ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಭರಿತ ಪಾತ್ರ: ಜಿಮ್‌

Last Updated 24 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ನೀರಜಾ’ ಚಿತ್ರದಲ್ಲಿ ಭಯೋತ್ಪಾದಕನ ಪಾತ್ರ ನಿರ್ವಹಿಸಿರುವ ಜಿಮ್‌ ಸರಬ್‌ ಅವರ ನಟನೆಯ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಆದರೆ ‘ಭಯೋತ್ಪಾದಕನ ಪಾತ್ರದಲ್ಲಿ ಅಭಿನಯಿಸುವುದು ನಿಜವಾಗಲೂ ಸವಾಲೆನಿಸಿತು. ಭಯೋತ್ಪಾದಕನ ಪಾತ್ರದಲ್ಲಿ ನಟಿಸುವಾಗ ಅನೇಕ ಬಾರಿ ನಾನು ಒತ್ತಡಕ್ಕೂ ಒಳಗಾಗುತ್ತಿದ್ದೆ’ ಎಂದು ಜಿಮ್‌ ಹೇಳಿಕೊಂಡಿದ್ದಾರೆ.

ಅಪಹರಿಸಲ್ಪಟ್ಟ ವಿಮಾನದಲ್ಲಿರುವ ಖಲೀಲ್‌ ಎನ್ನುವ ವಿಚಿತ್ರ ಹಾಗೂ ಭಯಾನಕ ಮನೋಭಾವದ ಭಯೋತ್ಪಾದಕನ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಆ ಪಾತ್ರದಲ್ಲಿ ಅಭಿನಯಿಸಿ ಚಿತ್ರೀಕರಣದ ಸ್ಥಳದಲ್ಲೂ ಖಲೀಲ್‌ನಂತೆ ವರ್ತಿಸಲಾರಂಭಿಸಿಬಿಟ್ಟಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ‘ಬೇಗನೇ ಸಿಟ್ಟು ಬರುವ ಮನಸ್ಥಿತಿ ಖಲೀಲ್‌ನದ್ದು. ಆ ಪಾತ್ರಕ್ಕೆ ನಾನು ಹೊಂದಿಕೊಳ್ಳುತ್ತಿದ್ದಂತೆ ಸಿನಿಮಾ ಸೆಟ್‌ನಲ್ಲಿ ಕೂಡ ಹಾಗೇ ವರ್ತಿಸುತ್ತಿದ್ದೆ.

ಕೆಲವೊಮ್ಮೆ ನನ್ನ ದಿರಿಸು ಸರಿಯಾದ ಸಮಯಕ್ಕೆ ಬರದಿದ್ದರೂ ಸಿಟ್ಟುಗೊಂಡು ಸಹಾಯಕ ನಿರ್ದೇಶಕರ ಮೇಲೆ ಕೂಗಾಡಿಬಿಡುತ್ತಿದ್ದೆ. ಆ ಪಾತ್ರ ನಿಜವಾಗಲೂ ಸವಾಲೆನಿಸುವಂತಿತ್ತು. ಪಾತ್ರಕ್ಕೂ ನಿಜ ಬದುಕಿಗೂ ವ್ಯತ್ಯಾಸವಿಲ್ಲದಂತೆ ಕೆಲವೊಮ್ಮೆ ವರ್ತಿಸಿಬಿಡುತ್ತಿದ್ದೆ’ ಎಂದು ಆ ಸಂದರ್ಭದ ತಮ್ಮ ತೊಳಲಾಟವನ್ನು ಅವರು ಹೇಳಿಕೊಂಡಿದ್ದಾರೆ.

ಹೈಜಾಕ್‌ ಆಗಿದ್ದ ವಿಮಾನದಲ್ಲಿದ್ದ ನೀರಜಾ ಬಾನೋಟ್‌ ಅವರ ನೈಜ ಕಥೆಯನ್ನಾಧರಿಸಿ ಮಾಡಲಾದ ಈ ಸಿನಿಮಾದಲ್ಲಿ ಸೋನಂ ಕಪೂರ್‌ ನೀರಜಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಭಯೋತ್ಪಾದಕನ ಪಾತ್ರದಲ್ಲಿ ಗುರುತಿಸಿಕೊಂಡಿರುವ ಜಿಮ್‌ ರಂಗಭೂಮಿಯಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡವರು.  ಇದು ಅವರ ಮೊದಲನೇ ಸಿನಿಮಾ ಆಗಿದ್ದು, ನೀರಜಾ ಚಿತ್ರಕ್ಕೂ ಮುಂಚೆ ಕಾರ್ಯಾಗಾರಗಳಲ್ಲೂ ತರಬೇತಿ ಪಡೆದುಕೊಂಡಿದ್ದರು.

‘ನಾನು ಕಾಣಿಸಿಕೊಂಡ ಖಲೀಲ್‌ ಪಾತ್ರಧಾರಿ ಸದಾ ಕೋಪಿಸಿಕೊಂಡೇ ಇರುತ್ತಿದ್ದ, ಇರಬೇಕಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಒಬ್ಬನೇ ಕಳೆಯುತ್ತಿದ್ದೆ. ಯಾರೊಂದಿಗೂ ಮಾತುಕತೆಯೂ ಇರಲಿಲ್ಲ. ಹೀಗಾಗಿ ಕೆಲವೊಮ್ಮೆ ತುಂಬಾ ಬೇಸರ ಎನಿಸುತ್ತಿತ್ತು. ಅಂತರ್ಮುಖಿಯಂತೆ ಇರುತ್ತಿದ್ದ ನಾನು ಶೂಟಿಂಗ್‌ ಮುಗಿದ ನಂತರವೇ ನನ್ನ ಮುಖದಲ್ಲಿದ್ದ ಖಲೀಲ್‌ನನ್ನು ಅಳಿಸಿ ಹಾಕುತ್ತಿದ್ದೆ. ಖಲೀಲ್‌ ಇನ್ನೊಬ್ಬರನ್ನು ಪ್ರಶ್ನಿಸುತ್ತಾನೆಯೇ ಹೊರತು.

ಅವನನ್ನು ಯಾರೂ ಪ್ರಶ್ನಿಸುವಂತಿಲ್ಲ. ಇಂಥ ಪಾತ್ರದಲ್ಲಿ ಅಭಿನಯಿಸಿದ ನನಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ತುಂಬ ಖುಷಿ ನೀಡಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಕೊಂಕಣ ಸೇನ್‌ ಶರ್ಮಾ ನಿರ್ದೇಶನದ ‘ಎ ಡೆತ್‌ ಇನ್‌ ದ ಗಂಜ್‌’ ಚಿತ್ರದಲ್ಲೂ ಜಿಮ್‌ ಅಭಿನಯಿಸಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ. ಅದರಲ್ಲಿ ಎಲ್ಲರೂ ಇಷ್ಟಪಡುವಂಥ ಉತ್ತಮ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT