ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಡೋಕ್ರಾ' ಪ್ರಾತ್ಯಕ್ಷಿಕೆ

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ಕಲೆಗೆ ಜಾತಿ, ಜನಾಂಗಗಳ ಭೇದವಿಲ್ಲ. ಕಲೆ ಹುಟ್ಟುವುದೇ ಮನಸುಗಳಲ್ಲಿ. ಕಲಾತ್ಮಕ ಮನಸುಳ್ಳವರು ಎಲ್ಲಿದ್ದರೂ ಕಲೆ ಕೈಹಿಡಿಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಅನೇಕ ಬುಡಕಟ್ಟು ಜನಾಂಗಗಳು ತಮ್ಮ ಕಲೆಯನ್ನು ಪೋಷಿಸುತ್ತಿವೆ. ಛತ್ತೀಸ್‌ಗಡದ `ಬಸ್ತರ್' ಬುಡಕಟ್ಟು ಜನಾಂಗ ಕಲೆಯನ್ನೇ ಕಸುಬಾಗಿಸಿಕೊಂಡಿವೆ. ಬಸ್ತರ್ ಜನಾಂಗದ ವಿಶಿಷ್ಟ ಕಲೆ ಡೋಕ್ರಾ. ಡೋಕ್ರಾ ಕಲೆಯನ್ನು ನೋಡುವ ಅವಕಾಶ ಇನ್ನು ಒಂದು ತಿಂಗಳು ನಗರದಲ್ಲಿ ಲಭ್ಯ.

ಇಂತಹ ಬಸ್ತರ್ ಜನಾಂಗದ ಕಲಾವಿದರನ್ನು ನಗರಕ್ಕೆ ಕರೆತಂದು ಅವರಿಂದ ಕಲಾಕೃತಿಗಳನ್ನು ಸ್ಥಳದಲ್ಲೇ ತಯಾರಿಸುವ ಅವಕಾಶವನ್ನು ನಗರದ ಆರ್ಟ್‌ಲ್ಯಾಬ್ಸ್ ಕಲ್ಪಿಸಿದೆ. ಹೊಸೂರು ರಸ್ತೆಯಲ್ಲಿರುವ ಸ್ಮೈಲ್ ಗಾರ್ಡನ್‌ನಲ್ಲಿರುವ ಆರ್ಟ್ ಲ್ಯಾಬ್ಸ್‌ನಲ್ಲಿ ನಾಲ್ವರು ಕಲಾವಿದರು ಈ ತಿಂಗಳು ಪೂರ್ತಿ ಹಿತ್ತಾಳೆಯ ಕಲಾಕೃತಿಗಳನ್ನು ರಚಿಸಲಿದ್ದಾರೆ. ಇದರ ಇಡೀ ಪ್ರಕ್ರಿಯೆ ನೋಡುವ ಅವಕಾಶ ಕಲಾಪ್ರೇಮಿಗಳಿಗೆ ಲಭ್ಯ.

ಡೋಕ್ರಾ ಕಲಾಕೃತಿಯನ್ನು ಹಿತ್ತಾಳೆಯ ಮೌಲ್ಡ್‌ನಿಂದ ಮಾಡಲಾಗುತ್ತದೆ. ಆದರೆ ಅತಿಸೂಕ್ಷ್ಮ ಕುಸುರಿ ಕೆಲಸ ನೋಡಿದರೆ ಹಾಗೆ ಅನಿಸುವುದಿಲ್ಲ. ಇಡೀ ಕಲಾಕೃತಿ ಯಾವುದೇ ಜಾಯಿಂಟ್‌ಗಳಿಲ್ಲದ ಒಂದೇ ಆಕೃತಿಯಾಗಿರುವುದು ಇದರ ವಿಶೇಷ. `ಲಾಸ್ಟ್ ವ್ಯಾಕ್ಸ್ ಕಾಸ್ಟಿಂಗ್' ತಂತ್ರಜ್ಞಾನವನ್ನು ಉಪಯೋಗಿಸಿ ಈ ಕಲಾಕೃತಿಯನ್ನು ತಯಾರಿಸಲಾಗುತ್ತದೆ.

ಹಿತ್ತಾಳೆಯಿಂದ ತಯಾರಿಸುವ ಡೋಕ್ರಾ ಕಲೆಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಈ ಮಾದರಿಯ ಹಳೆಯ ಕರಕುಶಲ ವಸ್ತುಗಳ ಪೈಕಿ ಮೊಹೆಂಜೋದಾರೋದ ನೃತ್ಯ ಬಾಲಿಕೆಯ ಶಿಲ್ಪವೂ ಒಂದು. ಇದು ಡೋಕ್ರಾದ ಕಾಲವನ್ನು ತಿಳಿಸುತ್ತದೆ. ಕುದುರೆ, ಆನೆ, ನವಿಲು, ದೇವರ ವಿಗ್ರಹ, ಪೂಜಾ ಸಾಮಾಗ್ರಿ, ಕರಕುಶಲ ಚಿತ್ರಗಳಿರುವ ಪಾತ್ರೆಗಳು, ದೀಪಗಳು ತುಂಬ ಆಕರ್ಷಕವಾಗಿರುತ್ತವೆ. ಎಲ್ಲ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಯಲ್ಲೂ ಡೋಕ್ರಾ ಕಲಾಕೃತಿಗಳು ಕಾಣಸಿಗುತ್ತವೆ. ಪಾರಂಪರಿಕ ಬಣ್ಣದ ಈ ಕಲಾಕೃತಿಗಳು ಆಕರ್ಷಕವಾಗಿರುತ್ತವೆ. ಹಾಗೆಯೇ ಶ್ರೀಮಂತ ಅಭಿರುಚಿಯ ಪ್ರತೀಕವಾಗಿದೆ. ಆದರೆ ಇದು ಬುಡಕಟ್ಟು ಜನಾಂಗವೊಂದರ ಕಲೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ.

ತಯಾರಿ ಹೀಗಿದೆ
ಡೋಕ್ರಾ ಕಲಾಕೃತಿ ರಚನೆಯ ಹಿಂದಿನ ಪರಿಶ್ರಮ ಬಹಳ ದೊಡ್ಡದು. ಮೊದಲು ಮಣ್ಣಿನಿಂದ ತಮ್ಮ ಕಲ್ಪನೆಯ ಆಕೃತಿಗಳನ್ನು ತಯಾರಿಸುತ್ತಾರೆ. ಅದು ಒಣಗಿದ ನಂತರ ದ್ರವರೂಪದ ವ್ಯಾಕ್ಸ್‌ನಿಂದ ಮೇಣದ ದಾರಗಳನ್ನು ಸಿದ್ಧಪಡಿಸುತ್ತಾರೆ. ಈ ದಾರಗಳಿಂದ ಕುಸುರಿಯ ವಿನ್ಯಾಸಗಳನ್ನು ರೂಪಿಸಿಕೊಂಡು ನಂತರ ಮಣ್ಣಿನ ಆಕೃತಿಯ ಮೇಲೆ ಅಂಟಿಸಿ ಮತ್ತೆ ಮಣ್ಣಿನ ಲೇಪ ಮಾಡಲಾಗುತ್ತದೆ. ಇದೇ ರೀತಿ ನಾಲ್ಕು ಬಾರಿ ಮಾಡಲಾಗುತ್ತದೆ. ಈ ಮಣ್ಣಿನೊಂದಿಗೆ ಎಲೆಯ ರಸವನ್ನು ಮಿಶ್ರ ಮಾಡುತ್ತಾರೆ. ಇದರಿಂದ ಮಣ್ಣಿನ ಪ್ರತಿ ಲೇಪನವೂ ಅಂಟದೇ ಇರುತ್ತದೆ. ಹೀಗೆ ಮಾಡುವಾಗ ಲೋಹವನ್ನು ಸುರಿಯಲು ರಂಧ್ರಗಳನ್ನು ಬಿಡುತ್ತಾರೆ. ಈ ಪ್ರಕ್ರಿಯೆ ಮುಗಿದ ನಂತರ ಬೆಂಕಿಯಲ್ಲಿ ಸುಡುತ್ತಾರೆ. ಆಗ ಮೇಣ ಸಂಪೂರ್ಣವಾಗಿ ಕರಗಿಹೋಗುತ್ತದೆ. ಇದಾದ ನಂತರ ಬಿಸಿ ಹಿತ್ತಾಳೆಯ ದ್ರವವನ್ನು ಮಣ್ಣಿನ ಆಕೃತಿಯಲ್ಲಿರುವ ತೂತುಗಳ ಮೂಲಕ ಸುರಿಯುತ್ತಾರೆ. ಮೇಣ ಕರಗಿದ ಜಾಗದಲ್ಲಿ ಲೋಹ ಗಟ್ಟಿಯಾಗುತ್ತದೆ.

ಮೌಲ್ಡ್‌ನಿಂದ ಹೊರತೆಗೆದಾಗ ಸುಂದರ ಕಲಾಕೃತಿ ಮೂಡಿರುತ್ತದೆ.

ವಿಶೇಷತೆ
ಬುಡಕಟ್ಟು ಜನಾಂಗದ ಯಾವುದೇ ಕಲೆಯನ್ನು ವಸ್ತುನಿಷ್ಠವಾಗಿ ಅಥವಾ ಆಧುನಿಕ ಕಲೆಯೊಂದಿಗೆ ಹೋಲಿಸುವಂತಿಲ್ಲ. ಯಾಕೆಂದರೆ ಇವರಿಗೆ ಶಿಕ್ಷಣವಿಲ್ಲ. ಅಂಗರಚನೆಯ ಬಗ್ಗೆ ಜ್ಞಾನವಿರುವುದಿಲ್ಲ. ಈ ಕಲೆ ಶಾಸ್ತ್ರೀಯವಾಗಿ ಕಲಿತದ್ದಲ್ಲ. ತಾತ, ಮುತ್ತಾತ ಮಾಡುತ್ತಾ ಬಂದ ಕಲೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿರುತ್ತಾರೆ. ಹಾಗಾಗಿ ಇವರ ರಚನೆಯ ಹುಲಿ, ಸಿಂಹ ಅಥವಾ ಇನ್ಯಾವುದೇ ಪ್ರಾಣಿಗಳ ದೇಹ ರಚನೆ ನೈಜತೆಯಿಂದ ದೂರವಿರುತ್ತದೆ. ಇವತ್ತಿನ ಝೀರೋ ಸೈಜ್ ಕಲ್ಪನೆಯಲ್ಲಿ ಎಲ್ಲ ಪ್ರಾಣಿಗಳೂ ಸೊರಗಿದಂತೆ ಕಾಣುತ್ತವೆ. ಇದು ಅವರ ಮುಗ್ಧತೆಯನ್ನೂ, ಹಸಿವನ್ನೂ ಪ್ರತಿನಿಧಿಸುತ್ತದೆ. ಇದೇ ಇವರ ಕಲೆಯ ವೈಶಿಷ್ಟ್ಯವಾಗಿದೆ. ಬಸ್ತರ್ ಕಲಾಕೃತಿಗಳನ್ನು ನೋಡಿದಾಗ ಹೀಗನ್ನಿಸುತ್ತದೆ.

ಇವರ ಪ್ರಮುಖ ಕಲಾಕೃತಿ ಮಾಡ ಮತ್ತು ಮಾಡಿಯಾ. ಮಾಡ ಎಂದರೆ ಗಂಡು, ಮಾಡಿಯಾ ಎಂದರೆ ಹೆಣ್ಣು ಎಂದರ್ಥ. ಇದರ ಜೊತೆಗೆ ಒಂದೊಂದು ಜನಾಂಗಕ್ಕೂ ಶುಭ ಪ್ರಾಣಿಗಳು ಇರುತ್ತವೆ. ಮೊಸಳೆ, ಆಮೆ ಹೀಗೆ. ಕಲಾಕೃತಿಗಳ ಪಟ್ಟಿಯಲ್ಲಿ ಇವು ಇದ್ದೇ ಇರುತ್ತವೆ.

ಅಹರ್ನಿಶಿ ಕೆಲಸ
ಆರ್ಟ್‌ಲ್ಯಾಬ್ಸ್‌ನ ಮುಖ್ಯಸ್ಥೆ ಸಂಧ್ಯಾ ಸಿರ್ಸಿ ಚಿತ್ರ ಕಲಾವಿದೆ. ಇವರ ಮನೆಯೇ ಕಲಾ ಸ್ಟುಡಿಯೊ. ತೈಲವರ್ಣ ಇವರ ಮಾಧ್ಯಮ. ಆದರೆ ಇವರ ಅಭಿರುಚಿ ವಿಸ್ತಾರವಾಗಿದೆ.

ಬಸ್ತರ್ ಕಲಾವಿದರನ್ನು ಕರೆತಂದು ಕ್ಯಾಂಪ್ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ: `ಕಲಾಶಿಬಿರವೊಂದರಲ್ಲಿ ಬಸ್ತರ್ ಕಲಾವಿದರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಕಲಾವಿದರ ಜೊತೆ ಮಾತನಾಡಿದಾಗ ತಮ್ಮ ಕಲೆ ವಿಭಿನ್ನವಾದುದು ಎಂದು ವಿವರಿಸಿದರು.

ಹಿತ್ತಾಳೆಯ ಮೂರ್ತಿಗಳನ್ನು ರಚಿಸುವ ಪ್ರಕ್ರಿಯೆ ಇಷ್ಟು ದೀರ್ಘವಾಗಿರುವ ಬಗ್ಗೆ ಕೇಳಿದಾಗ ಕ್ಯಾಂಪ್‌ನ ಕಲ್ಪನೆ ಬಂತು. ಕಲೆಯ ರಚನೆಯ ಹಿಂದಿನ ಪರಿಶ್ರಮ ಜನರಿಗೆ ತಿಳಿಸುವ ಪ್ರಯತ್ನವಾಗಿ ಕಳೆದ ವರ್ಷವೂ ಇಲ್ಲಿ ಕ್ಯಾಂಪ್ ಆಯೋಜಿಸಿದ್ದೆವು. ಈ ಬಾರಿ ಮತ್ತೆ ಬಂದಿದ್ದಾರೆ. ಅವರ ಕಲಾರಾಧನೆ ನಮಗೆಲ್ಲ ಮಾದರಿ. ಬೆಳಗಿನಿಂದ ರಾತ್ರಿ ಮಲಗುವವರೆಗೂ ಕಲಾಕೃತಿ ರಚನೆಯಲ್ಲಿಯೇ ತೊಡಗಿರುತ್ತಾರೆ. ಊಟ, ವಸತಿ ಎಲ್ಲವೂ ಇಲ್ಲೇ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಾವು ಕೆಲಸ ಮಾಡುವ ಜಾಗವನ್ನು ಶುಚಿ ಮಾಡುತ್ತಾರೆ. ಮಣ್ಣಿನ ಕಲಾಕೃತಿಗೆ ಪೂಜೆ ಮಾಡಿ ಕೆಲಸ ಆರಂಭಿಸಿದರೆ ಊಟದ ಚಿಂತೆಯೇ ಇಲ್ಲ. ಕಲೆಯಲ್ಲಿ ದೈವತ್ವವನ್ನು ಕಾಣುವುದೆಂದರೆ ಇದೇ'.

ಪ್ರತಿದಿನ ಸಂಜೆ 4ರಿಂದ 7ರವರೆಗೆ ಕರಕುಶಲ ಕರ್ಮಿಗಳ ಜೊತೆ ಬೆರೆತು ಕಲಾಕೃತಿ ರಚನೆಯ ಆಸ್ವಾದನೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಮಾಹಿತಿಗೆ: 99456 90657.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT