ಮತಗಟ್ಟೆಗೆ ಸಿಬ್ಬಂದಿ; ಮತದಾನಕ್ಕೆ ಸಕಲ ಸಿದ್ಧತೆ

ಭಾನುವಾರ, ಮೇ 26, 2019
30 °C
ಮಂಗಳವಾರ ಬೆಳಿಗ್ಗೆ 7ರಿಂದ ಮುಸ್ಸಂಜೆ 6ರವರೆಗೂ ಮತದಾನ

ಮತಗಟ್ಟೆಗೆ ಸಿಬ್ಬಂದಿ; ಮತದಾನಕ್ಕೆ ಸಕಲ ಸಿದ್ಧತೆ

Published:
Updated:
Prajavani

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮಂಗಳವಾರ ನಡೆಯಲಿದ್ದು, ನಿಯೋಜನೆಗೊಂಡ ಸಿಬ್ಬಂದಿ ಸೋಮವಾರ ಮಸ್ಟರಿಂಗ್ ಕಾರ್ಯ ಪೂರ್ಣಗೊಳಿಸಿಕೊಂಡು ಮತಗಟ್ಟೆಗಳಿಗೆ ತೆರಳಿತು.

ನಗರದ ದರಬಾರ ಹೈಸ್ಕೂಲ್ ಆವರಣದಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಹಾಗೂ ಸೈನಿಕ ಶಾಲೆಯ ಆವರಣದಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು.

ಬೆಳಿಗ್ಗೆಯಿಂದಲೇ ಚುನಾವಣಾ ಸಿಬ್ಬಂದಿ ಸೈನಿಕ ಶಾಲೆ, ದರಬಾರ ಪ್ರೌಢಶಾಲೆಯತ್ತ ಹೆಜ್ಜೆ ಹಾಕಿತು. ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ, ವಿವಿ ಪ್ಯಾಟ್, ಇವಿಎಂ ಸೀಲ್ ಮಾಡುವ ಟ್ಯಾಗ್, ಕ್ಯಾಂಡಲ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಂಡು, ತಾವು ನಿಯೋಜಿತರಾಗಿರುವ ಮತಗಟ್ಟೆ ಕೇಂದ್ರಗಳತ್ತ ಪ್ರಯಾಣ ಬೆಳೆಸಿತು.

ತಮಗೆ ಯಾವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಇವಿಎಂ ಯಂತ್ರ, ವಿವಿ ಪ್ಯಾಟ್‌ಗಳ ತಾಂತ್ರಿಕ ವಿವರಣೆ ಹಾಗೂ ಪರಿಶೀಲನೆ ನಡೆಸಿದರು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ವಿಶೇಷ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಿಯೋಜನೆಗೊಂಡಿರುವ ಸ್ಥಳ, ಅದೇ ಸ್ಥಳಕ್ಕೆ ನಿಯೋಜಿತಗೊಂಡಿರುವ ಇನ್ನಿತರ ಸಿಬ್ಬಂದಿಗಳ ವಿವರವನ್ನು ನೀಡಲಾಯಿತು.

ವಿಶೇಷ ಬಸ್; ಕೋಲ್ಡ್ ವಾಟರ್

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಂದ ಆಯಾ ತಾಲ್ಲೂಕಿನ ಕೇಂದ್ರಗಳಿಗೆ ತೆರಳಲು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆಯಾ ತಾಲ್ಲೂಕು ಕೇಂದ್ರದ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯವರೆಗೂ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.

ದರಬಾರ ಹೈಸ್ಕೂಲ್ ಮೈದಾನ, ಸೈನಿಕ ಶಾಲೆಯಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕರೆದುಕೊಂಡು ಹೋಗಲು ಕೆಎಸ್ಆರ್‌ಟಿಸಿ ಬಸ್‌ಗಳು ಸಾಲು ಸಾಲಾಗಿ ನಿಂತಿದ್ದವು. ಯಾವ ಕ್ಷೇತ್ರಕ್ಕೆ ಯಾವ ಬಸ್ ಹೋಗುತ್ತದೆ ಎಂಬ ಮಾಹಿತಿ ಕಲೆ ಹಾಕಿ, ಸಿಬ್ಬಂದಿ ಬಸ್ ಹತ್ತಿ ಕರ್ತವ್ಯಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

258 ಸಾರಿಗೆ ಇಲಾಖೆಯ ಬಸ್‌ಗಳು, ಶಾಲಾ ವಾಹನ, ಮಿನಿ ಕ್ರೂಸರ್, ಜೀಪ್ ಸೇರಿದಂತೆ ಒಟ್ಟು 408 ವಾಹನಗಳನ್ನು ಮತದಾನ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು.

ದರಬಾರ ಶಾಲೆ, ಸೈನಿಕ ಶಾಲೆ ಆವರಣದಲ್ಲೇ ಸಿಬ್ಬಂದಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳಕ್ಕೆ ಬಸವಳಿದ ಸಿಬ್ಬಂದಿಯ ಅನುಕೂಲಕ್ಕಾಗಿ ಕೋಲ್ಡ್ ಮಿನರಲ್ ವಾಟರ್ ಕ್ಯಾನ್ ಮೂಲಕ ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ ಸಹ ವಿತರಿಸಲಾಯಿತು.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಎಂಜಿವಿಸಿ ಮಹಾವಿದ್ಯಾಲಯ, ದೇವರಹಿಪ್ಪರಗಿಯಲ್ಲಿ ಎ.ಬಿ.ಸಾಲಕ್ಕಿ ಪದವಿ ಪೂರ್ವ ಮಹಾವಿದ್ಯಾಲಯ, ಬಸವನಬಾಗೇವಾಡಿಯಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ, ಬಬಲೇಶ್ವರದಲ್ಲಿ ಸರ್ಕಾರಿ ಐಟಿಐ ಕಾಲೇಜು, ಇಂಡಿಯಲ್ಲಿ ಆದರ್ಶ ಮಹಾವಿದ್ಯಾಲಯ, ಸಿಂದಗಿಯಲ್ಲಿ ಪಿ.ಜಿ.ಪೋರವಾಲ, -ಎ.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿನ ಮಸ್ಟರಿಂಗ್ ಕೇಂದ್ರಗಳಿಂದಲೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ, ಪೂರಕ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !