ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಪ್ರಮಾಣ: ಎಐಸಿಸಿ ಅಧ್ಯಕ್ಷರ ಪತ್ರಕ್ಕೆ ಚುನಾವಣಾ ಆಯೋಗ ತೀವ್ರ ಆಕ್ಷೇಪ

Published 10 ಮೇ 2024, 16:09 IST
Last Updated 10 ಮೇ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಮತದಾನ ಪ್ರಮಾಣದ ಮಾಹಿತಿ ನೀಡುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷಗಳ ನಾಯಕರಿಗೆ ಬರೆದಿದ್ದ ಪತ್ರಕ್ಕೆ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದು ‘ಪಕ್ಷಪಾತದ ನಿರೂಪಣೆ’ ಸೃಷ್ಟಿಸುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಖರ್ಗೆ ಅವರ ಪತ್ರವು ಚುನಾವಣಾ ಪ್ರಕ್ರಿಯೆಯ ಮೇಲೆ ನಡೆದ ಆಕ್ರಮಣ ಎಂದು ಆಯೋಗ ವ್ಯಾಖ್ಯಾನಿಸಿದೆ.

ಮತದಾನ ಪ್ರಮಾಣವನ್ನು ಬಿಡುಗಡೆ ಮಾಡುವಲ್ಲಿನ ವಿಳಂಬದ ಆರೋಪವನ್ನು ಐದು ಪುಟಗಳ ಅನುಬಂಧಸಹಿತ ಉತ್ತರದ ಮೂಲಕ ನಿರಾಕರಿಸಿರುವ ಚುನಾವಣಾ ಆಯೋಗವು, ‘ಅದು ಅಧಾರವಿಲ್ಲದ, ಅವಾಸ್ತವಿಕವಾದ ಮತ್ತು ಗೊಂದಲ ಮೂಡಿಸುವ ಪ್ರಜ್ಞಾಪೂರ್ವಕ ಪ್ರಯತ್ನ’ ಎಂದಿದೆ.

‘ಖರ್ಗೆ ಅವರಿಗೆ ವಿರೋಧ ಪಕ್ಷಗಳ ನಾಯಕರೊಂದಿಗೆ ವಿಷಯ ಪ್ರಸ್ತಾಪಿಸಲು ಅವಕಾಶವಿದೆ. ಆದರೆ, ಅದನ್ನು ಸಾರ್ವಜನಿಕಗೊಳಿಸಿದ್ದು ಅವರ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತಿದೆ. ಖರ್ಗೆ ಅವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಅಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ಆಯೋಗವು ಸಲಹೆ ನೀಡಿದೆ. 

ಚುನಾವಣೆ ನಡೆಯುತ್ತಿರುವ ಹಂತದಲ್ಲಿ ಖರ್ಗೆ ಅವರು ಪತ್ರವನ್ನು ಸಾರ್ವಜನಿಕಗೊಳಿಸಿರುವುದು ‘ಅತ್ಯಂತ ಅನಪೇಕ್ಷಿತ’ವಾಗಿತ್ತು. ಅದು ತಪ್ಪು ಮಾರ್ಗದರ್ಶನ ಮತ್ತು ಮುಕ್ತ ಹಾಗೂ ಸುಸೂತ್ರ ಚುನಾವಣಾ ಪ್ರಕ್ರಿಯೆಗೆ ತಡೆ ಒಡ್ಡುವಂಥದ್ದಾಗಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿದೆ.

‘ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು ಚುನಾವಣಾ ಪ್ರಕ್ರಿಯೆ ಮತ್ತು ಅದರ ಹಂತಗಳ ವಿಶ್ವಾಸಾರ್ಹತೆ ಪ್ರಶ್ನಿಸಿ ನೀಡಿರುವ ಹೇಳಿಕೆಗಳು ಮತದಾರರ ಭಾಗವಹಿಸುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥವಾಗಿವೆ ಮತ್ತು ಅವರನ್ನು ಮತದಾನದಿಂದ ದೂರ ಉಳಿಯುವಂತೆ ಮಾಡಬಲ್ಲ ಮಾರ್ಗವಾಗಿವೆ. ಹಾಗೆಯೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಪಾರ ಪ್ರಮಾಣದ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿಸುತ್ತವೆ’ ಎಂದು ತಿಳಿಸಿದೆ.

ಖರ್ಗೆ ಅವರು ತಮ್ಮ ಪತ್ರದಲ್ಲಿ, ‘ಮತದಾನ ಪ್ರಮಾಣ ಬಿಡುಗಡೆಯ ವಿಳಂಬವು ಅಂತಿಮ ಫಲಿತಾಂಶವನ್ನು ತಿರುಚುವ ಪ್ರಯತ್ನವೇ’ ಎಂದು ಪ್ರಶ್ನಿಸಿದ್ದರು.

‘ಪತ್ರದಲ್ಲಿನ ಅಂಶಗಳು ಚುನಾವಣಾ ನಿರ್ವಹಣೆಯಂತಹ ಸೂಕ್ಷ್ಮ ವಿಚಾರದ ಬಗ್ಗೆ ಅಪಸ್ವರ ಮೂಡಿಸುವಂತಿದ್ದು, ಮತದಾರರು ಮತ್ತು ರಾಜಕೀಯ ಪಕ್ಷಗಳಲ್ಲಿ ಅನುಮಾನ ಹುಟ್ಟಿಸಬಲ್ಲವು, ಅರಾಜಕತೆ ಸೃಷ್ಟಿಸಬಲ್ಲವು. ಚುನಾವಣಾ ಆಯೋಗಕ್ಕೆ ಅಂಥ ಯಾವುದೇ ಉದ್ದೇಶವಿಲ್ಲ’ ಎಂದು ಸ್ಪಷ್ಟೀಕರಣ ನೀಡಿದೆ.  

‘ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಬಳಿಯೂ ಬೂತ್ ಮಟ್ಟದ ಮತದಾನ ಪ್ರಮಾಣವು ಲಭ್ಯವಿದ್ದು, ಆರೋಪಗಳನ್ನು ಮಾಡುವ ಮುನ್ನ ಕಾಂಗ್ರೆಸ್ ಆ ದತ್ತಾಂಶವನ್ನು ವಿಶ್ಲೇಷಿಸಬೇಕು’ ಎಂದು ತಿಳಿಸಿದೆ.

ಆಯೋಗದ ವರ್ತನೆಗೆ ಕಾಂಗ್ರೆಸ್ ವಿಷಾದ

ನವದೆಹಲಿ (ಪಿಟಿಐ): ಮತದಾನ ಪ್ರಮಾಣ ಬಿಡುಗಡೆಯಲ್ಲಿನ ವಿಳಂಬದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷಗಳ ನಾಯಕರಿಗೆ ಬರೆದಿದ್ದ ಪತ್ರದ ವಿಚಾರದಲ್ಲಿ ಚುನಾವಣಾ ಆಯೋಗವು ನಡೆದುಕೊಂಡ ರೀತಿಗೆ ಕಾಂಗ್ರೆಸ್ ಪಕ್ಷ ವಿಷಾದ ವ್ಯಕ್ತಪಡಿಸಿದೆ. ‘ಎಕ್ಸ್‌’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ವ್ಯಾಪಕವಾಗಿ ಕಳವಳಕ್ಕೆ ಕಾರಣವಾಗಿದ್ದ ‘ಅತ್ಯಂತ ಸಮರ್ಥನೀಯ’ ವಿಚಾರಗಳನ್ನು ಎಐಸಿಸಿ ಅಧ್ಯಕ್ಷರು ಪ್ರಸ್ತಾಪಿಸಿದ್ದರು’ ಎಂದು ಹೇಳಿದ್ದಾರೆ. ಚುನಾವಣಾ ಆಯೋಗದ ಪ್ರತಿಕ್ರಿಯೆಯು ಸರಳವಾಗಿ ಹೇಳಬೇಕೆಂದರೆ ‘ವಿವರಣೆಗೆ ನಿಲುಕುವುದಿಲ್ಲ’ ಎಂದಿದ್ದಾರೆ. ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ನಿಷ್ಪಕ್ಷಪಾತದಿಂದಿರಬೇಕಾದ ಮತ್ತು ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಸ್ಪರ್ಧೆಯ ಅವಕಾಶವನ್ನು ಖಚಿತಪಡಿಸಬೇಕಾದ ಸಂಸ್ಥೆಯಾಗಿದೆ ಎಂದು ಹೇಳಿದ್ದಾರೆ. ‘ಪತ್ರದ ವಿಚಾರ ಮತ್ತು ಉದ್ದೇಶ ಎರಡೂ ಸುಕುಮಾರ್ ಸೇನ್ ಟಿ.ಎನ್‌.ಶೇಷನ್. ಜೆ.ಎಂ.ಲಿಂಗ್ಡೋ ಅವರಂಥ ಪ್ರತಿಭಾಶಾಲಿಗಳು ಆಡಳಿತ ನಡೆಸಿದ ಆಯೋಗದ ಜನಪ್ರಿಯತೆಯ ಮೇಲಿನ ಶಾಶ್ವತ ಮಚ್ಚೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.  ಆಯೋಗ ವಿಮರ್ಶೆಗೆ ಅತೀತವಲ್ಲ: ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಚುನಾವಣಾ ಆಯೋಗವು ವಿಮರ್ಶೆಗೆ ಅತೀತವಲ್ಲ. ಆರ್‌ಬಿಐ ಸಿಎಜಿ ಹಣಕಾಸು ಆಯೋಗ ಮತ್ತು ಇತರ ಸಂಸ್ಥೆಗಳನ್ನು ವಿಮರ್ಶೆಗೊಳಪಡಿಸಬಹುದಾದರೆ ಚುನಾವಣಾ ಆಯೋಗವು ವಿಮರ್ಶಾತೀತ ಎಂದು ಏಕೆ ಭಾವಿಸುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ಇಂಡಿಯಾ’ ಮುಖಂಡರಿಂದ ಭೇಟಿ
ಮತದಾನ ಪ್ರಮಾಣ ಬಿಡುಗಡೆ ಸಂಬಂಧ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ‘ಇಂಡಿಯಾ’ ಕೂಟದ ವಿವಿಧ ಮುಖಂಡರು ಶುಕ್ರವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿದರು. ಲೋಕಸಭಾ ಚುನಾವಣೆಯ ಎರಡು ಹಂತಗಳ ಮತದಾನ ಪ್ರಮಾಣ ಬಿಡುಗಡೆ ಮತ್ತು ಬಿಜೆಪಿ ನಾಯಕರ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆಯ ಆರೋಪಗಳ ಬಗ್ಗೆ ಮುಖಂಡರು ಆಯೋಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT