‘ಮೋದಿ’...ಸಾಮಾನ್ಯನ ಜೀವನ ಯಾನ

ಶುಕ್ರವಾರ, ಏಪ್ರಿಲ್ 26, 2019
33 °C
‘ಇರೋಸ್‌ ನೌ’ನಲ್ಲಿ ವೆಬ್‌ ಸರಣಿ

‘ಮೋದಿ’...ಸಾಮಾನ್ಯನ ಜೀವನ ಯಾನ

Published:
Updated:
Prajavani

ಇದು ವೆಬ್‌ ಸರಣಿಗಳ ಸುಗ್ಗಿ ಕಾಲ. ದೇಶದ ನಾಡಿಮಿಡಿತ ಹೆಚ್ಚು ಮಾಡಿದ ಕ್ರೈಂ ಪ್ರಕರಣಗಳು, ಜನಪ್ರಿಯ ವ್ಯಕ್ತಿಗಳ ಜೀವನ, ಜನಪ್ರಿಯ ಲೇಖಕರ ಕಥೆಗಳು... ಇವೆಲ್ಲ ಈಗ ವೆಬ್‌ ಸರಣಿಗಳ ಪಾಲಿಗೆ ಕಥಾವಸ್ತುಗಳು. ಇಂತಹ ವೆಬ್‌ ಸರಣಿಗಳ ಸಾಲಿಗೆ ಈಗ ಸೇರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಗಾಥೆ.

ನಿರ್ದೇಶಕ ಉಮೇಶ್ ಶುಕ್ಲಾ ಅವರು ‘ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌’ ವೆಬ್‌ ಸರಣಿಯನ್ನು ಏಪ್ರಿಲ್‌ನಲ್ಲಿ ಜನರ ಮುಂದಿಡುವ ಸಿದ್ಧತೆಯಲ್ಲಿದ್ದಾರೆ. ಜೊತೆಯಲ್ಲಿ, ಈ ಸಂದರ್ಭದಲ್ಲಿ ಸರಣಿಯನ್ನು ಜನರ ಮುಂದೆ ಇರಿಸಿದರೆ ಚುನಾವಣಾ ಆಯೋಗದ ಕಣ್ಣು ಕೆಂಪಾಗಬಹುದೇ ಎಂಬ ಚಿಂತೆಯಲ್ಲೂ ಇದ್ದಾರೆ!

ಅಂದಹಾಗೆ, ಹತ್ತು ಕಂತುಗಳ ಈ ವೆಬ್‌ ಸರಣಿ ‘ಇರೋಸ್‌ ನೌ’ ಒಟಿಟಿ ವೇದಿಕೆಯ ಮೂಲಕ ಪ್ರಸಾರವಾಗಲಿದೆ. ವಿವೇಕ್ ಒಬೆರಾಯ್‌ ಅಭಿನಯದ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಗ್ಗೆ ಚುನಾವಣಾ ಆಯೋಗವು ಸಿನಿಮಾ ತಂಡದಿಂದ ವಿವರಣೆ ಕೇಳಿದೆ. ಈ ಚಿತ್ರ ಏಪ್ರಿಲ್‌ 5ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

‘ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ನಿಮ್ಮ ವೆಬ್‌ ಸರಣಿ ಬಗ್ಗೆ ಚುನಾವಣಾ ಆಯೋಗ ವಿವರಣೆ ಕೇಳಬಹುದು ಎನ್ನುವ ಆತಂಕ ಇದೆಯೇ’ ಎಂದು ಪ್ರಶ್ನಿಸಿದಾಗ ಉಮೇಶ್ ಅವರು, ‘ಹೌದು, ತುಸು ಆತಂಕವಂತೂ ಇದೆ. ಆದರೆ, ನಾನು ವೆಬ್ ಸರಣಿ ಪ್ರಸಾರ ಮಾಡುವುದು ಬೇರೆಯದೇ ಆದ ವೇದಿಕೆಯ ಮೂಲಕ. ಇದು ಇಂಟರ್ನೆಟ್ ಮೂಲಕ ಜನರನ್ನು ತಲುಪಲಿರುವ ಕಾರಣ, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ವ್ಯಾಪ್ತಿಗೆ ಇದು ಬರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ. ಆದರೆ, ನಾವು ಇದನ್ನು ಯಾವಾಗ ಪ್ರಸಾರ ಮಾಡಲಿದ್ದೇವೆ ಎನ್ನುವ ದಿನಾಂಕವನ್ನು ಇನ್ನೂ ಘೋಷಿಸಿಲ್ಲ’ ಎಂದರು.

ಈ ಸರಣಿಯ ಪ್ರತಿ ಕಂತು ಕೂಡ 30ರಿಂದ 45 ನಿಮಿಷಗಳ ಅವಧಿಯದ್ದಾಗಿರಲಿದೆ. ಈ ಸರಣಿಯ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ.

ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಬಾಲಕ ನರೇಂದ್ರ, ನಂತರ ಜೀವನದ ನಿಜ ಉದ್ದೇಶವನ್ನು ಅರಿಯಲು ಉತ್ತರ ಭಾರತದಲ್ಲಿ ಸುತ್ತಾಡಿದ ಯುವಕ ನರೇಂದ್ರ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನರೇಂದ್ರ ಮೋದಿ ನಿಭಾಯಿಸಿದ ಪಾತ್ರಗಳು, ನಂತರ ಗುಜರಾತ್‌ ಮುಖ್ಯಮಂತ್ರಿಯಾಗಿದ್ದು... ಇವೆಲ್ಲ ವೆಬ್‌ ಸರಣಿಯಲ್ಲಿ ಇರಲಿವೆ ಎಂಬುದನ್ನು ಟ್ರೇಲರ್‌ ಹೇಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !