ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಫುಟ್‌ಬಾಲ್ ಬೆಳೆಯಬೇಕು ಬೆಳೆಸುವ ಮನಗಳು ಬೇಕು'

Last Updated 29 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚು. ಇಲ್ಲಿನ ಜನ ಕ್ರೀಡೆಯತ್ತ ಜಾಸ್ತಿ ಒಲವು ತೋರಿಸುತ್ತಾರೆ. ಒಂದು ವೃತ್ತಿಪರ ಫುಟ್‌ಬಾಲ್ ತಂಡದಿಂದ ಇಲ್ಲಿಯ ಜನರ ಮನಸ್ಸನ್ನು ಮತ್ತಷ್ಟೂ ಗೆಲ್ಲಬಹುದು ಎಂದು ಹೇಳುತ್ತಾರೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಐ-ಲೀಗ್ ವ್ಯವಸ್ಥಾಪಕರಾದ ಆಶ್ಲೆ ವೆಸ್ಟ್‌ವುಡ್. ಅದು ಬೆಂಗಳೂರಿನ ಫುಟ್‌ಬಾಲ್ ಕ್ಲಬ್‌ನ ಉದ್ಘಾಟನೆಯ ಸಮಯ. ಅಲ್ಲಿ  ಸೇರಿದ್ದ ಜನರನ್ನು ನೋಡಿದರೆ ನಗರದವರ ಫುಟ್‌ಬಾಲ್ ಪ್ರೀತಿ ಅರ್ಥವಾಗುತ್ತಿತ್ತು.

ಉತ್ತಮ ತಂಡ ಕಟ್ಟುವ ಭರವಸೆ ಮೂಡಿಸಿದ ಆಶ್ಲೆ ಫುಟ್‌ಬಾಲ್ ಕ್ಲಬ್ಬನ್ನು ಉದ್ಘಾಟಿಸಿದರು. `ತಂಡಕ್ಕೆ ಸ್ವಲ್ಪ ಮಟ್ಟಿಗೆ ಚಿಯರ್ ಮಾಡುವ ಅಗತ್ಯವಿದೆ. ಒಂದು ಯಶಸ್ವಿ ತಂಡದ ನಿರೀಕ್ಷೆ ನನಗಿದೆ' ಎಂದು ತಮ್ಮ ಆಸೆ ಬಿಚ್ಚಿಟ್ಟರು.
   
ಭಾರತದಲ್ಲಿ ಕ್ರೀಡೆಗೆ ಇನ್ನೂ ಹೆಚ್ಚು ಪ್ರಾಧಾನ್ಯ ದೊರಕಬೇಕು. ಆಗ ಒಂದು ವೃತ್ತಿಪರ ತಂಡ ರೂಪುಗೊಳ್ಳಲು ಸಾಧ್ಯ. ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಾಯ ಮಾಡಿದರೆ ವೃತ್ತಿಪರ ಫುಟ್‌ಬಾಲ್ ತಂಡ ಕಟ್ಟಬಹುದು ಎಂಬುದು ಆಶ್ಲೆ ಅಭಿಪ್ರಾಯ.

ಇಲ್ಲಿ ಕ್ರೀಡೆಗೆ ಒಳ್ಳೆಯ ಅವಕಾಶ ಇದೆ. ಜನರಲ್ಲಿ ತುಂಬು ಕ್ರೀಡಾಸಕ್ತಿ ಇದೆ. ಆಸಕ್ತಿ ಇರುವವರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಭಾರತದಲ್ಲಿ ಒಂದು ಉತ್ತಮ ಫುಟ್‌ಬಾಲ್ ತಂಡ ಬೆಳೆಸಬಹುದು ಎಂಬುದು ಈ ಕ್ರೀಡಾಪಟುವಿನ ಭರವಸೆಯ ನುಡಿ. ಜೊತೆಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ಗೆ ಜೆ.ಎಸ್.ಡಬ್ಲ್ಯು ಬೆಂಬಲ ನೀಡಿದೆ. ಹಾಗೆಯೇ ಉಳಿದ ಕಾರ್ಪೊರೇಟ್ ಸಂಸ್ಥೆಗಳು ಕ್ರೀಡೆಗೆ ಬೆಂಬಲ ನೀಡಿದರೆ ಕ್ರೀಡೆ ಬೆಳೆಯಲು ಸಾಧ್ಯ ಎಂದೂ ಮಾತು ಸೇರಿಸಿದರು.

ಕ್ರಿಕೆಟ್‌ನಷ್ಟೇ ಫುಟ್‌ಬಾಲ್ ಕೂಡ ಈಗ ಜನಮನ್ನಣೆ ಗಳಿಸಿದೆ. ಜನರು ಕ್ರಿಕೆಟ್‌ನಂತೆ ಇದರತ್ತಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಈ ಕ್ರೀಡೆಗೆ ಬೆಂಬಲ ಬೇಕಾಗಿದೆ. ಸೂಕ್ತವಾದ ಪ್ರೋತ್ಸಾಹ ದೊರಕಿದರೆ ಇನ್ನು ಕೆಲವೇ ವರ್ಷಗಳಲ್ಲಿ ಫುಟ್‌ಬಾಲ್ ಕೂಡ ಎಲ್ಲರ ಮನ ಗೆಲ್ಲಲಿದೆ ಎಂಬ ಆಶಾವಾದ ಅವರ ನುಡಿಗಳಲ್ಲಿ ಎದ್ದು ಕಾಣುತ್ತಿತ್ತು.

`ಫುಟ್‌ಬಾಲ್ ಆಟಗಾರರು ಎಷ್ಟು ಸಾಧ್ಯವೋ ಅಷ್ಟು ಪರಿಶ್ರಮ ಹಾಕಿದರೆ ಮಾತ್ರ ಈ ಕ್ರೀಡೆ ಒಲಿಯಲು ಸಾಧ್ಯ. ಆಟವನ್ನು ಖುಷಿಯಿಂದ ಅನುಭವಿಸುತ್ತಾ, ಬದ್ಧತೆಯನ್ನು ತೋರಿಸುವುದರ ಮೂಲಕ ಇದರಲ್ಲಿ ಯಶಸ್ವಿಯಾಗಬಹುದು' ಎಂಬುದು ಅವರ ಕಿವಿಮಾತು.

`ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲಿಯ ವಾತಾವರಣ ತುಂಬಾ ಚೆನ್ನಾಗಿದೆ. ಆಗಾಗ ಮಳೆ ಬಂದು ಇಳೆಯನ್ನು ತಂಪಾಗಿಸುತ್ತದೆ. ಒಳ್ಳೆಯ ರೆಸ್ಟೊರೆಂಟ್‌ಗಳು ಇವೆ. ಬೆಂಗಳೂರು ಈಗ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದೆ' ಎಂದು ನಗರದ ಬಗ್ಗೆ ತಮ್ಮ ಅನ್ನಿಸಿಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT