ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬಲಾ,ಸಂತೂರ್ ನಾದದಲ್ಲಿ...

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸಂಗೀತ ಹಾಗೂ ಕೇಳುಗರ ನಂಟು ಅನನ್ಯವಾದದ್ದು. ಕೇಳುಗನಿಲ್ಲದೆ, ಸಂಗೀತ, ಸಾರ್ಥಕ್ಯ ಪಡೆಯಲಾರದು. ನಾಡಿಮಿಡಿತದಷ್ಟೇ ಸಹಜ, ನಿರಂತರವಾಗಿ ಸಂಗೀತದ ರಸದೌತಣ ಬಡಿಸುವ ಕಲಾವಿದರ ಕಾರ್ಯಕ್ರಮದಲ್ಲಿ ಕೇಳುಗರಿಗೆ ಕೊರತೆ ಇರವುದೇ ಇಲ್ಲ. ಶಿರಸಿ ಮೂಲದ ಹೋರಾ ಫೌಂಡೇಷನ್ ನಡೆಸಿದ ಕಲಾ ಉತ್ಸವ ಕಾರ್ಯಕ್ರಮಕ್ಕೆ ರವೀಂದ್ರ ಯಾವಗಲ್ಲರ ತಬಲಾ ವಾದನವನ್ನು ಆಸ್ವಾದಿಸಲು ಶ್ರೋತೃ ಸಮೂಹವೇ ಹರಿದು ಬಂದಿತ್ತು.

ಪ್ರತಿ ವರ್ಷ `ಕಲಾ ಉತ್ಸವ' ನಡೆಸಿಕೊಂಡು ಬರುತ್ತಿರುವ ಹೋರಾ ಸಂಸ್ಥೆ ಈ ಬಾರಿ ನಗರದ ಮಲ್ಲೇಶ್ವರಂನ ಹವ್ಯಕ ಮಹಾಸಭಾದ ಸಭಾ ಭವನದಲ್ಲಿ ಸಂಗೀತ ಉತ್ಸವವನ್ನು ನಡೆಸಿತು. ಪ್ರತೀ ವರ್ಷದ ಕಾರ್ಯಕ್ರಮದಲ್ಲಿ ಒಬ್ಬೊಬ್ಬ ಸಂಗೀತ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಈ ಸಂಸ್ಥೆ ಈ ವರ್ಷ ಖ್ಯಾತ ತಬಲಾ ವಾದಕ, ಪಂ. ರವೀಂದ್ರ ಯಾವಗಲ್ಲರನ್ನು ಪ್ರೀತಿಯಿಂದ ಸನ್ಮಾನಿಸಿ `ಲಯ ಭಾಸ್ಕರ' ಎನ್ನುವ ಬಿರುದನ್ನು ನೀಡಿತು.

ಅವರನ್ನು ಸನ್ಮಾನಿಸಿ ಮಾತನಾಡಿದ ಹಿರಿಯ ನಟ ರಾಮಕೃಷ್ಣ `ಸಂಗೀತದಲ್ಲಿ ಯಾವಗಲ್ಲರ ಸಾಧನೆ ಬಹಳ ದೊಡ್ಡದು. ಹಿಂದೊಮ್ಮೆ ನಾನು ಆಕಾಶವಾಣಿಯಲ್ಲಿ ಹಾಡಿದ್ದ `ಬಂದೀಶ್'ವೊಂದಕ್ಕೆ ಅವರೇ ತಬಲಾ ಸಾಥ್ ನೀಡಿದರು. ಇದರಿಂದ ನನ್ನ ಜನ್ಮ ಪುನೀತವಾಗಿದೆ' ಎಂದು ಅವರ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ನಡೆದ  ಸಂಗೀತ ಕಾರ್ಯಕ್ರಮದಲ್ಲಿ ಮೊದಲಿಗೆ ಯಾವಗಲ್ಲರ ತಬಲಾ ಸೋಲೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. `ಲಯ ಭಾಸ್ಕರ ಅನ್ನೋದು ಭಾಳ ದೊಡ್ಡ ಬಿರುದು. ಅಂಥದನ್ನ ನಂಗ್ಯಾಕ ಕೊಟ್ಟಿದಾರೋ ಗೊತ್ತಿಲ್ಲಾ. ಆದ್ರೂ ಕೊಟ್ಟಿರುವಂಥಾ ಬಿರುದಿಗೆ ನ್ಯಾಯ ದೊರಕಿಸಿಕೊಡೊವಂಗ ನಾ ಪ್ರಯತ್ನ ಮಾಡ್ತಾ, ನಿಮ್ಮ ಮುಂದೆ ಈಗ ಪರೀಕ್ಷೆಗ ಕೂಡ್ತೀನಿ' ಎಂದು ವಿನಯದಿಂದ ಹೇಳಿ ತಬಲಾ ವಾದನ ಆರಂಭಿಸಿದರು.

ತಿಶ್ರ ಜಪ್ತಾಲ್ (ತಿಶ್ರ- ತಾಳದಲ್ಲಿನ ಐದು ಜತ್ತಿಗಳಲ್ಲಿ ಒಂದು) ತಾಳದಲ್ಲಿ ತಬಲಾ ವಾದನ ಆರಂಭವಾಯಿತು. ರಂಜನ್ ಅವರ ವಯೊಲಿನ್ ಸಾಥಿಯಿಂದ ಆರಂಭವಾದ ಕಾರ್ಯಕ್ರಮ ಕ್ರಮೇಣ ಯಾವಗಲ್ಲರ ತಾಳಕ್ಕೆ ಕುಣಿಯಲಾರಂಭಿಸಿತು. ತಬಲಾ ವಾದನದಲ್ಲಿ ಅವರ ತನ್ಮಯತೆ, ಕ್ರಿಯಾಶೀಲತೆ, ಸ್ಪಷ್ಟವಾಗಿ ಕಾಣುತ್ತಿದ್ದವು. ನಡುವೆ ಪರಂಪರೆಯಾಗಿ ಬಂದಿರುವ ಕೆಲವು ಬಂದಿಶ್‌ಗಳನ್ನು ನುಡಿಸಿದರಲ್ಲದೇ, ಅಫ್ತಬ್ ಹುಸೇನ್ ಖಾನರ ಸಂಯೋಜನೆಯನ್ನೂ ನುಡಿಸಿದರು. ಅವರಷ್ಟೇ ಸ್ಥಿರತೆಯಿಂದ ರಂಜನ್ ಅವರ ವಯೊಲಿನ್ ಸಾಥ್ ಉತ್ತಮವಾಗಿ ಮೂಡಿ ಬಂದಿತು.

ಅವರ ಕಾರ್ಯಕ್ರಮದ ನಂತರ ಧನಂಜಯ್ ದೈತಂಕರ್ ಅವರ ಸಂತೂರ್ ಹಾಗೂ ಸಮೀರ್ ರಾವ್ ಅವರ ಬಾನ್ಸುರಿ ವಾದನದ ಜುಗಲ್‌ಬಂದಿ ಕಾರ್ಯಕ್ರಮ ನಡೆಯಿತು. ಪುಣೆ ಮೂಲದ ಪಂ. ಧನಂಜಯ್ ದೈತಂಕರ್ ಪಂ.ಶಿವಕುಮಾರ್ ಶರ್ಮಾ ಅವರ ಶಿಷ್ಯರು. ಹತ್ತನೇ ವಯಸ್ಸಿನಿಂದ ಪಂ. ಜಿ.ಎಲ್ ಸಮಂತ್ ಅವರಲ್ಲಿ ಸಂತೂರ್ ವಾದನವನ್ನು ಕಲಿಯಲು ಆರಂಭಿಸಿ ಸದ್ಯ ಸಂಪೂರ್ಣವಾಗಿ ಸಂಗೀತದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಾಲ್ಯದಲ್ಲಿಯೇ ಹಿಂದೂಸ್ತಾನಿ ಸಂಗೀತದ ಗೀಳು ಹಚ್ಚಿಕೊಂಡಿದ್ದ ಸಮೀರ್ ರಾವ್ ಪಂ. ವೀರಭದ್ರಯ್ಯ ಹಿರೇಮಠ ಅವರಲ್ಲಿ ಬಾನ್ಸುರಿ ವಾದನವನ್ನು ಕಲಿಯಲು ಆರಂಭಿಸಿದವರು. ಈಗಲೂ ಚಾಲ್ತಿಯಲ್ಲಿರುವ ಪಂ. ಹರಿಪ್ರಸಾದ್ ಚೌರಾಸಿಯಾ ಅವರ ಗುರುಕುಲ ಪದ್ಧತಿಯಲ್ಲಿ ಸಂಗೀತವನ್ನು ಕಲಿತಿರುವುದಲ್ಲದೇ ತಮ್ಮ ವಿಶಿಷ್ಟ ಬಾನ್ಸುರಿ ವಾದನದಿಂದ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿರುವಂತಹ ಯುವ ಉತ್ಸಾಹಿ ಕಲಾವಿದ.

ಭಾಗೇಶ್ರೀ ರಾಗದಲ್ಲಿ ಆರಂಭವಾದ ಜುಗಲ್‌ಬಂದಿ ವಾದನ ಸಮೀರರ ಬಾನ್ಸುರಿ ವಾದನದಲ್ಲಿ ಆಲಾಪ್ ಜೋಡ್ ಜಾಲಾನ ಕಟ್ಟುವಿಕೆಯನ್ನು ಆರಂಭಿಸಿತು. ಬಾನ್ಸುರಿ ವಾದನದಲ್ಲಿನ ಕ್ರಿಯಾಶೀಲತೆಯಿಂದ ಸಮೀರ್ ಶ್ರೋತೃ ವರ್ಗಕ್ಕೆ ಹೆಚ್ಚು ಆಪ್ತರೆನಿಸಿದರು. ಜಪ್ತಾಳದಲ್ಲಿ ಆರಂಭವಾದ ರಾಗ ಧೃತ್ ತೀನ್ ತಾಳದಲ್ಲಿ ಕೊನೆಯಾಯಿತು. ಮೊದಲ ಬಾರಿಗೆ ನಡೆದ ಇವರಿಬ್ಬರ ಜುಗಲ್‌ಬಂದಿ ವಿಶೇಷವಾಗಿ ಮೂಡಿಬಂದಿತು.

ಬಾನ್ಸುರಿ ಹಾಗೂ ಸಂತೂರ್‌ನ ಲಹರಿಗಳಿಗೆ ತಬಲಾದ ಮೂಲಕ ಗುರು ಮೂರ್ತಿ ವೈದ್ಯರು ಉತ್ತಮ ಲಯ ಸಾಥ್ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT