ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಚಯಕ್ಕೆ ನವ ಮಾಧ್ಯಮ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪುಸ್ತಕ ಬಿಡುಗಡೆ ಮಾಡುವುದು ಲೇಖಕರು ಮತ್ತು ಪ್ರಕಾಶಕರ ಪಾಲಿಗೆ ಸಂಭ್ರಮವೂ ಹೌದು, ತಲೆಬಿಸಿಯೂ ಹೌದು. ಬಿಡುಗಡೆಗಾಗಿ ಸಮಾರಂಭ ಮಾಡಿದರೆ ಪುಸ್ತಕಕ್ಕೆ ಪ್ರಚಾರ ಸಿಗುತ್ತದೆ ಎನ್ನುವುದು ಇಂಥ ಕಾರ್ಯಕ್ರಮಗಳ ಹಿಂದಿರುವ ಮುಖ್ಯ ಉದ್ದೇಶ. ನವಮಾಧ್ಯಮಗಳನ್ನು ಬಳಸಿಕೊಳ್ಳುವ ಮೂಲಕ ಪ್ರಕಟಿತ ಪುಸ್ತಕದ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯೋಗಕ್ಕೆ ನಾಂದಿ ಹಾಡಿದವರು ಲೇಖಕ ವಸುಧೇಂದ್ರ.

ಈಗ ಅವರದೇ ಮತ್ತೊಂದು ಪುಸ್ತಕ ‘ವಿಷಮ ಭಿನ್ನ ರಾಶಿ’ ಬಿಡುಗಡೆಯಾಗುತ್ತಿದೆ. ಇದರ ಪ್ರಚಾರಕ್ಕಾಗಿ ಅವರು ಬಳಸಿರುವ ತಂತ್ರ, ಹಿಂದಿನ ‘5 ಪೈಸೆ ವರದಕ್ಷಿಣೆ’ ಪುಸ್ತಕದ ವಿಡಿಯೊಗಳಿಗಿಂತ ವಿಶೇಷವಾಗಿದೆ.

ಹಿಂದೆ ಅವರು ಕಪ್ಪು ಬಿಳುಪು ಚಿತ್ರಗಳೊಂದಿಗೆ ಪುಸ್ತಕದ ಮಾಹಿತಿ ನೀಡಿದ್ದರು. ಈ ಬಾರಿ ಒಂದು ನಿಮಿಷದ ವಿಶೇಷ ವಿಡಿಯೊ ರೂಪಿಸಿದ್ದಾರೆ. ಇದು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಚುರುಕಾಗಿ ಹರಿದಾಡುತ್ತಿದೆ. ಪುಸ್ತಕಪ್ರಿಯರ ಮೆಚ್ಚುಗೆಯನ್ನೂ ಗಳಿಸಿದೆ. ಓದುಗ, ಲೇಖಕರ ನಡುವೆ ಸಂಪರ್ಕ ಸೇತುವಾಗಿರುವ ಈ ವಿಡಿಯೊ, ಪುಸ್ತಕದ ಪರಿಕಲ್ಪನೆಯನ್ನು ವಿವರಿಸುತ್ತದೆ.

ವಸುಧೇಂದ್ರ ಪರಿಕಲ್ಪನೆಯಲ್ಲಿ ಅರಳಿರುವ ಈ ವಿಡಿಯೊವನ್ನು ಚಿತ್ರೀಕರಿಸಿಕೊಟ್ಟಿದ್ದರು ‘ರಾಮ ರಾಮ ರೇ’ ಸಿನಿಮಾ ತಂಡ. ನಿರ್ಮಾಣಕ್ಕೆ ಒಂದು ತಿಂಗಳು ಬೇಕಾಯಿತಂತೆ.

‘ನನ್ನ 6ನೆಯ ಕಥಾಸಂಕಲನವನ್ನು ನಿಮ್ಮೊಡನೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ದಯವಿಟ್ಟು ಈ ಪೋಸ್ಟನ್ನು ನಿಮ್ಮ ಮುಖಪುಟದಲ್ಲಿ "ಶೇರ್" ಮಾಡಿ. ಅದೃಷ್ಟವಂತ 25 "ಶೇರ್"ಖಾನರಿಗೆ ನಾನು ಸಹಿ ಮಾಡಿದ ಪ್ರತಿಯನ್ನು ಕೊಡುವೆ. ಶೇರ್ ಮಾಡಲು ಕೊನೆಯ ದಿನಾಂಕ, ನವೆಂಬರ್ 20’. ಎಂದು ವಸುಧೇಂದ್ರ ಅವರು ನ.13ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು.

ಈ ಪೋಸ್ಟ್‌ಗೆ ಅದ್ಭುತ ಎನ್ನುವಷ್ಟು ಪ್ರತಿಕ್ರಿಯೆ ಬಂತು ಎನ್ನುತ್ತಾರೆ ವಸುಧೇಂದ್ರ. ಪುಸ್ತಕ ಬಿಡುಗಡೆಯ ಈ ಹೊಸ ತಂತ್ರದ ಬಗ್ಗೆ ಅವರು ವಿವರಣೆ ಹೀಗಿದೆ...

‘ಹಿಂದಿನ ನಾಲ್ಕೈದು ಪುಸ್ತಕಗಳಿಂದ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸುವುದನ್ನು ನಿಲ್ಲಿಸಿದ್ದೇನೆ. ಆದರೆ ಬೇರೆಯವರ ಪುಸ್ತಕ ಬಿಡುಗಡೆ ಮಾಡುತ್ತೇನೆ. ಇದಕ್ಕೆ ಎರಡು ಕಾರಣವಿದೆ. ವೇದಿಕೆ ಮೇಲೆ ಕುಳಿತು ಹೊಗಳಿಸಿಕೊಳ್ಳುವುದು ನನಗೆ ಇಷ್ಟವಾಗುತ್ತಿಲ್ಲ. ತುಂಬಾ ಸಂಕೋಚ ಆಗುತ್ತೆ.

‘ನಮ್ಮೂರ ಕಡೆ (ಬಳ್ಳಾರಿ ಜಿಲ್ಲೆ) ಸಂಕ್ರಾಂತಿ ಸಮಯದಲ್ಲಿ ಮಕ್ಕಳಿಗೆ ಹಣ್ಣೆರೆಯುವ ಸಂಪ್ರದಾಯವಿದೆ. ಚಿಕ್ಕ ಮಗುವಿನ ತಲೆ ಮೇಲೆ ಮಂಡಕ್ಕಿ, ಹಣ್ಣು, ಕಬ್ಬಿನ ತುಂಡು, ಸಕ್ಕರೆ ಅಚ್ಚನ್ನು ಎರೆಯುತ್ತಾರೆ. ನಂತರ ಉಳಿದ ಮಕ್ಕಳು ಅಲ್ಲಿರುವ ಹಣ್ಣಿನ ತುಂಡನ್ನು ತೆಗೆದುಕೊಂಡು ಮಜಾ ಮಾಡುತ್ತಾರೆ. ಮಕ್ಕಳಿಗೆ ಮೂರು ವರ್ಷ ಆಗುವವರೆಗೆ ಮಾತ್ರವೇ ಹೀಗೆ ಮಾಡುವುದು. ಹಾಗೆಯೇ ನಾನೀಗ ಹದಿನಾರನೇ ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ. ಇನ್ನೆಷ್ಟು ಸಲ ವೇದಿಕೆ ಮೇಲೆ ಕೂತು ಹೊಗಳಿಸಿಕೊಳ್ಳುವುದು, ಇದು ಸರಿಯಲ್ಲ ಎನಿಸಿತು. ಆದರೆ ಜನರಿಗೆ ಪುಸ್ತಕ ಬಿಡುಗಡೆ ಆಗುತ್ತಿದೆ ಎಂಬುದನ್ನು ತಿಳಿಸಲೇಬೇಕಲ್ವಾ, ಅದಕ್ಕಾಗಿ ಬದಲಿ ದಾರಿಯನ್ನು ಹುಡುಕಿದಾಗ ಸಾಮಾಜಿಕ ಮಾಧ್ಯಮ ಬಳಕೆ ಸರಿ ಎನಿಸಿತು. ಪುಸ್ತಕ ಬಿಡುಗಡೆಗೆ ತುಂಬಾ ಖರ್ಚಾಗುತ್ತದೆ. ಆದರೆ ಇಲ್ಲಿ ಅಷ್ಟು ಹಣ ಖರ್ಚಾಗುವುದಿಲ್ಲ.

‘ನಾನು ಎಷ್ಟೋ ಕಥೆಗಳನ್ನು ಬರೆದಿದ್ದೇನೆ, ಈಗಲೂ ಬರೆಯುತ್ತಿದ್ದೇನೆ. ಆದರೆ, ಮುಗಿಯುತ್ತಿಲ್ಲ. ಇದು ನಿರಂತರ ಪ್ರಕ್ರಿಯೆ. ವಿಡಿಯೊದಲ್ಲಿಯೂ ಅಷ್ಟೇ, ಎಷ್ಟುಬಾರಿ ಹಾಳೆಯನ್ನು ಕತ್ತರಿಸಿದರೂ ಇನ್ನೂ ಶೇಷ ಉಳಿದೇ ಇರುತ್ತದೆ. ಭಾಗಾಕಾರದಲ್ಲಿ ಬರುವ ವಿಷಮಭಿನ್ನರಾಶಿಯು ಇದೇ ಥರದ ಪರಿಕಲ್ಪನೆ. ಎಷ್ಟು ಸಲ ಭಾಗಿಸಿದರೂ; ಶೇಷ ಉಳಿದುಕೊಳ್ಳುತ್ತದೆ. ಬದುಕಿನ ಸಂಬಂಧಗಳು ಹಾಗೆಯೇ, ಮುಗಿಯುತ್ತವೆ ಎಂದುಕೊಂಡ ಮೇಲೂ ಉಳಿಯತ್ತವೆ. ನನ್ನ ಪಾಲಿಗೆ ಕಥೆಗಳು ಹೀಗೆ. ಎಷ್ಟೇ ಬರೆದರೂ, ಮತ್ತೊಂದು ಹೊಸಕಥೆ ಹುಟ್ಟಿಕೊಳ್ಳುತ್ತದೆ. ನಿರಂತರತೆಯನ್ನು ಪ್ರತಿನಿಧಿಸಲು ಕಾಗದವನ್ನು ಒಂದು ರೂಪಕವಾಗಿ ಬಳಸಿಕೊಂಡಿದ್ದೇನೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ನನಗೆ ನಂಬಿಕೆ ಇದೆ. ಫೇಸ್‌ಬುಕ್‌ನಲ್ಲಿ ನನ್ನ ಪೋಸ್ಟ್‌ 10 ಸಾವಿರ ಮಂದಿಗೆ ತಲುಪಿದೆ. ವಾಟ್ಸಾಪ್‌ನಲ್ಲಿ 10 ಸಾವಿರ ಮಂದಿ ನೋಡಿರಬಹುದು. ಅಂದರೆ, ಸುಲಭದಲ್ಲಿ 20 ಸಾವಿರ ಜನರಿಗೆ ನಾನು ತಲುಪಿದಂತೆ ಆಯಿತು. ದೃಶ್ಯ ಮಾಧ್ಯಮದಲ್ಲಿ ಇರುವುದರಿಂದ ಹೆಚ್ಚು ಜನರು ಇಷ್ಟಪಡುತ್ತಾರೆ. ಇಂಥ ಪ್ರಯೋಗಗಳನ್ನು ಇನ್ನು ಮುಂದೆಯೂ ಮುಂದುವರಿಸುತ್ತೇನೆ’.

***

ಕಲೆಯ ಮೂಲಕ ಆಶಯ ಪರಿಚಯ
ಲೇಖಕ ಜೋಗಿ ಅವರ ಹೊಸ ಪುಸ್ತಕ ‘ಪ್ರೀತಿಸಿದವರನ್ನು ಕೊಂದು ಬಿಡಿ’ ಬಿಡುಗಡೆ ಸಮಾರಂಭದಲ್ಲಿ ಕಲಾವಿದ ವಿಕಾಸ ನಾಯಕ್‌, ಕುಂಚದ ಮೂಲಕ ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿ, ಕ್ಷಣಾರ್ಧದಲ್ಲಿ ಇಡೀ ಪುಸ್ತಕದ ಸಾರವನ್ನು ತೋರಿಸಿದರು. ಅದನ್ನೇ ಅಳಿಸಿ ಮತ್ತೊಂದು ಅರ್ಥವನ್ನೂ ಹೊರಡಿಸಿದರು. ಪುಸ್ತಕದ ಆಶಯವನ್ನು ಕಲೆಯ ಮೂಲಕ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ವಿಡಿಯೊ ನೋಡಲು: facebook.com/vasudhendra.chanda ಕೊಂಡಿ ಬಳಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT