ಬೇರೆ ವಾರ್ಡ್‌ಗಳ‌ತ್ತ ದೃಷ್ಟಿ ಹರಿಸಿದ ಹಾಲಿ ಸದಸ್ಯರು

7
ಚಾಮರಾಜನಗರ ನಗರಸಭೆ: ಮೀಸಲಾತಿ ಬದಲಾವಣೆಯಿಂದ ಕೈತಪ್ಪಲಿರುವ ವಾರ್ಡ್‌

ಬೇರೆ ವಾರ್ಡ್‌ಗಳ‌ತ್ತ ದೃಷ್ಟಿ ಹರಿಸಿದ ಹಾಲಿ ಸದಸ್ಯರು

Published:
Updated:
Deccan Herald

ಚಾಮರಾಜನಗರ:‌ ನಗರಸಭೆಯ ವಾರ್ಡ್‌ ಮೀಸಲಾತಿ ಬದಲಾಗಿರುವುದು ಚಾಮರಾಜನಗರ ನಗರಸಭೆಯ ಹಲವು ಹಾಲಿ ಸದಸ್ಯರ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.

ನಗರಸಭೆಗೆ ಪುನರ್‌ಆಯ್ಕೆಯಾಗಲು ಬಯಸುತ್ತಿರುವ ಇವರೆಲ್ಲ ಈಗ ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ಗಳನ್ನು ಬೇರೆಯವರಿಗೆ ಬಿಟ್ಟುಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಇವರು ಬೇರೆ ವಾರ್ಡ್‌ಗಳ ಹುಡುಕಾಟದಲ್ಲಿದ್ದಾರೆ.

ನಗರಸಭೆಯ ಹಾಲಿ ಉಪಾಧ್ಯಕ್ಷ ಆರ್‌.ಎಂ.ರಾಜಪ್ಪ (28ನೇ ವಾರ್ಡ್‌), ಹಿರಿಯ ಸದಸ್ಯ ಕಾಂಗ್ರೆಸ್‌ನ ಎಸ್‌. ನಂಜುಂಡಸ್ವಾಮಿ (14ನೇ ವಾರ್ಡ್‌), ಬಿಜೆಪಿಯ ನಾರಾಯಣಸ್ವಾಮಿ (16ನೇ ವಾರ್ಡ್‌), ಎಸ್‌ಡಿಪಿಐನ ಸಿ.ಎಸ್‌.ಸೈಯದ್‌ ಆರೀಫ್‌ (12ನೇ ವಾರ್ಡ್‌), ಬಿಜೆಪಿಯ ಸೆಲ್ವಿಬಾಬು (2ನೇ ವಾರ್ಡ್‌) ಸೇರಿದಂತೆ ಇನ್ನೂ ಕೆಲವರಿಗೆ ಈ ಬಾರಿ ತಮ್ಮ ವಾರ್ಡ್‌ಗಳಲ್ಲೇ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಬೇರೆ ವಾರ್ಡ್‌ಗಳತ್ತ ದೃಷ್ಟಿ ನೆಟ್ಟಿದ್ದಾರೆ. ಇದಕ್ಕಾಗಿ ತಮ್ಮ ಬೆಂಬಲಿಗರೊಂದಿಗೆ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. 

ಪಕ್ಷದ ಬೆಂಬಲಿಗರು ಮತ್ತು ತಮ್ಮ ಸಮುದಾಯದ ಮತದಾರರು ಹೆಚ್ಚಾಗಿರುವ ವಾರ್ಡ್‌ಗಳಿಂದ ಸ್ಪರ್ಧಿಸಲು ಇವರೆಲ್ಲ ಯೋಚಿಸುತ್ತಿದ್ದಾರೆ. ಆದರೆ, ಈಗಾಗಲೇ ಆ ವಾರ್ಡ್‌ಗಳಿಂದ ಸ್ಪರ್ಧಿಸಲು ಬಯಸಿರುವ ಸ್ಥಳೀಯ ಮುಖಂಡರು, ಬೇರೆ ಕಡೆಯಿಂದ ಬರುವವರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆಯೇ ಎಂಬುದನ್ನು ನೋಡಬೇಕು. ಒಂದು ವೇಳೆ, ತೀವ್ರ ವಿರೋಧ ವ್ಯಕ್ತವಾದರೆ ಇವರು ಸ್ಪರ್ಧಿಸುವ ಗೋಜಿಗೆ ಹೋಗದೆ, ಈಗ ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ಗಳಲ್ಲಿ ತಮಗೆ ಬೇಕಾದವರನ್ನು ನಿಲ್ಲಿಸುವ ಸಾಧ್ಯತೆ ಇದೆ.

ಪಕ್ಷದ ಉನ್ನತ ಮಟ್ಟದ ನಾಯಕರಿಗೆ ಆತ್ಮೀಯರಾಗಿರುವವರು, ಸ್ಥಳೀಯ ರಾಜಕೀಯದಲ್ಲಿ ಪ್ರಭಾವ ಹೊಂದಿರುವವರು, ಹಣಬಲ, ಜಾತಿಬಲ ಹೊಂದಿರುವವರು ತಮಗೆ ಬೇಕಾದ ವಾರ್ಡ್‌ನಿಂದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳುತ್ತವೆ ವಿವಿಧ ಪಕ್ಷಗಳ ಮೂಲಗಳು.

ಆಕಾಂಕ್ಷಿಗಳ ದುಂಬಾಲು: ಈ ನಡುವೆ, ಚುನಾವಣಾ ಅಧಿಸೂಚನೆ ಹೊರಡಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಬಯಸಿರುವವರು ಪಕ್ಷಗಳ ಕಚೇರಿಗೆ ಎಡತಾಕುತ್ತಿದ್ದಾರೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಪ್ರತಿ ವಾರ್ಡ್‌ನಿಂದ ಕನಿಷ್ಠ 3ರಿಂದ 4 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಹಾಕುತ್ತಿದ್ದಾರೆ. ಇದನ್ನು ಪಕ್ಷಗಳ ಜಿಲ್ಲಾ ಮುಖಂಡರೇ ಖಚಿತ ಪಡಿಸಿದ್ದಾರೆ. ಪಕ್ಷದ ಪ್ರಾಬಲ್ಯ ಹೆಚ್ಚಾಗಿರುವ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಬಯಸುತ್ತಿರುವವರ ಸಂಖ್ಯೆ ಹೆಚ್ಚಿದೆ.

ರಾಜ್ಯದ ನಾಯಕರಿಂದ ಒತ್ತಡ: ಇನ್ನೂ ಕೆಲವರು ಪಕ್ಷದ ರಾಜ್ಯಮಟ್ಟದ ನಾಯಕರು, ಸಚಿವರ ಮೂಲಕ ಸ್ಥಳೀಯ ನಾಯಕರ ಮೇಲೆ ಒತ್ತಡ ಹಾಕಿಸಿ, ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ.

ಜಾತಿ ಲಾಬಿ: ಈ ಬಾರಿ ಜಾತಿ ಲಾಬಿಯೂ ಜೋರಾಗಿ ಇದೆ. ಆಯಾ ವಾರ್ಡ್‌ಗಳಲ್ಲಿ ಪ್ರಬಲವಾಗಿರುವ ಜಾತಿ ಸಂಘಟನೆಗಳು ತಮ್ಮ ಸಮುದಾಯದವರಿಗೇ ಟಿಕೆಟ್‌ ನೀಡುವಂತೆ ನಾಯಕರ ಮೇಲೆ ಒತ್ತಡ ಹಾಕುತ್ತಿವೆ.

ಉದ್ಯಮಿಗಳು, ಬಡ್ಡಿ ವಹಿವಾಟು ನಡೆಸುವವರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕೂಡ ಈ ಸಲ ನಗರಸಭೆಯ ಮೇಲೆ ಕಣ್ಣಿಟ್ಟಿದ್ದು, ಪಕ್ಷಗಳ ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ.

ಗೆಲ್ಲುವವರಿಗೆ ಮಣೆ

ಎಷ್ಟೇ ಅರ್ಜಿಗಳು ಬಂದರೂ, ರಾಜಕೀಯ ಪಕ್ಷಗಳು ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಿವೆ. ಆಕಾಂಕ್ಷಿಗಳ ಸಾಮರ್ಥ್ಯ, ಅವರಿಗಿರುವ ಜನ ಬೆಂಬಲವನ್ನು ಪರಿಗಣಿಸಿಯೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

ಕೊಳ್ಳೇಗಾಲದಲ್ಲೂ ಭಾರಿ ಪೈಪೋಟಿ

ಕೊಳ್ಳೇಗಾಲದ ನಗರಸಭೆಯ ಚಿತ್ರಣವೂ ಭಿನ್ನವಾಗಿಲ್ಲ. ಟಿಕೆಟ್‌ಗಾಗಿ ಪಕ್ಷಗಳ ಮುಖಂಡರ ನಡುವೆಯೇ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಎಲ್ಲ ಪಕ್ಷಗಳಲ್ಲೂ ಪ್ರತಿ ವಾರ್ಡ್‌ನಿಂದ 3ರಿಂದ–4 ಮಂದಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು 8ರಿಂದ 10 ಮಂದಿ ಪೈಪೋಟಿ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !