ಮಂಗಳವಾರ, ಮೇ 18, 2021
29 °C
ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರಗಳ ಜಾತ್ರಾ ಕಾರ್ಯಕ್ರಮ, ಡಿಸಿ ನೇತೃತ್ವದಲ್ಲಿ ಸಭೆ

ಜಾತ್ರಾ ಮಹೋತ್ಸವ | ಮಹದೇಶ್ವರ ಬೆಟ್ಟ: ಹೆಚ್ಚುವರಿ ಬಸ್‌, ಅಗತ್ಯ ಸಿದ್ಧತೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಮಹದೇಶ್ವರ ಬೆಟ್ಟದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ ಹಾಗೂ ಕಾರ್ತಿಕ ಸೋಮವಾರಗಳ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ‘ಜಾತ್ರಾ ದಿನಗಳಂದು 3 ಲಕ್ಷದಿಂದ 4 ಲಕ್ಷ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಸೌಕರ್ಯಕ್ಕೆ ಕೊರತೆಯಾಗದಂತೆ ಈಗಿನಿಂದಲೇ ಅವಶ್ಯ ಸಿದ್ಧತೆಗಳನ್ನು ಪ್ರಾರಂಭಿಸಬೇಕು’ ಎಂದರು.

ಜಿಲ್ಲೆಯ ವಿವಿಧ ಭಾಗಗಳಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳನ್ನು ನಿಯೋಜಿಸಬೇಕು. ಕಳೆದ ಬಾರಿಗಿಂತ ಕನಿಷ್ಠ ಶೇ 10ರಷ್ಟು ಬಸ್‌ಗಳನ್ನು ಹೆಚ್ಚು ಮಾಡಬೇಕಿದೆ’ ಎಂದರು.

‘ಕ್ಷೇತ್ರಕ್ಕೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಪ್ರಾಧಿಕಾರದ ನೀರು ಸಂಗ್ರಹಗಾರ, ಶುದ್ಧ ಕುಡಿಯುವ ನೀರಿನ ಘಟಕ, ತೊಂಬೆ ಮತ್ತಿತರ ಮೂಲಗಳಿಂದ ನೀರು ಸರಬರಾಜು ಮಾಡಬೇಕು. ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗಾಗಿ ವಡಕೆಹಳ್ಳದಿಂದಲೇ ಕುಡಿಯುವ ನೀರಿನ ಟ್ಯಾಂಕುಗಳನ್ನು ಇಡಬೇಕು. ವಿವಿಧ ಸ್ಥಳಗಳಲ್ಲಿ ನಲ್ಲಿಗಳ ಮೂಲಕವೂ ನೀರು ಪೂರೈಸಬೇಕು’ ಎಂದು ಅವರು ಸೂಚಿಸಿದರು.

ದಾಸೋಹ ವ್ಯವಸ್ಥೆ: ಲಕ್ಷಾಂತರ ಭಕ್ತರು ಬರುವುದರಿಂದ ನಿರಂತರ ದಾಸೋಹ ಒದಗಿಸಬೇಕು. ವಾಸ್ತವ್ಯಕ್ಕಾಗಿ ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ವಿಶೇಷ ದಾಸೋಹ ನಿರ್ವಹಣೆಗೆ ಶಾಮಿಯಾನ ಅಳವಡಿಸಬೇಕು’ ಎಂದರು.

ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ವಾಹನಗಳ ಸಂಚಾರ, ನಿಲುಗಡೆಗೆ ಕ್ರಮ ತೆಗೆದುಕೊಳ್ಳಬೇಕು. ಭಕ್ತರಿಗೆ ಮಾಹಿತಿ ನೀಡಲು ತಾತ್ಕಾಲಿಕ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ವಿದ್ಯುತ್ ಅಡಚಣೆಯಾಗದಂತೆಯೂ ಗಮನ ಹರಿಸಲು ಅವರು ನಿರ್ದೇಶನ ನೀಡಿದರು. .

‘ಸ್ವಚ್ಚತಾ ಕಾರ್ಯಕ್ಕೆ ವಿಶೇಷ ಗಮನ ನೀಡಬೇಕಿದೆ. ಮಹಿಳೆಯರು ಹಾಗೂ ಪುರುಷರಿಗೆ ಸ್ನಾನಕ್ಕಾಗಿ ವ್ಯವಸ್ಥೆ ಮಾಡಬೇಕು. ಶೌಚಾಲಯಗಳ ನಿರ್ವಹಣೆಯೂ ಉತ್ತಮವಾಗಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕ, ಔಷಧಿಗಳ ಪೂರೈಕೆ ಹಾಗೂ ಆಂಬುಲೆನ್ಸ್‌ಗಳ ನಿಯೋಜನೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಲ್. ಆನಂದ್ ಅವರು ಜಾತ್ರಾ ಮಹೋತ್ಸವ ಸಂಬಂಧ ಕೈಗೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಯಾವಾಗ ಯಾತ್ರೆ?

ಸೆಪ್ಟೆಂಬರ್ 26 ರಿಂದ 28ರ ವರೆಗೆ ಮಹಾಲಯ ಅಮವಾಸ್ಯೆ ಜಾತ್ರೆ, ಅಕ್ಟೋಬರ್ 6ರಿಂದ 8ರವರೆಗೆ ದಸರಾ ಜಾತ್ರೆ, ಅಕ್ಟೋಬರ್ 25ರಿಂದ 29ರವರೆಗೆ ದೀಪಾವಳಿ ಜಾತ್ರೆ ಮಹೋತ್ಸವ ನಡೆಯಲಿದೆ.

ಕಾರ್ತಿಕ ಸೋಮವಾರಗಳಂದು ವಿಶೇಷ ಪೂಜಾ ಸೇವಾ ಕೈಂಕರ್ಯ, ಉತ್ಸಾವಾದಿಗಳು ನಡೆಯಲಿವೆ. ನವೆಂಬರ್ 3, 4, 10, 11, 17, 18, 24, 25ರಂದು ಕಾರ್ತಿಕ ಸೋಮವಾರಗಳಾಗಿವೆ. ನವೆಂಬರ್ 25,26 ರಂದು ಎಣ್ಣೆಮಜ್ಜನ, ಅಮಾವಾಸ್ಯೆ ಪೂಜೆ ಸೇವೆಗಳು ಜರುಗಲಿವೆ ಎಂದು ಸಿ.ಎಲ್.ಆನಂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು