ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಗೆದ್ದ ‘ಜೂಲಿಯಸ್ ಸೀಜರ್‌’

ರಂಗಭೂಮಿ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಹೋಗಬೇಕೆ ಎಂದು ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಜನಮತ ಗಣನೆಯಲ್ಲಿ ಬ್ರೆಕ್ಸಿಟ್ ಪರವಾಗಿ ಜನರು ಮತ ಚಲಾಯಿಸಿದರು. ನಂತರದಲ್ಲಿ ಇದರಿಂದ ಬ್ರಿಟನ್ನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ಭಾವಿಸಿ, ಪರವಾಗಿ ಮತ ಚಲಾಯಿಸಿದವರೆ ವಿರೋಧ ವ್ಯಕ್ತಪಡಿಸಿದರು.

ಪ್ರಚೋದನೆಗೊಳಪಟ್ಟ ಜನ ಸಮೂಹ ಹೇಗೆ ತನ್ನ ನಿರ್ಧಾರಗಳನ್ನು ಬದಲಿಸುತ್ತದೆ ಎಂಬುದಕ್ಕೆ ಬ್ರೆಕ್ಸಿಟ್‌ ಒಂದು ನಿದರ್ಶನ. ವಿಲಿಯಂ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ‘ಜೂಲಿಯಸ್ ಸೀಜರ್’ನಲ್ಲಿಯೂ ಇಂಥ ಹಲವು ಸಮೂಹ ಸನ್ನಿಯ ದೃಶ್ಯಗಳು ಕಾಣಸಿಗುತ್ತವೆ.

ಭಾಗವತರು ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ರಂಗವಿಹಾರ ನಾಟಕೋತ್ಸವದಲ್ಲಿ ಮೈಸೂರಿನ ರಂಗಾಯಣದ ಕಲಾವಿದರು ಪ್ರೊ. ಜಿ.ಕೆ. ಗೋವಿಂದರಾವ್ ಅವರ ನಿರ್ದೇಶನದಲ್ಲಿ ‘ಜೂಲಿಯಸ್ ಸೀಜರ್’ ಅಭಿನಯಿಸಿದರು.

ಬ್ರಿಟನ್ ಇತಿಹಾಸಕ್ಕೆ ಸಂಬಂಧಿಸಿದಂತೆ ಶೇಕ್ಸ್‌ಪಿಯರ್ ಒಟ್ಟು 8 ನಾಟಕ ಬರೆದಿದ್ದಾನೆ. ಕ್ರಿ.ಶ. 1599ರಲ್ಲಿ ರೋಮ್‌ನ ನಿರಂಕುಶಾಧಿಕಾರಿಯಾದ ಜೂಲಿಯಸ್ ಸೀಜರ್‌ನನ್ನು ಕುರಿತು ಬರೆದ ನಾಟಕ ಇದು.

ಸೀಜರ್‌ನ ನಿರಂಕುಶಾಧಿಕಾರವನ್ನು ಪ್ರಚಾರಪಡಿಸಿ, ಪ್ರಜಾಪ್ರಭುತ್ವದ ಹೆಸರು ಹೇಳಿಕೊಂಡು ಕ್ರಾಂತಿಯನ್ನು ಮಾಡಿದವರು ಸ್ವತಃ ತಾವೇ ಹೇಗೆ ನಿರಂಕುಶಾಧಿಕಾರಿಗಳಾದರು ಎಂಬುದನ್ನು ನಾಟಕ ಬಿಂಬಿಸುತ್ತದೆ. ಅನುಮಾನ ಬಂದವರನ್ನೆಲ್ಲ ಹಗೆಗಳೆಂದು ಪರಿಗಣಿಸಿ ಹಿಂಸಾತ್ಮಕವಾಗಿ ಜನಾಭಿಪ್ರಾಯವನ್ನು ಹತ್ತಿಕ್ಕಿದ ಸನ್ನಿವೇಶಗಳನ್ನೂ ನಾಟಕ ಬಿಂಬಿಸುತ್ತದೆ.

ನಿರ್ದೇಶಕರಾದ ಗೋವಿಂದರಾವ್‌ ಅವರು ಚಾರಿತ್ರಿಕ ಕಥೆಗಿಂಥಲೂ ಆಶಯದ ನೆಲೆಯಲ್ಲಿ ನಾಟಕ ಕಟ್ಟಿಕೊಡಲು ಹೆಚ್ಚು ಗಮನ ಹರಿಸಿದ್ದಾರೆ. ರೋಮಿನ ಸೀಜರಿನಿಗಿಂತ ಪ್ರಜಾಪ್ರಭುತ್ವದ ಸಂದೇಶಗಳೇ ಕನ್ನಡ ನಾಡಿನ ಮಟ್ಟಿಗೆ ಹೆಚ್ಚು ಮುಖ್ಯ ಎನಿಸುತ್ತವೆ.

ಯುರೋಪಿನಲ್ಲಿ ಸೀಸರನ ಭೂತ ಕಾಣಿಸಿಕೊಳ್ಳುವುದು ಮತ್ತು ಜ್ಯೋತಿಷಿಯ ಸಂಭಾಷಣೆ ಹೊರತುಪಡಿಸಿ ನಾಟಕದಲ್ಲಿ ಮೌಢ್ಯಗಳಿಗೆ ಆಸ್ಪದವಿಲ್ಲ.  ನಾಟಕಕ್ಕಾಗಿ ರಂಗವಿನ್ಯಾಸ ಮಾಡಿರುವ ದ್ವಾರಕಾನಾಥ್‌, ಗ್ರೀಕ್ ಮಾದರಿಯ ಎತ್ತರದ ಕಂಬಗಳನ್ನು ನಿರ್ಮಿಸಿ ನಾಟಕಕ್ಕೆ ಭವ್ಯತೆಯನ್ನು ತಂದು ಕೊಟ್ಟಿದ್ದಾರೆ.

ವಸ್ತ್ರ ವಿನ್ಯಾಸದ ಮೂಲಕವೂ ಪುರಾತನ ರೋಮನ್ ಸಾಮ್ರಾಜ್ಯವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ. ಕಂಬದ ಮೇಲೆ, ಪಾತ್ರ ಹಾಗೂ ಸಂದರ್ಭಕ್ಕೆ ಪೂರಕವಾಗಿ ಬೆಳಕನ್ನು ವಿನ್ಯಾಸ ಮಾಡಲಾಗಿದೆ. ಇದು ಭಾವಸ್ಫುರಣೆ ಉಂಟು ಮಾಡುವಂತಿದೆ.

ಶ್ರೀನಿವಾಸ ಭಟ್ ಹಾಗೂ ಪ್ರಶಾಂತ ಹಿರೇಮಠ್‌ ಪಾಶ್ಚಾತ್ಯ ಹಾಗೂ  ದೇಸೀ ಸಂಗೀತವನ್ನು ಹದವಾಗಿ ನುಡಿಸಿ ಭಾವ ಸ್ಪಂದನೆ ನೀಡಿದ್ದಾರೆ. ಸಂಭಾಷಣೆಗೆ ಅಡಚಣೆಯಾಗದ  ಅಬ್ಬರವಿಲ್ಲದ ಸಂಗೀತ ನಾಟಕದ ಮುಖ್ಯ ಅಂಶ.

ರಂಗಾಯಣದ ಅನುಭವಿ ನಟರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಬ್ರೂಟಸ್ ಪಾತ್ರದಲ್ಲಿ ಪ್ರಶಾಂತ ಹಿರೇಮಠ್, ಸೀಜರ್‌ ಪಾತ್ರದಲ್ಲಿ ಮಹದೇವ, ಆಂಟನಿ ಪಾತ್ರದಲ್ಲಿ ಕೃಷ್ಣಕುಮಾರ ನಾರ್ಣಕಜೆ, ಕ್ಯಾಸಿಯಸ್‌ ಪಾತ್ರದಲ್ಲಿ ಕೃಷ್ಣಪ್ರಸಾದ್, ಕ್ಯಾಸ್ಕನ ಪಾತ್ರದಲ್ಲಿ ಮಂಜುನಾಥ ಬೆಳಕೆರೆ, ಪೋರ್ಷಿಯಾಳ ಪಾತ್ರದಲ್ಲಿ ನಂದಿನಿ, ಕಾಲ್ಫೂರ್ನಿಯಾ ಪಾತ್ರದಲ್ಲಿ ಪ್ರಮೀಳಾ ಬೇಂಗ್ರೆ, ಜ್ಯೋತಿಷಿ ಪಾತ್ರದಲ್ಲಿ ಮೈಮ್ ರಮೇಶ್ ಕಲಾಪ್ರತಿಭೆಯನ್ನು ಮೆರೆದಿದ್ದಾರೆ.

ರಂಗಾಯಣದ ಹಿರಿಯ ಕಲಾವಿದರ ಜೊತೆಗೆ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಮೂರು ಗಂಟೆಗಳ ಅವಧಿಯ ನಾಟಕ ಪ್ರೇಕ್ಷಕರನ್ನು ಹಿಡಿದಿಡಲು ಯಶಸ್ವಿಯಾಗಿ ಹಿಡಿದಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT