ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಹಿಸಿದ ಶುದ್ಧ ಕರ್ನಾಟಕ ಸಂಗೀತಧಾರೆ

Last Updated 1 ಮೇ 2013, 19:59 IST
ಅಕ್ಷರ ಗಾತ್ರ

ಪರಿಣಿತ ಪಿಟೀಲು ವಾದಕ ಸೋದರ ಜೋಡಿ ಮೈಸೂರು ಎಂ. ನಾಗರಾಜ್ ಮತ್ತು ಡಾ. ಮೈಸೂರು ಎಂ. ಮಂಜುನಾಥ್ ಅವರು ಶೇಷಾದ್ರಿಪುರ ಕಾಲೇಜಿನ ಆವರಣದಲ್ಲಿ  ನಡೆಯುತ್ತಿರುವ ಶ್ರೀ ಶೇಷಾದ್ರಿಪುರಂ ರಾಮಸೇವಾ ಸಮಿತಿಯ 65ನೇ ರಾಮೋತ್ಸವದಲ್ಲಿ ಭಾನುವಾರದಂದು ನಡೆಸಿದ ದ್ವಂದ್ವ ಪಿಟೀಲು ವಾದನ ಕಲಾಪ್ರೇಮಿಗಳಿಗೆ ರಸದೌತಣ ಉಣಬಡಿಸಿತು.

ಆಳವಾದ ಅಧ್ಯಯನ, ಪ್ರತಿಭಾಜನ್ಯ ಒಳನೋಟ, ಓಜಃಪೂರ್ಣವಾದ ನಿರೂಪಣಾ ಶೈಲಿ ಮೈಗೂಡಿದ್ದ ಕಛೇರಿಯದು. ನುಡಿಸಾಣಿಕೆಯಲ್ಲಿ ಕಾಣಬರುವ ಅಸಾಧಾರಣ ಹೊಂದಾಣಿಕೆ, ಲಯ ಪ್ರಭುತ್ವ ಮತ್ತು ಗಾಯನ ಪ್ರಧಾನ ವಾದನ ಮೆಚ್ಚುವಂತಹುದು. ಇವೆಲ್ಲಾ ವೈಶಿಷ್ಟ್ಯಗಳಿಂದ ಅಂದಿನ ಸಂಜೆಯ ಕಛೇರಿ ಶ್ರೀಮಂತವಾಯಿತು. ಒಮ್ಮಮ್ಮೆ ಎಚ್.ಎಸ್. ಸುಧೀಂದ್ರ ಮತ್ತು ಜಯಚಂದ್ರರಾವ್ ಅವರ ಡಬಲ್ ಮೃದಂಗವೂ ಸೇರಿದಂತೆ ಕಛೇರಿಯು ಅಬ್ಬರದ ಅಂಚಿಗೆ ಹೋಯಿತಾದರೂ ಸೋದರರ ಭಾವಪೂರ್ಣತೆ ಮತ್ತು ಕಲೆಗಾರಿಕೆ ಸಮಾಧಾನದ ಕೇಳ್ಮೆಗೆ ಒತ್ತು ಕೊಟ್ಟಿತು.

ಅಪರೂಪವೆಂಬಂತೆ ಗೌಳಿಪಂತು ರಾಗದ ತ್ಯಾಗರಾಜರ `ತೆರೆತೀಯ' ರಾಗದ ಕೃತಿಯೊಂದಿಗೆ ಕಛೇರಿಯ ಆರಂಭ ಆಶ್ಚರ್ಯಗೊಳಿಸಿತು. ಸರಸ್ವತಿಮನೋಹರಿ ರಾಗದ `ಎಂತವೇಡುಕೊಂದುರಾ' ಮನೋಹರವಾಗಿತ್ತು. ರಾಮಚಂದ್ರಂ ಭಾವಯಾಮಿ (ವಸಂತ) ಸಾಹಿತ್ಯ ಶುದ್ಧಿಯಿಂದ ಕಿವಿಗಳಿಗೆ ಒಗ್ಗಿತು. ಖರಹರಪ್ರಿಯ (ಪಕ್ಕಲ ನಿಲಬಡಿ ಮತ್ತು ಶಂಕರಾಭರಣ (ಎದುಟಾನಿಲಚಿತೆ) ರಾಗಸ್ವರೂಪ ಹದವಾಗಿ ಹಬ್ಬಿ ಹರಡಿತು. ಕೆಲವು ಸಂಚಾರಗಳಂತೂ ಅವರ ವೈಯಕ್ತಿಯ ಕೊಡುಗೆ ಎಂತಲೇ ಅನ್ನುವಂತಿದ್ದವು. ನಾಸಿಕಾಭೂಷಿಣಿರಾಗದ ಚುಟುಕು ಆಲಾಪನೆಯ ಹಿನ್ನೆಲೆಯಲ್ಲಿ `ಮಾರವೈರಿ ರಮಣಿ' ಪ್ರಭಾವಕಾರಿಯಾಗಿತ್ತು. `ದಾಸನ ಮಾಡಿಕೋ ಎನ್ನ' (ನಾದನಾಮಕ್ರಿಯ) ಮತ್ತು `ಪಿಬರೆ ರಾಮರಸಂ' (ಆಹಿರ್‌ಭೈರವ್) ನಂತರ ಮೋಹನಕಲ್ಯಾಣಿ ತಿಲ್ಲಾನದ ಸಮಾಪ್ತಿ ಅಭಿನಂದಿಸಲ್ಪಟ್ಟಿತು.

ವಿಕಾಸೋನ್ಮುಖ ಪ್ರತಿಭೆ
ಬಾಲ ಪ್ರತಿಭೆಯೊಂದು ತನ್ನ ಯಶಸ್ವೀ ಚೊಚ್ಚಲ ಕಾರ್ಯಕ್ರಮದ ನಂತರ ಆ ಜಾಡಲ್ಲೇ ಮುಂದುವರೆದು ನಿರಂತರ ಬೆಳೆಯುತ್ತಾ ಬೃಹತ್ ಪ್ರತಿಭೆಯಾಗಿ ವಿಜೃಂಭಿಸುವುದನ್ನು ನೋಡುವುದೂ ಅಂದ ಕೇಳುವುದೂ ಚೆಂದ. ಬಸವೇಶ್ವರನಗರದ ಶ್ರೀ ವಾಣಿ ವಿದ್ಯಾ ಕೇಂದ್ರದ ಶ್ರೀ ವಾಣಿ ಕಲಾ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಒಂದು ತಿಂಗಳ 22ನೆಯ ಶ್ರೀರಾಮ ನವಮಿ ಸಂಗೀತೋತ್ಸವದ ನಿಮಿತ್ತ ಸೋಮವಾರದಂದು ನಡೆದ ಯುವ ಗಾಯಕ ಮಧು ಕಶ್ಯಪ್ ಅವರ ಕಛೇರಿಯಲ್ಲಿ ಅಂತಹ ಅನುಭವ ಉಂಟಾದದ್ದು ಸಹಜವೇ. ಭಾವ ಸೌಷ್ಠವ, ಕಲ್ಪನಾ ಚಾತುರ್ಯ ಮತ್ತು ಲಯದ ಬೆಡಗಿನ ಕಲಾ ಸಂಗಮ ಅಪೂರ್ವವಾಗಿತ್ತು. ಇದು ಕಛೇರಿಯ ಮೊದಲಿಂದ ಕೊನೆಯವರೆಗೆ ಯಥಾಸ್ಥಿತಿ ಉಳಿದದ್ದು ವಿಶೇಷ. ಸಹ ಸ್ಪಂದಿಗಳಾಗಿದ್ದ ಎಚ್.ಎಂ. ಸ್ಮಿತಾ (ಪಿಟೀಲು), ರಾಧೇಶ್ (ಮೃದಂಗ) ಮತ್ತು ಮಂಜುನಾಥ್ (ಘಟ) ಅವರು ಮಧು ಕಶ್ಯಪ್ ಅವರ ಗಾಯನದ ಪರಿಣಾಮವನ್ನು ಹೆಚ್ಚಿಸಿ ರಂಜಿಸಿದರು. ಐದೂ ಜನ ಕಲಾವಿದರು ಬೇರೆ ಬೇರೆಯಾಗಿಯೂ ಒಟ್ಟೊಟ್ಟಾಗಿ ತಮ್ಮ ಪ್ರತಿಭೆಗಳನ್ನು ಮೆರೆದು ರಸಿಕರ ಪ್ರಶಂಸೆಗೆ ಪಾತ್ರರಾದರು. ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮ ಮತ್ತು ಅಭಿವ್ಯಕ್ತಿಯ ವೈವಿಧ್ಯ ಹಲವಾರು ವಿಶೇಷತೆಗಳಿಂದ ಗಮನಾರ್ಹವೆನಿಸಿತು.

ಊತ್ತುಕ್ಕಾಡು ಅವರ `ಶ್ರೀ ವಿಘ್ನರಾಜಂಭಜೆ' (ಗಂಭೀರನಾಟ) ಗಂಭೀರವಾದ ಸ್ವರಸಂಯೋಜನೆ ಸಹಿತ ರಂಜಿಸಿತು. ಮೇಲ್ಕಾಲದ ಸ್ವರಗಳಂತೂ ರೋಚಕವಾಗಿದ್ದವು. `ಮೋಕ್ಷಮುಗಲದಾ' (ಸಾರಮತಿ) ಕೃತಿಯನ್ನು ಅದರ ಸಾಕ್ಷಾತ್ಕಾರ ನೀ ಅನುಪಲ್ಲವಿ ಪಂಕ್ತಿಯಿಂದ ಆರಂಭಿಸಿದುದು ಅನಗತ್ಯವೆನಿಸಿದರೂ ಸಹ ಒಟ್ಟಾರೆ ಅದರ ಭಾವವನ್ನು ಕೇಳುಗರಿಗೆ ತಲುಪಿಸುವಲ್ಲಿ ಅವರು ಸಫಲರಾದರು. ನೆರೆವಲ್ ಇಲ್ಲದೆ ಸ್ವರಗಳನ್ನು ಹಾಡಿದುದು ಒಂದು ರೀತಿಯ ನಿರಾಸೆಯನ್ನುಂಟು ಮಾಡಿತು. ಚುರುಕಿನ `ಭೋಗೀಂದ್ರಶಾಯಿನಂ' (ಕುಂತಲವರಾಳಿ) ಮುದ ನೀಡಿತು. 33ನೇ ಮೇಳಕರ್ತರಾಗ ಗಾಂಗೇಯಭೂಷಿಣಿಯನ್ನು ಹಾಡಬೇಕಾದರೆ ಬೇಕಾದ ಜಾಣ್ಮೆ ಮತ್ತು ಕೌಶಲಗಳನ್ನು ಮಧು ಮಧುರವಾಗಿ ಪ್ರಕಟಗೊಳಿಸಿ ಆ ರಾಗವನ್ನು ಅಂದಗಾಣಿಸಿದರು. ತ್ಯಾಗರಾಜರ `ಎವ್ವರೇ ಸರಿ ಎವ್ವರೆ'  ಕೀರ್ತನೆಯನ್ನು ಮಾತುಗಳಲ್ಲಿ ಹೇಳಿದಂತೆ ಸುಂದರವಾಗಿ ಹಾಡಿದರು. ಅದಕ್ಕೆ ಜೋಡಿಸಿದ ಸ್ವರಗಳಂತೂ ಲಯ ವಿವಿಧತೆಯ ಜೊತೆಗೆ ಕಲಾವಂತಿಕೆಯನ್ನೂ ಪ್ರದರ್ಶಿಸಿದವು.

ಪ್ರೌಢ ವಾದನ
ಅದೇ ಸ್ಥಳದಲ್ಲಿ ನಡೆದ ಎನ್. ರವಿಕಿರಣ್ ಅವರ ಚಿತ್ರವೀಣಾ ವಾದನ ಮಧುರವಾಗಿತ್ತು. ಆದರೆ ಅವರು ಪಿಟೀಲು ಪಕ್ಕವಾದ್ಯಗಾರ್ತಿ ಅಪೂರ್ವಾ ರವೀಂದ್ರನ್ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ ಅದನ್ನು ಸದುಪಯೋಗ ಪಡೆಯಲು ಆಕೆ ವಿಫಲರಾದುದು ರಸಭಂಗಕ್ಕೆ ಕಾರಣವಾಯಿತು.
ಆದರೂ ಸಹ ರವಿಕಿರಣ್ ಅವರ ಪಕ್ವವಾದ ವಿದ್ವತ್ತು ಮತ್ತು ಕಛೇರಿಯ ಪರಿಣತಿ ರಸಿಕರನ್ನು ನಿರಾಸೆಗೊಳಿಸಲಿಲ್ಲ. ಅನಂತಕೃಷ್ಣ ಶರ್ಮ (ಮೃದಂಗ) ಮತ್ತು ರಂಗನಾಥ ಚಕ್ರವರ್ತಿ (ಘಟ) ಅವರ ನುರಿತ ಪಕ್ಕವಾದ್ಯಗಳೊಂದಿಗೆ ರವಿಕಿರಣ್ ಶ್ರೀ ರಘುಕುಲ (ಹಂಸಧ್ವನಿ) ಕೀರ್ತನೆಯನ್ನು ಸ್ವರಗಳಿಂದ ಅಲಂಕರಿಸಿದರು. ಕಾನಡಾ ರಾಗಾಲಾಪನೆ ಮತ್ತು `ಮಾಮವಸದಾಜನನಿ' ರಚನೆ ಕಲ್ಪನಾಸ್ವರಗಳಿಂದ ಆಕರ್ಷಕವಾಗಿತ್ತು. ಕಾಮವರ್ಧಿನಿ (ರಘುವರ) ಮತ್ತು ಮಧ್ಯಮಾವತಿ (ರಾಗ, ತಾನ ಮತ್ತು ಪಲ್ಲವಿ, `ರಾಮ ನಾಮಂ ಭಜರೆ ರೇ ಮನಸಾ', ರಾಗಮಾಲಿಕಾ ಸ್ವರಪ್ರಸ್ತಾರ ಸಹಿತ) ರಾಗಗಳ ವಿಶಾಲ ಹರವಿನಲ್ಲಿ ವಾದಕರ ಪ್ರೌಢ ಮನೋಧರ್ಮ ಮತ್ತು ಲಯ ನೈಪುಣ್ಯ ರಂಜಿಸಿದವು. ಅವುಗಳ ನಡುವೆ ಅವರು ನುಡಿಸಿದ ರೀತಿಗೌಳ (ಜನನಿ ನಿನ್ನುವಿನಾ) ಮತ್ತು ಮೋಹನ (ಸ್ವಾಗತಂ ಕೃಷ್ಣ) ಮೋಹಕವಾಗಿದ್ದವು.

ಏಳರ ಸೊಗಸು
ಬಸವನಗುಡಿಯ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ  ನಡೆದ ರಾಮೋತ್ಸವ ಕಛೇರಿಯಲ್ಲಿ ಯುವ ವಿಮರ್ಶಕ ಹಾಗೂ ಏಳುತಂತಿ ಪಿಟೀಲು ಸಾಧಕ ಎನ್. ವೆಂಕಟೇಶ್ ಹಾಗೂ ಪ್ರತಿಭಾ ಸಂಪನ್ನ ಏಳುತಂತಿ ವೀಣಾ ವಾದಕ ಪ್ರಶಾಂತ್ ಅಯ್ಯಂಗಾರ್ ಸವಿಶೇಷ ವಾದ್ಯ ಕಛೇರಿಯನ್ನು ನೀಡಿದರು.
ಅವರೊಂದಿಗೆ ಬಿ.ಎಸ್. ಪ್ರಶಾಂತ್ (ಮೃದಂಗ), ದಯಾನಂದ ಮೋಹಿತೆ (ಘಟ), ನಾಗೇಂದ್ರ (ಖಂಜರಿ), ಪ್ರಸನ್ನಕುಮಾರ್ (ಮೋರ್ಚಿಂಗ್) ಮತ್ತು ಕಾರ್ತಿಕ್ (ತಬಲಾ) ಪಂಚ ಲಯವಾದ್ಯಕಾರರು ಕ್ರಿಯಾಶೀಲರಾಗಿ ಸ್ಪಂದಿಸಿ ಖುಷಿ ನೀಡಿದರು. ವೆಂಕಟೇಶ್‌ಅವರು ತಮ್ಮ ಗುರುಗಳಾಗಿದ್ದ ಆರ್.ಆರ್. ಕೇಶವಮೂರ್ತಿಗಳ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಭರವಸೆಯನ್ನು ತೋರಿದರು. ಪ್ರಶಾಂತ್ ಅವರ ವಾದನದಲ್ಲಿ ಅಲ್ಲಲ್ಲಿ ಕೆಲವು ಏರುಪೇರುಗಳು ಕಾಣಬಂದವಾದರೂ ಕಛೇರಿಯ ಒಟ್ಟು ಯಶಸ್ಸಿಗೆ ಅವರೂ ಪ್ರಮುಖ ಕಾರಣಕರ್ತರಾದರು. ಕಾಮವರ್ಧಿನಿ ರಾಗ, ತಾನ ಮತ್ತು ಪಲ್ಲವಿ (ಶ್ರೀರಾಮ `ನಾಮವ ಭಜಿಸೋ ಸದಾ ಭವಮುಕ್ತಿಯ ಕೊಡಿಸೋ', ಆದಿತಾಳ)ಯನ್ನು ಸಾಂಪ್ರದಾಯಿಕವಾಗಿ ವಿಸ್ತರಿಸಿ ತಂತಮ್ಮ ಕಲಾ ಕೌಶಲ್ಯವನ್ನು ತೋರಿ ರಾಗಮಾಲಿಕಾ ಸ್ವರವಿನ್ಯಾಸದಿಂದ ಅದರ ಮೆರಗನ್ನು ಹೆಚ್ಚಿಸಿದರು. ಅದಕ್ಕೂ ಮುನ್ನ ಅವರು ಪ್ರಸ್ತುತ ಪಡಿಸಿದ ರಘುವಂಶ ಸುಧಾಂಬುಧಿ (ಕದನಕುತೂಹಲ) ಉತ್ಸಾಹಪೂರ್ಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT