ಬುಧವಾರ, ಏಪ್ರಿಲ್ 14, 2021
24 °C

ಸಿಟಿಜನರೇ ಕೇಳದೆ ನಿಮಗೀಗ..!

ಪ್ರದೀಪ ಟಿ.ಕೆ Updated:

ಅಕ್ಷರ ಗಾತ್ರ : | |

ನೀವು ಸಂಗೀತ ಪ್ರೇಮಿಗಳೇ. ಒಳ್ಳೆಯ ವಿಚಾರ. ಅಂತೆಯೇ ಅದಕ್ಕಾಗಿ ಸತತ ಇಯರ್ ಫೋನ್ ಬಳಸುತ್ತೀರಾ. ಹಾಗಾದರೇ ನಿಮ್ಮ ಕಿವಿಯ ಬಗ್ಗೆ ಇರಲಿ ಎಚ್ಚರ. ಇತ್ತೀಚಿಗೆ ಇಯರ್ ಫೋನ್ ಬಳಕೆ ಹೆಚ್ಚುತ್ತಿದ್ದು ಎಲ್ಲ ವಯೋಮಾನದವರೂ ಇದರಿಂದ ಹೊರತಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜೋರು ಸಂಗೀತ ಕೇಳುವಾಗ ‘ಅಷ್ಟೂ ಗೊತ್ತಾಗಲ್ವಾ, ಇಯರ್ ಫೋನ್ ಬಳಸಿ’ ಎಂಬ ಮಾತನ್ನು ಸಾಮಾನ್ಯಾವಾಗಿ ಕೇಳಿರುತ್ತೇವೆ. ಆದರೆ ನಿಮಗೆ ಗೊತ್ತೇ, ನಿರಂತರ ಇಯರ್ ಫೋನ್ ಬಳಕೆ ಕಿವಿ, ಮೆದುಳಿಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣ ಎಂದು. ಮಾತ್ರವಲ್ಲ ಒಂದು ದೊಡ್ಡ ಧ್ವನಿ ವರ್ಧಕದಲ್ಲಿನ ಶಬ್ದದ ಕೇಳುವಿಕೆಯ ನಂತರ, ಸಂಪೂರ್ಣ ಸಹಜ ಸ್ಥಿತಿಗೆ ಹಿಂತಿರುಗಲು 16 ಗಂಟೆಗಳ ಮೌನದ ಅಗತ್ಯವಿದೆ. ಹೀಗಿರುವಾಗ ನಿರಂತರ ಇಯರ್‌ಫೋನ್ ಬಳಕೆ ಸಮಸ್ಯೆಗಳಿಗೆ ನಾಂದಿ ಹಾಡಬಲ್ಲದು.

ಹದಿಹರೆಯದವರು ಮತ್ತು ಯುವ ಜನತೆ ಆಡಿಯೋ ಸಾಧನಗಳ ಅಸುರಕ್ಷಿತ ಬಳಕೆಯಿಂದ ಶಬ್ದ ಪ್ರೇರಿತ ಕಿವುಡುತನದ ಅಪಾಯಕ್ಕೆ ಒಳಗಾಗಿದ್ದಾರೆ. ಇಯರ್ ಫೋನ್ ಅನ್ನು ನೇರವಾಗಿ ಕಿವಿಗೆ ಇಟ್ಟುಕೊಳ್ಳುವುದರಿಂದ ಧ್ವನಿ ತರಂಗಾಂತರಗಳು ನೇರವಾಗಿ ಕಿವಿಗೆ ಅಪ್ಪಳಿಸುತ್ತವೆ. ಇದರ ಧ್ವನಿ 90 ಡೆಸಿಬಲ್‌ಗಳಿಗಿಂತ ಹೆಚ್ಚಿದ್ದರೆ ಕಿವಿಗೆ ತೊಂದರೆಯಾಗುವುದು ನಿಶ್ಚಿತ. ಅಲ್ಲದೇ ಸತತ ಕೆಲ ವರ್ಷಗಳು ಹೆಡ್ ಪೋನ್ ಹೆಚ್ಚು ಬಳಸಿದರೆ ಮುಂದೆ ಕಿವಿ ಕೇಳಿಸದಂತೆ ಆಗುವ ಸಾಧ್ಯತೆ ಇರುತ್ತದೆ. ‘ಥ್ರೆಶೋಲ್ಡ್ ಶಿಫ್ಟ್’ ಅಂದರೆ ವ್ಯಕ್ತಿಯ ಶ್ರವಣ ಸಾಮರ್ಥ್ಯವು ಕಡಿಮೆಯಾಗುತ್ತದೆ ಅಥವಾ ಕಿವಿ ಕೇಳಿಸದೇ ಹೋಗಬಹುದು. 

ಅಪಾಯಗಳೇನು?

ಕೆಲವರು ಅರೆಕಿವುಡು ಅಥವಾ ಶಾಶ್ವತ ಕಿವುಡಾಗುವ ಸಂದರ್ಭ ಹೆಚ್ಚಿರುತ್ತದೆ. ಕಿವಿಯಲ್ಲಿ ಇರಿತ, ತಲೆನೋವು, ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇತರರು ಬಳಸಿದ ಇಯರ್ ಫೋನ್‌ ಬಳಸುವುದರಿಂದ ಸೂಕ್ಷ್ಮಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಬಳಕೆ ಸ್ವಂತದ್ದಾಗಿರಲಿ. ಹೆಚ್ಚು ಧ್ವನಿ ಕಂಪನಗಳು ಕಿವಿ ಮೇಲೆ ಬಿದ್ದಾಗ ಕಿವಿಯೊಳಗಿರುವ ಕೊಕ್ಲಿಯಾ ಹಾನಿಗೊಳಗಾಗುತ್ತದೆ. ಇಯರ್‌ ಫೋನ್ ಅಥವಾ ಹೆಡ್ ಫೋನುಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳನ್ನು ಸೂಸುವ ಕಾರಣ, ಮೆದುಳಿನ ಮೇಲೆ ನೇರ ಪ್ರಭಾವ ಬೀರುತ್ತವೆ. ಕೆಲವರು ಇದನ್ನು ನಿರ್ಲಕ್ಷಿಸಬಹುದು. ಆದರೆ ದಿನಗಳೆದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರ ಒಳ್ಳೆಯದು.

WHO ವರದಿ

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, 1.1 ಶತಕೋಟಿ ಹದಿಹರೆಯದವರು ಮತ್ತು ಯುವ ವಯಸ್ಕರು ಆಡಿಯೋ ಸಾಧನಗಳ ಅಸುರಕ್ಷಿತ ಬಳಕೆಯಿಂದ ಶಬ್ದ ಪ್ರೇರಿತ ಕಿವುಡುತನದ ಅಪಾಯಕ್ಕೆ ಒಳಗಾಗಿದ್ದಾರೆ. 20 ಜನರಲ್ಲಿ ಒಬ್ಬರು ಈ ಅಪಾಯಕ್ಕೆ ಒಳಗಾಗಿದ್ದಾರೆ. ವಿಶ್ವದಾದ್ಯಂತ 432 ಮಿಲಿಯನ್ ವಯಸ್ಕರು ಶ್ರವಣ ದೋಷವನ್ನು ಎದುರಿಸುತ್ತಿದ್ದಾರೆ. ಇದು ಅವರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 2050ರ ವೇಳೆಗೆ 900 ದಶಲಕ್ಷಕ್ಕೂ ಹೆಚ್ಚು ಜನರು ಕಿವಿಯ ಗಂಭೀರ ಸಮಸ್ಯೆಗಳಿಗೆ ಬಲಿಯಾಗಲಿದ್ದಾರೆ ಎಂದು ಯುಎನ್ ಏಜೆನ್ಸಿ ಎಚ್ಚರಿಸಿದೆ.

ಅಂಕಿ ಅಂಶಗಳು ಹೇಳುವುದೇನು?

ಪ್ರಾರಂಭಿಕ ಹಂತದಲ್ಲಿ ಸೌಮ್ಯ, ಮಧ್ಯಮ ಪ್ರಮಾಣದಲ್ಲಿರುವ ಕಿವುಡುತನ ಇತ್ತೀಚಿಗೆ ಗಂಭೀರ ಸ್ವರೂಪ ಪಡೆದುಕೊಳ್ಳಲು ಆರಂಭಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶದ ಪ್ರಕಾರ 2018-19ನೇ ಸಾಲಿನಲ್ಲಿ 37,574 ಮಂದಿಯಲ್ಲಿ ಕಿವಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಲ್ಲಿ 15,363 ಮಂದಿ ಯುವಜನರೇ ಆಗಿದ್ದಾರೆ. ದಿನದಲ್ಲಿ ಒಂದು ಗಂಟೆಗಿಂತ ಅಧಿಕ ಸಮಯ ಇಯರ್ ಫೋನ್ ಬಳಸುತ್ತಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

60/60 ನಿಯಮ

ಕಿವಿ ತಜ್ಞರು ‘60/60’ ನಿಯಮವನ್ನು ಸೂಚಿಸುತ್ತಾರೆ. ದಿನಕ್ಕೆ 60 ನಿಮಿಷಗಳಿಗಿಂತಲೂ ಕಡಿಮೆ ಅವಧಿಯ, 60 ಪ್ರತಿಶತದಷ್ಟು ಕಡಿಮೆ ಶಬ್ದದ ಹೆಡ್ ಫೋನ್‌ಗಳನ್ನು ಬಳಸಬೆಕು. ಶಬ್ದ ಮಟ್ಟವನ್ನು ಡೆಸಿಬಲ್ಸ್‌ಗಳಲ್ಲಿ ಅಳೆಯಲಾಗುತ್ತದೆ. 2 ಗಂಟೆಗಳಿಗೂ ಹೆಚ್ಚಿನ, 90 ಡೆಸಿಬಲ್‌ ಮೀರಿದ ಶಬ್ದ, ಸಂಗೀತ ಆಲಿಸುವಿಕೆ ಕಿವಿಗಳ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರುತ್ತದೆ ಎನ್ನುತ್ತಾರೆ ವೈದ್ಯರು. ಹಾಗಾಗಿ ಟಿವಿ, ರೇಡಿಯೋದಂತಹ ಸಾಧನಗಳಲ್ಲೇ ಸಂಗೀತ ಆಲಿಸುವುದು ಒಳ್ಳೆಯದು ಎನ್ನುತ್ತಾರೆ. 

ಹೀಗೆ ಮಾಡಿ

* ಸಂಗೀತ ಕೇಳುವಾಗ ಧ್ವನಿ 50 ಡೆಸಿಬಲ್‌ಗಿಂತ ಕಡಿಮೆ ಮಟ್ಟದಲ್ಲಿ ಇರಲಿ.

* ನಿರಂತರವಾಗಿ ಇಯರ್ ಫೋನ್‌ನಲ್ಲಿ ಹಾಡು ಕೇಳುವ ಬದಲು ಪ್ರತಿ 30 ನಿಮಿಷಗಳಿಗೊಮ್ಮೆ, ಐದು ನಿಮಿಷ ಕಿವಿಗೆ ವಿಶ್ರಾಂತಿ ನೀಡಿ.

* ಇಯರ್ ಫೋನ್ ಬಳಕೆ ಸಂದರ್ಭದಲ್ಲಿ ಹೊರಗಿನ ಶಬ್ದ ಕಿವಿಗೆ ಕೇಳುವಂತಿರಲಿ. ಅತ್ಯಂತ ಅಗತ್ಯ ಎನಿಸಿದಾಗ ಮಾತ್ರ ಬಳಸುವುದು ಒಳ್ಳೆಯದು.

* ಫೋನ್ ಅನ್ನು ಚಾರ್ಜ್‌ಗೆ ಹಾಕಿರುವ ಸಂದರ್ಭದಲ್ಲಿ ಇಯರ್ ಫೋನ್ ಬಳಸುವುದು ತುಂಬಾ ಅಪಾಯಕಾರಿ.

* ಬ್ಯಾಟರಿ ಲೋ ಇರುವಾಗ ಇಯರ್ ಫೋನ್ ಬಳಸಬೇಡಿ. ಈ ಸಮಯದಲ್ಲಿ ರೇಡಿಯೇಷನ್ ಹೊರಹೊಮ್ಮುವ ಪ್ರಮಾಣ ಸಾವಿರ ಪಟ್ಟು ಹೆಚ್ಚಿರುತ್ತದೆ.

* ಕಿವಿ ಕೇಳಿಸುವ ಪ್ರಮಾಣ ಕಡಿಮೆಯಾಗುತ್ತಿದೆ ಎನಿಸಿದಲ್ಲಿ ತಕ್ಷಣ ವೈದ್ಯರ ಅಥವಾ ಆಡಿಯಾಲಜಿಸ್ಟ್ ಬಳಿ ಪರೀಕ್ಷಿಸಿಕೊಳ್ಳಿ.

* ಕ್ಯಾನಲ್ ಹೆಡ್ ಫೋನ್‌ ಬಳಸುವುದನ್ನು ತಪ್ಪಿಸಿ. 

* ಇಯರ್ ಫೋನ್ ಕೊಳ್ಳುವಾಗ ಅಗ್ಗದ ಬೆಲೆ ಎಂಬ ಕಾರಣಕ್ಕೆ ಕಡಿಮೆ ಗುಣಮಟ್ಟದ್ದನ್ನು ಕೊಳ್ಳುವುದು ಬೇಡ. ಪರೀಕ್ಷಿಸಿ ಉತ್ತಮ ಗುಣಮಟ್ಟದ್ದನ್ನೇ ಖರೀದಿಸುವುದು ಸೂಕ್ತ.

* ಇತ್ತೀಚೆಗೆ ಸಣ್ಣ ಮಕ್ಕಳ ಕೈನಲ್ಲೂ ಮೊಬೈಲ್ ಇಯರ್ ಫೋನ್ ಇರುತ್ತದೆ. ಮಕ್ಕಳಲ್ಲಿ ಇದರ ಬಳಕೆ ಅಪಾಯದ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಕ್ಕಳ ತಲೆ ಹಾಗೂ ಕಿವಿ ಸೇರಿದಂತೆ ಅಂಗಗಳು ಮೃದುವಾಗಿರುವುದರಿಂದ ರೇಡಿಯೇಷನ್ ಒಳಹೋಗುವ ಪ್ರಮಾಣ ಅಧಿಕವಾಗಿರುತ್ತದೆ. ಇದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು ಎನ್ನುತ್ತವೆ ವೈದ್ಯ ಮೂಲಗಳು. ಮಾತ್ರವಲ್ಲ ದೊಡ್ಡವರಿಗೂ ಇದು ಮಾರಕವೇ. ಹಾಗಾಗಿ ಇಯರ್‌ ಫೋನ್ ಖರೀದಿಸುವ, ಬಳಸುವ ಮುನ್ನ ಎಚ್ಚರಿಕೆಯ ಕ್ರಮ ಅಗತ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು