ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಈ ಕ್ಷಣದ ಖುಷಿ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಎಂಜಿ ರೋಡಲ್ಲಿ ಎಲ್ಲಿ ಮೇಡಂ?’

ಆಟೊ ಹತ್ತಿ ಮೀಟರ್ ಆನ್ ಮಾಡಿದ ಕೂಡಲೇ ಡ್ರೈವರ್ ಕೇಳಿದರು. ಮೆಟ್ರೋ ಸ್ಟೇಷನ್ ಪಕ್ಕ ಅಂದು ಸುಮ್ಮನಾದೆ. ಸೀರೆ ಉಟ್ಟು ದಡಬಡ ಓಡಿ ಬಂದ ಸುಸ್ತು. ನಾನು ಸುಧಾರಿಸಿಕೊಂಡ ನಂತರ ಆ ಡ್ರೈವರ್ ಮಾತು ಶುರು ಮಾಡಿದರು.

ಅವರು: ಮೆಟ್ರೊ ಸ್ಟೇಷನ್ ಇಳಿದು ಬಸ್ಸಲ್ಲಿ ಹೋಗ್ಬೇಕಾ ಮೇಡಂ?

ನಾನು: ಇಲ್ಲ, ಅಲ್ಲೇ ಹತ್ರ ಇದೆ ನಮ್ಮ ಆಫೀಸು.

ಅವರು: ಮೇಡಂ... ನೀವು ಮೆಟ್ರೋದಲ್ಲೇ ಹೋಗ್ಬಹುದಿತ್ತಲ್ಲಾ...

ನಾನು: ಲೇಟಾಯ್ತು ಅದಕ್ಕೆ ಆಟೊ ಹಿಡಿದೆ.

ಅವರು: ಮೇಡಂ, ಹೆಣ್ಮಕ್ಕಳು ಸಾರಿ ಉಡ್ಬೇಕು, ಬ್ಯೂಟಿಫುಲ್ಲಾಗಿ ಕಾಣ್ತಾರೆ (ನನಗೆ ಖುಷಿಯಾಯ್ತು, ತುಟಿ ತುಂಬಾ ನಗು ತುಂಬಿಕೊಂಡಿತ್ತು). ನೀವು ಮಂಗ್ಳೂರಾ ಮೇಡಂ?

ನಾನು: ಕಾಸರಗೋಡು‌

ಅವರು: ಅಲ್ಲಿಯವರು ಬ್ಯೂಟಿಫುಲ್ ಮೇಡಂ. ಅವರಿಗೆ ಮಲಯಾಳಿನೂ ಬರುತ್ತದೆ ಕನ್ನಡನೂ ಬರುತ್ತೆ. ಮಲಯಾಳದವರು ಬೇಗ ಅಡ್ಜೆಸ್ಟ್ ಆಗ್ತಾರೆ. ಬರೀ ಟೀ ಕುಡಿದು ಬದುಕ್ತಾರೆ. ಅದಕ್ಕೇ ನೋಡಿ ಅವರು ರಿಚ್ಚು. ಇವತ್ತು ಆಫೀಸಲ್ಲಿ ಏನಿದೆ? ನೀವ್ಯಾಕೆ ಸೀರೆ ಉಟ್ಟಿದ್ದೀರಿ? ಫ್ರೆಂಡ್ ಮ್ಯಾರೇಜ್ ಇದ್ಯಾ?

ನಾನು: ಇವತ್ತು ಮಹಿಳಾ ದಿನಾಚರಣೆ ಸರ್. ಅದಕ್ಕೇ ಸೀರೆ.

ಅವರು: ಓ ಹೌದಾ, ವುಮೆನ್ಸ್ ಡೇ ಅನ್ನಿ. ಹ್ಯಾಪಿ ವುಮೆನ್ಸ್ ಡೇ ಮೇಡಂ. ನಿಮಗೆ ಈಗ ಕನ್ನಡದಲ್ಲಿ ಹೇಳ್ತೀನಿ. ಹ್ಯಾಪಿ ಮಹಿಳೆ ದಿನ. ನಾನು ಓದಿದ್ದು ಇಂಗ್ಲಿಷ್ ಮೀಡಿಯಂ. ಇಲ್ಲಿ ಎಲ್ರೂ ಕಂಗ್ಲಿಷ್. ಬೆಂಗಳೂರು ಸಿಟಿ ಅಲ್ವಾ.

ಸ್ವಲ್ಪ ಹೊತ್ತು ಮೌನ.

ಅವರು: ಮೇಡಂ ಮಹಿಳಾ ದಿನದ ಶುಭಾಶಯಗಳು.

ನಾನು: ಧನ್ಯವಾದಗಳು. (ಅವರು ನಕ್ಕರು, ನಾನೂ ನಕ್ಕೆ)

ಮೊನ್ನೆ ಆಟೊದಲ್ಲಿ ಬಂದಾಗ ಮೀಟರ್ ₹102 ಆಗಿದ್ದು. ಈಗ ₹106 ಆಗಿದೆ. ಮಾತು ಮಾತಿನಲ್ಲಿ ನಾಲ್ಕು ರೂಪಾಯಿ ಜಾಸ್ತಿ ಆಯ್ತಾ ಅಂದುಕೊಂಡೆ. ದುಡ್ಡು ಕೊಡಲು ಪರ್ಸ್ ತೆರೆದು ಚಿಲ್ಲರೆ ಹುಡುಕಲು ಅಣಿಯಾದಾಗ.

ಅವರು: ಮೇಡಂ 100 ಕೊಡಿ ಸಾಕು (ಸಾಮಾನ್ಯವಾಗಿ ಆಟೊದವರು ಮೀಟರ್‌ಗಿಂತ ಜಾಸ್ತಿಯೇ ಪೀಕುವಾಗ ಇವರದ್ದು 6 ರೂಪಾಯಿ ಡಿಸ್ಕೌಂಟು, ಅಚ್ಚರಿಯಿಂದಲೇ ದುಡ್ಡು ಕೊಟ್ಟೆ) ಸಾಕು ಮೇಡಂ. ನಿಮ್ಮ ಜೊತೆಗೆ ಮಾತಾಡಿದಾಗ ಖುಷಿಯಾಯ್ತು. ನೀವು ಸರ್ ಅಂತನೇ ರೆಸ್ಪೆಕ್ಟ್ ಕೊಟ್ರಿ. ಅದಕ್ಕೆ ನಾನು ಹ್ಯಾಪಿ (ಕಣ್ಣರಳಿಸಿ ನಕ್ಕರು, ನನಗೆ ಅಚ್ಚರಿ ಮತ್ತು ಖುಷಿ).

ಸೀರೆ ಉಟ್ಟು ಹೈಹೀಲ್ಡ್ ಚಪ್ಪಲಿ ಧರಿಸಿದ್ದ ನಾನು ನನ್ನನ್ನು ಸಂಭಾಳಿಸಿ ಇಳಿಯುವಾಗ ಆಟೊ ನಂಬರ್ ಗಮನಿಸುವುದನ್ನೂ ಮರೆತೆ. ಬದುಕಿನ ಪುಟ್ಟ ಖುಷಿ ಹುಡುಕುವಾಗ ಇಂಥ ಚಿಕ್ಕಪುಟ್ಟ ಪ್ರಸಂಗಗಳೂ ಅನುಭವದ ಜೋಳಿಗೆಯೊಳಗೆ ಸ್ಥಾನ ಪಡೆಯುತ್ತವೆ. ಇದು ಈ ಕ್ಷಣದ ಖುಷಿ. ಲೈಫ್ ಈಸ್ ಬ್ಯೂಟಿಫುಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT