ಮೈಸೂರು ವಿವಿ: ನೇಮಕಾತಿ ಎತ್ತಿ ಹಿಡಿದ ಹೈಕೋರ್ಟ್‌

7

ಮೈಸೂರು ವಿವಿ: ನೇಮಕಾತಿ ಎತ್ತಿ ಹಿಡಿದ ಹೈಕೋರ್ಟ್‌

Published:
Updated:

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 2006–2007ನೇ ಸಾಲಿನಲ್ಲಿ ನಡೆದಿದ್ದ ಸಹಾಯಕ ಪ್ರೊಫೆಸರ್ ಸೇರಿದಂತೆ 135 ಬೋಧಕ ಸಿಬ್ಬಂದಿಯ ನೇಮಕಾತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ನೇಮಕಾತಿ ರದ್ದುಗೊಳಿಸಿ ಉನ್ನತ ಶಿಕ್ಷಣ ಇಲಾಖೆ 2014ರ ಜೂನ್‌ 18ರಂದು ಹೊರಡಿಸಿದ್ದ ಅದೇಶವನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಅನೂರ್ಜಿತಗೊಳಿಸಿದೆ.

‘ನೇಮಕಾತಿ ರದ್ದುಪಡಿಸುವ ಮುನ್ನ ಸರ್ಕಾರ ಸ್ವಾಭಾವಿಕ ನ್ಯಾಯ ಪಾಲನೆ ಮಾಡಿಲ್ಲ. ಈಗ ಸರ್ಕಾರ ತನ್ನ ವಿವೇಚನೆ ಬಳಸಿ ಹೊಸ ನಿರ್ಧಾರ ಕೈಗೊಳ್ಳಬಹುದು’ ಎಂದು ನ್ಯಾಯಪೀಠ ಆದೇಶಿಸಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ರಿಜಿಸ್ಟ್ರಾರ್ ಆಗಿದ್ದ ಡಾ.ಸಿ.ಬಸವರಾಜು ಸೇರಿದಂತೆ ಹಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಎಂ.ಎಸ್.ಭಾಗವತ್ ವಾದ ಮಂಡಿಸಿದ್ದರು.

ಏನಿದು ಪ್ರಕರಣ?: ಡಾ.ಜೆ.ಶಶಿಧರ್ ಪ್ರಸಾದ್ ವಿ.ವಿಯ ಕುಲಪತಿಯಾಗಿದ್ದ 2006 ಮತ್ತು 2007ರ ಅವಧಿಯಲ್ಲಿ 135 ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿತ್ತು. ನೇಮಕಗೊಂಡಿದ್ದ ಎಲ್ಲರೂ ಕಾರ್ಯ ನಿರ್ವಹಿಸುತ್ತಿದ್ದರು. 

‘ಈ ನೇಮಕಾತಿಯಲ್ಲಿ ರೋಸ್ಟರ್ ಮತ್ತು ಮೀಸಲು ಪಾಲನೆ ಮಾಡಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ’ ಎಂಬ ದೂರು ಕೇಳಿ ಬಂದಿದ್ದವು. ಈ ಕಾರಣಕ್ಕೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಎಚ್.ರಂಗವಿಠಲಾಚಾರ್ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮಾಡಿತ್ತು.

ವಿಚಾರಣೆ ನಡೆಸಿದ್ದ ಆಯೋಗವು, ‘ಮೇಲ್ನೋಟಕ್ಕೆ ನಿಯಮಗಳ ಉಲ್ಲಂಘನೆಯಾಗಿದೆ. ಶಶಿಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅನುಭವ, ಅರ್ಹತೆ ಮತ್ತು ಮೀಸಲು ನಿಯಮಗಳನ್ನು ಪಾಲನೆ ಮಾಡಿಲ್ಲ. ನೇಮಕಾತಿ ಕಳಂಕದಿಂದ ಕೂಡಿದೆ. ಹಾಗಾಗಿ ನೇಮಕಾತಿ ರದ್ದುಗೊಳಿಸಬೇಕು’ ಎಂದು ಶಿಫಾರಸು ಮಾಡಿತ್ತು.

ಈ ಶಿಫಾರಸಿನ ಅನ್ವಯ 2014ರ ಜೂನ್‌ 18 ರಂದು ಉನ್ನತ ಶಿಕ್ಷಣ ಇಲಾಖೆ ಎಲ್ಲ 135 ನೇಮಕಗಳನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಆದೇಶಕ್ಕೆ ಹೈಕೋರ್ಟ್‌ 2014ರಲ್ಲೇ ಮಧ್ಯಂತರ ತಡೆ ನೀಡಿತ್ತು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !