ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮೋಹಿಯ ಸ್ವಗತ...

Last Updated 26 ಮೇ 2014, 19:30 IST
ಅಕ್ಷರ ಗಾತ್ರ

‘ನಾನು ಪ್ರತಿ ವರ್ಷ ಮೂರರಿಂದ ಆರು ತಿಂಗಳು ಬೆಂಗಳೂರಿನಲ್ಲಿರುತ್ತೇನೆ. ಸಣ್ಣ ವಯಸ್ಸಿನಿಂದಲೇ ಭಾರತವೆಂದರೆ ಏನೋ ವ್ಯಾಮೋಹ. ಆರೋ ಏಳೋ ವರ್ಷದವನಿದ್ದಾಗ ಇಲ್ಲಿ ಬಾಲಿವುಡ್‌ ಸಿನಿಮಾ ವೀಕ್ಷಿಸಿದ್ದು ಇನ್ನೂ ನೆನಪಿದೆ. ಆ ವಯಸ್ಸಿನ ಮಕ್ಕಳು ಡಿಸ್ನಿಯಂತಹ ಚಾನೆಲ್‌ ನೋಡ್ತಾ ಇದ್ದರೆ ನಾನು ಬಾಲಿವುಡ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಬಹುಶಃ ನನಗೆ ತಲೆಕೆಟ್ಟಿರಬೇಕೆಂದು ನನ್ನ ಅಪ್ಪ ಅಮ್ಮ ಯೋಚಿಸಿರಬಹುದು’ ಎಂದು ನಕ್ಕ ಆ ಯುವಕನ ಹೆಸರು ಕಾರ್ಲ್‌ ದ್ಮಿತ್ರಿ ಬಿಷಪ್‌.

ಛಾಯಾಗ್ರಾಹಕ ಕಮ್‌ ದೃಶ್ಯ ಕಲಾವಿದ (ವಿಷುವಲ್ ಆರ್ಟಿಸ್ಟ್‌) ಕಾರ್ಲ್‌. ಅವರೇ ಹೇಳಿಕೊಳ್ಳುವಂತೆ ಒಂದಷ್ಟು ಕಾಲ ಬೆಂಗಳೂರಿನಲ್ಲಿ ಕಾಲ ಕಳೆಯುವ ಕಾರ್ಲ್‌, ಉಳಿದ ಅವಧಿಯಲ್ಲಿ ತಮ್ಮ ತವರು ಕೇಂಬ್ರಿಡ್ಜ್‌ (ಯುಕೆ)ನಲ್ಲಿರುತ್ತಾರೆ. ಈ ಬಾರಿ ಮತ್ತೆ ಬೆಂಗಳೂರಿಗೆ ಬಂದಿರುವ ಕಾರ್ಲ್‌, ಭಾರತ ಮತ್ತು ಬೆಂಗಳೂರಿನ ಬಗ್ಗೆ ಬಾಯಿತುಂಬಾ ಮಾತನಾಡಿದರು.

‘ಭಾರತ ನನ್ನನ್ನು ಯಾವ ಪರಿ ಆವರಿಸಿಕೊಂಡುಬಿಟ್ಟಿತ್ತೆಂದರೆ ಭಾರತದ ಬಗ್ಗೆ ಸಿಕ್ಕ ಪುಸ್ತಕಗಳನ್ನೆಲ್ಲ ಓದಿದೆ. ಇಲ್ಲಿನ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿದೆ. ಕೊನೆಗೆ ಆಕ್ಸ್‌ಫರ್ಡ್‌ಗೆ ಹೋಗಿ ಹಿಂದುತ್ವದ ಬಗ್ಗೆ ಅಧ್ಯಯನ ನಡೆಸಿದೆ. ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ಸಲ ಭಾರತಕ್ಕೆ ಬಂದಿದ್ದೇನೆ. ಪ್ರತಿ ಭೇಟಿಯಲ್ಲಿಯೂ ಈ ನೆಲ, ಜನ ವಿಭಿನ್ನವಾಗಿ ಕಾಣುತ್ತಾರೆ. ಬೆಂಗಳೂರಿಗಂತೂ ನನ್ನ ಹೃದಯದಲ್ಲಿ ವಿಶಿಷ್ಟ ಸ್ಥಾನವಿದೆ. ಮೊದಲ ಬಾರಿ ಈ ದೇಶಕ್ಕೆ ಬಂದಾಗ ನನ್ನ ಸ್ನೇಹಿತ ಬೆಂಗಳೂರಿಗೆ ಬರಲು ಒನ್‌ ವೇ ಟಿಕೆಟ್‌ ಕೊಟ್ಟು ಶಾಕ್‌ ನೀಡಿದ. ಹಾಗೆ ನಾನು ಬೆಂಗಳೂರಿಗೆ ಅನಿರೀಕ್ಷಿತವಾಗಿ ಬಂದೆ.

ನನಗಿನ್ನೂ ನೆನಪಿದೆ; ಹಾಗೆ ಬಂದ ನಾನು ಆಟೊರಿಕ್ಷಾವೊಂದರಲ್ಲಿ ಕುಳಿತು ಹೋಟೆಲ್‌ ಹುಡುಕಿಕೊಂಡು ನಗರ ಪ್ರದಕ್ಷಿಣೆ ಹಾಕುತ್ತಿದ್ದೆ. ಆಗ ಒಂದು ಬಗೆಯ ಘಮಲು ನನ್ನನ್ನು ಆವರಿಸುತ್ತಿತ್ತು. ಅದು ಈ ನೆಲದ ಘಮಲು! ನನ್ನನ್ನು ಕಾಡಿದ್ದು, ಆವರಿಸಿಕೊಂಡದ್ದು ಅದುವೇ! ಈ ನೆಲದಲ್ಲೇನೋ ವಿಶೇಷವಿದೆ ಎಂದು ಆಗಲೇ ಅರ್ಥವಾಯಿತು. ನೀವು ಎಲ್ಲಿಂದ ಬಂದಿರಿ ಮತ್ತು ನೀವು ಯಾರು ಎನ್ನುವುದನ್ನು ಪರಿಗಣಿಸದೆ ಬರಸೆಳೆದುಕೊಳ್ಳುವ ಗುಣ ಬೆಂಗಳೂರಿಗೆ ಇದೆ. ಹಾಗೆ ನಾನೂ ಬೆಂಗಳೂರಿಗನಾಗಿ ಹೋದೆ! (ಐ ವಾಸ್‌ ‘ಬ್ಯಾಂಗಲೋರ್ಡ್‌’. ಆ ಪದ ಆಕ್ಸ್‌ಫರ್ಡ್‌ ಡಿಕ್ಷನರಿಯಲ್ಲಿದೆ ಗೊತ್ತಾ?)

ನನಗಿಲ್ಲಿ ಬಹಳ ಕೆಟ್ಟ ಅನುಭವವೇನೂ ಆಗಿಲ್ಲ. ಆದರೂ ಕೆಲವನ್ನು ಮರೆಯಲೂ ಆಗುವುದಿಲ್ಲ. ಒಂದು, ಮೊಸಳೆಗಳಿದ್ದ ಕೆರೆಯಲ್ಲಿ ಈಜಲು ಬಿಟ್ಟಿದ್ದು, ಮತ್ತೊಂದು ಕೆಲವು ಆಟೊ ಚಾಲಕರು ನಾನು ಹೋಗಬೇಕಿದ್ದ ಸ್ಥಳಕ್ಕೆ ಕರೆದೊಯ್ಯುವ ಬದಲು ತಮ್ಮ ‘ವಿದೇಶಿ  ಗೆಳೆಯ’ನನ್ನು ಪರಿಚಯ ಮಾಡಿಕೊಡಲೆಂದು ತಮ್ಮ ಮನೆಗೆ ಕರೆದೊಯ್ದದ್ದು...

ಮತ್ತೊಂದು ಸಂದರ್ಭ... ನಾನು ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಇಲ್ಲೇ ಸಮೀಪದ ಕಾಡಿಗೆ ಹೋಗಿದ್ದೆ. ರಾತ್ರಿಯಾಗಿತ್ತು. ವಿರಮಿಸಲೆಂದು ಕುಳಿತಿದ್ದೆವು. ಯಾವುದೋ– ಗುರುತಿಸಲಾಗದ– ಪ್ರಾಣಿ ನಮ್ಮನ್ನು ಯಮವೇಗದಲ್ಲಿ ಅಟ್ಟಿಸಿಕೊಂಡು ಬಂತು. ಅವನ ಬೈಕ್‌ನಲ್ಲಿ ಕುಳಿತು ಬಚಾವಾಗಲು ಹವಣಿಸಿದೆ. ನನ್ನ ದುರಾದೃಷ್ಟಕ್ಕೆ ಆ ಬೈಕ್‌ನ ಹೆಡ್‌ಲೈಟ್‌ ಕೆಟ್ಟಿತ್ತು. ಭಯಂಕರ ಕತ್ತಲು. ಅಯ್ಯೋ ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ಹೇಗೋ ಬಚಾವಾದೆ. ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ಅಂದಿನ ಸ್ಥಿತಿ.. ಅಬ್ಬಾ...

ನನ್ನ ಪಾಲಿಗೆ ನನ್ನೂರು ಕೇಂಬ್ರಿಡ್ಜ್‌ನಷ್ಟೇ ಬೆಂಗಳೂರು ಆಪ್ಯಾಯಮಾನ. ಆದರೆ ಈ ಎರಡೂ ನಗರಗಳನ್ನೂ ನಾನು ನೋಡುವ ದೃಷ್ಟಿಕೋನ ಬೇರೆ ಬೇರೆ ಅನ್ನುವುದನ್ನು ನಾನು ಹೇಳಲೇಬೇಕು. ನನಗೆ ಎರಡೂ ಕಡೆ ಬೆಸ್ಟ್‌ ಫ್ರೆಂಡ್ಸ್‌ ಇದ್ದಾರೆ. ಆದರೆ ಇಲ್ಲಿರುವ ಸ್ನೇಹಿತರು ನೋಡಿದ ಸಿನಿಮಾ, ವೀಕ್ಷಿಸಿದ ಸ್ಥಳ, ತಮಾಷೆ, ಮೋಜು, ಕುಡಿತ ಹೀಗೆ ಯಾವುದೇ ವಿಷಯವನ್ನಾಗಲಿ ಮುಕ್ತವಾಗಿ ಚರ್ಚಿಸುತ್ತಾರೆ... ನನ್ನಂತೆಯೇ! ಇದು ಆರಂಭದಲ್ಲಿ ನನಗೆ ನಂಬಲು ಆಗಲಿಲ್ಲ.

ಬಾಲಿವುಡ್‌ ಸಿನಿಮಾದಷ್ಟೇ ಹಿಮಾಲಯ, ಹಿಂದುತ್ವ, ಹಿಂದು ದೇವಾಲಯಗಳೂ ನನಗೆ ಅಚ್ಚುಮೆಚ್ಚು ಆಗಿವೆ. ಒಬ್ಬ ವಿಷುವಲ್‌ ಆರ್ಟಿಸ್ಟ್‌ ಆಗಿ ಭಾರತ ನನಗೆ ಬಹಳ ಹಿಡಿಸಿದೆ. ನನ್ನ ಚಿತ್ರಕಲೆ ವ್ಯಕ್ತಿಯ ಮೂಲವನ್ನು ಕೆದಕುವಂತಿರುತ್ತದೆ. ನಿನ್ನೆ ನಾನು ಏನಾಗಿದ್ದೆ, ಎಲ್ಲಿದ್ದೆ, ಎಲ್ಲಿಂದ ಬಂದೆ ಇತ್ಯಾದಿ ಎಲ್ಲ ವರ್ತಮಾನ ನನ್ನ ಮುಂದೆ ಮುಖ್ಯವಾಗುವುದಿಲ್ಲ. ನನ್ನ ಪ್ರಕಾರ ಇಂದು ನಾನೇನು ಅನ್ನೋದಷ್ಟೇ ಮುಖ್ಯವಾಗುತ್ತದೆ.

ಬೆಂಗಳೂರಿನ ಗಾಳಿ, ಬೆಳಕು, ಕಿಟಕಿಯಿಂದ ತೂರಿಬರುವ ದಿನದ ಪ್ರಥಮ ಸೂರ್ಯಕಿರಣ, ಚಾಯ್‌ವಾಲಾ... ಹೀಗೆ ಬೆಂಗಳೂರಿನ ಪ್ರತಿಯೊಂದೂ ನನ್ನ ಬೆಂಗಳೂರಿನೊಳಗೆ ಆವಾಹಿಸಿಕೊಳ್ಳುತ್ತದೆ. ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ...’
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT