ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೂದಿ ಬುಧವಾರ' ಬಂತಮ್ಮ...

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಇಂದು (ಫೆ.13) ಕ್ರೈಸ್ತರಿಗೆ ಸ್ಮರಣೀಯ ದಿನ. ಈ ದಿನವನ್ನು ಬೂದಿ ಬುಧವಾರ ಅಥವಾ `ಆಷ್ ವೆನ್ಸ್‌ಡೇ' ಎಂಬುದಾಗಿ ಕರೆಯುತ್ತಾರೆ. ಬೂದಿ ಎಂದರೆ ಬೆಂಕಿ ನಂದಿದ ಮೇಲೆ ಉಳಿಯುವ ಇಂಗಾಲ ವಸ್ತು ಅಲ್ಲವೇ? ಈ ಬೂದಿಗೂ ಬುಧವಾರಕ್ಕೂ ಏನು ನಂಟು? ಈ ದಿನದ ವಿಶೇಷವಾದರೂ ಏನು?

ಬೂದಿ ಬುಧವಾರವು ಕ್ರೈಸ್ತರ ತಪಸ್ಸು ಕಾಲ ಪ್ರಾರಂಭದ ದಿನ. ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೇಗೆ ಮುಂಚಿನ ನಲ್ವತ್ತು ದಿನ ಕ್ರೈಸ್ತರಿಗೆ ತಪಸ್ಸಿನ ದಿನಗಳು. ಈ ಬುಧವಾರವೆಂಬ ಬಾಗಿಲ ಮೂಲಕವೇ ತಪಸ್ಸು ಕಾಲಕ್ಕೆ ಪ್ರವೇಶ. ಇಂದಿನಿಂದ ಗುಡ್ ಫ್ರೈಡೇವರೆಗೂ ಕ್ರೈಸ್ತರು `ತ್ಯಾಗಜೀವನ' ನಡೆಸುತ್ತಾರೆ.

ಹಿಂದೆಲ್ಲ ಯೆಹೂದಿ ಸಂಸ್ಕೃತಿಯಲ್ಲಿ ಜನರು ತಮಗೆ ಕೆಡುಕು ಉಂಟಾದಾಗ ತಾವು ದೇವರಿಗೆ ವಿಮುಖರಾದ್ದರಿಂದಲೇ ಕಷ್ಟಕೋಟಲೆ ಅನುಭವಿಸಬೇಕಾಗಿ ಬಂತೆಂದು ಬಗೆದು ಪ್ರಾಯಶ್ಚಿತ್ತ ರೂಪವಾಗಿ ಮೈಗೆಲ್ಲ ಬೂದಿ ಬಳಿದುಕೊಂಡು, ಉತ್ತಮ ದುಕೂಲಗಳನ್ನು ತೊರೆದು ನಾರುಮಡಿಯುಟ್ಟು ತಪಶ್ಚರ್ಯೆ ಕೈಗೊಳ್ಳುತ್ತಿದ್ದರು. ಇಂದು ಕ್ರೈಸ್ತರು ಅದನ್ನೇ ಸಾಂಕೇತಿಕವಾಗಿ ಆಚರಿಸುತ್ತಾರೆ.

ಈ ದಿನ ಕ್ರೈಸ್ತ ಬಾಂಧವರೆಲ್ಲ ಚರ್ಚ್‌ಗೆ ತೆರಳಿ ದೇವರನ್ನು ಆರಾಧಿಸಿ ಗುರುಗಳ ಮುಂದೆ ಸಾಲಾಗಿ ನಿಲ್ಲುತ್ತಾರೆ. ಗುರುವರ್ಯರು ಬೂದಿ ಬಟ್ಟಲನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಚಿಟಿಕೆ ಬೂದಿ ತೆಗೆದು ಭಕ್ತಾದಿಗಳ ಹಣೆ ಮೇಲೆ ತಿಲಕದಂತೆ ಶಿಲುಬೆ ಗುರುತು ಹಾಕುತ್ತಾ ಮಣ್ಣಿಂದ ಬಂದ ಕಾಯವಿದು, ಮರಳಿ ಮಣ್ಣಿಗೇ ಸೇರುವುದು ಎಂದು ಉದ್ಘೋಷಿಸುತ್ತಾರೆ. ಆ ಸಂದರ್ಭದಲ್ಲಿ ಗಾನವೃಂದದವರು `ಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ‌್ವೆ ಮಣ್ಣಿಗೆ', `ಸುಳ್ಳು ಬೇಡ ಸತ್ಯ ಹಾದಿ ಹುಡುಕುವ', `ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವ...' ಎಂದು ಹಾಡುತ್ತಾರೆ.

ತಪಶ್ಚರ್ಯೆ ಎಂದರೆ ಹಿಂದಿನಂತೆ ವನವಾಸಕ್ಕೆ ತೆರಳಿ ಒಂಟಿ ಕಾಲಿನಲ್ಲಿ ನಿಂತು, ಪಂಚಾಗ್ನಿಯಲ್ಲಿ ಬೆಂದು ಮಂತ್ರ ಹೇಳುತ್ತಾ ತಪಸ್ಸು ಮಾಡಲು ಸಾಧ್ಯವೇ? ಇಂದಿನ ಕಾಲದ ಸಾಂಕೇತಿಕ ತಪಸ್ಸಿನ ರೀತಿಯೇ ಬೇರೆ. ಈ ದಿನಗಳಲ್ಲಿ ಜನ ದೈನಂದಿನ ಕೆಲಸಗಳನ್ನು ಕುಂದಿಲ್ಲದೆ ನಡೆಸುತ್ತಲೇ ವ್ಯಕ್ತಿಗತ ವಾಂಛೆಗಳನ್ನು ಬಿಟ್ಟು ಬಿಡುತ್ತಾರೆ. ಮನರಂಜನೆಯಿಂದ ದೂರಾಗುತ್ತಾರೆ, ಚಟಗಳನ್ನು ತೊರೆಯುತ್ತಾರೆ, ಮಾಂಸಾಹಾರ ವರ್ಜಿಸುತ್ತಾರೆ, ಪಾರ್ಟಿಗಳು ಔತಣಕೂಟಗಳು ಇಲ್ಲವಾಗುತ್ತವೆ, ಮದ್ಯಸೇವನೆ, ಧೂಮಪಾನ, ಸಿನಿಮಾ ಭೂರಿ ಭೋಜನದ ಬದಲಿಗೆ ಒಂದು ಹೊತ್ತು ಉಪವಾಸ ಇಲ್ಲವೇ ಸಪ್ಪೆ ಸಾರನ್ನವೇ ಪರಮಾನ್ನವಾಗುತ್ತದೆ. ಆಭರಣಗಳು ಪೆಟ್ಟಿಗೆ ಸೇರುತ್ತವೆ. ಬಟ್ಟೆಗಳಲ್ಲೂ ಸರಳತೆ ಕಾಣುತ್ತದೆ.


ಕಂದಾಚಾರ, ದರ್ಪ, ದಬ್ಬಾಳಿಕೆಗಳಲ್ಲಿ ಕಳೆದುಹೋಗಿದ್ದ ಮನುಷ್ಯತ್ವವನ್ನು ಎತ್ತಿಹಿಡಿಯಲು ಯೇಸುಕ್ರಿಸ್ತನು ಎಷ್ಟೆಲ್ಲ ಯಾತನೆ ಅನುಭವಿಸಿರುವಾಗ, ಅದರ ಸ್ಮರಣೆಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ.
ತಮಗೆ ತುಂಬಾ ಇಷ್ಟವಾದುದನ್ನು ತ್ಯಾಗ ಮಾಡುವುದೂ ಒಂದು ರೀತಿಯಲ್ಲಿ ತಪಸ್ಸೇ ಹೌದು. ಕೆಲವರು ಕುಡಿಯುವುದನ್ನು ಬಿಡುತ್ತಾರೆ. ಆದರೆ ಈಸ್ಟರ್ ಹಬ್ಬದಂದು ಈ 40 ದಿನಗಳದ್ದೆಲ್ಲವನ್ನೂ ಸೇರಿಸಿ ಒಟ್ಟಿಗೇ ಕುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT