ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಳಿಗೆ ಸ್ಫೂರ್ತಿಯಾದ ಕೆಂಪುತೋಟ

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅಲಂಕಾರಿಕ ತೋಟಗಾರಿಕೆ ಇಂದು ಜನಪ್ರಿಯ. ನಗರ–ಪಟ್ಟಣ ಪ್ರದೇಶಗಳ ಬದುಕಿನಲ್ಲಿ ಒಂದು ಅಂಗವಾಗಿ ಪರಿಗಣಿತವಾಗಿರುವ ಅಲಂಕಾರಿಕ ತೋಟಗಾರಿಕೆಗೆ ಬೆಂಗಳೂರು ಕೆಂಪುತೋಟದ ಗಾಜಿನಮನೆ ಫಲಪುಷ್ಪ ಪ್ರದರ್ಶನ ಪ್ರೇರಣೆ ನೀಡುತ್ತಲೇ ಬಂದಿದೆ.

ಹಣ್ಣು, ತರಕಾರಿ, ಹೂಗಳನ್ನು ಬೆಳೆಯಲು ಪ್ರೋತ್ಸಾಹಿಸಿದ ಇಂತಹ ಪ್ರದರ್ಶನಗಳು ಕಾಲಕ್ರಮೇಣ ಇದಕ್ಕೆ ಪೂರಕವಾದ ಕಲೆ, ತರಬೇತಿಗೂ ಹಾದಿ ಮಾಡಿಕೊಟ್ಟಿದೆ. ಕೇವಲ ಹವ್ಯಾಸವಾಗಿದ್ದು, ಕೃಷಿಯೊಟ್ಟಿಗೆ ಉಪಬೆಳೆಯಾಗಿದ್ದ ತೋಟಗಾರಿಕೆ ಇಂದು ಪ್ರಮುಖ ವಾಣಿಜ್ಯ ಉದ್ದಿಮೆ. ಆಮದು, ರಫ್ತಿನಲ್ಲೂ ಸ್ಥಾನ ಪಡೆದುಕೊಂಡಿರುವ ಅಲಂಕಾರಿಕ ತೋಟಗಾರಿಕೆಯಲ್ಲಿ ಮೈಸೂರು ಅರಸರು, ಬ್ರಿಟಿಷ್‌ ಅಧಿಕಾರಿಗಳು,  ಭಾರತೀಯ ಅಧಿಕಾರಿಗಳ ಪರಿಶ್ರಮವಿದೆ.

ಮಾರ್ಕ್‌್ಸ ಕಬ್ಬನ್‌, ಕೆಮರೋನ್‌, ಕೃಂಬಿಗಲ್‌ ಅವರ ನಂತರ ಎಚ್‌.ಸಿ. ಜವರಾಯ, ಕೆ. ನಂಜಪ್ಪ, ಡಾ. ಎಂ.ಎಚ್‌. ಮರಿಗೌಡರಂತಹ ಸಮರ್ಥ ಅಧಿಕಾರಿಗಳು ಕೆಂಪುತೋಟಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಲಾಲ್‌ಬಾಗ್‌, ಗ್ಲಾಸ್‌ಹೌಸ್‌ ಜಾಗತಿಕವಾಗಿ ಹೆಸರು ಪಡೆದಿರುವಂತೆ ಕರ್ನಾಟಕ–ಭಾರತದ ತೋಟಗಾರಿಕಾ ಕ್ಷೇತ್ರವನ್ನು ಎತ್ತರಕ್ಕೆ ಬೆಳೆಸುವಲ್ಲಿ ಫಲಪುಷ್ಪ ಪ್ರದರ್ಶನಗಳ ಏರ್ಪಾಡು ಕೂಡ ನೆರವಿನ ಹಸ್ತ ಕೊಟ್ಟಿದೆ.

ಫಲಪುಷ್ಪ ಪ್ರದರ್ಶನಗಳು ಆರಂಭಗೊಂಡಿದ್ದು ಕೇವಲ ವರ್ಷಕ್ಕೊಂದರಂತೆ. ನಂತರ ಇದು ಎರಡಾಯಿತು, ಕೆಲವೊಮ್ಮೆ ಮರು ಪ್ರದರ್ಶನಗಳು ನಡೆದದ್ದೂ ಇದೆ. ಮೊದಲು ಚಳಿಗಾಲ ಹಾಗೂ ಮಳೆ ಪ್ರದರ್ಶನಗಳು ಎಂದು ಇದ್ದವು. ಅದಕ್ಕೆ ಗಣರಾಜ್ಯೋತ್ಸವ–ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಗಳೆಂಬ ಕಾಯಂ ಹೆಸರು ಬಂದಿತು.
ತಾತ್ಕಾಲಿಕ ಡೇರೆಗಳಲ್ಲಿ, ಬಯಲಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಿಗೆ ಕಾಯಂ ಅಂಗಳವಾಗಿ ಗಾಜಿನ ಮನೆ ದೊರಕಿ ನೂರಕ್ಕೂ ಹೆಚ್ಚು ವರ್ಷಗಳಾದವು. ಪ್ರದರ್ಶನದ ಸಂದರ್ಭ ಹೊರತುಪಡಿಸಿ ಬೇರೆ ಬಗೆಯ ಚಟುವಟಿಕೆಗಳಿಗೂ ಗಾಜಿನ ಮನೆ ವೇದಿಕೆಯಾಗತೊಡಗಿದ್ದು ಈಗ ಇತಿಹಾಸ.

ರಾಜಕೀಯ–ಸಾಮಾಜಿಕ ಸಭೆ ಸಮಾರಂಭಗಳೂ ಸರ್ಕಾರಿ ಅಧಿವೇಶನಗಳನ್ನೂ ಕಂಡಿರುವ ಐತಿಹಾಸಿಕ ಗಾಜಿನ ಮನೆ ಇದೀಗ ಕೇವಲ ಸಸ್ಯ, ಹೂ, ಹಣ್ಣು, ತರಕಾರಿ ಇನ್ನಿತರ ಬೇಸಾಯ–ತೋಟಗಾರಿಕಾ ಚಟುವಟಿಕೆಗಳಿಗೆ ಮಾತ್ರ ಲಭ್ಯ.
ಮೊದಮೊದಲು ಫಲಪುಪ್ಪ ಪ್ರದರ್ಶನಗಳಿಗೆ ಜನರನ್ನು ಆಕರ್ಷಿಸಲು ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಪರಿಪಾಠವಿತ್ತು. ನಾಡಿನ ಜನ ಪ್ರದರ್ಶನಗಳಿಗೆ ನೀಡಿದ, ನೀಡುತ್ತಿರುವ ಪ್ರತಿಕ್ರಿಯೆ ಅಪೂರ್ವ.
ಪುಟ್ಟದಾಗಿ ಪ್ರಾರಂಭಗೊಂಡ ರಾಜ್ಯೋದ್ಯಾನ ಬೆಂಗಳೂರಿನ ನೂರಾರು ತೋಟಗಳು, ಉದ್ಯಾನಗಳ ಆರಂಭಕ್ಕೆ ಪ್ರೇರಣೆ ಕೊಟ್ಟಿದೆ. ಆಸಕ್ತರ ಸಂಖ್ಯೆಯೂ ಅಗಣಿತ. ಗಾಜಿನಮನೆಯು ಫಲಪುಷ್ಪ ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರೂ ಇಡೀ ಕೆಂಪುತೋಟವೇ ನಿಸರ್ಗ–ಮಾನವ ನಿರ್ಮಿತ ಹಸಿರುವಲಯ.

ಬೆಂಗಳೂರಿಗೆ ಬರುವ ಪ್ರವಾಸಿಗರ ಸಂದರ್ಶನ ಯಾದಿಯಲ್ಲಿ ಕೆಂಪುತೋಟ, ಗಾಜಿನಮನೆ ಇಲ್ಲದೆ ಇರುವುದು ಸಾಧ್ಯವೇ ಇಲ್ಲ. ಫಲಪುಷ್ಪ ಪ್ರದರ್ಶನಗಳಿಗೆಂದೇ ದೇಶ ವಿದೇಶಗಳಿಗೆ ಯಾತ್ರಿಕರು ಬರುವುದೂ ಈಗ ಮಾಮೂಲು.
ವೈಜ್ಞಾನಿಕ ಸಸ್ಯ ಉದ್ಯಾನವಾಗಿ ಮೈದಾಳಿರುವ ಕೆಂಪುತೋಟ ನಿಸರ್ಗಪ್ರಿಯರ ನೆಚ್ಚಿನ ನೆಲೆ. ಫಲಪುಷ್ಪ ಪ್ರದರ್ಶನಗಳು ತೋಟಗಾರಿಕೆ ಬೆಳವಣಿಗೆಯ ಸಂಕೇತವಲ್ಲದೆ ನಾಡಿನ ಭವ್ಯ ಪರಂಪರೆಯ ಪ್ರತಿಬಿಂಬವೂ ಆಗಿ ಮಾನ್ಯವಾಗಿದೆ.
ತೋಟಗಾರಿಕೆ ಕ್ಷೇತ್ರದ ಹೊಸ ಹೊಸ ಆವಿಷ್ಕಾರಗಳನ್ನು, ಸಂಶೋಧನೆಗಳನ್ನು ಆಸಕ್ತರಿಗೆ ಪರಿಚಯಿಸುವ ಪ್ರದರ್ಶನಾಲಯವಾಗಿಯೂ ಫಲಪುಷ್ಪ ಪ್ರದರ್ಶನಗಳು ಇಂದು ಉಪಯೋಗಗೊಂಡು ಅಭ್ಯುದಯದ ಹಾದಿಯಲ್ಲಿ ಮುಂದಡಿ ಇಡುತ್ತಿವೆ.

ವಾರ್ಷಿಕ ಫಲಪುಷ್ಪ ಪ್ರದರ್ಶನಗಳೊಂದಿಗೆ ಕೃಷಿ–ತೋಟಗಾರಿಕೆಗೆ ಗಾಜಿನ ಮನೆಯೇ ವೇದಿಕೆ. ಇದರಲ್ಲಿ ಸೇಬು, ಕಿತ್ತಲೆ, ಹಲಸು, ಮಾವು, ಬಾಳೆ, ಕಾಫಿ ಅಂತರರಾಷ್ಟ್ರೀಯ ಮೇಳಗಳು ಕೆಲವು. ಅನೇಕ ಬದಲಾವಣೆ– ವಿಸ್ತರಣೆಗಳನ್ನು ಗಾಜಿನ ಮನೆ–ಫಲಪುಷ್ಪ ಪ್ರದರ್ಶನಗಳು ಈ ನೂರು ವರ್ಷಗಳಲ್ಲಿ ಕಂಡಿದ್ದರೂ ಆರಂಭದಲ್ಲಿ ರೂಪಿಸಿದ್ದ ತಳಹದಿಯಲ್ಲಿ ಯಾವುದೇ ರಾಜಿಯೂ ಆಗಿಲ್ಲ. ಹೊಸ ವಿನ್ಯಾಸಗಳನ್ನು ವಸ್ತು ಪ್ರದರ್ಶನಗಳನ್ನು ಪ್ರತಿವರ್ಷ ಕಾಣುತ್ತಿದ್ದರೂ ಆಕರ್ಷಣೆಯಲ್ಲಿ ಎಂದೂ ಹಿಂದೆಬಿದ್ದಿಲ್ಲ.

ನವನವೀನ ವಿಚಾರಗಳನ್ನು ಅಳವಡಿಸಿಕೊಂಡು–ಅರಗಿಸಿಕೊಂಡು ಪ್ರಕೃತಿ ಪ್ರೇಮಿಗಳಿಗೆ, ತೋಟಗಾರರಿಗೆ, ಅಲಂಕಾರ ಪ್ರಿಯರಿಗೆ ಅಪೂರ್ವ ಅವಕಾಶಗಳನ್ನು ಪ್ರತಿ ಪ್ರದರ್ಶನದಲ್ಲೂ ಒದಗಿಸಿಕೊಂಡು ಬರುತ್ತಿರುವ ಬೆಂಗಳೂರು ಲಾಲ್‌ಬಾಗ್‌ ಗಾಜಿನಮನೆ ಪ್ರದರ್ಶನಗಳು ಪ್ರತಿಬಾರಿಯೂ ಹೊಸ ಚಿಂತನೆ–ಆಲೋಚನೆಗಳಿಗೆ ಎಡೆ ಮಾಡಿಕೊಡುತ್ತಲೇ ಇವೆ.
ಹೈದರ್‌ ನೆಟ್ಟು ಬೆಳಸಿ ನಂತರ ಹತ್ತಾರು ಮಂದಿಯ ಅಕ್ಕರೆಯಿಂದ ಅರಳಿರುವ ಕೆಂಪೇಗೌಡನ ಬೆಂಗಳೂರಿನ ಕೆಂಪು ತೋಟದ ಆಕರ್ಷಕ ತಾಣ ಗಾಜಿನಮನೆ ಫಲಪುಷ್ಪ ಸೌಂದರ್ಯದ ಪ್ರತೀಕವಾಗಿ ಪ್ರಜ್ವಲಿಸುತ್ತಿದೆ; ಹಸಿರು ರಾಶಿಯ ನಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT