ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಸಂಗೀತ ಹಬ್ಬ

ನಾದ ಲೋಕ
Last Updated 21 ಜುಲೈ 2016, 19:30 IST
ಅಕ್ಷರ ಗಾತ್ರ

ಕಳೆದ 15 ವರ್ಷದಿಂದ ಮುಂಗಾರು ಸಂಗೀತ ಹಬ್ಬವನ್ನು ದೇಶದ ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಾ ಬಂದಿರುವ ಬನ್ಯಾನ್ ಟ್ರೀ ಸಂಸ್ಥೆ ಇತ್ತೀಚೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ‘ಬರಖಾ ರಿತು’ ಎಂಬ ಸಂಗೀತೋತ್ಸವವನ್ನು ಹಮ್ಮಿಕೊಂಡಿತ್ತು. ಕಲಾವಿದರು ಮಳೆಗೆ ಸಂಬಂಧಿಸಿದ ರಾಗಗಳನ್ನೇ ಹೆಚ್ಚಾಗಿ ಹಾಡಿ ಸಭಿಕರ ಮನ ತಣಿಸಿದರು.

ರಶೀದ್ ಖಾನ್ ಮೋಡಿ...
ಮಿಯಾ ಕೀ ಮಲ್ಹಾರ್ ರಾಗ ಮಲ್ಹಾರ್ ರಾಗಗಳ ಗುಂಪಿನಲ್ಲೇ ಹೆಚ್ಚು ಜನಪ್ರಿಯವಾದದ್ದು. ಹೆಸರನ್ನು ಕೇಳಿದರೇ ಶ್ರೋತೃಗಳು ಆಹಾ ಎನ್ನುತ್ತಾರೆ. ಅಂಥ ರಸವತ್ತಾದ ರಾಗದಿಂದ ತಮ್ಮ ಗಾಯನವನ್ನು ರಶೀದ್ ಖಾನರು ಆರಂಭಿಸಿದ್ದೇ ಶ್ರೋತೃಗಳ ಕಿವಿಗಳು ಚುರುಕಾಗಿದವು.

ತಾನ್‌ಸೇನ್‌ರಿಂದ ಸೃಷ್ಟಿಯಾದದ್ದು ಎನ್ನಲಾಗುವ ಈ ರಾಗದ ನಡತೆ ಕೊಂಚ ನಿಧಾನ. ರಶೀದ್ ಖಾನರ ನಿಧಾನಗತಿಯ ರಾಗ ವಿಸ್ತರಣೆಯ ರೀತಿ ರಾಗದ ಮಾಧುರ್ಯವನ್ನು ಮತ್ತಷ್ಟು ಹೆಚ್ಚಿಸಿದಂತಿತ್ತು.

ಕೆಲ ಹೊತ್ತು ಆಲಾಪದಲ್ಲಿ ತನ್ನ ಹೆಜ್ಜೆಗಳನ್ನು ಮೆಲ್ಲಮೆಲ್ಲನಿಡುತ್ತಾ ಹೋದಂತೆ, ರಾಗ ರೂಪ ವಿಸ್ತೃತವಾಗಿ ತೆರೆದುಕೊಂಡಿತ್ತು. ಅಜಯ್ ಜೋಗಲೇಕರ್ ಅವರ ಹಾರ್ಮೋನಿಯಂ ಹಾಗೂ ಅಲ್ಲಾರಖಾ ಕಲಾವಂತ್ ಅವರ ಸಾರಂಗಿ ವಾದನಗಳು ಪೈಪೋಟಿಗಿಳಿದಂತೆ ಕಾಣುತ್ತಿದ್ದವು.

ಎರಡರಲ್ಲಿ ಒಂದು ವಾದ್ಯ ಸಾಕೆನಿಸಿತ್ತು ಗಾಯನಕ್ಕೆ ಸಾಥ್ ನೀಡಲು. ಕಡಿಮೆ ಅವಕಾಶದಲ್ಲೂ ಹಾರ್ಮೋನಿಯಂನ ಸೃಜನಶೀಲ ನುಡಿಸಾಣಿಕೆಯು ರಾಗವನ್ನು ಕ್ರಿಯಾತ್ಮಕವಾಗಿ ನೇಯುತ್ತಾ ಮತ್ತೆ ಮತ್ತೆ ಕೇಳುವಂತೆ ಮಾಡಿತ್ತು.

ವಿಜೃಂಭಣೆಯಿಲ್ಲದೆ ಸಾಥ್‌ಗೆ ಬೇಕಾದಷ್ಟೇ ತಬಲಾ ವಾದನದಲ್ಲಿ ನಿರತರಾಗಿದ್ದ ಶುಭಂಕರ್ ಬ್ಯಾನರ್ಜಿ ಅವರ ಕೈಚಳದ ತೀವ್ರತೆ ಅಂದಿನ ಶ್ರೋತೃಗಳಿಗೆ ಲಭಿಸಲಿಲ್ಲ.

ಕೆಲ ಸಮಯದ ಬಳಿಕ ತಬಲಾ ವಾದನದಲ್ಲಿ ಲಯದ ಹೆಜ್ಜೆಗಳು ತೀವ್ರಗೊಂಡು, ರಾಗ ಇನ್ನೂ ರಸವತ್ತಾಗಿ ಸ್ಪುರಿಸಲಾರಂಭಿಸಿತು. ಅದರ ತೀವ್ರತೆಯನ್ನು ಹಿಡಿದೇ ‘ಬಿಜುರಿ ಚಮಕೇ...’, ಬಂದೀಶ್‌ನಲ್ಲಿ ರಶೀದರು ರಾಗವನ್ನು ಮತ್ತಷ್ಟು ವಿಸ್ತರಿಸುತ್ತಾ, ಅದರ ಮೋಹಕ್ಕೆ ಒಳಗಾದವರಂತೆ ಕಂಡು ಬಂದರು.
ಸ್ವರಗುಚ್ಛಗಳಾದ ತಾನ್, ಬೋಲ್‍ತಾನ್‌ಗಳಂತೂ ಶ್ರೋತೃಗಳನ್ನು ಭಾವದ ಮಳೆಯಲ್ಲಿ ಒದ್ದೆಯಾಗಿಸುತ್ತ ಪ್ರವಾಹದಂತೆ ಹರಿಯುತ್ತಿದ್ದರೆ, ಇಡೀ ಸಭಾಂಗಣವೇ ಖಾನ್ ಸಾಹೇಬರ ಸಂಗೀತದ ತೆಕ್ಕೆಗೆ ಬಿದ್ದು ಸುಖ ಕಾಣುತ್ತಿತ್ತು.

ರಶೀದ್‌ಖಾನ್ ಅವರು ಅಭ್ಯಸಿಸಿದ್ದ ಈ ರಾಂಪುರ-ಸಹಸ್ವಾನ್ ಘರಾಣೆಯೇ ಹಾಗೇ. ಸಂಕೀರ್ಣವಾದ ಲಯ ಸಂಯೋಜನೆಯಲ್ಲಿ, ನಿಧಾನವಾಗಿ ಅಥವಾ ಮಧ್ಯಮ ಲಯದಲ್ಲಿ ಸಾಗುತ್ತಾ ರಾಗದ ಇಂಚಿಂಚೂ ಸ್ವಭಾವವನ್ನು ರಸವತ್ತಾಗಿ ಪ್ರಸ್ತುತಪಡಿಸುವ ಪರಿ ಅಮೋಘವಾದದ್ದು.

ಮಿಯಾಕೀ ಮಲ್ಹಾರದ ನಂತರದಲ್ಲಿ ರಾಮದಾಸಿ ಮಲ್ಹಾರ ರಾಗವನ್ನು ಆರಿಸಿಕೊಂಡ ರಶೀದರು ‘ಛಾಯೇ ಬದರಾ ಕಾರೀ..ಕಾರೀ..’ ಎಂಬ ಬಂದೀಶ್‌ನ ಸ್ನೇಹದಲ್ಲಿ ರಾಗವನ್ನು ಮೃದುವಾಗಿ ನೇಯತೊಡಗಿದರು.

ಮ ಮತ್ತು ಸ ಸ್ವರಗಳೇ ಈ ರಾಗದಲ್ಲಿ ಪ್ರಧಾನವಾಗಿ ಬಳಕೆಯಾಗುತ್ತವೆ. ಮಾಧುರ್ಯಪೂರ್ಣ ರಾಗವಾಗಿದ್ದರೂ ಕೊಂಚ ಗಾಂಭೀರ್ಯದ ಛಾಯೆಯಿರುವುದೇ ಈ ರಾಗದ ವೈಶಿಷ್ಟ್ಯ. ಒಂದಷ್ಟು ಹೊತ್ತು ಬಂದೀಶ್‌ನ ಸಾಲನ್ನು ಹಿಡಿದು, ಒಮ್ಮೊಮ್ಮೆ ಪೂರ್ತಿ ಸಾಲನ್ನು ಮತ್ತೊಮ್ಮೆ ಒಂದೊಂದೇ ಪದವನ್ನು ಮತ್ತೆ ಮತ್ತೆ ಭಿನ್ನ ವಿಭಿನ್ನವಾಗಿ ಹಾಡುತ್ತ, ರಾಗದ ಸಂಪೂರ್ಣ ರಸಾನುಭವವನ್ನು ಶ್ರೋತೃಗಳಿಗೆ ಒದಗಿಸುತ್ತಿದ್ದರು.

ತಾನ್ ಗಾಯನವಂತೂ ಇಡೀ ಸಭಾಂಗಣದ ಮಿಡಿತವನ್ನೇ ತನ್ನ ಕೈಗೆ ತೆಗೆದುಕೊಂಡಿತ್ತು. ಶ್ರೋತೃಗಳ ಕೈ-ಕಾಲುಗಳು ಲಯಕ್ಕೆ ಜೊತೆಯಾಗಿ ತಾವೂ ಹೆಜ್ಜೆ ಹಾಕುತ್ತಿದ್ದವು.

ಕಾರ್ಯಕ್ರಮವನ್ನು ಭೀಮಸೇನ ಜೋಷಿಯವರಿಗೆ ಅರ್ಪಿಸಿದ್ದರಿಂದ ರಶೀದ್ ಖಾನರು ‘ಅವರಿಗಾಗಿ ಎಷ್ಟು ಬೇಕಾದರೂ ಹಾಡ್ತೀನಿ’ ಎಂದು ಹೇಳಿ, ಜೋಷಿಯವರು ಇಷ್ಟಪಡುತ್ತಿದ್ದ ಸುರ್‍ದಾಸಿ ಮಲ್ಹಾರ್ ರಾಗವನ್ನು ಹಾಡಲಾರಂಭಿಸಿದರು.

‘ಬಲಮಾ ಬರಸನಕೋ...’ ಎಂಬ ಬಂದೀಶ್‌ನಲ್ಲಿ ಹಾಗೂ ರಶೀದ್ ಖಾನರ ಆಪ್ತವೆನ್ನಿಸುವ ಮಾಧುರ್ಯಭರಿತ ಹಾಡುಗಾರಿಕೆಯಲ್ಲಿ ರಾಗದ ಭಾವವಂತೂ ಉಕ್ಕುಕ್ಕಿ ಹರಿಯುತ್ತಿತ್ತು.

ಸ್ವರಗಳನ್ನು ವಿಧವಿಧವಾಗಿ ಹೆಣೆದು ಮಾಲೆಯಾಗಿಸುವ ತಾನ್ ಹಾಡುಗಾರಿಕೆಯ ಪರಿಯಂತೂ ಸಮ್ಮೋಹನಗೊಳಿಸುವಂಥಾದ್ದು. ಸಾರಂಗಿಯ ಸಾಥಿಯಂತೂ ಮಳೆಗೆ ಕುಣಿವ ಎದೆಯ ಗೆಜ್ಜೆನಾದವನ್ನು ಕನ್ನಡಿಸುವಂತಿತ್ತು.

‘ನನ್ನೀ ನನ್ನೀ ಬೂಂದೇ..’ ಸಾಲನ್ನು ಮತ್ತೆಮತ್ತೆ ಪುನರಾವರ್ತಿಸಿ ಹಾಡುವಾಗಲಂತೂ ಮಳೆಯನ್ನು ಮುದ್ದುಗರೆಯುತ್ತ ಕರೆಯುತ್ತಿರುವಂತೆ ಅನ್ನಿಸುತ್ತಿತ್ತು.
ಯಾದ್ ಪಿಯಾಕೀ ಆಯೇ...

ಮುಂದಿನ ಪ್ರಸ್ತುತಿಗೆ ಸಿದ್ಧಗೊಳ್ಳುತ್ತಿದ್ದ ವಾದನಗಳ ಸದ್ದಿನ ನಡುವಿಂದ ‘ಯಾದ್ ಪಿಯಾ ಕೀ ಆಯೇ...’ ಎಂಬ ಸಾಲು ಪಾರಿವಾಳದಂತೆ ತೂರಿಕೊಂಡು ಬಂದದ್ದೇ, ಶ್ರೋತೃ ಮಹಾಶಯರಿಗೆ ಬಯಸಿದ್ದೇನೊ ದಕ್ಕಿದ ಭಾವವುಕ್ಕಿ ಬಂದು ಜೋರಾಗಿ ಕರತಾಡನ ಮಂಡಿಸಿದರು.

ಗಾಯಕನ ಧ್ವನಿಗೆ ಬಂದು ಸೇರಿಕೊಂಡಿದ್ದ ಭಗ್ನ ಪ್ರೇಮಿಯೊಬ್ಬ, ತನ್ನ ದುಃಖವನ್ನು ಹೇಗೆ ಸೈರಿಸಿಕೊಳ್ಳಬೇಕೆಂದು ಪರಿಪರಿಯಾಗಿ ಹಾಡಹಾಡುತ್ತ, ಅಲ್ಲಿದ್ದ ಭಗ್ನ ಪ್ರೇಮಿಗಳ ಎದೆಗೇ ಕೈಹಾಕಿಬಿಟ್ಟಿದ್ದ.

ಹಾಡಿನುದ್ದಕ್ಕೂ ಅಸಹಾಯಕ ವಿರಹಿಯ ಎದೆಯ ಹಾಡು ಬಡಬಡಿಸುತ್ತ ತೆರೆದುಕೊಂಡಷ್ಟೂ, ಶ್ರೋತೃಗಳು ಮನಸಾರೆ ಅವನನ್ನು ತಮ್ಮೊಳಗೆ ಸ್ವಾಗತಿಸುತ್ತಾ ಸಂತೃಪ್ತರಾಗುತ್ತಿದ್ದರು.

ಬಡೇ ಗುಲಾಮ್ ಅಲೀ ಖಾನರು ತಮ್ಮ ಪತ್ನಿಯ ನೆನಪಿಗಾಗಿ, ಭಿನ್ನಷಡ್ಜ ರಾಗದಲ್ಲಿ ಈ ಠುಮ್ರಿಯನ್ನು ರಚಿಸಿದ್ದರು. ಮ್ಯಾಂಡೋಲಿನ್-ಕೊಳಲು ಜೊತೆಜೊತೆಯಾಗಿ...
ರಶೀದ್ ಖಾನರ ಕಾರ್ಯಕ್ರಮಕ್ಕೂ ಮುನ್ನ ಮ್ಯಾಂಡೋಲಿನ್ ಹಾಗೂ ಕೊಳಲು ವಾದ್ಯಗಳ ಜುಗಲ್‌ಬಂದಿ ನಡೆದಿತ್ತು.

ಮ್ಯಾಂಡೋಲಿನ್ ವಾದನದಲ್ಲಿ ಯು.ರಾಜೇಶ್ ಹಾಗೂ ವಿಜಯ್ ಗೋಪಾಲರ ಕೊಳಲು ಜುಗಲ್‌ಬಂದಿ ಕರ್ನಾಟಕ ಸಂಗೀತ ಪ್ರಕಾರದಲ್ಲಿ ನಡೆಯಿತು.
ಮೊದಲ ಪ್ರಸ್ತುತಿಗೆ ಬಾಂಗ್ಲಾ ರಾಗದ ‘ಗಿರಿರಾಜಸುಧಾ’ ಕೃತಿಯನ್ನು ಆಯ್ದು ಕೊಳ್ಳಲಾಗಿತ್ತು.

ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ರಾಗದ ಹರಿವು ತೀರಾ ಭಿನ್ನ. ಹಿಂದೂಸ್ತಾನಿ ಭಾವದಲೆಯ ಮೇಲೆ ವಿಹರಿಸಿದರೆ ಕರ್ನಾಟಕ ಸಂಗೀತ ಲಯದಲೆಯ ಮೇಲೆ ನಡೆಯುವಂಥದ್ದು. ಒಮ್ಮೊಮ್ಮೆ ಒಂದಾದ ಮೇಲೊಂದು ವಾದ್ಯದಳು ಕೃತಿ ನುಡಿಸಾಣಿಕೆಯಲ್ಲಿ ತೊಡಗಿದರೆ ಮತ್ತೊಮ್ಮೆ, ಒಟ್ಟೊಟ್ಟಿಗೇ ಹೆಜ್ಜೆ ಇಡುತ್ತಿದ್ದವು.

ರಾಗ-ತಾನ-ಪಲ್ಲವಿ ಕರ್ನಾಟಕ ಸಂಗೀತದಲ್ಲಿನ ಒಂದು ವಿಶಿಷ್ಟ ಪ್ರಕಾರ. ಮುಂದಿನ ಪ್ರಸ್ತುತಿಗೆ 24ನೇ ಮೇಳಕರ್ತದ ವರುಣಪ್ರಿಯ ರಾಗದಲ್ಲಿ ರಾಗ-ತಾನ-ಪಲ್ಲವಿಯನ್ನು ನುಡಿಸಲಿದ್ದರು. ಮೊದಲಿಗೆ ಕೆಲ ಹೊತ್ತು ಎರಡೂ ವಾದ್ಯಗಳಲ್ಲಿ ನುಡಿಸಲಾದ ಆಲಾಪದಲ್ಲಿ ಮಡಿಚಿಕೊಂಡಿದ್ದ ರಾಗದ ಗರಿಗಳು ಒಂದೊಂದೇ ತೆರೆದುಕೊಂಡು, ರಾಗದ ಸ್ವರೂಪವನ್ನು ಸರಳವಾಗಿ ಕಟ್ಟಿಕೊಟ್ಟವು. ರಾಜೇಶರ ಮ್ಯಾಂಡೋಲಿನ್ ಕೈಚಳಕದಲ್ಲಿ ಮೂಡುತ್ತಿದ್ದ ಕೆಲ ತಂತ್ರಗಳು ಕೇಳುಗರನ್ನು ಬಹುವಾಗಿ ಸೆಳೆದವು.

ರಾಗಾಲಾಪನೆಯ ನಂತರ ಲಯದ ಸಾಂಗತ್ಯದಲ್ಲಿ ರಾಗವನ್ನು ಮತ್ತಷ್ಟು ವಿವರಿಸುತ್ತ, ವಿಸ್ತರಿಸುತ್ತ ಹೋಗುವುದನ್ನೆ ತಾನಂ ಎನ್ನುತ್ತಾರೆ. ಇಲ್ಲಿ ಒಂದಕ್ಕಿಂದ ಒಂದು ವಾದ್ಯಗಳು ರಂಜನಾತ್ಮಕವಾಗಿ ಸ್ವರಗಳನ್ನು ಜೋಡಿಸುತ್ತಾ, ರಾಗವನ್ನು ರಸವತ್ತಾಗಿ ತೀಡುತ್ತಾ ಹೋದಂತೆ ಅದರ ಗಂಧ ಕೇಳುಗರ ಒಳಕ್ಕೂ ಇಳಿದು, ಅವರನ್ನು ತನ್ಮಯವಾಗಿಸಿತ್ತು.

ಕೇಳಕೇಳುತ್ತಾ ಕೊಳಲ ದನಿ ಭರತನಾಟ್ಯದ ಹೆಜ್ಜೆಗಳನ್ನು ವೇದಿಕೆಗೆ ತಂದಂತೆ ಭಾಸವಾಗುತ್ತಿದ್ದರೆ, ಮ್ಯಾಂಡೋಲಿನ್ ನುಡಿಸಾಣಿಕೆ ಒಂದು ಹಂತದಲ್ಲಿ ತನ್ನ ಪಾಶ್ಚಾತ್ಯ ವಾದ್ಯದಂತೆ ಕೇಳುವ ದನಿಯನ್ನು ಮೀರಿ, ವೀಣೆಯ ಅವತಾರ ಎತ್ತಿದಂತೆ ಮಧುರವಾಗಿ ನುಡಿಯಲಾರಂಭಿಸಿತ್ತು.

ಅದರಲ್ಲೂ ಪುನರಾವರ್ತನೆಯಿಲ್ಲದೆ ವಿಭಿನ್ನತೆಯಿಂದ ಕೂಡಿದ್ದ ಸ್ವರಗುಚ್ಛಗಳು, ಹಂತಹಂತಕ್ಕೂ ನೂತನತೆಯನ್ನು ಮೈಗೂಡಿಸಿಕೊಂಡು ಅರಳುತ್ತಿದ್ದ ರೀತಿಗೆ ಶ್ರೋತೃಗಳು ಮನಸೋತಿದ್ದರು. ಜುಗಲ್‌ಬಂದಿ ಕ್ರಮಿಸುತ್ತಿದ್ದ ಆಹ್ಲಾದಕರ ಧಾಟಿಗೆ ಡಾ. ಪ್ರವೀಣ್ ಅವರ ಮೃದಂಗ ವಾದನ ಹಾಗೂ ಅಮಿತ್ ಅವರ ಖಂಜಿರ ವಾದನ ಪೂರಕವಾಗಿ ಸಾಥ್ ನೀಡುತ್ತಿದ್ದವು.

ಇದರ ಮುಂದಿನ ಭಾಗವೇ ಪಲ್ಲವಿ (ಪದ-ಲಯ-ವಿನ್ಯಾಸ) ಇಲ್ಲಿ ತಾಳ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತಾ, ವೈವಿಧ್ಯಮಯವಾಗಿ ಹರಿಯುತ್ತಾ ಹೋದಂತೆ ಎರಡೂ ವಾದ್ಯಗಳೂ ಒಟ್ಟೊಟ್ಟಾಗಿ ಗುರಿಮುಟ್ಟುವ ಯೋಜನೆಯಲ್ಲಿ ಹೆಜ್ಜೆಯಿಡಲಾರಂಭಿಸಿದ್ದವು.

ಲಯದ ಗತಿ ಕಾವೇರುತ್ತಾ ಹೋದಂತೆ, ಸ್ವರ ಲಯಗಳೆಲ್ಲವೂ ಒಂದೇ ಅಳತೆ ಸಾಗಿ ರಭಸದಿಂದ ಒಂದು ಹಂತವನ್ನು ಮುಟ್ಟಿನಿಂತಾಗ, ಶ್ರೋತೃಗಳು ತಟ್ಟಿದ ಚಪ್ಪಾಳೆಗಳು ಮೆಚ್ಚುಗೆಯ ರೂಪಕ.

ಕೊನೆಗೆ ಇಬ್ಬರೂ ಸಾಥಿ ಕಲಾವಿದರು ನಡೆಸುವ ಸವಾಲು-ಜವಾಬುಗಳನ್ನು ಒಳಗೊಂಡ ಭಾಗವೇ ತನಿ ಆವರ್ತನ. ಇಲ್ಲಿ ಆರೋಗ್ಯಕರ ಸ್ಪರ್ಧೆಗಿಳಿದಿದ್ದ ಮೃದಂಗ ಹಾಗೂ ಖಂಜಿರಾಗಳು ತಂತಮ್ಮ ಪಾಳಿ ಬಂದಾಗ, ಒಳ್ಳೆಯ ಪ್ರದರ್ಶನ ನೀಡಿದ್ದವು.

ಕ್ರಿಯಾತ್ಮಕ ಅಂಶಗಳಿಂದ ತುಂಬಿದ್ದ ಮೃದಂಗ ನಾದದ ಆದ್ರತೆ ಇಡೀ ಸಭಾಂಗಣದ ನಾಡಿಯನ್ನು ತನ್ನ ಕೈಗೆತ್ತಿಕೊಂಡಂತೆ. ಕೊನೆಗೆ ಭೀಮಸೇನ ಜೋಷಿಯವರ ನೆನಪಿನಲ್ಲಿ, ಅವರದೇ ಶೈಲಿಯಲ್ಲಿ ‘ಭಾಗ್ಯದಾ ಲಕ್ಷ್ಮಿ ಬಾರಮ್ಮಾ..’ ಗೀತೆಯನ್ನು ನುಡಿಸತೊಡಗಿದಾಗ, ಜೋಷಿಯವರ ಧ್ವನಿಯೇ ಅಲ್ಲಿ ಮಾರ್ದನಿಸುತ್ತಿರುವಂತೆ ಭಾಸವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT