ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರ್‌ ಟು ಬಾರ್ಡರ್‌...

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ತರಬೇತಿಯ ತಾಕತ್ತು ತುಂಬಿದೆ ನಮ್ಮ ಬೆಂಗಳೂರು. ಇಂತಹ ಸೈನಿಕ ತರಬೇತಿ ಕೆಂದ್ರಗಳಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್ ಟ್ರೈನಿಂಗ್‌ ಸೆಂಟರ್‌ (ಪಿಆರ್‌ಟಿಸಿ) ಕೂಡಾ ಒಂದು. ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಮೊದಲು ದೃಷ್ಟಿ ನೆಟ್ಟಿದ್ದು ತರಬೇತಿ ನಿರತರಾಗಿದ್ದ ಚಿಗುರು ಮೀಸೆ ಮೂಡುತ್ತಿರುವ ಯುವಕರ ಮೇಲೆ. ಆರ್ಮಿ ದಿರಿಸು, ಕೈಯಲ್ಲೊಂದು ಎಸ್‌ಎಲ್‌ಆರ್‌ (ರೈಫಲ್), ಕಣ್ಣಲ್ಲಿ ದಿಟ್ಟ ಗುರಿ, ತರಬೇತಿಗೊಬ್ಬ ಖಡಕ್‌ ಕ್ಯಾಪ್ಟನ್‌.

ಇತ್ತೀಚೆಗೆ ದೇಶದಲ್ಲಿ ಸುದ್ದಿಯಾಗಿದ್ದ ಸರ್ಜಿಕಲ್‌ ಸ್ಟ್ರೈಕ್‌ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಈ ಪ್ಯಾರಾಚೂಟ್‌ ರೆಜಿಮೆಂಟ್‌ನ ಯೋಧರು. ನೂರಾರು ಅಡಿಗಳ ಎತ್ತರದಿಂದ ಸೈನಿಕರನ್ನು ಶತ್ರು ನೆಲೆಗಳ ಮೇಲೆ ಪ್ಯಾರಾಚೂಟ್‌ ಸಹಾಯದಿಂದ ಇಳಿಸಿ ಶತ್ರುಗಳನ್ನು ಮಟ್ಟ ಹಾಕುವುದು ಈ ಸೈನಿಕರ ಕೆಲಸ.

ಹಲವು ನಿರ್ಣಾಯಕ ಯುದ್ಧಗಳ ಗೆಲುವಿನಲ್ಲಿ ಈ ಪ್ಯಾರಚೂಟ್‌ ರೆಜಿಮೆಂಟಿನ ಸೈನಿಕರ ಪಾತ್ರ ಶ್ಲಾಘನೀಯವಾಗಿದೆ. ಸೈನ್ಯಕ್ಕೆ ಇಂತಹ ದೈತ್ಯ ಶಕ್ತಿ ನೀಡುವ ಸೈನಿಕರು ತಯಾರಾಗುವುದೇ ನಮ್ಮ ಈ ಬೆಂಗಳೂರು ನೆಲದಲ್ಲಿ ಎನ್ನುವುದು ಹೆಮ್ಮೆಯ ವಿಷಯ. ಈ ತರಬೇತಿ ಕೇಂದ್ರದಲ್ಲಿ ವರ್ಷಕ್ಕೆ ಸುಮಾರು 700 ಸೈನಿಕರಿಗೆ ತರಬೇತಿ ನೀಡಲಾಗುತ್ತದೆ.

ಹೇಗಿರುತ್ತದೆ ತರಬೇತಿ?
ಪ್ಯಾರಾಚೂಟ್‌ ರೆಜಿಮೆಂಟ್ ಹೆಸರೇ ಹೇಳುವಂತೆ ಇದು ಆಕಾಶ ಭೂಮಿ ನಡುವಿನಲ್ಲಿ ನಡೆಯುವ ಆಟವಾಗಿದೆ. ಇಲ್ಲಿ ಸೇವೆ ಸಲ್ಲಿಸಲು ಬರುವವರ ಮಾನಸಿಕ, ದೈಹಿಕ ಸಾಮರ್ಥ್ಯ ಗಟ್ಟಿಯಾಗಿರಬೇಕು. ಸೈನ್ಯದ ವಿವಿಧ ಪ್ಯಾರಾಚೂಟ್‌ ರೆಜಿಮೆಂಟ್‌ಗಳ ಅಗತ್ಯಕ್ಕೆ ಬೇಕಾಗುವ ಸೈನಿಕರನ್ನು ರೂಪುಗೊಳಿಸುವ ಕಾರ್ಯ ಇಲ್ಲಿ ನಡೆಯುತ್ತದೆ.

ಇಲ್ಲಿ ಬರುವ ಸೈನಿಕನಿಗೆ ಆರಂಭದಲ್ಲಿ ಎತ್ತರದ ಭಯವಿರದಂತೆ ಸಿದ್ಧಗೊಳಿಸುತ್ತಾರೆ. ಅದಕ್ಕಾಗಿ ಮೂವತ್ತು ಅಡಿ ಎತ್ತರದ ಕಂಬಗಳ ಮೇಲೆ ನಡೆದಾಡಿಸಿ ಅವರಲ್ಲಿನ ಎತ್ತರದ ಬಗೆಗಿನ ಭಯವನ್ನು ಹೋಗಲಾಡಿಸುತ್ತಾರೆ. ನಂತರ ಉಳಿದ ಸೈನಿಕರ ತರಬೇತಿಯಂತೆ ಹಗ್ಗದ ಮೇಲೆ ಹತ್ತುವುದು –ಇಳಿಯುವುದು, ಪುಲ್‌ಅಪ್ಸ್‌, ಓಟ, ಹೈಜಂಪ್ ಹಾಗೂ ಇತ್ಯಾದಿಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ.

ಪ್ಯಾರಾಚೂಟ್‌ ಹಾರಾಟಕ್ಕೆ ಬೇಕಾಗುವ ಮೂಲ ತರಬೇತಿಯಾದ ವಿಮಾನ ಅಥವಾ ಹೆಲಿಕಾಪ್ಟರ್‌ಗಳಿಂದ ಜಿಗಿಯುವಾಗ ಅನುಸರಿಸಬೇಕಾದ ತಂತ್ರಗಳನ್ನು ಕಲಿಸಲಾಗುತ್ತದೆ. ಇದಕ್ಕೆ ವಿಶೇಷವಾದ ಎತ್ತರದ ಟವರ್‌ಗಳನ್ನು ನಿರ್ಮಿಸಿ ಅಲ್ಲಿಂದ ತಂತಿಯ ಸಹಾಯದಿಂದ ಕೆಳಗೆ ಬಿಡಲಾಗುತ್ತದೆ. ಈ ರೀತಿ ಸಂಪೂರ್ಣ ಕಲಿತ ನಂತರ ಅವರನ್ನು ಕೆಲ ದಿನಗಳ ತರಬೇತಿಗಾಗಿ ಆಗ್ರಾಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರಿಗೆ ಮೊದಲ ಸಲ ವಿಮಾನದಿಂದ ಸಾವಿರಾರು ಅಡಿಯಿಂದ ಜಿಗಿಯುವ ತರಬೇತಿ ನೀಡಲಾಗುತ್ತದೆ.

ಒಬ್ಬ ಪ್ಯಾರಾಚೂಟ್‌ ಜಂಪರ್‌ ಮೊದಲ ಜಿಗಿತವನ್ನು 1200 ಅಡಿಗಳಿಂದ ಆರಂಭಿಸುತ್ತಾನೆ. ಸಾಧಾರಣವಾಗಿ ವಾಯುಸೇನೆಯ ಸರಕು ವಿಮಾನ ಎಎನ್‌–32ನಿಂದ ಜಿಗಿಯುತ್ತಾರೆ. ಈ ಆರಂಭಿಕ ತರಬೇತಿ ನಂತರ ಬೆಂಗಳೂರಿನಿಂದ ಇನ್ನೂರು ಕಿಲೋಮೀಟರ್‌ ದೂರದ ಸ್ಥಳದಲ್ಲಿ ಯುದ್ಧ ಸಂದರ್ಭದಲ್ಲಿ ಜಿಗಿಯುವ ಎತ್ತರವಾದ 700–800ಅಡಿಯ ಜಿಗಿತವನ್ನು ಕಲಿಸಲಾಗುತ್ತದೆ.

ಇಡೀ ವಿಶ್ವದಲ್ಲೇ ಅತ್ಯಂತ ಪ್ರಭಾವಶಾಲಿ ಪ್ಯಾರಾಚೂಟ್‌ ರೆಜಿಮೆಂಟ್ ಎಂಬ ಹೆಗ್ಗಳಿಕೆಯ ಭಾರತದ ಈ ಯೋಧರು ತಯಾರುಗುವುದು ನಮ್ಮ ಹೆಮ್ಮೆಯ ಬೆಂಗಳೂರಿನ ನೆಲದಲ್ಲಿ ಎಂಬುದು ಬಹಳ ಸಂತೋಷದ ವಿಷಯ.

*
ಭಾರತ ಸೈನ್ಯದಲ್ಲಿ ಅತ್ಯಂತ ಅಪಾಯಕಾರಿ ಸೇನಾ ಕಾರ್ಯಾಚರಣೆಗಳನ್ನು ಮಾಡುವ ವಿಭಾಗ ಈ ಪ್ಯಾರಾಚೂಟ್‌ ರೆಜಿಮೆಂಟ್‌. ಇಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕ ಮಾನಸಿಕ ಹಾಗೂ ದೈಹಿಕವಾಗಿ ಅತ್ಯಂತ ಸದೃಢವಾಗಿರಬೇಕು. ನಮ್ಮ ಪಿಆರ್‌ಟಿಸಿ ತರಬೇತಿ ಕೇಂದ್ರದಲ್ಲಿ ನೀಡುವ ಕಠಿಣ ತರಬೇತಿ ಸಾಮಾನ್ಯ ಸೈನಿಕನೊಬ್ಬನನ್ನು ಪೂರ್ಣ ಯೋಧನಾಗಿ ಮಾರ್ಪಾಟು ಮಾಡುತ್ತದೆ.
–ಬ್ರಿಗೇಡಿಯರ್‌ ವಿಕಾಸ್‌ ಸೈನಿ,
ಕಮಾಂಡೆಂಟ್‌ ಪಿಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT