ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನ ಮೇಲಾಸೆ ಸಿನಿಮಾ ಮೇಲೆ ಪ್ರೀತಿ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

`ಸಿನಿಮಾವೇ ನನ್ನ ಆದ್ಯತೆಯಲ್ಲ. ಉತ್ತಮ ಅವಕಾಶ ಸಿಕ್ಕರೆ ಮಾತ್ರ ಚಿತ್ರರಂಗದಲ್ಲಿ ಇರುತ್ತೇನೆ. ಇಲ್ಲವೇ ಓದು ಅಥವಾ ಉದ್ಯೋಗ ಎರಡೂ ಆಯ್ಕೆ ನನ್ನ ಮುಂದಿದೆ~- ಅಳೆದೂ ತೂಗಿ ಮಾತನಾಡಿದರು ನಟಿ ಪದ್ಮಿನಿ. ಆದರೆ ಆ ಮಾತಿನಲ್ಲಿ ತಮ್ಮ ನಿರ್ಧಾರದ ಬಗ್ಗೆ ದೃಢತೆ ಇತ್ತು.

ಪದ್ಮಿನಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎರಡನೇ ಪಿಯುಸಿ ಮುಗಿದ ಮೇಲೆ. ನೃತ್ಯ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದ ನಿರ್ಮಾಪಕ ಚಿನ್ನಸ್ವಾಮಿ ಅವರ ಕಣ್ಣಿಗೆ ಬಿದ್ದರು. ಮುಂದೆ ಸಿಕ್ಕಿದ್ದು `ಓ ಪ್ರೀತಿಯೇ~ ಚಿತ್ರದಲ್ಲಿ ಕ್ಯಾಮೆರಾ ಮುಂದೆ ನಿಲ್ಲುವ ಅವಕಾಶ.

ಚಿತ್ರದ ಹೆಸರು ಓ ಪ್ರೀತಿಯೇ ಆದರೂ ಪದ್ಮಿನಿ ಪಾಲಿಗದು ಪ್ರೇಕ್ಷಕ ಪ್ರೀತಿ ನೀಡಲಿಲ್ಲ. ಕಾರಣ ಚಿತ್ರ ಸಿದ್ಧವಾಗಿ ನಾಲ್ಕು ವರ್ಷವಾದರೂ ತೆರೆಕಾಣುವ ಭಾಗ್ಯ ಸಿಗಲಿಲ್ಲ. ಈ ಮಧ್ಯೆ ನಾಗಾನಾಥ್ ಜೋಷಿ ನಿರ್ದೇಶನದ `ಜಾಲ~ ಚಿತ್ರದಲ್ಲಿ ನಟಿಸಿದರು.
 
ಅದು ಬಂದು ಹೋದದ್ದೇ `ಓ ಪ್ರೀತಿಯೇ~ ಕೊನೆಗೂ ಈ ವಾರ ತೆರೆಕಾಣುತ್ತಿದೆ. `ಓ ಪ್ರೀತಿಯೇ~ ಜನರಿಗೆ ಇಷ್ಟವಾಗಲಿದೆ ಎಂಬ ಭರವಸೆ ಅವರದು. ಚಿತ್ರದಲ್ಲಿ ಅವರದು ಮುಗ್ಧ ಹಳ್ಳಿ ಹುಡುಗಿಯ ಪಾತ್ರ.

ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷ ಉರುಳಿದರೂ ಪದ್ಮಿನಿ ನಟಿಸಿದ್ದು ಎರಡೇ ಚಿತ್ರಗಳಲ್ಲಿ. ಅದಕ್ಕೆ ಅವರು ಕೊಡುವ ಕಾರಣ ಓದು. ಒಂದು ಚಿತ್ರದಲ್ಲಿ ನಟಿಸಿದ ಬಳಿಕ ಅವರು ಬಿ.ಕಾಂ. ಪದವಿಗೆ ಸೇರಿಕೊಂಡರು.
 
ನಂತರ ಅವಕಾಶಗಳು ಅರಸಿ ಬಂದರೂ ಓದಿಗೆ ಆದ್ಯತೆ ನೀಡುವ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಬಿಡುವು ಸಿಕ್ಕಾಗ `ಜಾಲ~ ಚಿತ್ರಕ್ಕೆ ಮತ್ತೆ ಬಣ್ಣಹಚ್ಚಿದರು. `ಓ ಪ್ರೀತಿಯೇ~ ಚಿತ್ರದ ಕತೆ ತಮಿಳಿನಲ್ಲಿಯೂ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.

`ಏನ್‌ಕಾರವ ಕಣ್ಮಣಿಯೊ~ ಎಂಬುದು ಚಿತ್ರದ ಹೆಸರು. ಈ ಚಿತ್ರದಲ್ಲಿಯೂ ಪದ್ಮಿನಿ ನಾಯಕಿ. ಈಗ ಪದವಿ ಪೂರ್ಣಗೊಂಡಿದೆ. ಎಂಬಿಎ ಓದುವ ಬಯಕೆ ಇದೆ. ಅತ್ತ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಆಹ್ವಾನ ಬರುವ ನಿರೀಕ್ಷೆಯೂ ಇದೆ. ಅದಕ್ಕಾಗಿ ಅವರು ಕಾದು ಕುಳಿತಿದ್ದಾರೆ.

`ಕೆಲಸ ಸಿಕ್ಕರೆ ಹಿಂದೆ ಮುಂದೆ ಯೋಚಿಸದೆ ಸೇರಿಕೊಳ್ಳುತ್ತೇನೆ. ಏಕೆಂದರೆ ಸಿನಿಮಾವನ್ನು ವೃತ್ತಿಯಾಗಿ ಸ್ವೀಕರಿಸುವ ಇರಾದೆ ನನ್ನದಲ್ಲ. ಹೀಗಾಗಿಯೇ ಅವಕಾಶಗಳನ್ನು ತಿರಸ್ಕರಿಸಿದ್ದು. ಅದರ ಬಗ್ಗೆ ಬೇಸರವೂ ಇಲ್ಲ. ವಿದ್ಯಾಭ್ಯಾಸ ಮುಖ್ಯ ಗುರಿಯಾಗಿತ್ತು.
ಹಾಗಂತ ಸಿನಿಮಾವನ್ನು ಸಂಪೂರ್ಣವಾಗಿ ಕಡೆಗಣಿಸುವುದಿಲ್ಲ. ಒಳ್ಳೆಯ ಬ್ಯಾನರ್‌ನ ಚಿತ್ರದಲ್ಲಿ ಅವಕಾಶ ಬಂದರೆ ನಟಿಸುವ ಆಸೆ ಖಂಡಿತಾ ಇದೆ~ ಎನ್ನುತ್ತಾರೆ.

ಮೂಲತಃ ಶಿವಮೊಗ್ಗದವರಾದರೂ ಪದ್ಮಿನಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಪಾಶ್ಚಿಮಾತ್ಯ, ಚಲನಚಿತ್ರ ಮತ್ತು ಜನಪದ ನೃತ್ಯ ಪ್ರಕಾರಗಳಲ್ಲಿ ಪದ್ಮಿನಿ ಪ್ರವೀಣೆ. ಗ್ಲಾಮರ್ ಬಗ್ಗೆ ಈಗಿನ ಹೆಚ್ಚಿನ ನಟಿಯರು ನೀಡುವ ವ್ಯಾಖ್ಯಾನವನ್ನೇ ಅವರು ನೀಡುತ್ತಾರೆ.
 
ಗ್ಲಾಮರ್ ತೆರೆ ಮೇಲೆ ಹೇಗೆ ಕಾಣುತ್ತೇವೆ ಎನ್ನುವುದರ ಮೇಲೆ ಅವಲಂಬಿತ. ಆಕರ್ಷಕವಾಗಿ ಕಾಣುವುದೇ ಗ್ಲಾಮರ್. ಲಂಗ-ದಾವಣಿಯಲ್ಲೂ ಗ್ಲಾಮರಸ್ ಆಗಿ ಕಾಣಿಸಬಹುದು ಎಂಬುದು ಅವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT