ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಪ್‌ ಚಹರೆಯ ಅರಮನೆ

Last Updated 10 ಮೇ 2017, 19:30 IST
ಅಕ್ಷರ ಗಾತ್ರ

‘ಬೆಂಗಳೂರು ಅರಮನೆ’ ಯುರೋಪಿಯನ್‌ ಚಹರೆಯುಳ್ಳ ಬೆಂಗಳೂರಿನ ಕಟ್ಟಡಗಳಲ್ಲಿ ಪ್ರಮುಖವಾದುದು. ಒಟ್ಟು 454 ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ 45 ಸಾವಿರ ಚದರ ಅಡಿಗಳ ವಿಸ್ತೀರ್ಣದಲ್ಲಿ ಕಟ್ಟಲ್ಪಟ್ಟಿರುವ ಬೆಂಗಳೂರು ಅರಮನೆ ಟೂಡಾರ್‌ ವಾಸ್ತುಶೈಲಿಯಲ್ಲಿ ಮೈದಾಳಿರುವ ಸ್ಮಾರಕ.

ಬ್ರಿಟಿಷರು ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಹಲವಾರು ತಂಪನೆಯ ತಾಣಗಳಲ್ಲಿ ನೆಲೆ ನಿಂತರು. ಅಂತಹ ಸ್ಥಳಗಳಲ್ಲಿ ನಮ್ಮ ಬೆಂಗಳೂರು ಒಂದು. ಬೆಂಳೂರಿನಲ್ಲಿ ಬ್ರಿಟಿಷರು ಮೊದಲಿಗೆ ನಿರ್ಮಿಸಿದ್ದು ದಂಡು ಪ್ರದೇಶ. ಸೈನ್ಯಪಡೆಯ ವಾಸಸ್ಥಾನವಾದ ಬೆಂಗಳೂರಿನಲ್ಲಿ ನಾಲ್ಕಾರು ಶಿಕ್ಷಣ ಕೇಂದ್ರಗಳನ್ನು ಬಿಳಿಯರು ಶುರು ಮಾಡಿದರು. ಅದರಲ್ಲೊಂದು ಸೆಂಟ್ರಲ್‌ ಹೈಸ್ಕೂಲ್‌ (ಈಗಿನ ಸೆಂಟ್ರಲ್‌ ಕಾಲೇಜು).

ಸೆಂಟ್ರಲ್‌ ಹೈಸ್ಕೂಲ್‌ನ ಮೊದಲ ಪ್ರಿನ್ಸಿಪಾಲ್‌ ರೆವರೆಂಡ್‌ ಜೆ.ಗಾರೆಟ್‌ 1862ರಲ್ಲಿ ತಮ್ಮ ವಾಸಕ್ಕಾಗಿ ನಿರ್ಮಿಸಿದ ಕಟ್ಟಡವೇ ಬೆಂಗಳೂರು ಅರಮನೆ. ಲಂಡನ್‌ನ ವಿಂಡ್ಸರ್‌ ಕ್ಯಾಸಲ್‌ ಅನ್ನು ಹೋಲುವಂತೆ ಕಟ್ಟಲಾಗಿರುವ ಈ ಅರಮನೆ ಯುರೋಪ್‌ನ ಕೋಟೆ ಕೊತ್ತಲಗಳನ್ನು ನೆನಪಿಸುವಂತಿದೆ.



ಆಗಸಕ್ಕೆ ಎದ್ದುನಿಂತ ಕಾವಲು ಗೋಪುರಗಳು, ಎತ್ತರದ ಬಾಗಿಲುಗಳು, ಕಲ್ಲು ರಚನೆಯಲ್ಲಿ ರೂಪುಗೊಂಡ ವಿವಿಧ ಬಗೆಯ ಕಿಟಕಿಗಳು. ಕುಸುರಿ ಕೆಲಸವಿರುವ ಮರದ ಬಾಗಿಲುಗಳು. ವಿಶಾಲ ಮೊಗಸಾಲೆಗಳು, ಎತ್ತರದ ಮಿನಾರುಗಳು.

ಸುತ್ತಲೂ ಸುಂದರ ಉದ್ಯಾನಗಳು– ಇವೆಲ್ಲವುಗಳಿಂದ ಕಣ್ಮನ ಸೆಳೆಯುತ್ತಿದ್ದ ಬೆಂಗಳೂರು ಅರಮನೆಯನ್ನು ಮೈಸೂರು ಅರಸರಾದ ಚಾಮರಾಜ ಒಡೆಯರ್‌ ಅವರು 1884ರಲ್ಲಿ ಖರೀದಿಸಿದರು. ಆಗ ತಮ್ಮ ಅನುಕೂಲಕ್ಕಾಗಿ ಅರಮನೆಯನ್ನು ನವೀಕರಿಸಿಕೊಂಡರು.

ಬಿಳಿಯರ ನಾಡಿನ ಛಾಪನ್ನು ಬೆಂಗಳೂರಿನಲ್ಲಿ ಬಿಡಿಸಿಕೊಟ್ಟ ವಾಸ್ತುಶಿಲ್ಪಿಗಳು ಜಾನ್‌ ರಾಬರ್ಟ್‌್ಸ ಹಾಗೂ ಲಾಜರಸ್‌ ಅವರುಗಳು. ಸ್ಥಳೀಯವಾಗಿ ಸಿಗುತ್ತಿದ್ದ ಕಲ್ಲುಗಳನ್ನು ಕಟ್ಟಡದ ಬಹುಭಾಗಕ್ಕೆ ಉಪಯೋಗಿಸಿದರೂ ಅಲಂಕಾರಿಕ ವಸ್ತುಗಳೆಲ್ಲ ವಿದೇಶದಿಂದಲೇ ಬಂದಿದ್ದವು.

ಗಾಥಿಕ್‌ ಶೈಲಿಯ ಕಿಟಕಿಗಳು, ಹೂಬಳ್ಳಿಗಳನ್ನು ಬಿಡಿಸಿದ ರಂಗುರಂಗಿನ, ವೈವಿಧ್ಯಮಯ ಸಾಲು ಕಮಾನುಗಳು. ಜನರಲ್‌ ಎಲೆಕ್ಟ್ರಿಕಲ್‌ ತಯಾರಿಕೆಯ ಮರದ ಪಂಖಗಳು, ಮಾನವ ಚಾಲಿತ ಲಿಫ್ಟ್‌. ಚಿತ್ತಾಕರ್ಷಕ ಗಾಜು– ಕನ್ನಡಿಗಳೂ– ಬೆಂಗಳೂರು ಅರಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿದವು.

ಮೈಸೂರು ಮಹಾರಾಜರು ಈ ಕಟ್ಟಡವನ್ನು ತಮ್ಮದಾಗಿಸಿಕೊಂಡ ಮೇಲೆ ಅರಮನೆ ಸುತ್ತಲೂ ನಳನಳಿಸುವ ಉದ್ಯಾನಗಳು–ನಗುವ ಹೂಗಳ ಕೈತೋಟಗಳನ್ನು ಅಪೇಕ್ಷಿಸಿದಾಗ ಅದಕ್ಕೆ ಪೂರಕವಾಗಿ ಅತ್ಯುತ್ತಮವಾದ ಅಲಂಕಾರಿಕ ಉದ್ಯಾನಗಳನ್ನು ನಿರ್ಮಿಸಿಕೊಟ್ಟವರು ಆಗ ರಾಜ್ಯ ಉದ್ಯಾನಗಳ ಸೂಪರಿನ್‌ಟೆಂಡೆಂಟ್‌ ಆಗಿದ್ದ ಜಿ.ಎಚ್‌.ಕೃಂಬಿಗಲ್‌.

ಒಳಾವರಣವನ್ನು ಬ್ರಿಟಿಷರು ರೂಪಿಸಿದ್ದು ವಿಕ್ಟೋರಿಯನ್‌ ಎಡ್ವರಿಯನ್‌ ಶೈಲಿಯಲ್ಲಿ. ಇದರಿಂದಾಗಿ ಒಳಗೋಡೆಗಳೆಲ್ಲ ವಿವಿಧ ಬಗೆಯ ಚಿತ್ತಾರಗಳಿಂದ ಕೂಡಿತ್ತು. ಕಲ್ಲು ಕುರ್ಚಿಗಳು, ನಿಲುವುಗನ್ನಡಿಗಳು, ಸಿರಾಮಿಕ್‌ ನೆಲಹಾಸುಗಳು. ಅಲಂಕೃತ ಮೆಟ್ಟಿಲುಗಳು ಮೈದಾಳಿದ್ದವು. 19ನೇ ಶತಮಾನದ ಗ್ರೀಕ್‌, ಡಚ್‌ ಭಿತ್ತಿಗಳು ಗೋಡೆಗಳ ಮೇಲೆ ಎದ್ದು ಕಾಣುತ್ತಿದ್ದವು.

ಚೀನಿ ಅರಗು ಉಪಯೋಗಿಸಲ್ಪಟ್ಟ ಅಲಂಕೃತ ಊಟದ ಮೇಜು ಇಲ್ಲಿಯ ಇನ್ನೊಂದು ಆಕರ್ಷಣೆ. ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಮೈಸೂರು ಅರಸರು ದೇಸಿ ಕಲಾವಿದರ ಚಿತ್ತಾರಗಳನ್ನು ಗೋಡೆಗಳಿಗೆ ಅಳವಡಿಸಿದರು. ಹೀಗಾಗಿ ಅಲ್ಲಿ ರಾಜಾ ರವಿವರ್ಮರಂಥ ಶ್ರೇಷ್ಠ ಕಲಾವಿದರ ಕೃತಿಗಳೂ ಕಂಡುಬಂದವು.

ಅರಮನೆಗಳನ್ನು ನಿರ್ಮಿಸುವಲ್ಲಿ ಹಾಗೂ ಅಲಂಕರಿಸುವಲ್ಲಿ ಮೈಸೂರಿನ ಅರಸರು ಹೆಚ್ಚು ಆಸಕ್ತಿ ತೋರುತ್ತಿದ್ದರು. ವಿಭಿನ್ನವಾಗಿದ್ದ ಬೆಂಗಳೂರು ಅರಮನೆಯನ್ನು ಇನ್ನಷ್ಟು ವೈಭವೊಪೇತಗೊಳಿಸಲು ಹತ್ತಾರು ನವೀನ ಅಲಂಕಾರಿಕ ಪದಾರ್ಥಗಳನ್ನು ಇಲ್ಲಿ ಸೇರ್ಪಡೆಗೊಳಿಸಿದರು.

35 ಕೊಠಡಿಗಳಿರುವ ಅರಮನೆಯಲ್ಲಿ ಸುಂದರ ವಿನ್ಯಾಸದ ಈಜುಕೊಳವೂ ನಿರ್ಮಾಣವಾಯಿತು. ಮೈಸೂರು ದರ್ಬಾರ್‌ ಹಾಲ್‌ನಂತೆಯೇ ಬೆಂಗಳೂರು ಅರಮನೆ ದರ್ಬಾರ್‌ ಹಾಲ್‌ ಸಿದ್ಧಗೊಳಿಸಿದ್ದು ಆಗಲೇ.

ಲೋಹಶಿಲ್ಪಗಳು, ರಾಣಿಗೃಹದ ಗೋಡೆ ಬಣ್ಣಗಳು, ನೀರ ಕಾರಂಜಿಗಳು, ಕಿರು ಉದ್ಯಾನ  ಅಲಂಕೃತ ಕಂಬಗಳು ಅರಮನೆಯಲ್ಲಿ ನೋಡುಗರನ್ನು ಸೆಳೆಯುವ ಇನ್ನೂ ಕೆಲವು ಆಕರ್ಷಣೆಗಳು. ಸ್ವಾತಂತ್ರ್ಯ ಪೂರ್ವದಲ್ಲಿ ನವೀಕರಣಗೊಂಡಿದ್ದ ಬೆಂಗಳೂರು ಅರಮನೆ ಇತ್ತೀಚೆಗೆ ಜನಪ್ರಿಯ ಪ್ರವಾಸಿ ತಾಣ. ಮೈಸೂರು ಅರಸರ ಅಪೂರ್ವ ಛಾಯಚಿತ್ರಗಳ ವಿಭಾಗವೊಂದು ಈಗ ಸೇರಿದೆ. ನಾನಾ ಬಗೆಯ ಆಯುಧಗಳ ಪ್ರದರ್ಶನಾಂಗಣವೂ ಇದೆ.

ಅಲಂಕೃತ ದೀಪಗುಚ್ಛ. ಕೆಂಪು ಹಳದಿ ಬಣ್ಣದ ಗೋಡೆಗಳು ವರ್ಣಮಯ ಮೇಲ್ಚಾವಣಿ. ಬಣ್ಣದ ಭಿತ್ತಿಗಳು. ಕುಸುರಿ ಕೆಲಸ ಕಂಬಗಳು, ಬಗೆ ಬಗೆಯ ಶಿಲ್ಪಗಳು, ಜೊತೆಗೆ ರೇಷ್ಮೆ, ವಸ್ತ್ರ, ಒಡವೆಗಳು, ಆಕರ್ಷಕ ಔತಣ ಸಭಾಂಗಣ– ಇಂತಹ ವೈವಿಧ್ಯಮಯ ವೈಶಿಷ್ಟ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡ ಐತಿಹಾಸಿಕ ಕಟ್ಟಡ ಬೆಂಗಳೂರು ಅರಮನೆ.

ಶೈಲಿ:  ಟೂಡಾರ್‌ ವಾಸ್ತುಶೈಲಿ
ಸೆಂಟ್ರೆಲ್‌ ಹೈಸ್ಕೂಲ್‌ನ ಮೊದಲ ಪ್ರಿನ್ಸಿಪಾಲ್‌ ರೆವರೆಂಡ್‌ ಜೆ.ಗಾರೆಟ್‌ 1862ರಲ್ಲಿ ತಮ್ಮ ವಾಸಕ್ಕಾಗಿ ನಿರ್ಮಿಸಿದ ಕಟ್ಟಡ ಬೆಂಗಳೂರು ಅರಮನೆ.
ವಾಸ್ತುಶಿಲ್ಪ: ಜಾನ್‌ ರಾಬರ್ಟ್‌್ಸ ಹಾಗೂ ಲಾಜರಸ್‌
ಕಿಟಕಿ: ಗಾಥಿಕ್‌ ಶೈಲಿ
ಒಳಾವರಣ: ವಿಕ್ಟೋರಿಯನ್‌ ಎಡ್ವರಿಯನ್‌ ಶೈಲಿಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT