ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾಹಾರವ ಮಾಡೋ...

ಬ್ಲಾಗಿಲನು ತೆರೆದು...
Last Updated 14 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವಿನೋದ್ ವೃತ್ತಿಯಲ್ಲಿ ಡಿಸೈನ್‌ ಎಂಜಿನಿಯರ್‌. ಛಾಯಾಗ್ರಹಣ ಹಾಗೂ ಓದುವುದರಲ್ಲಿ ಅವರಿಗೆ ಆಸಕ್ತಿ. ಇಷ್ಟಕ್ಕೇ ಅವರ ಪರಿಚಯ ಮುಗಿಯುವುದಾದರೂ, ದಾಸರ ಕೀರ್ತನೆಗಳಲ್ಲಿ ಅವರಿಗೆ ಅಪರಿಮಿತ ಪ್ರೀತಿ ಎನ್ನುವುದು ವಿನೋದ್‌ರ ಬ್ಲಾಗ್‌ ನೋಡಿದ ಯಾರಿಗಾದರೂ ಅನ್ನಿಸುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಬ್ಲಾಗ್‌ಗಳು ವೈಯಕ್ತಿಕ ಇಷ್ಟ–ಕಷ್ಟಗಳನ್ನು ದಾಖಲುಗೊಳಿಸುವ ವೇದಿಕೆ ಆಗಿರುತ್ತವೆ. ಅಪರೂಪಕ್ಕೆ ವಿಷಯಾಧಾರಿತ ಬ್ಲಾಗ್‌ಗಳನ್ನೂ ಕಾಣಬಹುದು. ಕುಮಾರವ್ಯಾಸ ಭಾರತದ ಷಟ್ಪದಿಗಳನ್ನು ದಾಖಲಿಸಿರುವ, ಚಲನಚಿತ್ರ ಗೀತೆಗಳ ಸಾಹಿತ್ಯವನ್ನು ಸಂಕಲಿಸಿರುವ ಬ್ಲಾಗ್‌ಗಳೂ ಇವೆ. ವಿನೋದ್‌ರ ‘ದಾಸವಾಣಿ’ (dasavani.blogspot.in) ಕೂಡ ಇವುಗಳ ಸಾಲಿಗೆ ಸಲ್ಲುವಂತಹದ್ದು.

‘ದಾಸವಾಣಿ’ಯಲ್ಲಿ ನೂರಾರು ಕೀರ್ತನೆಗಳಿವೆ. 2007ರಿಂದ ಈ ಕೀರ್ತನೆ ದಾಖಲಾತಿ ನಡೆದಿದೆ. ಒಂದರ್ಥದಲ್ಲಿ ಇದು ಪುರಂದರ ದಾಸರ ಕೀರ್ತನೆಗಳ ಸಂಗ್ರಹವೂ ಹೌದು. ದಾಸರ ಕೀರ್ತನೆಗಳ ಬಗ್ಗೆ ಆಸಕ್ತಿಯುಳ್ಳವರಿಗೆ ಈ ಬ್ಲಾಗ್‌ ರುಚಿಸುತ್ತದೆ. ಸಮಯ ಸಿಕ್ಕಾಗ ಒಂದು ಕೀರ್ತನೆ ಓದಿಕೊಂಡೋ ಹಾಡಿಕೊಂಡೋ ಖುಷಿ ಪಡಬಹುದು. ವಿಷಯವಾರು, ಆ ವರ್ಷ ದಾಖಲಿಸಿದ ಕೀರ್ತನೆಗಳನ್ನು ಅಕಾರಾದಿಯಾಗಿ ನೀಡಲಾಗಿರುವುದರಿಂದ ಇಷ್ಟಪಡುವ ರಚನೆಯನ್ನು ಆಯ್ದುಕೊಂಡು ಆಸ್ವಾದಿಸಲಿಕ್ಕೂ ಅವಕಾಶವಿದೆ.

ಪುರಂದರರ ರಚನೆಗಳನ್ನು ಸುಮ್ಮನೆ ದಾಖಲಿಸುವಷ್ಟಕ್ಕೆ ವಿನೋದ್‌ ಸುಮ್ಮನಾಗಿಲ್ಲ. ದಾಖಲಾಗಿರುವ ಕೀರ್ತನೆಯ ಸಂಗೀತದ ಕೊಂಡಿ ಲಭ್ಯವಿದ್ದಲ್ಲಿ ಅದನ್ನೂ ತಮ್ಮ ಬ್ಲಾಗಿನಲ್ಲಿ ನೀಡಿದ್ದಾರೆ. ಹಾಗಾಗಿ, ಕಿವಿ ತುಂಬಿಕೊಳ್ಳಲಿಕ್ಕೂ ಇಲ್ಲಿ ಸರಕಿದೆ. ಇಷ್ಟು ಮಾತ್ರವಲ್ಲ– ಕೆಲವು ಕೀರ್ತನೆಗಳ ಇಂಗ್ಲಿಷ್‌ ರೂಪಾಂತರಗಳೂ ಇವೆ. ಈ ಇಂಗ್ಲಿಷ್‌ ಕೊಂಡಿಗಳನ್ನು ಕನ್ನಡ ಬಾರದ ಗೆಳೆಯರ ಗಮನಕ್ಕೆ ತರಬಹುದಾಗಿದೆ.

ಇವೆಲ್ಲಕ್ಕೂ ವಿಶಿಷ್ಟವಾಗಿರುವುದು ಕೀರ್ತನೆಗಳ ವಿನ್ಯಾಸ. ಪ್ರತಿ ಕೀರ್ತನೆಗೂ ವಿನೋದ್‌ ಸೊಗಸಾದ ವರ್ಣಚಿತ್ರಗಳನ್ನು ಆಯ್ದು ಪ್ರಕಟಿಸಿದ್ದಾರೆ. ಈ ಕಲಾಕೃತಿಗಳನ್ನು ಅವರು ಎಲ್ಲಿಂದ ಕಡ ತಂದರೋ ತಿಳಿಯದು. ಆದರೆ, ಅವು ಕೀರ್ತನೆಗಳ ಸೊಗಸು ಹೆಚ್ಚಿಸಿರುವುದಂತೂ ನಿಜ. ‘ದಾಸವಾಣಿ’ ಓದುವುದರ ಜೊತೆಗೆ ಹಾಡಿಕೊಳ್ಳಲಿಕ್ಕೂ ಕಣ್ತುಂಬಿಕೊಳ್ಳಲಿಕ್ಕೂ ಅವಕಾಶವಿರುವ ಬ್ಲಾಗು.

ಒಂದು ಅಪರೂಪದ ಕೀರ್ತನೆಯೊಂದಿಗೆ ವಿನೋದ್‌ರ ‘ದಾಸವಾಣಿ’ ಪರಿಚಯವನ್ನು ಮುಗಿಸಬಹುದು. ‘ಫಲಾಹಾರವನು ಮಾಡೊ’ ಎಂದು ಪರಮಪುರುಷ ಭೂಬಲನನ್ನು ಲಕ್ಷ್ಮೀ ಸಹಿತ ಆಹ್ವಾನಿಸಿರುವ ದಾಸರು ನೀಡಿರುವ ಫಲಾಹಾರದ ಮೆನು ಆಕರ್ಷಕವಾಗಿದೆ. ಆ ಪಟ್ಟಿಯನ್ನು ನೋಡಿ:

ಕದಳಿ ಕೆಂಬಾಳೆ ಕಿತ್ತಳೆ ಕಂಚಿಫಲಗಳು
ಬದರಿ ಬೆಳುವಲ ಜಂಬೀರ ದ್ರಾಕ್ಷೆಗಳು
ಮಧುರದ ಮಾದಾಳ ಮಾವಿನ ಹಣ್ಗಳು
ತುದಿ ಮೊದಲಿಲ್ಲದ ಪರಿಪರಿ ಫಲಗಳ

ಉತ್ತತ್ತಿ ಜಂಬು ನಾರಂಗ ದಾಳಿಂಬವು
ಮುತ್ತಾದೌದುಂಬರ ಕಾರಿಯು ಕವಳಿ
ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿ
ಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ

ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯು
ಹಾಲು ರಸಾಯನ ಬೆಣ್ಣೆ ಸೀಯಾಳು
ಮೂಲೋಕದೊಡೆಯ ಶ್ರೀಪುರಂದರವಿಠಲನೆ
ಪಾಲಿಸೋ ನಿನ್ನಯ ಕರಕುಂಜದಿಂದಲಿ

ಫಲಾಹಾರದ ಪಟ್ಟಿ ಇಷ್ಟೊಂದು ಆಕರ್ಷಕವಾಗಿರುವಾಗ ಯಾವ ದೇವನೂ ಓಗೊಡದಿರಲಾರ ಎನ್ನಿಸುತ್ತದೆ. ಹಾಗೆಯೇ, ಕೀರ್ತನೆಗಳ ರುಚಿಯೂ ಸ್ವಾದಿಷ್ಟ. ದಾಸರೆಂದರೆ ಅವರು ಎಲ್ಲಕಾಲಕ್ಕೂ ಸಲ್ಲುವ ಸಮಾಜ ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT