ಆರ್‌ಟಿಐ ಅರ್ಜಿದಾರರ ಅಲೆದಾಡಿಸದಿರಿ

7
ಸರ್ಕಾರಿ ಅಧಿಕಾರಿಗಳಿಗೆ ಕಾರ್ಯಾಗಾರ; ಅಯೋಗದ ಆಯುಕ್ತ ಎ.ಎಂ.ಚಂದ್ರೇಗೌಡ ಸೂಚನೆ

ಆರ್‌ಟಿಐ ಅರ್ಜಿದಾರರ ಅಲೆದಾಡಿಸದಿರಿ

Published:
Updated:
Deccan Herald

ಮಂಡ್ಯ: ‘ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ನೇಮಕಗೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ತಕ್ಷಣ ನೀಡಬೇಕು. ಅರ್ಜಿದಾರರನ್ನು ಅಲೆದಾಡಿಸಬಾರದು’ ಎಂದು ರಾಜ್ಯ ಮಾಹಿತಿ ಅಯೋಗದ ಆಯುಕ್ತ ಎ.ಎಂ.ಚಂದ್ರೇಗೌಡ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಮಾಹಿತಿ ಆಯೋಗದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ‘ಸರ್ಕಾರಿ ಅಧಿಕಾರಿಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಪ್ರತಿ ಸರ್ಕಾರಿ ಕಚೇರಿಯಲ್ಲೂ ನಾಮಫಲಕ ಹಾಕಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು ಸಮೂದಿಸಿರಬೇಕು. ಮಾಹಿತಿ ಹಕ್ಕು ಅಧಿಕಾರಿ ಹೆಸರು ಬರೆಯಬೇಕು. ಅರ್ಜಿ ಸಲ್ಲಿಸಿದ ವೇಳೆ ಅರ್ಜಿದಾರನ ಹೆಸರು, ವಿಳಾಸ, ₹ 10 ಮೊತ್ತದ ಐಪಿಒ ಕಡ್ಡಾಯವಾಗಿ ಹಾಕಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ನಂತರ ಮಾಹಿತಿ ಕೋರಿರುವ ವಿಷಯ ನಮ್ಮ ಇಲಾಖೆಗೆ ಸಂಬಂಧಿಸಿದೆಯೇ ಎಂದು ಖಾತರಿ ಮಾಡಿಕೊಳ್ಳಬೇಕು. ಅರ್ಜಿಯ ಬಗ್ಗೆ ಕಡೆಗಣನೆ, ನಿರ್ಲಕ್ಷ್ಯ ಸಲ್ಲದು. ಕಚೇರಿಯಲ್ಲಿ ನಡೆಯುವ ತಿಂಗಳ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ಕುರಿತು ಚರ್ಚೆ ಮಾಡಬೇಕು. ಬೇರೆ ಇಲಾಖೆಗೆ ವರ್ಗಾಯಿಸುವ ಅವಶ್ಯಕತೆ ಇದ್ದರೆ 5 ದಿನಗಳೊಳಗೆ ವರ್ಗಾಯಿಸಬೇಕು’ ಎಂದು ಸೂಚಿಸಿದರು.

‘ಅರ್ಜಿದಾರರು ನಮ್ಮ ರಾಜ್ಯದವರೇ ಆಗಿರುತ್ತಾರೆ, ಹೊರದೇಶದವರಲ್ಲ. ಹೀಗಾಗಿ ಅಧಿಕಾರಿಗಳು ಮಾಹಿತಿ ಅರ್ಜಿ ವಿಚಾರದಲ್ಲಿ ತಮ್ಮ ಕೆಳ ಹಂತದ ಅಕಾರಿಗಳಿಗೆ ಜವಾಬ್ದಾರಿ ವಹಿಸದೆ, ಹೆಚ್ಚು ಅಲೆದಾಡಿಸದೆ ಲಭ್ಯವಿರುವ ಮಾಹಿತಿ ನೀಡಬೇಕು. ಮಾಹಿತಿ ಹಕ್ಕು ಕಾಯ್ದೆ ಕಚೇರಿ ಕೈಪಿಡಿ, ಅಧಿಕಾರಿಗಳ ದಿನಚರಿ ನಿರ್ವಹಣೆ ಮಾಡಿದರೆ ಮಾಹಿತಿ ಅರ್ಜಿಗಳಿಗೆ ಸೂಕ್ತ ಉತ್ತರ ನೀಡಲು ಸಹಕಾರಿಯಾಗಿದೆ. ಹೀಗಾಗಿ ಅಧಿಕಾರಿಗಳು ಪ್ರತಿದಿನ ಇವುಗಳನ್ನು ನಿರ್ವಹಿಸಬೇಕು’ ಎಂದು ಹೇಳಿದರು.

‘ಮಾಹಿತಿ ಹಕ್ಕು ಕಾಯ್ದೆ ಜಾರಿಗೊಂಡು 13 ವರ್ಷ ಕಳೆದರೂ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ. ಎಲ್ಲಾ ಸರ್ಕಾರಿ ಅಧಿಕಾರಿಗಳು ತಮಗೆ ಇರುವ ಮಾಹಿತಿ ಪುಸ್ತಕ ಹಾಗೂ ಅದರಲ್ಲಿರುವ ನಿಯಮಗಳನ್ನು ನೋಡಿಕೊಂಡು, ನಿಯಮಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಹೆಚ್ಚಿನ ಮಾಹಿತಿ ಕೇಳುವ ಹಾಗೂ ಕ್ರೋಡೀಕರಣ ಮಾಹಿತಿ ಕೇಳುವ ಅರ್ಜಿದಾರರನ್ನು ಕಚೇರಿಗೆ ಬರಲು ತಿಳಿಸಿ, ಅವಶ್ಯ ಮಾಹಿತಿ ಪರಿಶೀಲನೆ ಮಾಡಬೇಕು. ಜೊತೆಗೆ ಎಲ್ಲಾ ಅರ್ಜಿದಾರರಿಂದಲೂ ನೀವು ಕೊಡುವ ಮಾಹಿತಿಗೆ ಪ್ರತಿ ಪುಟಕ್ಕೆ ₹ 2ರಂತೆ ಹಣವನ್ನು ಪಡೆಯಬೇಕು’ ಎಂದು ಹೇಳಿದರು.

ಜಿಲ್ಲಾಕಾರಿ ಎನ್.ಮಂಜುಶ್ರೀ ಮಾತನಾಡಿ ‘ಮಾಹಿತಿ ಹಕ್ಕು ಕಾಯ್ದೆ ಪಾರದರ್ಶಕ ಆಡಳಿತಕ್ಕೆ ನೆರವಾಗಿದೆ. ಅಧಿಕಾರಿಗಳು ಪ್ರತಿದಿನ ತಾವು ಮಾಡುವ ಕೆಲಸಗಳ ದಾಖಲೆ ನಿರ್ವಹಣೆ ಮಾಡುವುದರಿಂದ ಮಾಹಿತಿ ಕೇಳುವ ಅರ್ಜಿದಾರರಿಗೆ ಸಮರ್ಪಕ ಉತ್ತರ ನೀಡಬಹುದು. ಮಾಹಿತಿ ಹಕ್ಕು ಕುರಿತು ಯಾವುದೇ ಗೊಂದಲಗಳಿದ್ದರೆ ಈ ಕಾರ್ಯಾಗಾರದಲ್ಲಿ ಬಗೆಹರಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಮಂಜುಶ್ರೀ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ಎಂ.ಆರ್‌.ರಾಜೇಶ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಕೃಷ್ಣಾ ನಾಯಕ್ ಇದ್ದರು.

ಬಿಪಿಎಲ್‌ ಕಾರ್ಡ್‌ಗೆ ಉಚಿತ ಮಾಹಿತಿ ಇಲ್ಲ

‘ಮೊದಲು ಅರ್ಜಿದಾರರು ಅರ್ಜಿಯ ಜೊತೆ ಬಿಪಿಎಲ್‌ ಕಾರ್ಡ್‌ ಲಗತ್ತಿಸಿದರೆ ಅಧಿಕಾರಿಗಳು ಉಚಿತವಾಗಿ ಮಾಹಿತಿ ನೀಡುತ್ತಿದ್ದರು. ಆದರೆ ಈಗ ನಿಯಮ ಬದಲಾಗಿದ್ದು ಅರ್ಜಿದಾರರು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ನಿಗದಿತ ಆದಾಯಕ್ಕಿಂತ ಕಡಿಮೆ ಇದ್ದರೆ ಉಚಿತವಾಗಿ ಮಾಹಿತಿ ನೀಡಲಾಗುತ್ತದೆ. ಹೆಚ್ಚು ಆದಾಯ ಹೊಂದಿದವರು ಪ್ರತಿ ಪುಟಕ್ಕೆ ₹ 2 ರಂತೆ ಹಣ ಪಾವತಿಸಿ ಮಾಹಿತಿ ಪಡೆಯಬೇಕು. ಪಡಿತರ ಚೀಟಿ ಕೇವಲ ಆಹಾರ ಸಾಮಾಗ್ರಿ ಪಡೆದುಕೊಳ್ಳಲು ಮಾತ್ರ ಇದೆ. ಅದನ್ನು ಮಾಹಿತಿ ಪಡೆಯಲು ಬಳಸಬಾರದು’ ಎಂದು ಚಂದ್ರೇಗೌಡ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !