ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಡಬ್ಬ ಅಬ್ಬಬ್ಬಾ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪ್ರತಿದಿನವೂ ಊಟದ ಬುತ್ತಿ ಕಟ್ಟುವುದೇ ಉದ್ಯೋಗಸ್ಥ ಮಹಿಳೆಯರಿಗೆ ಸವಾಲು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಕುರುಕಲು ಇದಿಷ್ಟೂ ಬುತ್ತಿಯಲ್ಲಿರಬೇಕು. ಶಾಲೆಗೆ ಹೋಗುವ ಮಕ್ಕಳಿಗೆ ಬಾಯಿರುಚಿಗೆ ಕೊಡಬೇಕೋ ಸ್ವಾಸ್ಥ್ಯಕ್ಕೆ ಕೊಡಬೇಕೋ ಎಂಬುದೇ ಪ್ರಶ್ನೆಯಾಗಿದೆ.

`ಅಮ್ಮಾ, ಊಟದ ಡಬ್ಬಿಗೇನು?~ ಸಂಜೆ ಮಗಳು ಕೇಳಿದರೆ ಮರುದಿನದ ಚಿಂತೆಯೆಂದೇ ಹೇಳಬೇಕು. ಎಂಟು ಗಂಟೆಗೇ ವ್ಯಾನು ಹತ್ತುವ ಹುಡುಗಿಗೆ ಬೆಳಗಿನ ಗುಟುಕು ಹಾಲು ಶಾಲೆ ಮುಟ್ಟುವವರೆಗೂ ಆಸರೆಯಾಗಿರುತ್ತದೆ. ಬೆಳಗಿನ ತಿಂಡಿಗೆ ಡಬ್ಬದಲ್ಲಿಟ್ಟ ಸಾಸ್ ಸವರಿದ ದೋಸೆಯ ರೋಲ್ ತಿನ್ನುತ್ತದೆ ಮಗು.

ಮಧ್ಯಾಹ್ನಕ್ಕೆ ಚಿತ್ರಾನ್ನ. ಸಂಜೆ ಮನೆಗೆ ಮರಳುವ ಮುನ್ನ ಮತ್ತೆ ವ್ಯಾನಿನಲ್ಲಿ ಚಿಪ್ಸು, ಕುರ್ಕುರೆ ಇನ್ನೇನೋ ತಿನ್ನುವುದು ಸಾಮಾನ್ಯ. ದಿನಚರಿಯಲ್ಲಿ ಬದಲಾಗುವುದು ಚಿತ್ರಾನ್ನದ ಜಾಗದಲ್ಲಿ ಪಲಾವ್, ಪೊಂಗಲ್, ಮೊಸರನ್ನ. ಅನ್ನ ಮಾತ್ರ ಸ್ಥಿರ, ಒಗ್ಗರಣೆಗಳಷ್ಟೇ ಬೇರೆ.

ಇಂಥ ಊಟದಿಂದ ಪೌಷ್ಟಿಕಾಂಶ ದೊರೆಯುತ್ತದೆಯೇ? ಇನ್ನು ಕೆಲವು ಮಕ್ಕಳು ಅಪ್ಪ ಅಮ್ಮನ ಬಳಿ 35ರಿಂದ 50 ರೂಪಾಯಿ ಇಸಿದುಕೊಂಡು ಶಾಲೆಯಲ್ಲಿಯೇ ಊಟ ಮಾಡುವ ಪರಿಪಾಠ ಬೆಳೆಸಿಕೊಳ್ಳುತ್ತಿದ್ದಾರೆ. ಶಾಲಾ ಕ್ಯಾಂಟೀನುಗಳಲ್ಲಿ ದೊರೆಯುವ ಸ್ಯಾಂಡ್‌ವಿಚ್, ನೂಡಲ್ಸ್, ಬರ್ಗರ್ ಇವರ ಇಷ್ಟದ ತಿನಿಸುಗಳು.

ಇವಲ್ಲದೆ, ವೆಜ್, ಎಗ್, ಚಿಕನ್ ಪಫ್ ಹಾಗೂ ರೋಲ್‌ಗಳು ದೊರೆಯುವುದು ಸರ್ವೇ ಸಾಮಾನ್ಯವಾಗಿದೆ.ಮಕ್ಕಳನ್ನು ದೂರುವುದು ಬಿಟ್ಟುಬಿಡಿ, ಮಕ್ಕಳನ್ನು ಕರೆಯಲು ಬರುವ ಪಾಲಕರೇ ಕೆಲವೊಮ್ಮೆ ಮನೆಗೆ ಸಹ ತಿಂಡಿಯನ್ನು ಕೊಂಡೊಯ್ಯುತ್ತಾರೆ ಎನ್ನುತ್ತಾರೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕ್ಯಾಂಟಿನ್ ನಿರ್ವಹಿಸುವ ರಾಮಕುಮಾರ್.

ಶಾಲೆ ದೂರವಿರುವುದೇ ಕಾರಣ
ಮೊದಲೆಲ್ಲ ಊಟದ ಬುತ್ತಿ ಕಟ್ಟಲಾಗದಿದ್ದರೆ ಮನೆಗೆ ಬಂದು ಊಟ ಮಾಡುವಷ್ಟು ಸಮೀಪದಲ್ಲಿ ಶಾಲೆಗಳಿರುತ್ತಿದ್ದವು. ಹತ್ತೂವರೆಗೆ ಶಾಲೆಯಿದ್ದರೆ, 10 ಗಂಟೆಗೆ ಮನೆಯಿಂದ ಹೊರಟರೂ ಮಕ್ಕಳು ಶಾಲೆಯಲ್ಲಿ ಆಟವಾಡುವಷ್ಟು ಸಮಯ ಸಿಗುತ್ತಿತ್ತು. ಈಗ ನಗರದ ಎಷ್ಟೋ ಕಡೆಗಳಲ್ಲಿ ಶಾಲೆ ಹಾಗೂ ಮನೆಗೆ ಇರುವ ದೂರವೇ ಹೆಚ್ಚಾಗಿದೆ.

ಶಾಲೆ ಆರಂಭವಾಗುವ ಎರಡು ಗಂಟೆ ಮೊದಲೇ ಮನೆಯಿಂದ ಹೊರಡುವುದು ಅನಿವಾರ್ಯ. ಅವರು ಹೊರಡುವ ಹೊತ್ತಿಗೆ ಊಟ ತಯಾರಿಸುವುದು ಕಷ್ಟ. ತಯಾರಿಸಿದರೂ ಮಧ್ಯಾಹ್ನದ ಹೊತ್ತಿಗೆ ಅದೆಲ್ಲವೂ ಆರಿ ತಣಿಯುವುದಿರಂದ ಊಟ ಮಾಡಲಾಗುವುದಿಲ್ಲ. ಊಟದ ಡಬ್ಬಿ ಹಾಗೇ ವಾಪಾಸು ಆಗಿರುತ್ತದೆ. ಅದರ ಬದಲು ಏನಾದರೂ ಸರಿ ತಿಂದರೆ ಸಾಕು ಎನ್ನುವ ಮನಃಸ್ಥಿತಿ ಪಾಲಕರದ್ದು. ಹಾಗಾಗಿಯೇ ಪೇಸ್ಟ್ರೀ, ಕೇಕ್, ಮೌಸೆಸ್, ಚಿಪ್ಸುಗಳ ಮಾರಾಟ ಜೋರಾಗಿದೆ.

ಪರಿಹಾರ
ಕೆಲವು ಶಾಲೆಗಳ ಆಡಳಿತ ಮಂಡಳಿಗಳು ಇಂಥ ತಿನಿಸಿಗೆ ನಿರ್ಬಂಧ ಹೇರಿವೆ. ನಾಲ್ಕು ಕಿ.ಮೀ. ವ್ಯಾಪ್ತಿಗಿಂತ ಮನೆ ದೂರವಿದ್ದರೆ, ಅಂಥ ಮಕ್ಕಳಿಗೆ ಶಾಲೆಯಲ್ಲಿಯೇ ಊಟ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಅದು ಪಾಲಕರ ಜೇಬಿಗೆ ಕತ್ತರಿಯಂತೆ ಕಾಣುತ್ತದೆ. ಇದಕ್ಕೆ ಎಲ್ಲ ಪಾಲಕರೂ ಒಪ್ಪುತ್ತಿಲ್ಲ. ಇನ್ನೊಂದು ಗಮನಾರ್ಹ ಅಂಶವೆಂದರೆ ಈ ಕ್ಯಾಂಟೀನುಗಳನ್ನೆಲ್ಲ ಉತ್ತರ ಭಾರತೀಯರು ನಿರ್ವಹಿಸುವುದರಿಂದ ಫುಲ್ಕಾ, ಸಬ್ಜಿ, ಪಲಾವ್ ತಿನ್ನುವುದನ್ನು ಕಲಿಯುತ್ತಿದ್ದಾರೆ.

ಪರಿಣಾಮ
ಶಾಲೆಯಲ್ಲಿ ಊಟ ನೀಡುವುದರಿಂದ ತುಸು ನಿರಾಳವೆನಿಸಬಹುದು. ಆದರೆ ದಕ್ಷಿಣ ಭಾರತೀಯ ಊಟವನ್ನೂ ಮೆನುವಿನಲ್ಲಿ ಸೇರ್ಪಡೆಗೊಳಿಸುವುದು ಒಳಿತು ಎನ್ನುವುದು ಪಾಲಕರ ಸಲಹೆಯಾಗಿದೆ. ವಾಂಗಿಭಾತ್, ಬಿಸಿಬೇಳೆಭಾತ್ ಮುಂತಾದ ಭಾತ್‌ಗಳ ಸಂಸ್ಕೃತಿಯೇ ಕರಗಿ ಹೋಗುತ್ತದೆ. ಚಪಾತಿ, ರೊಟ್ಟಿ ತಿನ್ನುವುದನ್ನು ಕಲಿಸುವುದು ಹೇಗೆ?

ರೊಟ್ಟಿ ಅಂದರೆ ಈ ಮಕ್ಕಳಿಗೆ ಜೋಳದ ರೊಟ್ಟಿಯೂ ಬೇಡ, ಅಕ್ಕಿ, ರಾಗಿ ರೊಟ್ಟಿಯೂ ಬೇಡ. ತಂದೂರಿ ರೋಟಿ ಮಾತ್ರ ಗೊತ್ತು. ಆಹಾರ ಸಂಸ್ಕೃತಿ ಮನೆಯಿಂದಲೇ ಪರಿಚಯವಾಗಬೇಕು. ಆದರೀಗ ಅದಕ್ಕೆ ಆಸ್ಪದವೇ ಇಲ್ಲದಂತಾಗಿದೆ ಎನ್ನುವುದು ಆರಿಂಕೊ ಶಾಲೆಯಲ್ಲಿ ಬೋಧಕಿಯಾಗಿರುವ ಶಿವಲೀಲಾ ತಿಳಿ ಅವರ ಅಭಿಪ್ರಾಯವಾಗಿದೆ.

ಒಂದು ಒಮ್ಮತದ ಆಹಾರ ಅಭ್ಯಾಸ ಅಷ್ಟು ಸರಳವೂ ಅಲ್ಲ, ಸುಲಭವೂ ಅಲ್ಲ. ವಾರದ ಒಂದೊಂದು ದಿನ ಒಂದೊಂದು ಬಗೆಯ ಆಹಾರ ಪದ್ಧತಿಗೆ ಮೀಸಲು ಎಂಬ ನಿಯಮವನ್ನು ಎಲ್ಲರೂ ಒಪ್ಪುವುದಿಲ್ಲ. ಎಲ್ಲರಿಗೂ ಅನುಕೂಲವಾಗುವ ಮೆನು ಸಿದ್ಧಪಡಿಸುವುದು ಕಷ್ಟಕರ ಎನ್ನುತ್ತಾರೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕ್ಯಾಂಟೀನ್ ನಿರ್ವಹಿಸುತ್ತಿರುವ ಪಳನಿ.

ಪ್ರತಿಷ್ಠಿತ ಶಾಲೆಯಲ್ಲಿ ಕ್ಯಾಂಟೀನ್ ನಿರ್ವಹಿಸುತ್ತಿರುವವರು ಯಾವುದೇ ವಿವರಗಳನ್ನು ಹೇಳಲು ಇಷ್ಟಪಡುವುದಿಲ್ಲ. `ಪಫ್, ಡೋನಟ್, ಬರ್ಗರ್, ಪಿಜ್ಜಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಈ ಬಗ್ಗೆ ನಮ್ಮ ಹೆಸರನ್ನು ಬರೆಯಬೇಡಿ, ಗುತ್ತಿಗೆ ಕಳೆದುಕೊಳ್ಳುತ್ತೇವೆ~ ಎಂದು ತಮ್ಮ ಆತಂಕವನ್ನು ತೋಡಿಕೊಳ್ಳುತ್ತಾರೆ.

ಶಾಲೆಯಲ್ಲಿ ಊಟದ ಡಬ್ಬದೊಳಗೇನಿದೆ? ಒಮ್ಮೆ ತೆರೆದು ನೋಡಿ, ನಮ್ಮ ಆಹಾರ ವೈವಿಧ್ಯವೇ ಅಥವಾ ಮಕ್ಕಳ ಆರೋಗ್ಯಕ್ಕೆ ಮಾರಕವಾಗಲಿರುವ ಜಂಕ್ ಫುಡ್ ಇದೆಯೇ?

ಉತ್ತರ ಪ್ರದೇಶದ ಕೇಂದ್ರೀಯ ವಿದ್ಯಾಲಯಗಳಲ್ಲಿರುವ ಕ್ಯಾಂಟೀನುಗಳಲ್ಲಿ ಜಂಕ್ ಫುಡ್ ಮಾರುವಂತಿಲ್ಲ ಎಂಬ ನಿಯಮವನ್ನು ಈಚೆಗೆ ಕಡ್ಡಾಯಗೊಳಿಸಲಾಗಿದೆ. ಆ ವ್ಯವಸ್ಥೆಯನ್ನು ಎಲ್ಲ ಶಾಲಾ ಆಡಳಿತ ಮಂಡಳಿಗಳೂ ಒಪ್ಪಿಕೊಂಡಲ್ಲಿ, ಬಾಲ್ಯದ ಬೊಜ್ಜು, ಮಧುಮೇಹವನ್ನು ತಡೆಯಬಹುದು.

ವೈದ್ಯರು ಹೀಗಂತಾರೆ...
ಷಡ್ರಸಗಳಿರುವ ಆಹಾರ ಉತ್ತಮವಾದುದು. ವೈವಿಧ್ಯಮಯ ಸಾಂಪ್ರದಾಯಿಕ ಆಹಾರ ನೀಡುವುದರಿಂದ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯಾಗುತ್ತದೆ. ಈ ಹಿಂದೆ ಊಟದ ತಟ್ಟೆಯಲ್ಲಿ ಕಾಣಸಿಗುತ್ತಿದ್ದ ಉಸುಳಿ, ಚಟ್ನಿಪುಡಿ, ಉಪ್ಪಿನಕಾಯಿ, ಉದ್ದಿನ ಹಪ್ಪಳ, ನಾರಿನಂಶವುಳ್ಳ ಆಹಾರ ಉತ್ತಮವಾದುದು.

ಯಾವುದೇ ಊಟದ ತಟ್ಟೆಯನ್ನು ಸಿದ್ಧಪಡಿಸುವ ಮುನ್ನ ಅದರಲ್ಲಿ ಷಡ್ರಸಗಳಾದ, ಉಪ್ಪು, ಹುಳಿ, ಖಾರ, ಕಹಿ, ಸಿಹಿ, ಒಗರು ಮುಂತಾದ ರುಚಿಗಳಿವೆಯೇ ಎಂದು ಪರಿಶೀಲಿಸುವುದು ಒಳಿತು.

ಈಗ ಜಂಕ್ ಆಹಾರದಲ್ಲಿ ಸಾಮಾನ್ಯವಾಗಿ ಕರಿದ, ಹುರಿದ, ಬಣ್ಣ ನೀಡಿದ, ರುಚಿಗಾಗಿ ವಿಶೇಷ ಖಾದ್ಯಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ದೇಹದ ಜೈವಿಕ ವ್ಯವಸ್ಥೆಯಲ್ಲಿಯೇ ಏರುಪೇರಾಗುತ್ತದೆ. ಮಕ್ಕಳು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾರ್ಮೋನುಗಳ ಸ್ರವಿಸುವಿಕೆಯಲ್ಲಿಯೂ ವ್ಯತ್ಯಾಸವುಂಟಾಗುತ್ತದೆ.
 
ಇದರ ಪರಿಣಾಮದಿಂದಲೇ ಹೆಣ್ಣುಮಕ್ಕಳು ಬಲು ಬೇಗ ಋತುಮತಿಯಾಗುತ್ತಿದ್ದಾರೆ. ಬಾಲ ನೆರೆ ಕಾಣಿಸಿಕೊಳ್ಳುತ್ತದೆ. ಬೇಡದ ಕೂದಲಿನ ನಿವಾರಣೆಗಾಗಿ ಆಸ್ಪತ್ರೆಗಳಿಗೆ ಎಡತಾಕುತ್ತಾರೆ. ಹುಡುಗರಲ್ಲಿ ಸ್ತನ ಬೆಳವಣಿಗೆಯಂಥ ಸಮಸ್ಯೆಗಳೂ ಕಂಡು ಬರುತ್ತಿವೆ ಎನ್ನುತ್ತಾರೆ ಶತಾಯು ಸಂಸ್ಥೆಯ ಡಾ. ಮೃತ್ಯುಂಜಯ ಸ್ವಾಮಿ.  (ಮಾಹಿತಿಗೆ: 080 6453311)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT