ಪೂರ್ವಗ್ರಹಗಳ ಪ್ರಶ್ನಿಸುವ ಮಾನವೀಯ ಚರ್ಚೆ

7

ಪೂರ್ವಗ್ರಹಗಳ ಪ್ರಶ್ನಿಸುವ ಮಾನವೀಯ ಚರ್ಚೆ

Published:
Updated:
Deccan Herald

ಚಿತ್ರ: ಮುಲ್ಕ್‌ (ಹಿಂದಿ)
ನಿರ್ಮಾಣ: ದೀಪಕ್‌ ಮುಕುಟ್, ಅನುಭವ್ ಸಿನ್ಹ
ನಿರ್ದೇಶನ: ಅನುಭವ್ ಸಿನ್ಹ
ತಾರಾಗಣ: ರಿಷಿ ಕಪೂರ್, ತಾಪ್ಸಿ ಪನ್ನು, ಆಶುತೋಶ್ ರಾಣಾ, ರಜತ್ ಕಪೂರ್, ಮನೋಜ್ ಪಹ್ವಾ, ಪ್ರತೀಕ್ ಬಬ್ಬರ್

‘ಇಸ್ಲಾಮೋಫೋಬಿಕ್’ ಎಂಬ ಪದವಿದೆ. ಧರ್ಮ ಹಿಡಿದು ಕಾರಣಗಳನ್ನು ಹುಡುಕಿ ಹುಡುಕಿ, ಪೂರ್ವಗ್ರಹಗಳಿಂದ ಹಳಿಯುವವರನ್ನು ಹೀಗೆನ್ನುವುದುಂಟು. ‘ಮುಲ್ಕ್’ ಹಿಂದಿ ಸಿನಿಮಾ ಅಂಥವರನ್ನು ನೇರವಾಗಿ ಪ್ರಶ್ನಿಸುತ್ತದೆ. ಆರೋಪಿಗೂ ಅಪರಾಧಿಗೂ ನಡುವೆ ದೊಡ್ಡ ಗೆರೆಯೇ ಇರಬೇಕು ಎಂದು ವಾದಿಸುತ್ತದೆ. ಕುಟುಂಬದ ಒಬ್ಬನು ಭಯೋತ್ಪಾದಕ ಎಂದಮಾತ್ರಕ್ಕೆ ಎಲ್ಲರೂ ಹಾಗಿರಲೇಬೇಕಿಲ್ಲ ಎಂಬ ಸತ್ಯದ ಮೇಲೆ ಮಾರ್ಮಿಕವಾಗಿ ಬೆಳಕು ಚೆಲ್ಲುತ್ತದೆ.

ಕಥಾ ಸಾರಾಂಶ

ವಾರಾಣಸಿಯಲ್ಲಿ ವಕೀಲಿಕೆಯಲ್ಲಿ ತೊಡಗಿರುವ ದೇಶಭಕ್ತ ಮುಸ್ಲಿಂ ಮುರಾದ್ ಅಲಿ. ಅವನದು ತುಂಬು ಕುಟುಂಬ. ಸಹೋದರ ಬಿಲಾಲ್ ಹಾಗೂ ಅವನ ನಡುವೆ ಇತ್ತೀಚೆಗೆ ಮೌನವೇ ಹೆಚ್ಚು. ಒಬ್ಬ ಮಗ ಆರತಿ ಮಲ್ಹೋತ್ರ ಎಂಬ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದು, ಅವಳೂ ವಕೀಲಿಕೆ ಮಾಡುತ್ತಾಳೆ. ಬಿಲಾಲ್‌ನದ್ದು ಮೊಬೈಲ್ ಸಿಮ್‌ಕಾರ್ಡ್‌ ಮಾರುವ ಅಂಗಡಿ ಇದೆ. ಮನೆಯಲ್ಲಿ ಎಲ್ಲರ ನಡುವೆ ಇರುವುದು ಬೆಚ್ಚಗಿನ ಭಾವ. ಇಂಥ ಹೊತ್ತಲ್ಲೇ, ಬಿಲಾಲ್‌ನ ಮಗ ಬಸ್‌ನಲ್ಲಿ ಬಾಂಬ್ ಸ್ಫೋಟಿಸುವ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತದೆ. ಅವನನ್ನು ಪೊಲೀಸ್‌ ಅಧಿಕಾರಿ ದಾನಿಶ್‌ ಜಾವೆದ್ ಮುಗಿಸುತ್ತಾನೆ. ಬಿಲಾಲ್‌ನನ್ನು ವಶಕ್ಕೆ ಪಡೆದು ಬೆಂಡೆತ್ತುತ್ತಾರೆ. ಅನಾರೋಗ್ಯಪೀಡಿತನಾದ ಬಿಲಾಲ್‌ ಅಸುನೀಗುತ್ತಾನೆ. ಅಲ್ಲಿಂದ ಸಿನಿಮಾ ಮಹತ್ವದ ತಿರುವಿಗೆ ಬಂದು ನಿಲ್ಲುತ್ತದೆ. ಮಿಕ್ಕಿದ್ದು ಕೋರ್ಟ್‌ ಡ್ರಾಮಾ. ಅಲ್ಲಿ ‘ಇಸ್ಲಾಮೋಫೋಬಿಕ್’ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಂತೋಷ್‌ ಆನಂದ್‌ ಹಾಗೂ ಮುರಾದ್‌–ಆರತಿ ಹೋರಾಟದ ಮುಖಾಮುಖಿ.

ಸಮಕಾಲೀನ ವಸ್ತು

ಭಯೋತ್ಪಾದನೆ, ಆತಂಕವಾದದ ಕುರಿತು ಒಂದಿಲ್ಲೊಂದು ಸುದ್ದಿ ಪ್ರಕಟವಾಗುತ್ತಿರುವ ದಿನಮಾನವಿದು. ಪ್ರಕರಣಗಳ ಹಿಂದಿನ ಮಾನವೀಯ ಸೂಕ್ಷ್ಮಗಳು ಹಾಗೂ ವಾಸ್ತವವನ್ನು ಪ್ರಕಟಗೊಳ್ಳುವ ಕಥನಗಳು ಗೌಣವಾಗಿಸುವುದೇ ಹೆಚ್ಚು. ಹೀಗಾದಾಗ ನಿರ್ದಿಷ್ಟ ಸಮುದಾಯದ ಕುರಿತು ಸಾಮಾನ್ಯೀಕೃತ ಅಭಿಪ್ರಾಯ ರೂಪುಗೊಳ್ಳಲು ಕುಮ್ಮಕ್ಕು ನೀಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಅವನ್ನು ‘ಮುಲ್ಕ್‌’ ಸಿನಿಮಾ ಪ್ರಶ್ನಿಸುತ್ತದೆ. ಹೀಗಾಗಿಯೇ ಈ ಸಿನಿಮಾ ಬಿಡುಗಡೆ ಕೂಡದು ಎಂದು ಕೆಲವರು ಆಗ್ರಹಿಸಿದ್ದು.

ನಿರೂಪಣಾ ತಂತ್ರಕ್ಕಿಂತ ಉದ್ದೇಶಕ್ಕೇ ಆದ್ಯತೆ

ಸಿನಿಮಾ ಪ್ರಾರಂಭವಾಗುವುದು ಮುರಾದ್ ಅಲಿ ಕುಟುಂಬದಲ್ಲಿನ ಸಮಾರಂಭದ ಘಳಿಗೆಯಿಂದ. ಅಲ್ಲಿನ ಅತಿಥಿಗಳ ಸಾಲಿನಲ್ಲಿ ಇರುವ ಹಿಂದೂ ಧರ್ಮದ ಒಬ್ಬರಿಗೆ ಇವರ ಮನೆಯ ಮಾಂಸದ ತುಣುಕುಗಳೆಂದರೆ ಬಾಯಿಯಲ್ಲಿ ನೀರು. ಆದರೂ ಎಲ್ಲರಿಗೆ ಗೊತ್ತಾಗುವಂತೆ ಅದನ್ನು ಸವಿಯುವಷ್ಟು ಬಿಂದಾಸ್‌ ವ್ಯಕ್ತಿ ಅವರಲ್ಲ. ಈ ಸೂಕ್ಷ್ಮ ಮುರಾದ್‌ ಅಲಿ ಕುಟುಂಬಕ್ಕೂ ಗೊತ್ತಿದೆ. ಸಣ್ಣ ನಗರಗಳಲ್ಲಿನ ಧರ್ಮಾತೀತವಾದ ಮನುಷ್ಯ ಸಹಜ ಹೊಂದಾಣಿಕೆಯನ್ನು ತೆರೆದಿಡುವ ದೃಶ್ಯವಿದು.

ಬಾಂಬ್‌ ಸ್ಫೋಟದ ನಂತರ ಈ ಹೊಂದಾಣಿಕೆಯೇ ಇಲ್ಲವಾಗುತ್ತದೆ. ಮುರಾದ್ ಅಲಿ ಮನೆಯ ಮೇಲೆ ನಡುರಾತ್ರಿಯಲ್ಲಿ ಕಲ್ಲುಗಳನ್ನು ಎಸೆಯುವ ಕಾಣದ ಕಿಡಿಗೇಡಿಗಳ ಮನಸ್ಥಿತಿ. ತನ್ನ ಮಗ ಭಯೋತ್ಪಾದಕ ಆದದ್ದು ಹೇಗೆ ಎಂದೇ ತಿಳಿಯದ ಅಮಾಯಕ ಬಿಲಾಲ್‌ನ ಒದ್ದಾಟ–ಸಾವು, ಕೋರ್ಟಿನಲ್ಲಿ ಎದುರಾಗುವ ಪ್ರಶ್ನೆಗಳ ಕೂರಂಬುಗಳಿಗೆ ಬೇಗುದಿಯಲ್ಲೂ ಉತ್ತರ ಹುಡುಕಬೇಕಾದ ಅನಿವಾರ್ಯ... ಇವು ಸಿನಿಮಾದ ಆತ್ಮವನ್ನು ಗಟ್ಟಿಗೊಳಿಸುತ್ತವೆ.

ಇದನ್ನು ಸಸ್ಪೆನ್ಸ್‌ ಸಿನಿಮಾ ಆಗಿಸಬಹುದಾದ ಸಾಧ್ಯತೆ ಇತ್ತು. ಆದರೆ, ನಿರ್ದೇಶಕರಿಗೆ ‘ಪೊಲಿಟಿಕಲ್‌ ಸ್ಟೇಟ್‌ಮೆಂಟ್‌’ ಕೊಡುವುದೇ ಮುಖ್ಯವಾಗಿದೆ. ಅದಕ್ಕೇ ಅವರು ಕೋರ್ಟ್‌ ಕಲಾಪಕ್ಕೆ ಪ್ರಕರಣವನ್ನು ಎಳೆದು ತರುತ್ತಾರೆ. ಅಲ್ಲಿನ ವಾದ–ಪ್ರತಿವಾದಗಳಲ್ಲಿ ‘ಇಸ್ಲಾಮೋಫೋಬಿಕ್‌’ ಧೋರಣೆಯ ಜೇನಿಗೆ ಕಲ್ಲು. ದಶಕಗಳಿಂದ ಒಂದು ನಗರದಲ್ಲಿ ಇರುವ ದೇಶಭಕ್ತ ಮುರಾದ್ ಅಲಿ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಿಕೊಳ್ಳಲು ಪರದಾಡುವ ಪರಿಯನ್ನು ನಿರ್ದೇಶಕರು ಹೋರಾಟದ ಕಥನವನ್ನಾಗಿ ಕಟ್ಟಿದ್ದಾರೆ. ಮಾವನಿಗೆ ಗೌರವವನ್ನು ಮರಳಿ ದಕ್ಕಿಸಿಕೊಡಲು ನಿಂತ ವಕೀಲೆ ಸೊಸೆ ಸಿನಿಮಾದ ಎರಡನೇ ಅರ್ಧವನ್ನು ಆವರಿಸಿಕೊಳ್ಳುತ್ತಾಳೆ.

ಮುರಾದ್ ಅಲಿಯಾಗಿ ರಿಷಿ ಕಪೂರ್ ಅವರದ್ದು ಮಾಗಿದ ಅಭಿನಯ. ಪರಕಾಯ ಪ್ರವೇಶ ಎನ್ನಬೇಕು. ‘ಇಸ್ಲಾಮೋಫೋಬಿಕ್’ ನ್ಯಾಯವಾದಿಯಾಗಿ ಆಶುತೋಷ್‌ ರಾಣಾ ಕಿಚ್ಚಿಗೆ ಇಂಧನವಾಗಿದ್ದಾರೆ. ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ರಜತ್‌ ಕಪೂತ್‌ ಮೌನದಲ್ಲೇ ದಾಟಿಸುವ ಭಾವಗಳು ಅಸಂಖ್ಯ. ಅದೊಂಥರಾ ಆತ್ಮವಿಮರ್ಶೆಗಿಳಿದ ಪಾತ್ರ. ಆ ಅಧಿಕಾರಿ ಹಾಗೂ ಆರತಿ ಪಾತ್ರದ ಮುಖಾಮುಖಿ ಕೂಡ ಅತಿಸೂಕ್ಷ್ಮವಾದದ್ದು. ತಾಪ್ಸಿ ಪನ್ನು ಆರತಿಯ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಗ್ಲ್ಯಾಮರ್‌ ಇಲ್ಲದೆಯೂ ಹಿಂದಿ ಚಿತ್ರರಂಗದಲ್ಲಿ ಅವರು ಮೂಡಿಸುತ್ತಿರುವ ಛಾಪು ಅನನ್ಯ ಎನ್ನುವುದಕ್ಕೆ ಈ ಪಾತ್ರ ಇನ್ನೊಂದು ಉದಾಹರಣೆ. ಬಿಲಾಲ್‌ ಪಾತ್ರದ ಸಂಕಷ್ಟಗಳನ್ನೆಲ್ಲ ಹೊತ್ತು ಕಂಪಿಸುವ ಮನೋಜ್ ಪಹ್ವಾ ಕೂಡ ಕಾಡುತ್ತಾರೆ.

ಬೆಳಕಿಗಿಂತ ಹೆಚ್ಚು ಕತ್ತಲಿನಲ್ಲೇ ಹೆಣೆದ ದೃಶ್ಯಗಳು (ಸಿನಿಮಾಟೋಗ್ರಫಿ: ಇವಾನ್ ಮುಲ್ಲಿಗನ್‌) ದೊಡ್ಡ ಸಮಸ್ಯೆಯೊಂದರ ರೂಪಕವೂ ಆಗಿವೆ. ‘ರಾ. ಒನ್’ ತರಹದ ದುರ್ಬಲ ಸಿನಿಮಾ ಕೊಟ್ಟಿದ್ದ, ‘ತುಮ್‌ ಬಿನ್’ ರೀತಿಯ ರೊಮ್ಯಾಂಟಿಕ್ ಚಲನಚಿತ್ರಕ್ಕೆ ಆ್ಯಕ್ಷನ್/ಕಟ್ ಹೇಳಿದ್ದ ಅನುಭವ್ ಸಿನ್ಹ ದೊಡ್ಡ ಜಿಗಿತದ ಸಿನಿಮಾ ಕೂಡ ಇದಾಗಿದೆ.

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !