ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ಬೆಸುಗೆಯೇ ಮಂತ್ರ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ವಯಸ್ಸಾದ ಕಾಲಕ್ಕೆ ವೃದ್ಧಾಶ್ರಮದಲ್ಲಿ ಯಾಕೆ ಇರಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ನಾವು ಇಲ್ಲಿ ಇರೋದೂ ಅದೇ ಕಾರಣಕ್ಕೆ’ ಎಂದರು ಆ ದಂಪತಿ.

ಆ ತಾಯಿಯ ಮುಖದಲ್ಲಿ ಸಿಟ್ಟು, ಆಕ್ರೋಶ, ಅಸಹಾಯಕತೆ, ಸಂಕಟ ಸ್ಪಷ್ಟವಾಗಿ ಕಾಣಿಸಿತು. ತುಂಬಿಕೊಂಡ ನೀರನ್ನು ಕಣ್ಣಿನಿಂದ ಇಳಿಯಗೊಡದಂತೆ  ಅವುಡುಗಚ್ಚಿ ಮಂಡಿಗೆ ಹಿಡಿದಿದ್ದ ಎರಡೂ ಕೈಗಳನ್ನು ಮತ್ತಷ್ಟು ಬಿಗಿಗೊಳಿಸಿದರು.

‘ನನಗೆ 16ಸಾವಿರ ನಿವೃತ್ತಿವೇತನ ಬರುತ್ತದೆ. ಅವಳು ಈಗ ಎರಡು ತಿಂಗಳ ಹಿಂದೆ ಇಲ್ಲಿಗೆ ಬರುವವರೆಗೂ ಸೊಂಟ ನೋವಿನ ನಡುವೆಯೂ ಹೊಲಿಗೆ ಮೆಷಿನ್‌ ತುಳಿಯುತ್ತಿದ್ದಳು. ಹೆತ್ತ ಮಕ್ಕಳಿಗೇ ಹೊರೆ ಅನಿಸಿದ ಮೇಲೆ ನಾವು ಹೀಗೆ ಇಲ್ಲಿರೋದೇ ಸರಿ’ ಎಂದು ಆ ತಂದೆ ಹೇಳಿದಾಗ ಮುಖ ಕಿವುಚಿಕೊಂಡರು.

***
ಇಬ್ಬರು ಗಂಡು, ಐದು ಹೆಣ್ಣು ಮಕ್ಕಳನ್ನು ಸಾಕಿ ತಾವೂ ಬಾಳಿದ ಮನೆಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿದ್ದಾರೆ 86ರ ಮಹಾಲಕ್ಷ್ಮಮ್ಮ. ರಿಸರ್ವ್‌ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದ  ಪತಿ ತೀರಿಕೊಂಡು ವರ್ಷ ಕಳೆದಿಲ್ಲ.

‘ಇಬ್ಬರು ಗಂಡು ಮಕ್ಕಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಫೀಸರ್‌ಗಳು. ತುಂಬಾ ಓದಿ ಕೆಲಸದಲ್ಲಿರೋ ಹೆಂಡ್ರನ್ನೇ ಆರಿಸ್ಕೊಂಡಿದ್ದಾರೆ. ಪಾಪ ಅವರಾದರೂ ಸುಖವಾಗಿರಲಿ ಅಂತ ನಾನೇ ಇಷ್ಟಪಟ್ಟು ಇಲ್ಲಿಗೆ ಬಂದೆ, ಇಲ್ಲೇ ಇರುತ್ತೇನೆ’ ಎಂದು ಅವರು ನಕ್ಕರು.

***
ಜೆ.ಪಿ.ನಗರ ಬಳಿಯ ಕೊತ್ತನೂರು ಬಸ್‌ ನಿಲ್ದಾಣದಿಂದ ಕಾಲ್ನಡಿಗೆ ದೂರದಲ್ಲಿರುವ ‘ಪುನಶ್ಚೇತನ’ ವೃದ್ಧಾಶ್ರಮದ ಒಬ್ಬೊಬ್ಬ ಸದಸ್ಯರ ಬಳಿ ಮಾತಿಗೆ ಕುಳಿತರೂ ಇಂತಹ ಕತೆಗಳು ಮನಕಲಕುತ್ತವೆ.

‘ನಮ್ಮ ಮಕ್ಕಳ ಬದುಕನ್ನು ನಾವು ರೂಪಿಸಿದೆವು. ಈಗ ನಮ್ಮನ್ನು ಮನೆಯಿಂದಾಚೆ ದಬ್ಬಲು ಯಾವುದೋ ಒಂದು ಕುಂಟುನೆಪ. ಹಾಗಿರುವಾಗ ಮತ್ತೆ ಅವರ ಬಳಿ ಹೋಗುವುದಿಲ್ಲ. ನಮಗೆ ನಮ್ಮದೇ ವಯಸ್ಸಿನ ಸ್ನೇಹಿತರು ಇಲ್ಲಿ ಸಿಕ್ಕಿದ್ದಾರೆ. ಹರಟುತ್ತಾ ಕಾಲ ಕಳೆಯುತ್ತೇವೆ’ ಎನ್ನುತ್ತಾರೆ, ಜೆ.ಪಿ.ನಗರ ಆರ್‌ಬಿಐ ಲೇಔಟ್‌ನ ನಿವಾಸಿಯಾಗಿದ್ದ ರಂಗಸ್ವಾಮಿ (ನಿಜ ಹೆಸರಲ್ಲ).

ಪತ್ನಿ ಮತ್ತು ಮಕ್ಕಳೊಂದಿಗೆ ಸುಖವಾಗಿ ಕಳೆಯುವ ಆಸೆಯಿಂದ ಮಗ ಅವರನ್ನು ಪ್ರೀತಿಯಿಂದಲೇ ಈ ವೃದ್ಧಾಶ್ರಮಕ್ಕೆ ತಂದುಬಿಟ್ಟಿದ್ದಾನೆ!
ದೀಪಾ ಮತ್ತು ವೃದ್ಧಾಶ್ರಮದ ನಿವಾಸಿಗಳೇ  ತಮ್ಮ ಕುಟುಂಬ ಎಂದು ಖಡಕ್‌ ಆಗಿ ಹೇಳುತ್ತಾರೆ ರಂಗಸ್ವಾಮಿ ಅವರು.

ಸೇವೆಗೆ ಮೀಸಲು
‘ವೃದ್ಧಾಶ್ರಮ, ಅನಾಥಾಶ್ರಮ ಎಂಬ ನಾಮಫಲಕ ತಗುಲಿಹಾಕಿ ಸರ್ಕಾರದಿಂದ ಸಿಗುವ ಸವಲತ್ತುಗಳ ಲಾಭ ಪಡೆಯುವ ಸಂಸ್ಥೆ ಇದಲ್ಲ. ಹಿರಿಯ ನಾಗರಿಕರಿಗೆ ಮತ್ತು ತಮ್ಮವರಿಂದ ದೂರವಾಗಿರುವ ಅನಾಥರಿಗೆ ಸೇವೆ ಮಾಡುವ ಒಂದೇ ಉದ್ದೇಶದಿಂದ ‘ಪುನಶ್ಚೇತನ’ ಆರಂಭಿಸಿದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ದೀಪಾ.

‘ನನ್ನ ಬಾಲ್ಯದಲ್ಲಿ ನಮ್ಮ ಅಜ್ಜಿಯನ್ನು ವೃದ್ಧಾಶ್ರಮದಲ್ಲಿ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿತ್ತು. ಅಲ್ಲಿ ಅವರ ಬೆನ್ನಲ್ಲಿ ಗಾಯಗಳಾಗಿ ಹುಣ್ಣು ಆದರೂ ಅವರ ಬಗ್ಗೆ ಕಾಳಜಿ ವಹಿಸಲಿಲ್ಲ.  ಅವರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದ ನನ್ನ ಮನಸ್ಸು ಇದರಿಂದ ಬಹಳ ನೊಂದಿತ್ತು. ನಿಜವಾದ ಪ್ರೀತಿ ಮತ್ತು ಕಾಳಜಿಯಿಂದ ವೃದ್ಧಾಶ್ರಮ ನಡೆಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಆಗಲೇ ಕಾಡುತ್ತಿತ್ತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ದೀಪಾ, ಎಚ್‌ಪಿ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿ ಕೆಲವು ವರ್ಷ ದುಡಿದಿದ್ದಾರೆ. ಆಗಲೂ ಅವರು ವೃದ್ಧಾಶ್ರಮಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದಿದೆ. ಎರಡು ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿ   ‘ಪುನಶ್ಚೇತನ’ ಆರಂಭಿಸುವ ಮೂಲಕ ತಮ್ಮ ಬಹಳ ದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ ದೀಪಾ.

‘ನಮ್ಮಲ್ಲಿ 40 ನಿವಾಸಿಗಳಿದ್ದಾರೆ. ರಕ್ತದೊತ್ತಡ, ಮಧುಮೇಹ ಈಗ ಯುವಕರಿಗೂ ಸಾಮಾನ್ಯ. ಆದರೆ ತಮ್ಮ ತಂದೆ ತಾಯಿಗೆ ಆ ಎರಡು ಸಮಸ್ಯೆ ಶುರುವಾದ ತಕ್ಷಣ ನಮ್ಮಲ್ಲಿ ತಂದುಬಿಟ್ಟವರೂ ಇದ್ದಾರೆ. ನಿಯಮಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸಿರುವ ಕಾರಣ ಅಂತಹ ನಿವಾಸಿಗಳ ಆರೋಗ್ಯ ಈಗ ಸುಧಾರಿಸಿದೆ. 

ಅವರು  ಮತ್ತೆ ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಬೇಕು ಎಂಬುದು ನನ್ನಾಸೆ. ಮದುವೆಯಾಗದೆ ಏಕಾಂಗಿಯಾಗಿದ್ದು ಈಗ ವಯಸ್ಸಾಗಿರುವವರು, ಮಾನಸಿಕ ಅಸ್ವಸ್ಥರಾಗಿ ತಮ್ಮ ಬಗ್ಗೆಯೇ ಮಾಹಿತಿ ಹೇಳಲಾರದವರು, ಇನ್ಯಾವತ್ತೂ ಮನೆಗೆ ಮರಳಲಾಗದವರಿಗೆ ಪ್ರೀತಿ ಮತ್ತು ಕಾಳಜಿಯ ಆರೈಕೆ ಸಿಗುತ್ತದೆ’ ಎಂದು ದೀಪಾ ಹೇಳುತ್ತಾರೆ.

ದೀರ್ಘಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರನ್ನು ‘ನೆಮ್ಮದಿಯಿಂದ  ಕೊನೆಯುಸಿರೆಳೆಯಲಿ’ ಎಂದು ‘ಪುನಶ್ಚೇತನ’ಕ್ಕೆ ದಾಖಲಿಸಿದ ಪ್ರಕರಣಗಳಿವೆ. ಹಾಗೆ ಕಾಳಜಿಯಿಂದ ದಾಖಲಿಸಿದವರು ಮತ್ತೆಂದೂ ಇತ್ತ ತಲೆಹಾಕಿಲ್ಲ. ಆದರೆ ವೃದ್ಧಾಶ್ರಮದ ಸಿಬ್ಬಂದಿ ಅವರು ನೋವು ಮರೆತು ನಗುವಂತೆ ಮಾಡುತ್ತಾರೆ.

ಇಲ್ಲಿ ಪ್ರತಿಯೊಂದಕ್ಕೂ ಸಮಯ ನಿಗದಿ ಮಾಡಲಾಗಿದೆ. ದಿನಪತ್ರಿಕೆ, ಟಿವಿ , ತಿಂಡಿ, ಊಟ, ನಿದ್ದೆಗೆ ಶಿಸ್ತು ಇದೆ. ವೈದ್ಯಕೀಯ ಕಾರಣಕ್ಕೆ ಈ ಶಿಸ್ತು ಅನಿವಾರ್ಯ ಎಂಬುದು ದೀಪಾ ಅವರ ವಿವರಣೆ.

‘ನಾನು ಯಾರ ಬಳಿಯೂ ದೇಣಿಗೆ ಬೇಡುವುದಿಲ್ಲ. ತಾವಾಗಿ ನೀಡಿದರೆ ಸ್ವೀಕರಿಸುತ್ತೇನೆ. ಕಟ್ಟಡದ ಬಾಡಿಗೆ ಸೇರಿ ಪ್ರತಿ ತಿಂಗಳ ಖರ್ಚು ಲಕ್ಷ ಮೀರುತ್ತದೆ. ಸಂಪೂರ್ಣ ಸೇವಾ ಮನೋಭಾವದಿಂದ ಸಂಸ್ಥೆ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಅವರು.
ಸಂಪರ್ಕಕ್ಕೆ: http://www.punahchethanafoundation.org

*
ಮುಪ್ಪು ನಮಗೂ ಬರುತ್ತದೆ. ಎಲ್ಲರೂ ಇದ್ದು ಇಳಿವಯಸ್ಸಿನಲ್ಲಿ ಅನಾಥರಂತೆ ವೃದ್ಧಾಶ್ರಮಗಳಲ್ಲಿ ಕಾಲ ಕಳೆಯುವಂತಾಗಬಾರದು.
-ದೀಪಾ ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT