ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧ್ವಂಸಕ ಶಾಂತಿ ಕೇಂದ್ರದಲ್ಲಿ...

ರಂಗಭೂಮಿ
Last Updated 16 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಸಮಷ್ಟಿ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಯುವ ಕತೆಗಾರ ಮೌನೇಶ ಎಲ್. ಬಡಿಗೇರ ಅವರ ಹೊಸ ರಂಗಕೃತಿ ‘ವಿಶಾಕೇ’ಯನ್ನು ಪ್ರದರ್ಶಿಸಿತು. ಈ ನಾಟಕದ ನಿರ್ದೇಶನ ಮಂಜುನಾಥ ಎಲ್. ಬಡಿಗೇರ ಅವರದು.

ವಿಶಾಕೇ ಎಂದರೇನು? ಅದರ ಅರ್ಥ ಏನಿರಬಹುದು ಎಂಬ ಯೋಚನೆ ನಾಟಕ ವೀಕ್ಷಣೆಗೂ ಮೊದಲು ಬಂದಿತ್ತು. ಆದರೆ ಪ್ರಯೋಗ ಶುರುವಾದ ಮೇಲೆ ತಿಳಿದದ್ದು, ‘ವಿಧ್ವಂಸಕ ಶಾಂತಿ ಕೇಂದ್ರ’ದ ಹ್ರಸ್ವ ರೂಪ ವಿಶಾಕೇ ಎಂದು.

ನಾಟಕದೊಳಗೆ ಬರುವ ಒಂದು ವಿಚಿತ್ರ ಸಂಸ್ಥೆಯ ಹೆಸರು ವಿಧ್ವಂಸಕ ಶಾಂತಿ ಕೇಂದ್ರ. ಹೆಸರಿನೊಳಗೇ ಒಂದು ದ್ವಂದ್ವಾರ್ಥವಿರುವ, ಆದರೆ ಪ್ರಸ್ತುತದ ಎರಡು ಬಹುಮುಖ್ಯ ರೂಪಕಗಳೂ ಆಗಿರುವ, ವಿಧ್ವಂಸಕ ಮತ್ತು ಶಾಂತಿ ಎಂಬ ಪರಸ್ವರ ವಿರುದ್ಧಾರ್ಥವುಳ್ಳ ಎರಡು ರೂಪಕಗಳನ್ನು ಒಂದು ಸಂಯೋಜಿತ ನೆಲೆಯಲ್ಲಿ ಅರ್ಥೈಸುವ ಮೂಲಕ ಇಡೀ ನಾಟಕವನ್ನು ಕಟ್ಟಲಾಗಿದೆ.

ವಿಧ್ವಂಸಕತೆಯೇ ಶಾಂತಿಯಾಗಿ, ಶಾಂತಿಯೇ ವಿಧ್ವಂಸಕತೆಯಾಗಿ ಅರ್ಥಾಂತರವಾಗುತ್ತಿರುವ ಈ ಹೊತ್ತಿನಲ್ಲಿ ಎರಡು ಭಿನ್ನ ಮಾದರಿಗಳನ್ನು ತೌಲನಿಸುತ್ತದೆ ನಾಟಕ. ಪರಸ್ಪರ ವಿರುದ್ಧ ಧ್ರುವಗಳೆಂದು ಭಾವಿಸಿರುವ ವಿಧ್ವಂಸಕ ಮತ್ತು ಶಾಂತಿಯ ಅಂತರ ಅತಿ ಚಿಕ್ಕದಾಗುತ್ತಿರುವ ಈ ಪ್ರಕ್ಷುಬ್ಧತೆಯನ್ನು ನಾಟಕ ‘ವಿಶಾಕೇ’ಯ ಹೆಸರಿನಲ್ಲಿ ವಿಡಂಬನೆ ಮಾಡುತ್ತಾ ಸಾಗುತ್ತದೆ.

ನಗರ ಕೇಂದ್ರಿತ ಸಮಸ್ಯೆ, ಸಂಬಂಧಗಳ ತಾಕಲಾಟ, ಜಾಗತೀಕರಣದ ಮಾಯೆಗೆ ಸಿಕ್ಕಿ ಕ್ಲುಪ್ತವೂ, ಭೀಕರವೂ ಆಗುತ್ತಿರುವ ಮಾನವೀಯತೆಯನ್ನು ನಾಟಕ ಚಿತ್ರಿಸುತ್ತದೆ.  ವಿಧ್ವಂಸಕ ಶಾಂತಿ ಕೇಂದ್ರದ ಮುಖ್ಯಸ್ಥನ ಹೆಸರು ಪ್ರಳಯನ್ ನಂಜುಂಡ. ಈ ಹೆಸರೂ ಕೂಡ ಎರಡು ಭಿನ್ನಾರ್ಥವುಳ್ಳ ಪದಗಳ ಕೊಲಾಜ್.

   ಈ ಕೇಂದ್ರದಲ್ಲಿ ಮೂರು ವಿಘ್ನ ಗೃಹಗಳಿವೆ. ಮನುಷ್ಯರು ತಮ್ಮ ಶಾಂತಿಗಾಗಿ ಅಲ್ಲಿ ಏನು ಬೇಕಾದರೂ ಧ್ವಂಸ ಮಾಡಿ ಶಾಂತಿ ಅನುಭವಿಸಬಹುದು. ಹೆಂಡತಿಯ ಮೇಲೆ ಕೋಪವಿರುವ ಗಂಡ, ತನ್ನ ಹೆಂಡತಿಯಂತೆಯೇ ಇರುವ ಗೊಂಬೆಯನ್ನು ಹೊಡೆದು ಬಡಿದು, ಕೊಲ್ಲಬಹುದು, ರಕ್ತಹರಿಸಬಹುದು. ಒಟ್ಟಿನಲ್ಲಿ ವಿಧ್ವಂಸ ಮಾಡುತ್ತಾ ಶಾಂತಿ ಅನುಭವಿಸಬಹುದು. ಇದು ವಿಧ್ವಂಸಕ ಶಾಂತಿ ಕೇಂದ್ರದ ಮೂಲ ಉದ್ದೇಶ.

ಪ್ರಯೋಗಾತ್ಮಕವಾಗಿಯೂ ನಾವು ರಂಗದ ಮೇಲೆ ಬಳಸುವ ರಂಗಸಜ್ಜಿಕೆಯಿಂದ ಇಡೀ ನಾಟಕವನ್ನು ಅರ್ಥೈಸುತ್ತಾ ಹೋದರೆ, ರಂಗಸಜ್ಜಿಕೆಗೆ ಬಳಸುವ ಎಲ್ಲಾ ಪರಿಕರಗಳೂ ರಟ್ಟಿನ ಡಬ್ಬಗಳು. ಮನೆ, ಬಿಲ್ಡಿಂಗು, ದೇವಸ್ಥಾನ ಎಲ್ಲವೂ ರಟ್ಟಿನವು. ಅವನ್ನು ಆಡುಭಾಷೆಯಲ್ಲಿ ‘ಡಬ್ಬಾ’ ಎಂದು ಕರೆಯುತ್ತೇವೆ. ಅಂದರೆ ಪಟ್ಟಣವೆಲ್ಲ ಡಬ್ಬಾಗಳೇ. ಡಬ್ಬಾ ಎಂದರೆ ಕ್ಷುಲ್ಲಕವೆಂಬ ಅರ್ಥವೂ ಇದೆ. ಕಟ್ಟುವ ಅಪಾರ್ಟ್ಮೆಂಟುಗಳೂ ಕೇವಲ ಡಬ್ಬಗಳನ್ನು ಜೋಡಿಸಿದಂತೆ. ಮಾನವ ಸಂಬಂಧಗಳೂ ರಟ್ಟಿನ ಡಬ್ಬಾಗಳು.

ಇದೇ ರೀತಿ ರಂಗಸಜ್ಜಿಕೆ ಬಳಸುವ ಮುಖಾಂತರ ನಾಟಕಕ್ಕೆ ಬೇರೊಂದು ನೆಲೆಯ ಅರ್ಥ ನೀಡುವ ನಿರ್ದೇಶಕ ರಘುನಂದನ ಅವರು ಜಯಂತ ಕಾಯ್ಕಿಣಿಯವರ ‘ಆಕಾಶಬುಟ್ಟಿ’ ನಾಟಕ ಮಾಡಿದ್ದಾಗ ಮುಂಬೈ ನಗರವನ್ನು ಚಿತ್ರಿಸಲು ಇದೇ ಬಗೆಯ ರಂಗಸಜ್ಜಿಕೆ ಬಳಸಿದ್ದರು.

ಅದರಿಂದ ಪ್ರೇರಿತರಾಗಿ ಮಂಜುನಾಥ ಬಡಿಗೇರ ಆ ಮಾದರಿ ಬಳಸಿಕೊಂಡಿರಬಹುದು. ನಟಿಸುವ ನಟರೂ, ಒಂದು ರೀತಿಯ ರೂಪಕ ಮಾದರಿಯನ್ನು ಬಳಸಿಕೊಂಡಿದ್ದಾರೆ ಎನ್ನಬಹುದು.

ಉದಾ: ನಾಟಕದ ಶಾಲಿನಿ ಮತ್ತು ಮನೋಜ ಪಾತ್ರಗಳು. ಮನೋಜ ಸಾಫ್ಟ್‌ವೇರ್‌ ಕಂಪೆನಿಯೊಂದರ ಉದ್ಯೋಗಿ. ಇವರಿಬ್ಬರ ಮಾತಿನಲ್ಲಿ ಯಾವುದು ನಾಜೂಕಾಗಿರಬೇಕೋ ಆ ಮಾತೂ ನಾಜೂಕಿಲ್ಲದೆ, ಅರಚಾಡಿದಂತೆ ಕೇಳುತ್ತದೆ. ಅರಚಾಡುವ ಮಾತನ್ನು ನಾಜೂಕಾಗುವಂತೆ ಮಾಡಿರುವುದಕ್ಕೂ ಉದ್ದೇಶ ಇದ್ದೀತು. ಇಂದು ನಗರಗಳಲ್ಲಿ ನಾವು ನೋಡುತ್ತಿರುವಂತೆ ಸೂಕ್ಷ್ಮವಾಗಬೇಕಾದ ಮಾತು ಸೂಕ್ಷ್ಮವಾಗದೆ, ಮುಖ್ಯವಾಗಬೇಕಾದ ಕ್ರಿಯೆಗಳು ಮುಖ್ಯವಾಗದೆ, ಮುಚ್ಚಿಡಬೇಕಾದ ಕ್ರಿಯೆಗಳು ಬಿಚ್ಚಿಟ್ಟಂತೆ, ಬಿಚ್ಚಿಡಬೇಕಾದದ್ದು ಮುಚ್ಚಿಟ್ಟಂತೆ ಆಗುತ್ತಿರುವುದನ್ನು ನಾಟಕ ವ್ಯಂಗ್ಯ ಮಾಡಿದಂತಿದೆ. ಅಂದರೆ ಮನೋಜ ಹೆಂಡತಿಯ ಜೊತೆ ಹುಚ್ಚನಂತೆ ಕಿರುಚಾಡುತ್ತಾನೆ. ಫೋನಿನ ಗೆಳತಿಯ ಜೊತೆ ನಾಜೂಕಾಗಿ ಮಾತನಾಡುತ್ತಾನೆ.

ಹೆಂಡತಿಯ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ವಿಧ್ವಂಸಕ ಶಾಂತಿ ಕೇಂದ್ರಕ್ಕೆ ಬಂದು ತನ್ನ ಹೆಂಡತಿಯಂಥದ್ದೇ ಗೊಂಬೆಗೆ ಹೊಡೆದು ಶಾಂತಿ ಪಡೆಯುತ್ತಾನೆ. ನಾಟಕದ ಮೊದಲ ದೃಶ್ಯವನ್ನು ಸಾಂಪ್ರದಾಯಿಕ ಮಾದರಿಯಂತೆ ಸೂತ್ರಧಾರ, ವಿದೂಷಕ, ನೀಲ, ಭಾನು, ಮತ್ತು ವಿಘ್ನ ವಿನಾಶಕ ಗಣೇಶನ ಮುಖಾಂತರ ಕಟ್ಟುತ್ತಾರೆ.

ಕತ್ತಲಲ್ಲಿ ಕುಳಿತು ಬೆಳಕಿನಲ್ಲಿ ನೋಡಬೇಕಾದ ನಾಟ್ಯ ಮಾದರಿಗೆ ವಿರುದ್ಧವಾಗಿ, ಪ್ರೇಕ್ಷಕರಿಗೇ ಬೆಳಕು ಬಿಡುವ ಏಲಿಯನೇಶನ್ (ದೂರೀಕರಣ) ಮಾದರಿ ಅನುಸರಿಸಿ, ನಾಟಕದೊಳಗೆ ಪ್ರೇಕ್ಷಕನನ್ನೂ ಒಳಗೊಳ್ಳುವ ತಂತ್ರಗಾರಿಕೆ ಮಾಡುತ್ತಾರೆ. ಮುಂದಿನದು ನವ್ಯವೆನಿಸುವಂತೆ ದೃಶ್ಯ ಕಟ್ಟುವ ನಿರ್ದೇಶಕರು, ಇಲ್ಲೂ ಎರಡು ಭಿನ್ನ ಮಾದರಿಗಳ ಕೊಲಾಜ್ ಮಾಡಿ ಬೇರೊಂದು ಅರ್ಥವನ್ನು ಧ್ವನಿಸುವ ಪ್ರಯತ್ನ ಮಾಡುತ್ತಾರೆ.

‘ವಿಶಾಕೇ’ಯೊಳಗಿನ ವಿಘ್ನಗೃಹಗಳ ಸೃಷ್ಟಿಯಲ್ಲಿ, ನಾಟಕಕಾರ ಮತ್ತು ನಿರ್ದೇಶಕರ ತಂತ್ರಗಾರಿಕೆ ಇದೆ. ಅದರ ಮುಖ್ಯಸ್ಥ ಪ್ರಳಯನ್ ನಂಜುಂಡ, ಅವನನ್ನು ಮೀರಿಸುವ ಇಂದಿನ ಯುವಜನರ ಪ್ರತಿನಿಧಿಯಂತೆ ಕಾಣುವ ಮೂರ್ತಿ ಚಾಕಚಕ್ಯತೆಯಿಂದ ಅಭಿನಯಿಸುತ್ತಾರೆ. ಮೊದಲಿನ ಸೂತ್ರಧಾರನು ಹುಡುಕುವ ದೃಶ್ಯ ಸ್ವಲ್ಪ ಎಳೆದಂತೆನಿಸುತ್ತದೆ. ನಾಟಕದ ಕಟ್ಟುವಿಕೆಯಲ್ಲಿ ಸ್ವಾರಸ್ಯವಿದೆ. ಆದರೆ ಕೆಲವು ಮುಖ್ಯ ಮಾತುಗಳು ತೇಲಿಹೋಗುತ್ತವೆ. ಅದಕ್ಕೆ ನಟರ ಟೈಮಿಂಗ್ ಮತ್ತು ಮ್ಯಾನರಿಸಂ ಎರಡೂ ಮುಖ್ಯವಾಗುತ್ತವೆ.

ಮೌನೇಶ ಬಡಿಗೇರರು ಸಾಹಿತ್ಯಕೃತಿಯಾಗಿ ಮಾಡಿದ ಒಂದು ಹೊಸ ರೀತಿ, ಸಿದ್ಧ ಮಾದರಿಗಳಿಗೆ ಬೀಳದೆ ಬದಲೀ ಮಾರ್ಗ ಸಿದ್ಧಿಸಿಕೊಳ್ಳುವ ಅವರ ರೀತಿ ಹೊಸದೆನಿಸುತ್ತದೆ. ಆದರೂ ಅವರ ನಿರೂಪಣಾ ವಿಧಾನ ಇನ್ನಷ್ಟು ಪಕ್ವವಾಗಬೇಕು. ಮಾತಿಗೆ ಮಾತು ಜೋಡಿಸುವಾಗ, ಕೆಲವು ಮಾತುಗಳೇ ಪುನರಾವರ್ತಿತವಾಗಿ, ಏಕತಾನವಾಗದಂತೆ ಎಚ್ಚರ ವಹಿಸಬೇಕು. ಸಂಗೀತವಾಗಿ ಕೆಲವು ಪ್ರೀ–ರೆಕಾರ್ಡೆಡ್ ಎಫೆಕ್ಟ್ಗಳನ್ನು ಬಳಸಿಕೊಂಡಿರುವುದು ಸಾಂದರ್ಭಿಕವೆನಿಸುತ್ತದೆ. ಆದರೂ ರೆಕಾರ್ಡೆಡ್ ಸಂಗೀತ ಬಳಸುವಾಗ ಅತಿ ಸೂಕ್ಷ್ಮ ಚಾಕಚಕ್ಯತೆ ತೋರುವುದು ಮುಖ್ಯ. ಇನ್ನೂ ಬದಲಾವಣೆಯಾಗುತ್ತಾ ಹೋದಂತೆ ನಾಟಕ ಪಕ್ವವಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT