ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ ಅಕ್ಷರದೊಳಗೋ ಚಿತ್ರದೊಳಗೋ...

ಬ್ಲಾಗಿಲನು ತೆರೆದು...
Last Updated 28 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪೊಯೆಮ್ಸ್‌ ಆಫ್‌ ಪ್ರದೀಪ್’ (poemsofpradeep.blogspot.in) ಒಂದು ಸರಳ – ಸುಂದರ ಬ್ಲಾಗು. ವೃತ್ತಿಯಲ್ಲಿ ನೆಟ್‌ವರ್ಕ್ ಎಂಜಿನಿಯರ್‌ ಆಗಿರುವ ಪ್ರದೀಪ್‌ ರಾವ್‌ ಅವರ ಬ್ಲಾಗಿದು.

ಪ್ರದೀಪ್‌ ಅವರಿಗೆ ಸಾಹಿತ್ಯದ ಜೊತೆಗೆ ಛಾಯಾಗ್ರಹಣದಲ್ಲೂ ಅಪರಿಮಿತ ಪ್ರೇಮ. ತಮ್ಮ ಬ್ಲಾಗ್‌ ಅನ್ನು ಅವರು ‘ಪ್ರೇಮಕವಿಯ ಪಯಣ’ ಎಂದು ಕರೆದುಕೊಂಡಿದ್ದಾರೆ. ಜೀವನದ ಋತುಗಳ ಏರಿಳಿತ ಎನ್ನುವುದು ಬ್ಲಾಗ್‌ ಪಯಣದ ಬಗೆಗೆ ಅವರ ಬಣ್ಣನೆ. ಈ ಋತುಪಲ್ಲಟದ ಅನಾವರಣ ಚಿತ್ರಮಯವಾಗಿದೆ.

ಶೀರ್ಷಿಕೆಯನ್ನು ನೋಡಿ, ಈ ಬ್ಲಾಗೊಂದು ಕವಿತೆಗಳ ಕಟ್ಟು ಎಂದು ಭಾವಿಸುವಂತಿಲ್ಲ. ಹಾಗೆಂದು ಇಲ್ಲಿ ಕವಿತೆಗಳು ಇಲ್ಲವೆಂದು ಹೇಳಲಿಕ್ಕೂ ಬರುವಂತಿಲ್ಲ. ಕಾವ್ಯದ ಬಗೆಗಿನ ಪ್ರದೀಪ್‌ ಅವರ ಪರಿಕಲ್ಪನೆಯೇ ಬೇರೆಯಾಗಿದೆ. ಪ್ರದೀಪ್‌ ಅವರದು ಚಿತ್ರಕಾವ್ಯದ ಮಾದರಿ. ತಮ್ಮ ಕಣ್ಣಿಗೆ ಸುಂದರವಾಗಿ, ಕುತೂಹಲಕರವಾಗಿ ಕಂಡ ದೃಶ್ಯಗಳನ್ನು ಅವರು ಫೋಟೊಗಳಲ್ಲಿ ಹಿಡಿದಿರಿಸಿದ್ದಾರೆ.

ಒಳ್ಳೆಯ ಛಾಯಾಚಿತ್ರ ಒಂದು ಕವಿತೆಯೇ ತಾನೇ? ಈ ಅರ್ಥದಲ್ಲಿ ಪ್ರದೀಪರ ಬ್ಲಾಗ್‌ ಒಂದು ಚಿತ್ರಕಾವ್ಯ ಕಡತವೇ ಸರಿ. ಅನೇಕ ಚಿತ್ರಗಳಿಗೆ ಬ್ಲಾಗಿಗರು ಕಾವ್ಯರೂಪದ ಟಿಪ್ಪಣಿಯೊಂದನ್ನು ದಾಖಲಿಸಿದ್ದಾರೆ. ಇಂಥ ರಚನೆಯೊಂದರ ತುಣುಕು ನೋಡಿ:
ಕತ್ತಲೆಯ ಕ್ಷಣಗಳು
ನನ್ನ ಕಾಡುವವು ಗೆಳತಿ
ನಿನ್ನ ಮೌನದಂತೆ
ಈ ಸಾಲುಗಳು ಚೆನ್ನಾಗಿವೆ ಎಂದುಕೊಳ್ಳುತ್ತಿರುವಾಗಲೇ ಇದಕ್ಕೆ ಪೂರಕವಾಗಿ ಬಳಕೆಯಾಗಿರುವ ಚಿತ್ರವೂ ತನ್ನ ಜೀವಂತಿಕೆಯಿಂದ ಗಮನಸೆಳೆಯುತ್ತದೆ.

ಹೀಗೆ ಅಕ್ಷರ ಮತ್ತು ಚಿತ್ತಾರಗಳ ಪರಿಣಾಮಕಾರಿ ಸಂಯೋಜನೆಗಳು ಬ್ಲಾಗಿನಲ್ಲಿ ಕಡಿಮೆ. ಆದರೆ, ಅಕ್ಷರ ಕಾವ್ಯದ ಗುಂಗು ತೊರೆದು ಛಾಯಾಚಿತ್ರಗಳಲ್ಲೇ ಕವಿತೆ ಹುಡುಕಲು ಹೊರಟರೆ ಈ ಬ್ಲಾಗ್‌ ರುಚಿಸುತ್ತದೆ, ಸಾಕಷ್ಟು ಸರಕು ಇಲ್ಲಿ ದೊರಕುತ್ತದೆ. ಕಾವ್ಯದ ಜೊತೆಗೆ ಪ್ರದೀಪ್‌ ಗದ್ಯವೂ ಇಲ್ಲಿದೆ.

ಕೆಲವು ಕಾರ್ಯಕ್ರಮಗಳ ವಿವರಗಳೂ, ಚಿತ್ರಗಳೂ ದಾಖಲಾಗಿವೆ. ಸ್ವಾರಸ್ಯಕರ ಬರವಣಿಗೆಗಳೂ ಇವೆ. ಅಂಥದೊಂದು ಬರವಣಿಗೆ– ‘ಈರುಳ್ಳಿರಾಜನ ರಾಜ್ಯ...’. ಬೆಲೆಯ ಏರುಮುಖದಿಂದಾಗಿ ಸುದ್ದಿಯಲ್ಲಿರುವ ಈರುಳ್ಳಿ ಕುರಿತ ಲಹರಿಯಿದು. ಅದರ ಒಂದು ಸುರುಳಿ ಇಲ್ಲಿದೆ–

‘‘ಹೌದು, ಆ ರಾಜ್ಯದಲ್ಲಿ ಈರುಳ್ಳಿಗಳೇ ಸರ್ವ ಶ್ರೇಷ್ಠ ವಸ್ತು! ಈರುಳ್ಳಿಗಿಂತ ಮಿಗಿಲಾದ ವಸ್ತು ಇನ್ನೊಂದಿಲ್ಲ! ಇದು ಈರುಳ್ಳಿರಾಜನ ಅಪ್ಪಣೆಯಾಗಿತ್ತು! ಆ ಆಭರಣದ ಅಂಗಡಿಗಳ ಮುಂದೆ ಒಂದು ತಳ್ಳುವ ಗಾಡಿ ಸಾಗುತ್ತಿದೆ. ಒಣಗಿ ಹೋದ ಬಡ ಬದನೆಕಾಯಿಯೊಂದು ಹರಿದ ಬನಿಯನ್ನು, ಲುಂಗಿ ತೊಟ್ಟು ಏದುಸಿರುಬಿಡುತ್ತಾ ಆ ಕೈಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದೆ.

ಜೊತೆಗೆ ಆಗಾಗ ಸ್ವಲ್ಪ ನಿಂತು ಸುಧಾರಿಸಿಕೊಂಡು ಬೆವರೊರೆಸಿಕೊಳ್ಳುತ್ತಾ ‘ಹತ್ರುಪಾಯ್ಗ್ ಮೂರು, ಹತ್ರುಪಾಯ್ಗ್ ಮೂರು...’ ಎಂದು ಕೂಗುತ್ತಿದೆ. ಸುತ್ತಲೂ ಹೋಗುತ್ತಿರುವವರು ಇದರ ಅವಸ್ಥೆ ಕಂಡು, ಕನಿಕರಪಟ್ಟು ತಮ್ಮ ಪಾಡಿಗೆ ತಾವು ಹೋಗುತ್ತಿದ್ದಾರೆಯೇ ಹೊರತು ಯಾರೂ ಖರೀದಿಸಲು ಮುಂದಾಗುತ್ತಿಲ್ಲ. ಹಾಂ! ಹೇಳುವುದೇ ಮರತೆ ಆ ಕೈಗಾಡಿಯಲ್ಲಿ ಬಡ ಬದನೆಕಾಯಿ ಮಾರುತ್ತಿದ್ದುದು ಚಿನ್ನ-ಬೆಳ್ಳಿಯ ಪಾತ್ರೆಗಳು, ಉಂಗುರ, ಸರ, ಕೈಬಳೆ, ಕಾಲ್ಗೆಜ್ಜೆಗಳು ಜೊತೆಗೆ ಸ್ವಲ್ಪ ರತ್ನ, ವಜ್ರಗಳು ಅಷ್ಟೇ!

ಅದು ಸುಂದರವಾದ ಅರಮನೆ. ಸುತ್ತಲೂ ದೊಡ್ಡ ದೊಡ್ಡ ಕಂಬಗಳು. ಅದರ ಸೌಂದರ್ಯ ವರ್ಣನೆಗೆ ಮೀರಿದ್ದು. ಒಳಗೆ ಆಸ್ಥಾನದಲ್ಲಿ ಮುಖ್ಯಮಂತ್ರಿಗಳಾದ ಅಲೂಗಡ್ಡೆ ಮೊದಲಾಗಿ, ಪಂಡಿತರಾದ ಸೌತೆಕಾಯಿ, ಹಣಕಾಸು ಸಚಿವ ಹಾಗಲಕಾಯಿ, ಆರೋಗ್ಯ ಸಚಿವ ಕೆಂಪು ಮೂಲಂಗಿ, ಗೃಹ ಸಚಿವೆ ಟೊಮ್ಯಾಟೋ ದೇವಿ ಮುಂತಾದವರು ಉಪಸ್ಥಿತರಿದ್ದರು.

ರಾಜ ಬರುವ ಮಾರ್ಗದಲ್ಲಿ ಅಲ್ಲಲ್ಲಿ ಸೈನಿಕ ಹುರುಳೀಕಾಯಿಗಳು ತಮಗಿಂತ ತೆಳ್ಳಗಿರುವ ಈಟಿಯನ್ನು ಹಿಡಿದು ನಿಂತಿದ್ದಾರೆ. ಅವರ ಪಕ್ಕದಲ್ಲಿ ಹಸಿರು ಸೀರೆಯನುಟ್ಟ ಎಲೆಕೋಸುದೇವಿಯರು ಅಗಲವಾದ ತಟ್ಟೆಗಳಲ್ಲಿ ಈರುಳ್ಳಿ ಸಿಪ್ಪೆಯ ತುರಿ ಹಿಡಿದು ರಾಜನ ಬರುವನ್ನೇ ಕಾಯುತ್ತಿದ್ದಾರೆ. ಘೋಷ ಮೊಳಗುತ್ತದೆ...

ರಾಜಾಧಿ ರಾಜ... ತೇಜ ಭೋಜ...
ವೀರಾಧಿ ವೀರ...  ಅಪ್ರತಿಮ ಶೂರ...
ಈರುಳ್ಳಿ ರಾಜಾ... ಆಗಮಿಸುತ್ತಿದ್ದಾರೆ...’’
ಈರುಳ್ಳಿಯ ಬಹುಪರಾಕ್‌ನ ಉಳಿದ ವಿವರಗಳು ಬ್ಲಾಗಿನಲ್ಲಿ ಮುಂದುವರಿದಿವೆ. ಪ್ರದೀಪ್‌ 2009ರಿಂದಲೂ ಬ್ಲಾಗ್‌ ಬರೆಯುತ್ತಿದ್ದಾರೆ.

ಹಾಗಾಗಿ ಬ್ಲಾಗ್‌ಲೋಕದಲ್ಲಿ ಅವರು ಸೀನಿಯರ್ರು! ಈ ಸೀನಿಯಾರಿಟಿ ಕಾಂಪ್ಲೆಕ್ಸಿನಿಂದಲೋ ಏನೋ ಈಚೆಗೆ ಅವರ ಛಾಯಾ–ಕಾವ್ಯ ಕೃಷಿ ಕೊಂಚ ಮಸುಕಾದಂತಿದೆ. ಎಳೆಯರ ಭರಾಟೆಯನ್ನು ಅವರಿಗೆ ನೆನಪಿಸುತ್ತಾ, ಬ್ಲಾಗಿನ ಆಳಕ್ಕೆ ಇಳಿದರೆ ಹಳೆಯ ಸಾಕಷ್ಟು ಚಿತ್ರಗಳು ಜೀವಂತಿಕೆಯಿಂದ ನಳನಳಿಸುವುದು ಕಾಣಿಸುತ್ತದೆ. ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ಎಂದು ಗುನುಗುತ್ತಾ ಬ್ಲಾಗ್‌ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT