ಗುರುವಾರ , ಜೂನ್ 24, 2021
21 °C
ಗಡಿಯಲ್ಲಿ ಮರಾಠಿ ಭಾಷಿಕರು ಓದಿನ ಸಂಸ್ಕೃತಿಯಲ್ಲಿ ಸೃಷ್ಟಿಸಿರುವ ನವಕ್ರಾಂತಿ ಅನುಕರಣೀಯ

‘ಓದಿನ ಸಂಸ್ಕೃತಿ’ಗೆ ಇಲ್ಲೊಂದು ಮಾದರಿ

ಡಿ.ಎಸ್‌. ಚೌಗಲೆ Updated:

ಅಕ್ಷರ ಗಾತ್ರ : | |

Prajavani

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಬಗ್ಗೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಹೊರಟ ಸರ್ಕಾರದ ನಡೆಯ ಕುರಿತು ಪರ-ವಿರೋಧದ ಬಹಳಷ್ಟು ಚರ್ಚೆಗಳಾದವು. ಇಂಗ್ಲಿಷ್ ಭಾಷೆಯನ್ನು ಕೈಬಿಡದೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಯನ್ನು ಸಿದ್ಧಗೊಳಿಸುವ, ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಕುರಿತು ಅನೇಕರ ಅಭಿಪ್ರಾಯದಲ್ಲಿ ಒಮ್ಮತವಿದೆ. ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಯೇ ತೀರಬೇಕೆಂಬುದಕ್ಕೆ ನಮ್ಮ ನಡುವೆ ಅನೇಕ ಉದಾಹರಣೆಗಳಿವೆ.

ಕೆನಡಾದ ‘ಕೆಬೆಕ್’ ಪ್ರಾಂತದ ಆಡಳಿತ ಭಾಷೆ ಫ್ರೆಂಚ್. ಹಾಗೆಯೇ ಕೆನಡಾದ ಆಡಳಿತ ಭಾಷೆ ಇಂಗ್ಲಿಷ್. ಆದರೆ ಕೆಬೆಕ್‍ನ ಫ್ರೆಂಚ್ ಭಾಷೆ ಎಷ್ಟು ಗಟ್ಟಿಯೆಂದರೆ, ಆ ಭಾಷೆಯಲ್ಲಿ ಸಿದ್ಧಗೊಂಡ ಚಲನಚಿತ್ರವೊಂದು ಮೂಲ ಫ್ರಾನ್ಸ್‌ನ ಫ್ರೆಂಚ್ ಭಾಷೆಯ ಚಿತ್ರಕ್ಕೆ ಪೈಪೋಟಿ ನೀಡಿ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಪ್ರಾಂತದವರು ಭಾಷೆಯನ್ನು ರಾಜಕೀಯಗೊಳಿಸಿರಲಿಲ್ಲ.

ಕೆಬೆಕ್‍ನ ಫ್ರೆಂಚರಂತೆ ನಮ್ಮ ಮಧ್ಯದ ಮರಾಠಿ ಬಂಧುಗಳೂ ತಮ್ಮ ತಾಯಿಭಾಷೆಯ ಅಸ್ಮಿತೆಯ ಸಮೃದ್ಧಿಗೆ, ಒಡನಾಟಕ್ಕೆ ಹಾತೊರೆದು ಕೆಲ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಇಲ್ಲಿ ಉಲ್ಲೇಖಿಸುವಂಥದ್ದು ಮರಾಠಿ ವಿದ್ಯಾನಿಕೇತನ ಎಂಬ, ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಖಾಸಗಿ ಶಾಲೆ ಮತ್ತು ಗ್ರಾಮೀಣ ಸಾಹಿತ್ಯ ಸಮ್ಮೇಳನಗಳು. ಈ ಶಾಲೆಯ ವ್ಯವಸ್ಥಾಪಕ ಮಂಡಳಿಯವರು, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯವೆಂದು ನಂಬಿದವರು.

ಜತೆಗೆ ಇಂಗ್ಲಿಷ್‌, ಕನ್ನಡವನ್ನೂ ಕಲಿಸಿ ಸಾಮಾಜಿಕ, ವೈಜ್ಞಾನಿಕ, ಆರ್ಥಿಕ, ವೈಚಾರಿಕ ಪ್ರಜ್ಞೆಯನ್ನು ಬಿತ್ತಲೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಲ್ಲಿ ಕಲಿತ ಮಕ್ಕಳಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿಗಳ ಅರಿವೂ ಇದೆ. ಮುಖ್ಯವಾಗಿ ಹೇಳುವುದೆಂದರೆ, ಅವರು ಬದುಕು ಕಟ್ಟಿಕೊಂಡಿರುವ ಪರಿ. ಅದು ಸಹ ದೇಶ-ವಿದೇಶಗಳಲ್ಲಿ. ಹೀಗಾಗಿ ನನಗೆ ಇದೊಂದು ಮಾದರಿ ಅನಿಸುತ್ತದೆ. ಇದು ಕನ್ನಡಕ್ಕೂ ವ್ಯಾಪಿಸಬೇಕಿದೆ. ಕನ್ನಡದಲ್ಲೂ ಈ ಮಾದರಿಯ ಶಿಕ್ಷಣ ನೀಡುವ ಕ್ರಮಗಳು ಹೆಚ್ಚೆಚ್ಚು ಸಾಧ್ಯವಾಗಬೇಕು.

ತಾಯಿಭಾಷೆಯ ಒಡನಾಟಕ್ಕೆ ಮುಖ್ಯವಾದುದು ಓದಿನ ಸಂಸ್ಕೃತಿ! ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ಅನನ್ಯತೆಯ ಉಳಿವು, ಅಸ್ಮಿತೆಯನ್ನು ಜತನವಾಗಿಸುವ ಹಂಬಲ ನಿರಂತರ ಕಾಡುತ್ತಿರುತ್ತದೆ. ಇದನ್ನು ನಂಬಿದ ಮರಾಠಿ ಭಾಷಾ ಅಲ್ಪಸಂಖ್ಯಾತರು ಖಾಸಗಿ ಗ್ರಂಥಾಲಯಗಳ ಮೂಲಕ, ವಿಶಿಷ್ಟವಾದ ಗ್ರಾಮೀಣ ಸಾಹಿತ್ಯ ಸಮ್ಮೇಳನಗಳಿಂದ ಓದಿನ ಸಂಸ್ಕೃತಿಯಲ್ಲಿ ಹೊಸಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಬೆಳಗಾವಿಯ ಲೋಕಮಾನ್ಯ ಗ್ರಂಥಾಲಯವು 2010ರ ಫೆಬ್ರುವರಿಯಲ್ಲಿ ಆರಂಭಗೊಂಡಿದ್ದು, ಓದುಗರಿಗೆ ಅನೇಕ ಸವಲತ್ತುಗಳನ್ನು ಕಲ್ಪಿಸಿ ಓದಿನ ಸಂಸ್ಕೃತಿಗೆ ಒತ್ತಾಸೆಯಾಗಿದೆ. ಇಲ್ಲಿ ಹಿರಿಯ ನಾಗರಿಕರಿಗೆ ಮನೆಮನೆಗೆ ಪುಸ್ತಕಗಳನ್ನು ತಲುಪಿಸುವ ಕ್ರಮವೂ ಇದೆ.

ಇದಷ್ಟೇ ಅಲ್ಲ. ಇಲ್ಲೊಂದು ಬ್ರಿಟಿಷ್ ಕಾಲದ ಸಾರ್ವಜನಿಕ ಗ್ರಂಥಾಲಯವಿದೆ. ಇದರಲ್ಲಿ ಎಂಬತ್ತು ಸಾವಿರ ಮರಾಠಿ ಕೃತಿಗಳು, ಹತ್ತು ಸಾವಿರ ಕನ್ನಡದ ಮಹತ್ವದ ಕೃತಿಗಳಿವೆ. ಇದರ ಸಂಚಾಲಕ ಮಂಡಳಿಯವರು ಮಾತ್ರ ಮರಾಠಿ ಭಾಷಿಕರು. ಕನ್ನಡ-ಮರಾಠಿ ನಿಯತಕಾಲಿಕೆಗಳ ವಾಚನಕ್ಕೆ ಪ್ರತ್ಯೇಕ ಮಳಿಗೆಯಿದೆ. ದುರ್ಲಭ ಗ್ರಂಥಗಳು ಸಹ ಇಲ್ಲಿ ದೊರೆಯುವುದು ವಿಶೇಷ. ಸರ್ಕಾರದ ಅನುದಾನದ ನೆರವಿಲ್ಲದೆ ಸಾರ್ವಜನಿಕರ ಹಣದಿಂದ ಈ ಗ್ರಂಥಾಲಯವನ್ನು ಮುನ್ನಡೆಸಿಕೊಂಡು ಬಂದಿರುವುದು ಇವರ ಹೆಗ್ಗಳಿಕೆ. ಮರಾಠಿಯಲ್ಲಿ ಒಂದು ಮಾತಿದೆ. ‘ವಾಚಾಲತರ ವಾಚಾಲ’ ಎನ್ನುವುದು.

‘ಓದು ಇದ್ದರೆ ಮಾತ್ರ ಬದುಕುವಿರಿ’ ಎಂದು ಅದರರ್ಥ. ಅದಕ್ಕೇ ಇದೊಂದು ಓದಿನ ಚಳವಳಿಯೇ ಹೌದು. ಇಂಥ ಓದಿನ ಪರಂಪರೆ ಕನ್ನಡದಲ್ಲೂ ಸಮೃದ್ಧಗೊಳ್ಳಬೇಕು. ನಮ್ಮಲ್ಲಿ ಖಾಸಗಿಗಿಂತ ಸರ್ಕಾರಿ ಗ್ರಂಥಾಲಯಗಳು ಹೆಚ್ಚು. ಸುದೈವದಿಂದ ಓದುಗರ ಸಂಖ್ಯೆಯಿದೆ. ಆದರೆ ಅದು ಓದಿನ ಚಳವಳಿಯ ಮಟ್ಟದಲ್ಲಿಲ್ಲ. ಸಂಸ್ಕೃತಿ ಇಲಾಖೆಯಡಿಯಲ್ಲಿ ಕನ್ನಡದ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳು, ಖಾಸಗಿ ಸಾಹಿತ್ಯಿಕ ಚಟುವಟಿಕೆಗಳು ನಡೆದರೂ ಹೇಳಿಕೊಳ್ಳುವಷ್ಟು ಜನಸ್ಪಂದನವಿರುವುದಿಲ್ಲ. ಸಾಹಿತ್ಯಾಸಕ್ತರ ಕೊರತೆ ಎದ್ದು ಕಾಣುತ್ತಿರುತ್ತದೆ. ಈ ಭಾಗದ ಬಹುಸಂಖ್ಯಾತ ಕನ್ನಡ ಜನರಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕಿಂತ ಧರ್ಮ ಮತ್ತು ರಾಜಕೀಯದತ್ತ ಅಧಿಕ ಒಲವು. ವಿವೇಕವನ್ನು ಸೃಷ್ಟಿಸುವ ಸೃಜನಶೀಲ ಗುಣಾತ್ಮಕ ಪ್ರಕ್ರಿಯೆಗಳತ್ತ ಅವರ ಲಕ್ಷ್ಯವಿಲ್ಲದಿರುವುದು ದುರಂತ.

ಈ ಗ್ರಂಥಾಲಯವು ಕಳೆದ 44 ವರ್ಷಗಳಿಂದ ‘ಬ್ಯಾರಿಸ್ಟರ್ ನಾಥ ಪೈ ವ್ಯಾಖ್ಯಾನಮಾಲೆ’ (ವಿಶೇಷೋಪನ್ಯಾಸ) ಏರ್ಪಡಿಸುತ್ತಾ ಬಂದಿದೆ. ಅದರಲ್ಲಿ ಪ್ರತಿದಿನ ನಾಲ್ಕೈದು ನೂರು ಸಂಖ್ಯೆಯ ಸಾಹಿತ್ಯಾಸಕ್ತರು ಹಿಗ್ಗಿನಿಂದ ಪಾಲ್ಗೊಳ್ಳುತ್ತಾರೆ. ಐದು ದಿನಗಳ ಈ ಕಾರ್ಯಕ್ರಮಕ್ಕೆ ಮರಾಠಿಯ ವಾಗ್ಮಿಗಳು ಬಂದು ಉಪನ್ಯಾಸ ನೀಡಿ ಹೋಗಿದ್ದಾರೆ. ಟಿ.ವಿ. ಪ್ರವರ್ಧಮಾನಕ್ಕೆ ಬರುವ ಮುನ್ನ ಈ ಉಪನ್ಯಾಸಗಳಿಗೆ ಟಿಕೆಟ್‌ ಇತ್ತು. ಆಸಕ್ತರು ಹಣ ತೆತ್ತು ಉಪನ್ಯಾಸ ಕೇಳುತ್ತಿದ್ದರು. ಇದೇ ದಾರಿಯಲ್ಲಿ, ಎರಡು ದಶಕಗಳ ಹಿಂದೆ ಮರಾಠಿ ಗ್ರಾಮೀಣ ಸಾಹಿತ್ಯ ಸಮ್ಮೇಳನಗಳು ಆರಂಭಗೊಂಡವು. ಅದಕ್ಕೆ ಚಾಲನೆ ಕೊಟ್ಟ ಆರಂಭದ ರೂವಾರಿಗಳಲ್ಲಿ ಕನ್ನಡ ಭಾಷಿಕರೊಬ್ಬರೂ ಇದ್ದದ್ದು ವಿಶೇಷ! ಇದೇ ಇಲ್ಲಿಯ ಭಾಷಾ ಬಾಂಧವ್ಯದ ಸೊಬಗು! ಇದು ನಿಜ ಗಡಿಯ ಜೀವನ!

ಹೀಗೆ ಆ ಕಾರ್ಯಕ್ಕೆ ಮೊದಲಿಗನಾದ ವ್ಯಕ್ತಿ, ದಲಿತ ಚಳವಳಿಯ ಅಶೋಕ ಐನಾವರ ಅವರು. ಅವರ ಹೋರಾಟಗಳ ಕಾರ್ಯಕರ್ತೆ ಗೆಳತಿ ಅನು ನವಾತೆ ಮರಾಠಿ ಭಾಷಿಕರು. ಅವರಿಬ್ಬರೂ ಮಹಿಳಾ ಹೋರಾಟ, ಕಾರ್ಮಿಕ ಮತ್ತು ದಲಿತ ಪರ ಹೋರಾಟಗಳಲ್ಲಿ ಜತೆಯಾಗಿರುತ್ತಿದ್ದರು. ಅವರು ಬೆಳಗಾವಿ ಪಕ್ಕದ ಕಡೋಲಿ ಗ್ರಾಮದಲ್ಲಿ ಗಾಂಧಿವಾದಿ, ಸರ್ವೋದಯದ ಸದಾಶಿವರಾವ ಭೋಸಲೆ, ಶಿವಾಜಿ ಕಾಗಣೇಕರ, ಶಂಕರ ರುಟುಕುಟೆ, ಮರಾಠಿಯ ಖ್ಯಾತ ಲೇಖಕಿ ಮಾಧವಿತಾಯಿ ದೇಸಾಯಿ ಹಾಗೂ ಇತರ ಮರಾಠಿ ಭಾಷಿಕರ ಜತೆಗೂಡಿ ಸಣ್ಣ ಪ್ರಮಾಣದಲ್ಲಿ ಈ ಸಮ್ಮೇಳನಗಳನ್ನು ಆರಂಭಿಸಿದರು. ಇವತ್ತು ಅವು ಮರಾಠಿ ಭಾಷಿಕರಲ್ಲಿ ಹುದುಗಿದ್ದ ಅಸ್ಮಿತೆಯನ್ನು ಎಚ್ಚರಗೊಳಿಸುತ್ತ ಹತ್ತಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ವೈಭವದಿಂದ ನಡೆಯುತ್ತಿವೆ.

ಕಡೋಲಿ ಜೊತೆಗೆ ಯಳ್ಳೂರ, ಬೆಳಗುಂದಿ, ಕುದ್ರೆಮನಿ, ಸಾಂಬ್ರಾ, ನಿಲಜಿ (ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಮೀಸಲು), ಉಚಗಾಂವ, ಮಾಚಿಗಡ ಮುಖ್ಯವಾದವು. ಅಂದಾಜು ಒಂದು ಸಾವಿರ ಜನ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಸಮಾಜ ಸುಧಾರಕ ಜ್ಯೋತಿಬಾ ಫುಲೆಯವರ ಚಿಂತನೆ, ಸಾಹಿತ್ಯ, ಕಲೆಗಳ ಕುರಿತು ಗೋಷ್ಠಿಗಳು ಇರುವವು. ಭಕ್ತಿ ಪರಂಪರೆ, ಜನಪದ ಸಂಗೀತ, ನೃತ್ಯಗಳ ಸಾದರೀಕರಣ ಅವರ ಸಂಸ್ಕೃತಿಯ ಮರುಕಳಿಕೆಗೆ ನೆರವಾಗುವವು.

ಈ ಸಮ್ಮೇಳನಗಳಿಂದ ಪ್ರೇರಣೆ ಪಡೆದು ಈಚೆಗೆ ಚಿಕ್ಕೋಡಿ ತಾಲ್ಲೂಕಿನ ಕಾರದಗಾ, ಬೆನಾಡಿ, ಬೋರಗಾಂವಗಳಲ್ಲಿ ಕನ್ನಡದ ಸಮ್ಮೇಳನಗಳೂ ಆರಂಭವಾಗಿವೆ. ಸಾಹಿತ್ಯ ಪರಿಷತ್ತು, ಅಕಾಡೆಮಿಗಳಾಚೆ ನಮ್ಮ ಮಧ್ಯೆ ಈ ರೀತಿಯ ಓದಿನ ಸಂಸ್ಕೃತಿ ಮತ್ತು ಮರಾಠಿ ವಿದ್ಯಾನಿಕೇತನದಂತೆ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಹೆಚ್ಚು ಶಾಲೆಗಳು ಹುಟ್ಟಬೇಕು. ಹಾಗಾದಾಗ ಮಾತ್ರ ಕನ್ನಡದ ಕೊರಗು ನಿಲ್ಲಬಹುದು.


ಡಿ.ಎಸ್‌. ಚೌಗಲೆ

ಲೇಖಕ: ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು