ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳು ಬೆಳಗಿದ ಮೇಣದ ಬತ್ತಿ!

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಓದಿದ್ದು ಫಾರ್ಮಸಿ ಡಿಪ್ಲೊಮಾ. ಆದರೆ ಈಗ ಮೇಣದ ಬತ್ತಿಯ ಉದ್ಯಮಿ. ಮೇಣವನ್ನು ಕರಗಿಸಿ, ಬಣ್ಣಗಳಲ್ಲಿ ಕಲಿಸಿ ಹೂವಾಗಿ ಅರಳಿಸಬಲ್ಲರು. ಹೃದಯವಾಗಿ ನರಳಿಸಬಲ್ಲರು. ಮೇಣದ ಸ್ತಂಭ, ಮರ, ಗಿಡ, ಬೊಕ್ಕೆ ಏನಾದರೂ ಸರಿ, ಮೇಣದಲ್ಲಿಯೇ ಸೃಷ್ಟಿಸಬಲ್ಲರು. ಇವರು ರೂಪರಾಣಿ ರವೀಂದ್ರನ್.

15 ವರ್ಷಗಳ ಮೊದಲು ಕೇವಲ ಒಂದು ಸಣ್ಣ ಮೆಡಿಕಲ್ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಮಕ್ಕಳ ಜವಾಬ್ದಾರಿ ಹೊರಲು ಅಂಗಡಿ ಮುಚ್ಚಬೇಕಾಯಿತು. ಆದರೆ ಸುಮ್ಮನೆ ಕೂಡಲಾರದು.

ಅವರೊಳಗಿನ ಕ್ರಿಯಾಶೀಲ ಮನಸು ಏನಾದರೂ ಮಾಡುವಂತೆ ಪ್ರೇರೇಪಿಸುತ್ತಲೇ ಇರುತ್ತಿತ್ತು. ಆಗ ಪೇಂಟಿಂಗ್ ಆರಂಭಿಸಿದರು. ಒಮ್ಮೆ ವಸ್ತು ಪ್ರದರ್ಶನ ನೋಡಲು ಹೋದಾಗ ಕಣ್ಣಿಗೆ ಬ್ದ್ದಿದದ್ದು ಮೇಣದ ಬತ್ತಿಯ ಕಲೆ ಎಂಬ ಪುಸ್ತಕ. ಸುಮ್ಮನೆ ಕಾಲ ಹರಣ ಮಾಡಲು ಎಂಬಂತೆ ಪುಸ್ತಕ ತಂದರು.

ಆದರೆ ಓದಿದಂತೆ ಒಮ್ಮೆ ಮಾಡಬಾರದೇಕೆ ಎಂಬ ಹಪಾಹಪಿ ಶುರುವಾಯಿತು. ಮಗನಿಗೆ 8 ತಿಂಗಳು ವಯಸ್ಸು. ಮಗುವನ್ನು ಮಲಗಿಸಿ, ಅಂಗಡಿಗೆ ಹೋಗಿ ಮೇಣದ ಬತ್ತಿಗಳನ್ನು ತಂದರು. ಬರಿಯ ಮೇಣ ಎಲ್ಲಿ ಸಿಗಬಹುದು ಎಂಬ ಮಾಹಿತಿಯೂ ರೂಪ ಅವರಿಗಿರಲಿಲ್ಲ.

ಅದನ್ನು ಕರಗಿಸಿ, ಅಂದಾಜಿನ ಮೇಲೆ ಒಲೆಗೆ ಹಳೆ ಪಾತ್ರೆ ಇಟ್ಟು, ತಮ್ಮ ಕಲ್ಪನೆಗೊಂದು ರೂಪ ನೀಡತೊಡಗಿದರು. ಆ ಬಿಳಿಯ ಮೇಣಕ್ಕೆ ಬಣ್ಣ ಬೆರೆಸುವ ಬಗೆ ಗೊತ್ತಾಗಲಿಲ್ಲ. ಆಗ ಮಕ್ಕಳು ಮನೆಯಲ್ಲೆಲ್ಲ ಗೀಚಿಟ್ಟ ಕ್ರೆಯಾನ್‌ಗಳು ನೆನಪಾದವು. ಅವು ಮೇಣದ ಉತ್ಪನ್ನಗಳಲ್ಲವೇ ಎಂದು ಎನಿಸಿದ್ದೇ ಆ ಬಣ್ಣಗಳನ್ನು ಮಿಶ್ರಣ ಮಾಡಿದರು.

ಅಂದುಕೊಂಡತೆ ಕಾಣಲಿಲ್ಲ... ಆದರೂ ಅಂದುಕೊಂಡ ಸ್ವರೂಪಕ್ಕೆ ಸಮೀಪವಾದ ಉತ್ಪನ್ನ ಕೈಯ್ಯಲ್ಲಿತ್ತು. ಅಲ್ಲಿಂದ ಆರಂಭವಾಗಿದ್ದು, ರೂಪಾ ಅವರ ಕನಸು. ಅವರೊಳಗಿನ ಕಲಾವಿದ ಅದಕ್ಕೆ ವಿವಿಧ ಬಣ್ಣಗಳನ್ನು ನೀಡತೊಡಗಿದ. ವಿವಿಧ ಆಕಾರ-ರೂಪಗಳನ್ನು ಸೃಷ್ಟಿಸತೊಡಗಿದರು.

2000ನೇ ಇಸವಿಯವರೆಗೂ ಮೇಣದ ಬತ್ತಿ ಎಂದರೆ ಕರೆಂಟ್ ಹೋದಾಗ ಉರಿಸಬೇಕು. ಇಲ್ಲವೇ ಹುಟ್ಟು ಹಬ್ಬಕ್ಕೆ ಅಥವಾ ಇನ್ನಾವುದೋ ಚಳವಳಿಗೆ ಎಂಬಂತೆ ಇತ್ತು.
ಬೆಂಗಳೂರಿನಲ್ಲಿ ಡಿಸೈನರ್‌ಮೇಣದ ಬತ್ತಿ ಕೇವಲ ಮಾಲ್‌ಗಳಲ್ಲಿ ಮಾತ್ರ ಸಿಗುತ್ತಿದ್ದವು.

ಅವೂ ಕೈಗೆಟುಕದ ಬೆಲೆಯಲ್ಲಿ. ಆದರೆ ರೂಪಾ ತಮಗೆ ಕೊಡುಗೆ ನೀಡಬೇಕಾದಲ್ಲೆಲ್ಲ ಇಂಥವೇ ಮೇಣದ ಬತ್ತಿಯನ್ನು ಮಾಡಿ ನೀಡಲಾರಂಭಿಸಿದರು. ಅವನ್ನು ಪಡೆದವರು ಮೆಚ್ಚಿದರು. ತಮಗೂ ಬೇಕೆಂದು ಬೇಡಿಕೆ ಇರಿಸಿದರು. ಸುಲಭ ಬೆಲೆಯಲ್ಲಿ ಆಕರ್ಷಕ ಕೊಡುಗೆಯಿಂದಾಗಿ ಬೇಡಿಕೆ ಹೆಚ್ಚಿತು. ಈ ನಡುವೆ ಇವರು ಸಿದ್ಧಪಡಿಸಿದ ಮೇಣದ ಬತ್ತಿಯನ್ನು ಕಂಡು `ಅವೇಕ್~ ಸಂಸ್ಥೆಯ ಉಮಾರೆಡ್ಡಿ ವಸ್ತು ಪ್ರದರ್ಶನ ಏರ್ಪಡಿಸಲು ಪ್ರೋತ್ಸಾಹಿಸಿದರು.

ಸಫೀನಾ ಪ್ಲಾಜಾದಿಂದ ಇವರ ಮೇಣದ ಬತ್ತಿಯ ಯಾತ್ರೆ ಆರಂಭವಾಯಿತು. ಈಗ ಆಸ್ಟ್ರೇಲಿಯಾ, ಮಲೇಷಿಯಾ, ಸಿಂಗಪುರ್, ಶ್ರೀಲಂಕಾ, ಯುರೋಪ್‌ಗಳಿಗೂ ಮೇಣದ ಬತ್ತಿಯನ್ನು ಪೂರೈಸುತ್ತಿದ್ದಾರೆ. ಮನೆಯೊಂದರಲ್ಲಿ ಕೇವಲ 600 ರೂ.ಗಳಿಂದ ಆರಂಭವಾದ ಈ ಹವ್ಯಾಸ ಇಂದು ಉದ್ಯಮವಾಗಿ ಬೆಳೆದಿದೆ. ಇದಕ್ಕೆ ಕಾರಣವಾಗಿರುವ `ಅವೇಕ್~ ಸಂಸ್ಥೆಯನ್ನು ಸ್ಮರಿಸುವ ರೂಪಾ ಅಲ್ಲಿಯೂ ಅಸಂಖ್ಯಾತ ತರಬೇತಿಗಳನ್ನು ನೀಡಿದ್ದಾರೆ.

ವಿಪ್ರೊ, ಇನ್ಫೋಸಿಸ್ ಉದ್ಯೋಗಿಗಳಿಗೂ ಮೇಣದ ಬತ್ತಿ ತರಬೇತಿ ನೀಡಿದ್ದಾರೆ. ಐಟಿ ಉದ್ಯೋಗಿಗಳು ಇಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಅವರು ಒತ್ತಡವನ್ನು ನಿರ್ವಹಿಸಬಹುದಾಗಿದೆ. ಮೇಣದ ಬತ್ತಿ ನಿರ್ಮಾಣ ಕೇವಲ ಬದುಕನ್ನು ಕಟ್ಟಿಕೊಡುವುದಿಲ್ಲ. ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಇದೇ ಕಾರಣಕ್ಕೆ ಹಲವಾರು  ಐಟಿ ಉದ್ಯಮಿಗಳು ತಮ್ಮ ಉದ್ಯೋಗಿಗಳಿಗೆ ಇಂಥ ಹವ್ಯಾಸ ಕಟ್ಟಿಕೊಡುವ ತರಬೇತಿಗಳನ್ನು ಏರ್ಪಡಿಸುತ್ತಾರೆ ಎಂದು ಹೇಳಿದರು ಅವರು.

ಸದ್ಯ ಮಹಿಳೆಯರಿಗಾಗಿ ಮೇಣದ ಬತ್ತಿ, ತಂಜಾವುರ್ ಪೇಂಟಿಂಗ್, ಕೃತಕ ಜಲಾಶಯ ನಿರ್ಮಾಣ ಮುಂತಾದವುಗಳ ತರಬೇತಿಯನ್ನು ರೂಪಾ ನೀಡುತ್ತಿದ್ದಾರೆ.

ಬಾಗೇಪಲ್ಲಿಯಲ್ಲಿ ತರಬೇತಿ ನೀಡಿದಾಗ ಅಲ್ಲಿಯ ಜನರು ತಮ್ಮ ಉತ್ಪನ್ನಗಳಿಗೆ ತಾವೇ ಸ್ಥಳೀಯ ಮಾರುಕಟ್ಟೆ ಸೃಷ್ಟಿಸಿಕೊಂಡರು. ಹೀಗೆ ಹಲವಾರು ಜನ ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲ ಕರೆ ಮಾಡಿದಾಗ ಖುಷಿಯಾಗುತ್ತದೆ.  

ನಮ್ಮಿಂದ ಸಾಧ್ಯವೋ... ಎಂದೆಲ್ಲ ಯೋಚಿಸುತ್ತ ಹಿಂಜರಿಯಬಾರದು.  ಕಷ್ಟಗಳು ಎಲ್ಲರಿಗೂ ಇರುತ್ತವೆ. ಕಷ್ಟವಿರದ, ಕಷ್ಟ ಪಡದೆ ಬದುಕುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಆ ಕಷ್ಟವನ್ನು ಸಂತೋಷದಿಂದಲೇ ಸ್ವೀಕರಿಸಬೇಕು. ಕಷ್ಟಗಳನ್ನು ಮರೆಯಬೇಕು.

ಮಹಿಳೆಯರನ್ನು ಹೀಗಳೆಯುವುದು, ಬಯ್ಯುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಅವರಲ್ಲಿಯ ಆತ್ಮವಿಶ್ವಾಸ ಕುಂದುತ್ತದೆ. ಆದರೆ ಎಲ್ಲ ಮಹಿಳೆಯರಲ್ಲಿಯೂ ಒಂದು ವಿಶೇಷ ಶಕ್ತಿ ಇರುತ್ತದೆ. ಇಂಥ ಸಮಸ್ಯೆಗಳನ್ನೆಲ್ಲ ಬದಿಗಿರಿಸಿ, ಆ ಶಕ್ತಿಯನ್ನು ಉದ್ದೀಪನಗೊಳಿಸುವತ್ತ ನಿರತರಾಗಬೇಕು. ಆಗ ಯಾರಾದರೂ ಮುಂದೆ ಬರುತ್ತಾರೆ. ಈ ಸತ್ಯವನ್ನು ಕಂಡುಕೊಂಡಿದ್ದು ಮೇಣದ ಬತ್ತಿಯನ್ನು ತಯಾರಿಸುವಾಗ. ಅದು ನನ್ನೊಳಗಿನ ಅಹಂಕಾರವನ್ನು ಸುಡುತ್ತಲೇ ನನ್ನೊಳಗಿನ ಬೆಳಕನ್ನೂ ನನಗೆ ನೀಡಿತು ಎನ್ನುತ್ತಾರೆ ರೂಪಾ.
 

ಮಾರ್ಚ್‌ನಲ್ಲಿ ತರಬೇತಿ
ಕಮರ್ಷಿಯಲ್ ರಸ್ತೆಯಲ್ಲಿರುವ ಕೃಷ್ಣವೇಣಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಇವರ ಆರ್ಟಿಸ್ಟಿಕ್ಸ್ ಸಂಸ್ಥೆಯಲ್ಲಿ ಹಾಗೂ ಆರ್.ಟಿ. ನಗರದಲ್ಲಿ ತರಬೇತಿಯನ್ನು ನೀಡಲಿದ್ದಾರೆ.
ಮೇಣದ ಬತ್ತಿ ತಯಾರಿಗೆ 1000 ರೂಪಾಯಿ ಶುಲ್ಕ ನಿಗದಿಗೊಳಿಸಿದ್ದಾರೆ. ತರಬೇತಿಗೆ ಅಗತ್ಯವಿರುವ ಎಲ್ಲ ಪರಿಕರಗಳನ್ನೂ ಅವರೇ ಒದಗಿಸಲಿದ್ದಾರೆ. ತರಬೇತಿ ಅವಧಿಯಲ್ಲಿ 10 ಬಗೆಯ ಮೇಣದ ಬತ್ತಿ ತಯಾರಿಕೆಯನ್ನು ಹೇಳಿಕೊಡುತ್ತಾರೆ. ಶಿಬಿರಾರ್ಥಿಗಳು ತಾವು ತಯಾರಿಸಿದ ಉತ್ಪನ್ನಗಳನ್ನು ತಾವೇ ಇರಿಸಿಕೊಳ್ಳಬಹುದಾಗಿದೆ.

ಇದಲ್ಲದೆ ಟೆರ‌್ರಾಕೋಟಾ ಜ್ಯುವೆಲ್ಲರಿ, ಕಾರಂಜಿ, ಪೇಂಟಿಂಗ್ ಮುಂತಾದವುಗಳ ತರಬೇತಿಯನ್ನೂ ನೀಡಲಿದ್ದಾರೆ. ತರಬೇತಿಯ ಸಮಯ ಬೆಳಿಗ್ಗೆ 10.30ರಿಂದ 5.30. ರ ನಡುವೆ.

ಆಸಕ್ತರು ಈ ಅವಧಿಯಲ್ಲಿ ಎರಡು ಗಂಟೆ ಸಮಯ ಮೀಸಲಿಟ್ಟರೆ ಸಾಕು. ಅದು ಅವರವರ ಅನುಕೂಲಕ್ಕೆ ಬಂದರೂ ಹೇಳಿಕೊಡಲಾಗುತ್ತದೆ ಎಂದು ರೂಪಾ ಹೇಳುತ್ತಾರೆ.
ಹೆಚ್ಚಿನ ಮಾಹಿತಿಗೆ 9740710359 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
 

ಚಿತ್ರಗಳು: ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT