ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೀತಾ ಸ್ವಯಂವರ’ದ ನಾಟ್ಯಧರ್ಮಿ

Last Updated 11 ನವೆಂಬರ್ 2013, 19:30 IST
ಅಕ್ಷರ ಗಾತ್ರ

‘ಸೀತಾ ಸ್ವಯಂವರ’ ನಾಟಕದ ರಾಮ, ‘ಗಾಂಧಿ ವರ್ಸಸ್ ಗಾಂಧಿ’ಯ ಗಾಂಧೀಜಿ-: ಒಬ್ಬ ಪುರಾಣದ ಮರ್ಯಾದಾ ಪುರುಷ ರಾಮ. ಮತ್ತೊಬ್ಬರು ಭಾರತದ ಮಹಾತ್ಮ ಗಾಂಧೀಜಿ. ಗಾಂಧಿಯ ಆದರ್ಶದ ದೈವ ರಾಮ. ಹೀಗೆ ಮತ್ತೊಮ್ಮೆ ರಾಮನೊಂದಿಗೆ ತಳಕು ಹಾಕಿಕೊಂಡ ಗಾಂಧೀಜಿ, ಗಾಂಧಿಯ ಆದರ್ಶದ ರಾಮ; ಹೀಗೊಂದು ಸುಯೋಗ ಸಮೀಕರಣದಿಂದ ಈ ಬಾರಿಯ ತಿರುಗಾಟ ಅರ್ಥಪ್ರದಗೊಂಡಿತು. ಅನಾಚೂನವಾಗಿ ರಾಮ ಮತ್ತು ಗಾಂಧಿಯನ್ನು ಒಂದೇ ರಂಗದಲ್ಲಿ ಕ್ರಮವಾಗಿ ಒಂದು ಮತ್ತು ಎರಡನೆಯ ದಿನ ಕಟ್ಟಿಕೊಂಡು ರಾಮ ಮತ್ತು ಗಾಂಧಿಯನ್ನ ಕುರಿತ ರಂಗ ಕೃತಿಗಳು ಭಿನ್ನ ಮಾರ್ಗದಲ್ಲಿ ಅನುಸಂಧಾನಗೊಂಡದ್ದು ಈ ಬಾರಿಯ ನೀನಾಸಂ ತಿರುಗಾಟದ ವಿಶೇಷ.

ಒಟ್ಟೂ ಪ್ರಯೋಗದ ಮುಖಾಂತರ ನಮಗೆ ಅನ್ನಿಸಿದ್ದು, ಕಾಡಿದ್ದು, ಯಾಕೆ ಹೀಗೆ ಗಾಂಧೀಜಿ ಮತ್ತು ರಾಮ ಪದೇಪದೇ ಪ್ರಸ್ತುತಕ್ಕೆ ಎಡತಾಕುತ್ತಾರೆ, ಮತ್ತೆ ಮತ್ತೆ ನಮ್ಮನ್ನು ಕಾಡುತ್ತಾರೆ? ವಿಮರ್ಶೆಗೊಳಗಾಗುತ್ತಾರೆ? ಅದ್ಭುತವಾಗುತ್ತಾರೆ? ಅನನ್ಯವಾಗುತ್ತಾರೆ? ಯಾಕೆ ಈ ಎರಡು ಪ್ರತೀಕಗಳೆಡೆಗೆ ನಮ್ಮ ಚಿತ್ತವೃತ್ತಿ ಪದೇಪದೇ ಹರಿಯುತ್ತದೆ, ಆನಂದತುಂದಿಲವಾಗುತ್ತದೆ, ಆರ್ದ್ರಗೊಳ್ಳುತ್ತದೆ? ಈ ಎರಡು ಮಹಾನ್ ಚೇತನಗಳ ಅವಿಚ್ಛಿನ್ನತೆ, ಅಪೂರ್ವತೆ ಯಾವ ಮಟ್ಟಿನದು?

ಎರಡೂ ನಾಟಕಗಳಲ್ಲಿ ಈ ಎರಡೂ ಮಹಾನ್ ಪ್ರತೀಕಗಳು (ಪ್ರತೀಕವೆನ್ನುವುದು ಸದ್ಯದ ಬಹುಮುಖ್ಯ ಪರಿಭಾಷೆ, ಸಾಹಿತ್ಯಿಕವಾಗಿ ಪ್ರತೀಕವೆಂಬ ಪದ ಭಿನ್ನಾರ್ಥವುಳ್ಳದ್ದು, ಸಾಹಿತ್ಯದಲ್ಲಿ ಪ್ರತೀಕದ ಪರಿಭಾಷೆ, ಛಂದಸ್ಸಿನ ವಿಷಯದಲ್ಲಿ ಬರುತ್ತದೆ. ಇಂದು ಇಡೀ ಸಮಾಜ ಪ್ರತೀಕಗಳ ಮರೆಯಲ್ಲೇ, ತಮ್ಮ ಇಷ್ಟಾನಿಷ್ಟಗಳ, ನಂಬಿಕೆಗಳ ನೆಲೆ ಕಟ್ಟಿಕೊಂಡಿದ್ದಾರೆ, ಯಾವುವನ್ನು ನಾವು ಆದರ್ಶಗಳೆನ್ನುತ್ತೇವೋ? ಯಾರನ್ನ ಆದರ್ಶ ವ್ಯಕ್ತಿಗಳೆನ್ನುತ್ತೇವೋ? ಅವರನ್ನೇ ಪ್ರತಿಮೀಕರಿಸಿಕೊಂಡ, ಅವರ ಮರೆಯಲ್ಲೇ ನಿಂತು, ಅವರನ್ನು ಪಾಲಿಸುವ ಅದೆಷ್ಟು ಮಂದಿ ಆ ಆದರ್ಶ ವ್ಯಕ್ತಿಗಳನ್ನ ಪ್ರತೀಕಗಳನ್ನಾಗಿ ಮಾಡಿಕೊಂಡಿರುತ್ತಾರೆ? ಅವರನ್ನು ಮೂರ್ತೀಕರಿಸಿಕೊಂಡಿರುತ್ತಾರೆ? ಹೀಗೆ ಮೂರ್ತೀಕರಿಸುವ, ಇಷ್ಟದೈವವನ್ನಾಗಿ ಮಾಡಿಕೊಳ್ಳುವ, ಪ್ರತೀಕವನ್ನಾಗಿ ಮಾಡಿಕೊಳ್ಳುವ ಪರಿಭಾಷೆಯ ನಡುವೆ ಭಿನ್ನಾರ್ಥವಿಲ್ಲವೆಂದು ನನ್ನ ನಂಬಿಕೆ). ಕೆಲವೊಮ್ಮೆ ಜನರು ಕಟ್ಟಿಕೊಂಡಿರುವ ಪ್ರತೀಕದ ಮೂಲವಳಿದು ಅದು ಭಿನ್ನಗೊಂಡಿರುತ್ತದೆ, ವಿಚ್ಛಿದ್ರವಾಗಿರುತ್ತದೆ.

ಇಂದು ರಾಮ ಭಾರತದ ಆದರ್ಶ ಪುರುಷನ ಪ್ರತೀಕ. ಅವನು ಮರ್ಯಾದಾ ಪುರುಷೋತ್ತಮ. ಗಾಂಧೀಜಿ ಸತ್ಯದ ಪ್ರತೀಕ, ಅಹಿಂಸೆಯ ಪ್ರತೀಕ. ಕೆಲವೊಮ್ಮೆ ವ್ಯಕ್ತಿಯಳಿದು ಅವರ ಪ್ರತೀಕವೇ ಉಳಿದುಬಿಡುತ್ತದೆ. ಹೀಗೆ ಪ್ರತೀಕಗೊಂಡ ಎರಡು ಮಹಾನ್ ಪ್ರಭೃತಿಗಳನ್ನು ಪ್ರಯೋಗಮುಖಿಯಾಗಿ, ಪ್ರಸ್ತುತಮುಖಿಯಾಗಿ ನೋಡಿದರೆ; ಇಂದೂ ಶೋಧನೆಗೊಳಗಾಗುತ್ತಿರುವ ಈ ಮಹಾನ್ ವ್ಯಕ್ತಿಗಳು, ನಾಟಕದಲ್ಲೂ ತಮ್ಮ ಪ್ರತಿ ಪಾತ್ರಗಳಿಂದ ಮರುಶೋಧನೆಗೊಳ್ಳತ್ತವೆ. ಅಸತ್ಯ ಸತ್ಯವನ್ನು ಶೋಧನೆಗೆ ಒಳಪಡಿಸಿದಂತೆ, ಶುದ್ಧತೆ ಅಶುದ್ಧತೆಯನ್ನು ಎಡತಾಕಿದಂತೆ. ಮೊದಲ ನಾಟಕದಲ್ಲಿ ರಾಮನು ರಾವಣನಿಂದ ಶೋಧನೆಗೊಳಗಾದರೆ, ಎರಡನೇ ನಾಟಕದಲ್ಲಿ ಗಾಂಧೀಜಿ ತನ್ನ ಮಗನೇ ಆದ ಹರಿಲಾಲನಿಂದ ಶೋಧನೆಗೊಳಗಾಗುತ್ತಾರೆ.

ಶೋಧನೆ ಎನ್ನುವ ಪದ ಉತ್ಪ್ರೇಕ್ಷೆಯಾದರೂ, ನಿಜವಾಗಿ ಯಾರು ಸತ್ಯ, ಯಾರು ಸುಳ್ಳು ಎಂಬ ಪ್ರಶ್ನೆ ಕಾಡಿದರೂ, ಸಾಮಾನ್ಯೀಕರಣದಲ್ಲಿ ಎರಡೂ ನಾಟಕಗಳು ಸತ್ಯದ ಶೋಧನೆಯ , ನೀತಿ, ಆದರ್ಶದ ಶೋಧನೆಯ ಕಥಾನಕಗಳು, ನಾಯಕನನ್ನು ಪ್ರತಿನಾಯಕನೂ ಸೇರಿದಂತೆ, ಪರಿಸ್ಥಿತಿ ಶೋಧನೆಗೊಳಪಡಿಸುತ್ತಾ ಹೋಗುತ್ತವೆ. ಶೋಧಿಸಿದಂತೆ ನಾಯಕ ತಿಳಿನೀರೇ ಆಗುತ್ತಾನೆ. ಪ್ರತಿನಾಯಕ ರೂಢಿಯಂತೆ ಸೋಲುತ್ತಾನೆ, ಸಾಯುತ್ತಾನೆ. ನಾಯಕನ ವಿರುದ್ಧ ಪ್ರತಿನಾಯಕ ಹೀಗೆನ್ನುವುದು ಕ್ಲೀಷಾತ್ಮಕ ಪ್ರತಿಮೆ, ಇರಲಿ.

ಮೊದಲ ಭಾಗದಲ್ಲಿ ‘ಸೀತಾ ಸ್ವಯಂವರ’ ನಾಟಕವನ್ನು ತೆಗೆದುಕೊಳ್ಳೋಣ. ಇದರಲ್ಲಿ ರಾಮ ಕಥಾನಾಯಕ. ರಾವಣ ಪ್ರತಿನಾಯಕ. ಎಂ.ಎಲ್. ಶ್ರೀಕಂಠೇಶಗೌಡರು 19ನೇ ಶತಮಾನದ ಆದಿಯಲ್ಲಿ ಬರೆದ ಈ ನಾಟಕ, ವಾಲ್ಮೀಕಿ ರಾಮಾಯಣದ ಕಥಾ ರೂಪಾಂತರ. ಬಾಲಕಾಂಡದಲ್ಲಿ ಬರುವ ಸೀತಾಸ್ವಯಂವರದ ಕಥೆಯನ್ನು ಗೌಡರು ----ಬೇರೆಯದೇ ರೀತಿಯಲ್ಲಿ ರೂಪಾಂತರಿಸಿಕೊಂಡಿದ್ದಾರೆ.ಸೀತಾ ಸ್ವಯಂವರಕ್ಕೆ ರಾಮ-ಲಕ್ಷಣರ ಸಮೇತ ವಿಶ್ವಾಮಿತ್ರನು ಕೌಶೀಕಾಶ್ರಮಕ್ಕೆ ಬಂದರೆ, ಮೂಲ ರಾಮಾಯಣದಲ್ಲಿ ಇಲ್ಲದ ಒಂದು ಬದಲಾವಣೆ ರಾವಣ, ರಾಮನ ವೇಷ ಧರಿಸಿ ಸೀತೆಯನ್ನು ವರಿಸಲು ಹೋಗುತ್ತಾನೆ. ಹೀಗೆ ಪ್ರಾರಂಭವಾಗುವ ಕಥೆ, ಮರೀಚ ಕರಾಳರು, ಮಾಯಾ ಸೀತೆ, ಹೀಗೆ ಅದಲು ಬದಲು, ನಾಟಕೀಯತೆ ಪ್ರಹಸನ, ಎಲ್ಲವೂ ನಡೆದು ಕೊನೆಗೆ ರಾಮನು ಶಿವಧನುರ್ಭಂಗ ಮಾಡುವುದರೊಂದಿಗೆ ರಾಮಾ ಸೀತೆಯರ ವಿವಾಹವಾಗುವವರೆಗೆ ಬೆಳೆಯುತ್ತದೆ.

ರೂಢಿಯಂತೆ ಪುರಾಣ್ಯವಾದ ಕಥೆಗೆ ‘ನಾಟ್ಯಧರ್ಮಿ’ (ನಾಟ್ಯಧರ್ಮಿ ಅಂದರೆ ನೀನಾಸಂನ ಬಹು ಪ್ರಸಿದ್ಧ ಯಕ್ಷಗಾನ) ವಿನ್ಯಾಸವಿದೆ. ಯಕ್ಷಗಾನ ಕಲಿತ ನಿರ್ದೇಶಕ ಮುಂಜು ಬಡಿಗೇರ ಎಲ್ಲವನ್ನೂ ಯಕ್ಷಗಾನದಲ್ಲೇ ಮಾಡಿಸುತ್ತಾರೆ. ಇಡೀ ಕಥೆಯ ಆವರಣಕ್ಕೆ ಯಕ್ಷಗಾನ ಹೊಂದಿಕೆಯಾಗುತ್ತದೆ. ಸಾಂಪ್ರದಾಯಿಕ ಯಕ್ಷಗಾನ ಕಲೆಗೂ ಅದನ್ನು ಆಧುನಿಕ ನಾಟಕಗಳಿಗೆ ಹೊಂದಿಸುವ ಪ್ರಕ್ರಿಯೆಗೂ ಒಂದು ಬಹುಮುಖ್ಯ ಫರಕಿದೆ. ಅದರಲ್ಲಿ ಕುಣಿತಕ್ಕೆ ಸಂವಾದಿಯಾಗಿ ಒಂದು ಉತ್ಪ್ರೇಕ್ಷಿತ ಏರು ಮಾತಿನ ಧಾಟಿ ಇರುತ್ತದೆ. ಆದರೆ ಆಧುನಿಕ ನಾಟಕದಲ್ಲಿ ಆ ಮಾದರಿ ಬಳಸಿದರೆ ನಾಟಕದ ಸೂಕ್ಷ್ಮ, ಧ್ವನಿ ಮಾದರಿಗಳು, ಬಳಕೆಯಾಗದೆ ಏಕತಾನತೆ ಬಂದುಬಿಡುತ್ತದೆ.

ಇದು ‘ನಾಟ್ಯಧರ್ಮಿ’ಯ ಅಳವಡಿಕೆಯ ಒಂದು ಕೊರತೆ. ‘ಸೀತಾ ಸ್ವಯಂವರ’ದಲ್ಲೂ ಚೆಂಡೆಯ ಅಬ್ಬರ ಮತ್ತು ಕುಣಿತದ ಮಧ್ಯೆ ಕೆಲವು ಸೂಕ್ಷ್ಮಗಳು ತೇಲಿ ಹೋಗುತ್ತವೆ. ಬಹು ಸಾಂದ್ರವಾದ ರಸಾನುಭವಾಗುವುದಿಲ್ಲ. ನೀನಾಸಂ ನಂಥ ವೃತ್ತಿಪರ ರಂಗತಂಡಗಳಲ್ಲಿ ತಾಂತ್ರಿಕ ತಪ್ಪುಗಳನ್ನು ಹುಡುಕುವುದು ಕಷ್ಟವಾದರೂ ಹವ್ಯಾಸಿಗಳಿಗೆ ನೀಡಬಹುದಾದ ಸಡಿಲಿಕೆಯನ್ನು ನೀಡಲಾಗುವುದಿಲ್ಲ.  ಆದರೆ ನಟರ ಅರೆ ವೃತ್ತಿಪರತೆ, ನಾಟಕದ ನಿಧಾನ ಓಟ, ಅತಿ ಸೂಕ್ಷ್ಮ ವಿಚಾರಗಳು ಈ ಪ್ರಯೋಗದಲ್ಲಿ ತೇಲಿ ಹೋದಂತೆನ್ನಿಸುತ್ತವೆ.

ಆದರೆ ನಾವು ಗಮನಿಸಬೇಕಾದದ್ದು ಶ್ರೀಕಂಠೇಶಗೌಡರೇಕೆ ರಾವಣನಿಗೆ ರಾಮನ ವೇಷ ಹಾಕಿಸುತ್ತಾರೆ? ಅದೂ ಇಂದು ದೇವಸ್ಥಾನಗಳಲ್ಲಿ, ಫೋಟೊಗಳಲ್ಲಿ ಇರುವಂತೆ, ಧನುರ್ಧಾರಿ, ನೀಲರಾಮ, ಕೊರಳಲ್ಲಿ ಹಾರವಿದೆ, ಕೈಯಲ್ಲಿ ಬಿಲ್ಲು, ಭುಜದಲ್ಲಿ ಬತ್ತಳಿಕೆ, ತಲೆಗೆ ಕಿರೀಟ ಇರುವ ನೀಲ ರಾಮ. ಆದರೆ ನಾಟಕದ ನಿಜದ ರಾಮ ಹಾಗಿಲ್ಲ. ಅವನು ನಮ್ಮೆಲ್ಲರಂತೆ ಮಾಮೂಲಿ. ಇದರ ಪಾತ್ರ ಚಿತ್ರಣದಲ್ಲಿ ನಿರ್ದೇಶಕರ ಕೌಶಲ ಕಾಣುತ್ತದೆ. ಇದಕ್ಕೂ ಮೊದಲು ಸೀತೆ ಬಿಡಿಸುವ ಕನಸನಲ್ಲಿ ಕಂಡ ರಾಮನ ಚಿತ್ರ, ಇಂದು ಕೆಲವು ಸಂಘಟನೆಗಳು ಕಟ್ಟಿಕೊಂಡ ಯುದ್ಧಾರೂಢ ರಾಮ. ನಮಗೆ ರಾಮನಂತೆ ಕಾಣುವ ರಾಮನ ಪ್ರತೀಕದ ಹಿಂದೆ ರಾವಣನಿದ್ದಾನೆ, ರಾಮನ ವೇಷ ಹಾಕಿಕೊಂಡು ಎನ್ನುವುದು ಬಹುಮುಖ್ಯ ಅಂಶ.

ಅದನ್ನು ಮಾಡುವ ನಟನೂ (ಶೋಧನ್) ಸೊಗಸಾಗಿ ಅದನ್ನು ಅಭಿನಯಿಸುತ್ತಾನೆ. ಥೇಟ್ ರಾಮನ ವೇಷಧಾರಿ ಇತ್ತ ರಾಮನೂ ಆಗದ ಅತ್ತ ರಾವಣನೂ ಆಗದ ಎಡಬಿಡಂಗಿತನವನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸುತ್ತಾನೆ. ಆ ಎಡಬಿಡಂಗಿ ವ್ಯಕಿತ್ವ ಯಾವುದು? ಸ್ವಲ್ಪ ಯೋಚಿಸಿದರೆ ತಿಳಿಯುತ್ತದೆ. ನಾನು ಶೋಧನೆ ಎಂದದ್ದು ಇದೇ ಕಾರಣಕ್ಕೆ. ಇಲ್ಲಿ ರಾಮತ್ವ ರಾವಣನೊಬ್ಬನಿಂದ ಶೋಧನೆಗೊಳ್ಳುತ್ತಿದೆ. ಅದನ್ನು ಪ್ರಸ್ತುತಕ್ಕೆ ಎಳೆದು ತಂದರೆ ಶ್ರೀಕಂಠೇಶಗೌಡರ ನಿರ್ಮಿತಿಯ ಅರ್ಥನಿಷ್ಪತ್ತಿ ಸರಿಯಾಗಿ ಆಗುತ್ತದೆ.

ರಾಮನನ್ನು ಪ್ರತೀಕ ಮಾಡಿಕೊಂಡ, ರಾಮನೇ ಆದ ರಾಮನ ಹಿಂದೆ ಎಂಥಾ ರಾವಣರಿದ್ದಾರೆ? ಯಾವ ರೀತಿ ಆಟವಾಡುತ್ತಿದ್ದಾರೆ? ರಾಮತ್ವ ಯಾವ ರೀತಿ ಉಸಿರುಕಟ್ಟುತ್ತಿದೆ? ನಾವು ನಂಬಿ ತುಂಬಿಕೊಳ್ಳಬೇಕಾದ ರಾಮ ಯಾರು? ರಾವಣ ವೇಷಧಾರಿ ರಾಮನೋ, ಸೀತೆಯ ಫೋಟೊದ ರಾಮನೋ? ಅಥವಾ ನಮ್ಮ ಹಾಗಿರುವ ಮಾಮೂಲಿ ರಾಮನೋ? ನಿರ್ದೇಶಕರು ಈ ಸೂಕ್ಷ್ಮವನ್ನು ಬಹು ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ರಂಗದ ಮೇಲೆ ಇದು ಅನನ್ಯವಾಗಿ ಅರ್ಥಗಟ್ಟುತ್ತದೆ.

ಪ್ರಯೋಗದಲ್ಲಿ ನೀಚಪಾತ್ರಗಳೇ ಶಕ್ತಿಯುತವಾಗಿ ಕಾಣುವುದು ನಟರ ಸಮಸ್ಯೆಯೂ ಪ್ರಸ್ತುತದ ಸಮಸ್ಯೆಯೂ ಆಗುತ್ತದೆ. ಉದಾ:- ರಾಮನ ಪಾತ್ರಧಾರಿ (ವಿನೀತ್) ಅಭಿನಯದಲ್ಲಿ ಪೇಲವ. ಮಾರೀಚ (ಚಂದ್ರು) ಕರಾಳ (ರಾಘು) ಅವರ ಚೈತನ್ಯದ ಮುಂದೆ ಉಳಿದವರು ಸಪ್ಪೆಯಾಗಿ ತೋರುತ್ತಾರೆ. ತಂತ್ರಗಾರಿಕೆ ಕೆಲವು ಕಡೆ ಅಧ್ಭುತವಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಬೆಳಕಿನ ಸೂಕ್ಷ್ಮ ನಿರ್ವಹಣೆಯನ್ನು ನಿರ್ವಹಣೆಕಾರರು ಅರಿತುಕೊಂಡರೆ ನಾಟಕದ ಗತಿಗನುಗುಣ ಬೆಳಕು ಸಾಧ್ಯ. ಸಂಗೀತದಲ್ಲಿ ಕಳೆಗಟ್ಟುವ ನಾಟಕ, ಅದರ ಆಶಯದಿಂದ ಜ್ವಲಿಸುತ್ತದೆ. ಪ್ರದರ್ಶನದ ಸಾಂದ್ರತೆಯ ವಿಚಾರಕ್ಕೆ ಬಂದರೆ ಸ್ವಲ್ಪ ಕಳಾಹೀನ. ಇದೇ ನಿರ್ದೇಶಕರ ಹಿಂದಿನ ತಿರುಗಾಟದ ನಾಟಕ ಶೂದ್ರ ತಪಸ್ವಿಯೂ ಈ ನಾಟಕವೂ ವಿನ್ಯಾಸದಲ್ಲಿ ಬಹುಮಟ್ಟಿಗೆ ಒಂದೇ ಎನ್ನಿಸುತ್ತವೆ.

ಇನ್ನು ಎರಡನೆಯ ನಾಟಕ ‘ಗಾಂಧಿ ವಿರುದ್ಧ ಗಾಂಧಿ’ಯನ್ನು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT