ಥೆಯು ಅದರ ಸಂಸ್ಥಾಪಕ ಎ.ವಿ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಒಂದು ವಾರದ ಕಾರ್ಯಕ್ರಮ ಗಳನ್ನು ನಗರದ ಬೇರೆ ಬೇರೆ ಸಭಾಂಗಣಗಳಲ್ಲಿ  ನಡೆಸಿತು. ಒಂದೆರಡು ನೃತ್ಯ ರೂಪಕಗಳೂ ಸೇರಿದಂತೆ ಅನೇಕ ನೃತ್ಯ ಪ್ರದರ್ಶನಗಳು ನಡೆದವು.

ರಂಗ ತಜ್ಞ ಹಾಗೂ ನೃತ್ಯ ಕಲಾ ಪೋಷಕ ಸಾಯಿ ವೆಂಕಟೇಶ್ ಅವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಆಶ್ರಯದಲ್ಲಿ ಏ.29ರಂದು ಮಲ್ಲೇಶ್ವರದ ಸೇವಾ ಸದನ, ಕನ್ನಡ ಭವನದಲ್ಲಿರುವ ನಯನ, ಹನುಮಂತನಗರದ ಕೆ.ಎಚ್.ಕಲಾ ಸೌಧ ಮತ್ತು ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಏಕಕಾಲಕ್ಕೆ ನೃತ್ಯ ಪ್ರದರ್ಶನಗಳು ನಡೆದವು. ಏ.28ರ ಬೆಳಿಗ್ಗೆ ಇಂದಿರಾನಗರದಲ್ಲಿರುವ ಯಾಮಿನಿ ಮುತ್ತಣ್ಣ ಡಾನ್ಸ್ ಸೆಂಟರ್‌ನಲ್ಲಿ ನಡೆದ ಶ್ವೇತಾ ವೆಂಕಟೇಶ್ (ಕಥಕ್) ಮತ್ತು ಮಾಯಾ ಕೃಷ್ಣಮೂರ್ತಿ (ಒಡಿಸ್ಸಿ)ಅವರ ಸೊಗಸಾದ ಕಾರ್ಯಕ್ರಮಗಳೊಂದಿಗೆ ನೃತ್ಯ ದಿನೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.

ಅಲಯೆನ್ಸ್ ಫ್ರಾಂಚೆ ಸಂಸ್ಥೆಯೊಂದಿಗೆ ಕಲಾ ಇತಿಹಾಸಜ್ಞ ಮತ್ತು ಲೇಖಕ ಆಶಿಶ್ ಖೋಕರ್ ಅವರು ಕೈಜೋಡಿಸಿ ಏ.28ರ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿದರು. ನೃತ್ಯ ಪ್ರದರ್ಶನಗಳಷ್ಟೇ ಅಲ್ಲದೆ ಖೋಕರ್ ಸಂಗ್ರಹಾಲಯದ ಎ ಸೆಂಚುರಿ ಆಫ್ ಇಂಡಿಯನ್ ಡಾನ್ಸ್ ಕಿರುಚಿತ್ರ ಮತ್ತು  ಕ್ಲಾಸಿಕಲ್ ಡಾನ್ಸ್ ಅಂಡ್ ಮಾಡರ್ನ್ ಟೈಮ್ಸ ಎಂಬ ವಿಷಯವನ್ನು ಕುರಿತಾಗಿ ವಿಚಾರ ಸಂಕಿರಣವೂ ಯಶಗಂಡಿತು.

ಜ್ಯೇಷ್ಠ ಕಲಾ ವಿಮರ್ಶಕಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷೆ ಮತ್ತು ದೆಹಲಿಯ ಕಥಕ್ ಕೇಂದ್ರದ ಅಧ್ಯಕ್ಷೆ ಶಾಂತಾ ಸಬರ್ಜಿತ್ ಸಿಂಗ್ ಅವರ ಆಶಯ ಭಾಷಣ ನೃತ್ಯ ಕ್ಷೇತ್ರದ ಬಗೆಗಿನ ಆದರ್ಶ ಹಾಗೂ ಯಥಾರ್ಥವಾದಿ ದೃಷ್ಟಿಕೋನಗಳ ಮಂಥನದಂತಿತ್ತು. ಇದೇ ಸಂದರ್ಭದಲ್ಲಿ ಆಶಿಶ್ ಖೋಕರ್ ಅವರ ವಾರ್ಷಿಕ  ಅಟೆಂಡಾನ್ಸ್ ಸಂಚಿಕೆಯ ಲೋಕಾರ್ಪಣವನ್ನು ನಿವೃತ್ತ ಅಧಿಕಾರಿ ಚಿರಂಜೀವಿಸಿಂಗ್ ಅವರು ಮಾಡಿದರು. ಆಶಿಶ್ ಖೋಕರ್ ಅವರ ಕಾರ್ಯಕ್ರಮ ಸಂಚಾಲನೆ ಅಭಿನಂದನೀಯವಾಗಿತ್ತು.

ಸಫಲ ಪ್ರದರ್ಶನ
ಯುವ ನರ್ತಕಿ-ಗಾಯಕಿ ಸಮನ್ವಿತಾ ಶರ್ಮ ಅವರು ತಮ್ಮ ಪ್ರತಿಭಾನ್ವಿತ ಶಿಷ್ಯೆ ಸುರಭಿ ಬಾಲಕೃಷ್ಣ ಅವರ ಭರತನಾಟ್ಯ ಕಾರ್ಯಕ್ರಮವನ್ನು ಎಡಿಎ ರಂಗಮಂದಿರದಲ್ಲಿ ಸಾಂಗವಾಗಿ ನೆರವೇರಿಸಿದರು. ಕನ್ನಡ ರಾಗದ ಜತಿಸ್ವರದಲ್ಲಿ ಸಂಕೀರ್ಣವಾಗಿದ್ದ ಜತಿಗಳು, ಸ್ವರಗಳು ಮತ್ತು ಅವುಗಳಿಗೆ ಉತ್ತಮವಾಗಿ ಹೊಂದುವಂತಹ ಅಡುವುಗಳ ಸಂಯೋಜನೆ ಆಕರ್ಷಕವಾಗಿತ್ತು.

ಶೃಂಗೇರಿ ಶಾರದಾ ದೇವಿಯನ್ನು ಕುರಿತಾದ ಸುಪರಿಚಿತ ಕಲ್ಯಾಣಿ ರಚನೆ  `ಶೃಂಗಪುರಾಧೀಶ್ವರೀ ಶಾರದೆ'ಯನ್ನು ಅವಲಂಬಿಸಿ ದೇವಿಯ ರೂಪಲಾವಣ್ಯ ಮತ್ತು ಹಿರಿಮೆಗಳನ್ನು ಸುರಭಿ ತಮ್ಮ ಅಭಿನಯಲ್ಲಿ ಸೆರೆಹಿಡಿದರು. ಅದಕ್ಕೆ ಸಂಸ್ಕೃತ ಶ್ಲೋಕದ ಮುನ್ನುಡಿ ಸಾರ್ಥಕವಾಗಿತ್ತು. ನಾಯಕಿಯನ್ನು ವರ್ಣಿಸುವ ಭೈರವಿ ವರ್ಣ (ಮೋಹಮನ)ದ ಪ್ರಸ್ತಾರದಲ್ಲಿ ನೃತ್ತ, ನೃತ್ಯ ಮತ್ತು ಅಭಿನಯಗಳಲ್ಲಿ ತಮಗಿರುವ ಪರಿಣತಿಯನ್ನು ಸುರಭಿ ಅವರು ತೋರಿದರು. ನಂತರದ ಪದಾಭಿನಯದಲ್ಲಿ (ನೀ ಮಾಟ, ಪೂರ್ವಿಕಲ್ಯಾಣಿ) ಅವರು ತಮ್ಮ ನಟನಾ ತನ್ಮಯತೆಯಿಂದ ಮೆಚ್ಚಿಸಿದರು. ಸಮನ್ವಿತಾ (ನಟುವಾಂಗ), ರೋಹಿಣಿ ಪ್ರಭುನಂದನ್ (ಗಾಯನ), ಮಹೇಶ್‌ಸ್ವಾಮಿ (ಕೊಳಲು), ಲಿಂಗರಾಜು (ಮೃದಂಗ) ಮತ್ತಿತರೆ ಪಕ್ಕವಾದ್ಯಗಾರರು ಉಪಯುಕ್ತವಾಗಿ ಸಹಕರಿಸಿದರು.

ಉಲ್ಲಾಸಕರ ಭರತನಾಟ್ಯ
ಬಹುಮುಖ ಪ್ರತಿಭೆಯ ದೀಪಶ್ರೀ ಅವರು ಭರತನಾಟ್ಯ ಕಲಾ ಪ್ರಕಾರದಲ್ಲೂ ತಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿರುವುದನ್ನು ಯವನಿಕಾದಲ್ಲಿ ನಡೆದ `ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ' ಕಾರ್ಯಕ್ರಮದಲ್ಲಿ ಪ್ರಕಟಗೊಳಿಸಿದರು. ಭರತನಾಟ್ಯಕ್ಕೆ ಅತಿ ಆವಶ್ಯಕವಾಗಿರುವ ಅರ್ಧಮಂಡಳಿಗಳು ಒಂದೆರಡು ಬಾರಿ ತೊಡರಿತಾದರೂ ಸಹ ಒಟ್ಟಾರೆ ಪ್ರಭಾವ ಸಕಾರಾತ್ಮಕವಾಗಿತ್ತು.

`ಆನಂದ ನರ್ತನ ಗಣಪತಿ'ಯನ್ನು ಸ್ತುತಿಸಿ ಅವನ ವಿಶೇಷಗಳ ಚಿತ್ರಣ ಮನೋಹರವಾಗಿತ್ತು. ಕೊಳಲು ವಾದಕ ಮಹೇಶ್‌ಸ್ವಾಮಿ ಅವರ ಕನ್ನಡ ವರ್ಣ `ಸುಂದರೇಶ್ವರನು ಬಾರನೇತಕೆ' (ಅಭೇರಿ) ಸ್ವಾಗತಾರ್ಹ ಆಯ್ಕೆಯಾಗಿತ್ತು.

ವಿರಹತಪ್ತಳಾದ ಪಾರ್ವತಿಯ ಸುತ್ತ ಹೆಣೆಯಲಾಗಿದ್ದ ವಸ್ತುವನ್ನು ತಮ್ಮ ಸಂವಾಹಕ ಅಭಿನಯದ ಮೂಲಕ ವಿಶದಪಡಿಸಿದರು. ಅಂತಃಪುರ ಗೀತೆ (ಏನೀ ಮಹಾನಂದವೇ, ಹಿಂದೋಳ) ಮತ್ತು `ಸಾಕೋ ನಿನ್ನ ಸ್ನೇಹ' ರಚನೆಗಳನ್ನು ಆಧರಿಸಿ ಅವರು ಕೈಗೊಂಡ ವಸ್ತುವಿನ್ಯಾಸ ಕಲಾತ್ಮಕವಾಗಿತ್ತು. ಬೃಂದಾವನಿ ತಿಲ್ಲಾನದೊಂದಿಗೆ ಅವರ ಕಾರ್ಯಕ್ರಮ ಕೊನೆಗೊಂಡಿತು. ಗುರು ರಾಜಲಕ್ಷ್ಮಿ  (ನಟುವಾಂಗ), ಶ್ರಿವತ್ಸ (ಗಾಯನ) ಅವರ ನೇತೃತ್ವದ ಸಂಗೀತ ಸಹಕಾರ ಸಮರ್ಪಕವಾಗಿತ್ತು.

ಪಿಟೀಲು ವಾದನದ ರಸದೌತಣ
ಕೋಟೆ ಪ್ರೌಢಶಾಲೆಯ ಆವರಣದಲ್ಲಿ  ನಡೆದಿರುವ ಶ್ರೀರಾಮ ನವಮಿ ಸಂಗೀತೋತ್ಸವದಲ್ಲಿ ಹಿರಿಯ ಪಿಟೀಲು ವಾದಕಿ ಎ.ಕನ್ಯಾಕುಮಾರಿ ಅವರು ತಮ್ಮ ಶಿಷ್ಯ ಎಂಬರ್ ಕಣ್ಣನ್ ಅವರೊಡಗೂಡಿ ಸುಮಾರು ಎರಡೂವರೆ ಗಂಟೆಗಳ ಸೋಲೇ ಕಛೇರಿಯನ್ನು ನೀಡಿದರು. ಕರ್ನಾಟಕ ಸಂಗೀತದ ದಿಗ್ಗಜರಲ್ಲಿ ತರಬೇತಿ, ವಾದ್ಯದ ಮೇಲೆ ಪ್ರಭುತ್ವ, ಲಯ ಸೂಕ್ವ್ಮಗಳ ಪರಿಪಕ್ವ ಗ್ರಹಿಕೆ ಹಾಗೂ ಮಂಡನೆ, ಅಪಾರ ವೇದಿಕೆ ಅನುಭವ ಹೀಗೆ ಅವರ ವಾದನದ ವೈಶಿಷ್ಟ್ಯಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದೇನೋ? ಅವುಗಳ ಜೊತೆಗೆ ಒಟ್ಟಂದವನ್ನು ಹೆಚ್ಚಿಸುವಂತಹ ಕೆ.ವಿ. ಪ್ರಸಾದ್ ಅವರ ಮೃದಂಗ ಮತ್ತು ಎನ್. ಅಮೃತ್ ಅವರ ಖಂಜರಿ ವಾದನ. ಹಾಗಾಗಿ ನೆರೆದಿದ್ದ ಸಂಗೀತ ಪ್ರೇಮಿಗಳಿಗೆ ರಸದೌತಣ.

`ನಮ್ಮಮ್ಮ ಶಾರದೆ' (ಹಂಸಧ್ವನಿ)ಯ ಸ್ತುತಿಯೊಂದಿಗೆ ಆರಂಭ. ಅದಕ್ಕೆ ನುಡಿಸಲಾದ ಸ್ವರಗಳು ಕಾವು ತುಂಬಿದವು. `ರಾಮ ಭಕ್ತಿಸಾಮ್ರೋಜ್ಯ' (ಶುದ್ಧಬಂಗಾಳ) ಮತ್ತು  `ದುಡುಕುಗಲದಾ' (ಗೌಳ ಪಂಚರತ್ನ ಕೃತಿ) ಚೇತೋಹಾರಿಯಾಗಿದ್ದವು.  ತ್ಯಾಗರಾಜರ ಸ್ಮರಣೆ ಸುಖಮು (ಜನರಂಜಿನಿ) ಕೀರ್ತನೆಯನ್ನು ಅದೆಷ್ಟೋ ಸಮಯದ ನಂತರ ಕೇಳಿ ಖುಷಿಪಡುವಂತಾಯಿತು. ಸಂಕ್ಷಿಪ್ತವಾಗಿದ್ದ ರಾಗಾಲಾಪನೆ ಮತ್ತು ಕಲ್ಪನಾಸ್ವರಗಳೊಂದಿಗೆ  ನಾದಲೋಲುಡೈ (ಕಲ್ಯಾಣವಸಂತ) ರಂಜಿಸಿತು. ವಿಳಂಬದಲ್ಲಿ `ಮಾಮವ ಪಟ್ಟಾಭಿರಾಮ' (ಮಣಿರಂಗು) ಮಾನ್ಯವಾಯಿತು.

ಕನ್ಯಾಕುಮಾರಿಯವರ ವಾದನದಲ್ಲಿ ಬೃಂದಾವನ ಸಾರಂಗ ರಾಗವನ್ನು ಕೇಳುವುದು ಒಂದು ಅಪೂರ್ವ ಸೊಗಸು. ಅದೇ ಸೊಗಸನ್ನು ಇಮ್ಮಡಿಗೊಳಿಸಿ ನುಡಿಸಿ ತ್ಯಾಗರಾಜರ  ಕಮಲಾಪ್ತಕುಲ ಕಲಶಾಬ್ಧಿ ಚಂದ್ರ  ಕೀರ್ತನೆಯನ್ನು ಭಾವಮಯವಾಗಿ ಸಾದರ ಪಡಿಸಿ ಅದಕ್ಕೆ ಸ್ವರಗಳ ಮೆರಗನ್ನು ನೀಡಿದರು.  ಬಾಗಾಯನಯ್ಯ (ಚಂದ್ರಜ್ಯೋತಿ), ಭಜ ಗೋವಿಂದಂ (ರಾಗಮಾಲಿಕೆ),  ಎವ್ವರನಿ (ದೇವಾಮೃತವರ್ಷಿಣಿ), ಸಾಯಿ ಭಜನ್, ಭಾಗ್ಯದ ಲಕ್ಷ್ಮಿ ಬಾರಮ್ಮ ಮುಂತಾದ ಪ್ರಸ್ತುತಿಗಳು ನೆನೆಪಿನಲ್ಲಿ ಹಲವಾರು ಕಾಲ ಉಳಿಯಂತೆ ಮೂಡಿ ಬಂದವು. ಎತ್ತರಿಸಿದ ಗಾತ್ರದ ಧ್ವನಿವರ್ಧಕಗಳಿಂದಾಗಿ ಆಗ್ಗಾಗ್ಗೆ ಕಿರಿಕಿರಿಯುಂಟಾದರೂ ಸಹನೀಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT