ಶನಿವಾರ, ಸೆಪ್ಟೆಂಬರ್ 19, 2020
27 °C

₹ 2.1 ಕೋಟಿ ವೆಚ್ಚದ ಯೋಜನೆ: ಮೊಘಲ್ ಉದ್ಯಾನಕ್ಕೆ ನವೀಕರಣ ಭಾಗ್ಯ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Deccan Herald

ಆಲಮಟ್ಟಿ: ಆಲಮಟ್ಟಿ ಜಲಾಶಯದ ಕೆಳಭಾಗದ 33 ಎಕರೆ ಪ್ರದೇಶದಲ್ಲಿ 2008ರಂದು ನಿರ್ಮಾಣವಾಗಿದ್ದ ಮೊಘಲ್ ಉದ್ಯಾನಕ್ಕೆ ಈಗ ₹ 2.1 ಕೋಟಿ ವೆಚ್ಚದಲ್ಲಿ ನವೀಕರಣ ಭಾಗ್ಯ ಒದಗಿ ಬಂದಿದೆ.

ನವೀಕರಣ ಕಾಮಗಾರಿ ಸಂಬಂಧ ಮೊಘಲ್‌ ಉದ್ಯಾನ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ರಾಕ್, ಲವಕುಶ, ಕೃಷ್ಣಾ ಉದ್ಯಾನದಿಂದ ಕಂಗೊಳಿಸುತ್ತಿದ್ದ ಆಲಮಟ್ಟಿಗೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೃಷ್ಣಾ ಭಾಗ್ಯ ಜಲ ನಿಗಮ, ಜಲಾಶಯದ ಕೆಳಭಾಗದಲ್ಲಿ 77 ಎಕರೆ ವಿಸ್ತಾರದಲ್ಲಿ ಸಂಗೀತ ಕಾರಂಜಿ, ಮೊಘಲ್‌, ಫ್ರೆಂಚ್, ಇಟಾಲಿಯನ್‌ ಉದ್ಯಾನ ಆರಂಭಗೊಳಿಸಿತ್ತು. ಅದರಲ್ಲಿ ಮೊಘಲ್‌ ಉದ್ಯಾನದಲ್ಲಿ ಮಾತ್ರ ಸ್ಥಿರ ಕಾರಂಜಿ ಅಳವಡಿಸಿ ಕಲರ್‌ಫುಲ್‌ ಮಾಡಲಾಗಿತ್ತು.

1.1 ಕಿ.ಮೀ ಉದ್ದದ ಮೊಘಲ್‌ ಉದ್ಯಾನ ರಾಷ್ಟ್ರಪತಿ ಭವನದ ಶೈಲಿಯಲ್ಲಿಯೇ ನಿರ್ಮಿಸಲಾಗಿದೆ. ಏಳು ಬ್ಲಾಕ್‌ನಲ್ಲಿ ಹಸಿರು ಹುಲ್ಲುಗಳು, ಬಗೆ ಬಗೆಯ ಅಲಂಕೃತ ಗಿಡಗಳಿಂದ ಉದ್ಯಾನ ಪ್ರವಾಸಿಗರ ಆಕರ್ಷಣೀಯ ತಾಣವೆನಿಸಿದೆ. ಪ್ರತಿ ಬ್ಲಾಕ್‌ನಲ್ಲಿ ನಾಲ್ಕು ಬೇರೆ ಬೇರೆ ಮಾದರಿಯ ಸ್ಥಿರ ಕಾರಂಜಿಯ ಗುಚ್ಛಗಳಿವೆ. ಪ್ರತಿ ಗುಚ್ಛಗಳ ಕಾರಂಜಿಗಳ ಚಿತ್ರಣ ಬೇರೆಯೇ ಆಗಿದೆ. ಸುಮಾರು 1,000 ಕ್ಕೂ ಅಧಿಕ ಸ್ಥಿರ ಕಾರಂಜಿಗಳು ಇಲ್ಲಿವೆ. ಉದ್ಯಾನದ ಹಲವು ಕಡೆ ಕಾರಂಜಿಗಳು ಕೆಟ್ಟಿದ್ದು ಪ್ರವಾಸಿಗರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೆಲ ಕಡೆ ಬಣ್ಣದ ದೀಪದ ವ್ಯವಸ್ಥೆ ಮಾಸಿದ್ದವು.

₹ 2.1 ಕೋಟಿ ಮೊತ್ತದ ಕಾಮಗಾರಿ: ನೂತನ ತಂತ್ರಜ್ಞಾನ ಅಳವಡಿಸಿ ಆಧುನೀಕರಣಗೊಳಿಸುವ ಭಾಗವಾಗಿ ಮೊಘಲ್‌ ಉದ್ಯಾನದಲ್ಲಿ ಲೈಟಿಂಗ್ ವ್ಯವಸ್ಥೆ ಸಂಪೂರ್ಣ ಬದಲಾವಣೆ, ನೂತನ ಆರ್‌ಜಿಬಿ ತಂತ್ರಜ್ಞಾನ (ಆರ್‌ ಜಿ ಬಿ- ಅಂದರೆ ಕೆಂಪು, ಹಸಿರು, ಬಿಳಿ)ದ ಸುಮಾರು 1,200 ಎಲ್‌ಇಡಿ ಲೈಟಿಂಗ್‌ನ್ನು ನೀರಿನಲ್ಲಿ ಅಳವಡಿಸಿ, ವಿದ್ಯುತ್ ವೈರಿಂಗ್, ಕೆಟ್ಟುಹೋದ ಪೈಪ್‌ಗಳ ಬದಲಾವಣೆ ನಡೆಯಲಿದೆ. ಕಾಮಗಾರಿಯನ್ನು ಕೋಲ್ಕತ್ತಾದ ಪ್ರಿಮೀಯರ್ ಕಂಪನಿಯವರು ಗುತ್ತಿಗೆ ಪಡೆದಿದ್ದು, ಮುಂದಿನ ಐದು ವರ್ಷ ನಿರ್ವಹಣೆಯ ಹೊಣೆಯೂ ಅವರದ್ದೇ ಆಗಿದೆ ಎಂದು ಸಹಾಯಕ ಎಂಜಿನಿಯರ್ ಶಂಕ್ರಯ್ಯ ಮಠಪತಿ ತಿಳಿಸಿದರು.

‘ಮೊಘಲ್‌ ಉದ್ಯಾನಕ್ಕೆ ರಾಜ್ಯದ ಹಲವೆಡೆಯಿಂದ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆಲಮಟ್ಟಿಯ ಉದ್ಯಾನದ ಮುಕುಟಮಣಿ ಎನಿಸಿದ ಈ ಉದ್ಯಾನದ ನವೀಕರಣ ಕಾಮಗಾರಿ ಗುಣಮಟ್ಟದಿಂದ ನಡೆಯಲಿ. ಅಧಿಕಾರಿಗಳು ಕೂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಲಿ’ ಎಂದು ಬಾಗಲಕೋಟೆಯ ಡಾ.ಸಂತೋಷ ಮುರನಾಳ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು