ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಥಿ ಸಾರ್ಥಕ್ಯ: ಹೆತ್ತವರ ತೆಕ್ಕೆಗೆ ಕಂದಮ್ಮ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೇರೆ ರಾಜ್ಯಗಳಿಂದ ನೂರಾರು ಮಕ್ಕಳು ಪ್ರತಿದಿನ ನಗರದ ರೈಲ್ವೆ ನಿಲ್ದಾಣಗಳಲ್ಲಿ ಬಂದಿಳಿಯುತ್ತಿದ್ದಾರೆ. ಇಲ್ಲಿ ಬಂದ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವ ಮುನ್ನವೇ ವಶಕ್ಕೆ ಪಡೆದು ಹೆತ್ತವರಿಗೆ ಒಪ್ಪಿಸುತ್ತಿದೆ ನಗರದ ‘ಸಾಥಿ’ ಸಂಸ್ಥೆ. 

ತುಂಬಿದ ಕಂಗಳು. ಪರಸ್ಪರರ ಚಿತ್ರಗಳು ಅಸ್ಪಷ್ಟ. ಕಣ್ಣೀರಧಾರೆ ಹರಿಯುತ್ತಲೇ ಸ್ಪಷ್ಟವಾದ ಚಿತ್ರಗಳು. ನೋಡುತ್ತಿದ್ದವರ ಸಂಕಟವೂ ಬೆರೆತು ಇಡೀ ಕೋಣೆಯ ತುಂಬ ಮೌನ ಮೌನ. ಇದು ಬೇರೆ ಬೇರೆ ರಾಜ್ಯಗಳಿಂದ ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ಮಕ್ಕಳನ್ನು ‘ಸಾಥಿ’ ಸಂಸ್ಥೆ ಹೆತ್ತವರಿಗೆ ಒಪ್ಪಿಸಿದ ಸಂದರ್ಭ.

ನಗರದ ರೈಲ್ವೆ ನಿಲ್ದಾಣಗಳಲ್ಲಿ ಬಂದಿಳಿವ ಮಕ್ಕಳನ್ನು ಅವರು ಮಧ್ಯವರ್ತಿಗಳ ಕೈಸೇರುವ ಮುನ್ನವೇ ವಶಕ್ಕೆ ಪಡೆದು ಪೊಲೀಸ್‌ ಠಾಣೆಯಲ್ಲಿ ಮಕ್ಕಳ ಬಗ್ಗೆ ಮಾಹಿತಿ ದಾಖಲಿಸಿ, ಮಕ್ಕಳಿಗೆ ಊಟ ವಸತಿ ನೀಡಿ, ಅವರ ಕಷ್ಟಗಳನ್ನು ಕೇಳಿ, ಆಪ್ತ ಸಮಾಲೋಚನೆ ನಡೆಸಿ, ಪೋಷಕರ ಮಾಹಿತಿ ಪಡೆದು ಪೋಷಕರನ್ನು ಕರೆಸಿ ಮಕ್ಕಳನ್ನು ಒಪ್ಪಿಸುತ್ತಿರುವ ಸಂಸ್ಥೆ ಸಾಥಿ.

ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ದಿನದಲ್ಲಿ 173 ರೈಲುಗಳು ಬಂದು ಹೋಗುತ್ತವೆ. ಬಿಹಾರ್‌, ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್‌, ರಾಜಸ್ತಾನ, ಉತ್ತರ ಪ್ರದೇಶದ ಸಾವಿರಾರು ಕಾರ್ಮಿಕರು, ವಲಸಿಗರು ಬೆಂಗಳೂರಿಗೆ ಕೆಲಸ ಅರಸಿ ಬರುತ್ತಿದ್ದಾರೆ. ಇವರ ಜೊತೆಗೆ ನಾನಾ ಕಾರಣಗಳಿಂದ ಮನೆಬಿಟ್ಟು ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ.

ದುಡಿಮೆಗೆ ಹಚ್ಚುವ ಪರಿ
ಹೀಗೆ ನಗರಕ್ಕೆ ಬಂದ ಮಕ್ಕಳನ್ನು ಹೆಚ್ಚಾಗಿ ಪಾನಿಪುರಿ ಅಂಗಡಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಕೆಲವರನ್ನು ನಿಷೇಧಿತ ಜಾಗಗಳಲ್ಲಿಯೂ ದುಡಿಸಿಕೊಳ್ಳಲಾಗುತ್ತಿದೆ. ಕೆಲ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಕಳ್ಳತನದಲ್ಲಿ ತೊಡಗುವುದೂ ಇದೆ. ಈ ಕಾರಣದಿಂದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳನ್ನು ರಕ್ಷಣೆ ಮಾಡುವ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರ ಯೋಚಿಸುತ್ತಿದೆ. ಇದು ಎಲ್ಲರ ಹೊಣೆ. ಇಂಥ ಮಕ್ಕಳನ್ನು ಕಂಡವರು 1098 ಮಕ್ಕಳ ಸಹಾಯವಾಣಿಗೆ ತಕ್ಷಣ ಮಾಹಿತಿ ನೀಡಬಹುದು.
ಅಶೋಕ್‌ ಜಿ. ನಿಜಗಣ್ಣವರ,
ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ

ವಿಶೇಷವೆಂದರೆ ಹೀಗೆ ರೈಲು ಹತ್ತಿ ಬರುವ ಮಕ್ಕಳೆಲ್ಲರೂ ಬಡತನದಿಂದ ಬರುತ್ತಿದ್ದಾರೆ ಎನ್ನುವಂತಿಲ್ಲ. ಕೆಲವರಿಗೆ ಶಾಲೆ ಬೇಡ. ಕೆಲವರಿಗೆ ಪೋಷಕರ ಹಿಂಸೆ. ಇನ್ನು ಕೆಲ ಮಕ್ಕಳಿಗೆ ಕೆಟ್ಟವರ ಸಹವಾಸ. ಅನೇಕರಿಗೆ ಬೆಂಗಳೂರಿನ ಮೋಹ. ಹೀಗೆ ಸಾಥಿ ಸಂಸ್ಥೆ 120 ಕಾರಣಗಳನ್ನು ಗುರುತಿಸಿದೆ. ಕೆಲವು ಅಪ್ಪಂದರೇ ಮಕ್ಕಳನ್ನು ಮಾರಾಟ ಮಾಡಿದ್ದೂ ಇದೆ. ಹೀಗೆ ಇಲ್ಲಿಗೆ ಬರುವ ಮಕ್ಕಳಲ್ಲಿ ಬಹುತೇಕರು ಎಂಟರಿಂದ ಹದಿನಾಲ್ಕು ವರ್ಷದೊಳಗಿನವರು, ಬೇರೆ ರಾಜ್ಯದವರು.

ಒಂದೊಂದು ಕತೆ
ಉತ್ತರ ಪ್ರದೇಶದ 14 ವರ್ಷದ ಸಂಗ್ರಾಮ್ ಎಂಟನೇ ತರಗತಿಯ ವಿದ್ಯಾರ್ಥಿ. ‘ಶಾಲೆಯಲ್ಲಿ ಟೀಚರ್‌ ತುಂಬ ಹೊಡಿತಾರೆ. ಅವರ ಭಯದಿಂದ ರೈಲು ಹತ್ತಿದ್ದೇನೆ. ಸಾಥಿ ಅಣ್ಣಂದಿರು ನನ್ನನ್ನು ಇಲ್ಲಿಗೆ ತಂದು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಲ್ಲಿಗೆ ಬಂದ ನಂತರ ಮನೆಗೆ ಹೋಗಬೇಕು ಎನಿಸಿದೆ. ಇನ್ನು ಮನೆಬಿಟ್ಟು ಬರುವುದಿಲ್ಲ. ಶಾಲೆಗೆ ಹೋಗುವುದು ನನಗೆ ಇಷ್ಟ. ಬೇರೆ ಶಾಲೆಗೆ ಸೇರಿಸಿದರೆ  ಹೋಗುತ್ತೇನೆ’ ಎನ್ನುತ್ತಾನೆ. ಕೊನೆಗೆ ಕೆಲ ಪೋಷಕರು ಮಕ್ಕಳನ್ನು ಕರೆದುಕೊಂಡು ಹೊರಟಾಗ ನನ್ನನ್ನು ಕರೆದೊಯ್ಯಲು ಯಾಕೆ ಯಾರೂ ಬಂದಿಲ್ಲ ಎಂದು ಸಾಥಿ ಸಿಬ್ಬಂದಿಯ ಕೈ ಹಿಡಿದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಗೋರಖ್‌ಪುರದ ದಿಲೀಪ್‌ನ ಅಮ್ಮ ಹೇಳುವಂತೆ ಅಪ್ಪ ಮಾನಸಿಕ ಅಸ್ವಸ್ಥ. ‘ಅಪ್ಪ ಸದಾ ಊರೂರು ಅಲೆಯುತ್ತಿರುತ್ತಾನೆ. ಬೆಂಗಳೂರಿನಲ್ಲಿರುವ ಸಂಬಂಧಿಯ ಮನೆಗೆ ಎರಡು ತಿಂಗಳ ಹಿಂದೆ ಮಗನನ್ನು ಕಳುಹಿಸಿದ್ದೆ’ ಎಂದು   ಅಮ್ಮ ಬಿಮಲಾ ಪದೇಪದೇ ಹೇಳುತ್ತಿದ್ದಳು.  ಆದರೆ ಸಾಥಿ ಸಿಬ್ಬಂದಿ ಆತ ರೈಲಿನಲ್ಲಿ ಬಂದಿಳಿದ ತಕ್ಷಣ ಎರಡು ದಿನದ ಹಿಂದೆಯಷ್ಟೇ ವಶಪಡಿಸಿಕೊಂಡಿದ್ದರು.

ದಿನಕ್ಕೆ ಎಂಟ್ಹತ್ತು ಮಕ್ಕಳು
ವರ್ಷದಲ್ಲಿ ಸುಮಾರು 6 ಸಾವಿರದಷ್ಟು ಮಕ್ಕಳನ್ನು ಸಾಥಿ ಸಂಸ್ಥೆ ಹೆತ್ತವರಿಗೆ ಒಪ್ಪಿಸುತ್ತಿದೆ. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ 15 ಮಕ್ಕಳು ಸಿಗುತ್ತಿದ್ದಾರೆ. ಯಶವಂತಪುರದಲ್ಲಿ ದಿನವೂ 8ರಿಂದ 10 ಮಕ್ಕಳು ಬಂದಿಳಿಯುತ್ತಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 28 ಮಕ್ಕಳು ಸಿಕ್ಕಿದ್ದಾರೆ. ಮಕ್ಕಳ ಮಾಹಿತಿ ಪಡೆದು  ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗುತ್ತದೆ. ನಂತರ ಪೋಷಕರನ್ನು ಸಂಪರ್ಕಿಸಿ ಕರೆಸಿ ಅವರಿಂದ ಕುಟುಂಬದ ಸಂಪೂರ್ಣ ಮಾಹಿತಿ ಪಡೆದು ಕಳುಹಿಸಲಾಗುತ್ತದೆ.
–ಬಸವರಾಜ್‌, ಸಾಥಿ ಕಾರ್ಯದರ್ಶಿ

ಬೀದರಿನ ಹಳ್ಳಿಯೊಂದರಲ್ಲಿ ಹತ್ತನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಸಂತೋಷ್‌ಗೆ ವಿಜ್ಞಾನ ವಿಷಯ ಇಷ್ಟವಿಲ್ಲದಿದ್ದರೂ ಸೋದರ ಸಂಬಂಧಿಯ ಜೊತೆ ಬೆಂಗಳೂರಿಗೆ ಕಳಿಸಿದ್ದಾರೆ. ಸಹಕಾರ ನಗರದ ಕಾವೇರಿ ಕಾಲೇಜಿನಲ್ಲಿ ₨35 ಸಾವಿರ ಶುಲ್ಕ ಪಾವತಿಸಿ ಪಿಯುಸಿಗೆ ಸೇರಿಸಿದ್ದಾರೆ. ‘ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ವಿಜ್ಞಾನ ವಿಷಯ ಅರ್ಥವಾಗುತ್ತಿಲ್ಲ ಎಂದು  ಪೋಷಕರಿಗೆ  ಹೇಳಿದರೂ ಅದನ್ನೇ ಓದುವಂತೆ ಒತ್ತಡ ಹೇರಿದ್ದಾರೆ. ನಿನ್ನೆಯಷ್ಟೇ ಊರಿಗೆ ಹೋಗುವ ಉದ್ದೇಶದಿಂದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದೆ ಎನ್ನುತ್ತಾನೆ. ಸಾಥಿ ಸದಸ್ಯರು ವಿಷಯ ತಿಳಿದು ಆತನನ್ನು ವಶಕ್ಕೆ ಪಡೆದಿದ್ದಾರೆ. ಸಂಬಂಧಿಯನ್ನು ಕರೆಸಿ ಕಲಾ ವಿಭಾಗದಲ್ಲಿಯೇ ಓದಿಸುವಂತೆ ಹೇಳಿ ಕಳುಹಿಸಿದ್ದಾರೆ.

ಉತ್ತರ ಪ್ರದೇಶದ ಬಾಲಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಗರಗಳಿಗೆ ಕರೆತರುವ ದಲ್ಲಾಳಿ ತಿಂಗಳಿಗೆ ₨2 ಸಾವಿರ ಸಂಬಳ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದಾನೆ. ಇದಕ್ಕೆ ಹುಡುಗನ ಅಪ್ಪ ಒಪ್ಪಿದ್ದಾನೆ ಎಂದು ಹುಡುಗ ಹೇಳುತ್ತಾನೆ. ಇಲ್ಲಿಗೆ ಬಂದ ನಂತರ ಕೆಲಸ ಮಾಡಿಸಿ, ಕಾಸು ಕೊಡದೆ ಶೋಷಣೆ ಮಾಡಿದ್ದಾನೆ. ಹುಡುಗ ಅಲ್ಲಿಂದ ತಪ್ಪಿಸಿಕೊಂಡು ರೈಲ್ವೆ ನಿಲ್ದಾಣದ ಪಾಲಾಗಿದ್ದಾನೆ.

ಬಳ್ಳಾರಿಯ ಮಾರುತಿ ಹನ್ನೆರಡು ವರ್ಷದ ಹುಡುಗ. ಕೊಠಡಿಯ ಮೂಲೆಯ ಕುರ್ಚಿಯಲ್ಲಿ ಕುಳಿತು ಅಲುಗಾಡಲೂ ಆಗದೆ ನರಕಯಾತನೆ ಪಡುತ್ತಿದ್ದ. ಮಾರುತಿಗೆ ಮನೆ ಬಿಟ್ಟು ಬರುವುದು, ಮತ್ತೆ ಹೋಗುವುದು ಹೊಸದೇನಲ್ಲ. ಮೂರು ಸಲ ಬಾಲಕರ ಬಾಲಮಂದಿರದಿಂದ ತಪ್ಪಿಸಿಕೊಂಡು ಹೋಗಿದ್ದ. ಎಷ್ಟೇ ಮನ ಒಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಭಾನುವಾರ ಮಧ್ಯರಾತ್ರಿ ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಮತ್ತೆ ‘ಸಾಥಿ’ಯವರ ಕಣ್ಣಿಗೆ ಬಿದ್ದಿದ್ದಾನೆ. ಮೈತುಂಬ ಕಜ್ಜಿ ತುಂಬಿಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT