ನರ್ಗಿಸ್‌ ಸಪೂರ ಸೂತ್ರ

ಬುಧವಾರ, ಏಪ್ರಿಲ್ 24, 2019
32 °C

ನರ್ಗಿಸ್‌ ಸಪೂರ ಸೂತ್ರ

Published:
Updated:
Prajavani

ಬಾಲಿವುಡ್‌ ಸುಂದರಿ ನರ್ಗಿಸ್ ಫಕ್ರಿ ಸಪೂರವಿದ್ದ ಕಾರಣಕ್ಕೆ ’ಬಾಡಿ ಶೇಮಿಂಗ್‌‘ನ ಕಿರಿಕಿರಿ ಅನುಭವಿಸಿದವರು. ನಟನೆ ಮತ್ತು ನೃತ್ಯದಲ್ಲಿ ಪಳಗಿದ್ದರೂ ಅವರ ಯಾವ ಚಿತ್ರಗಳೂ ಸೂಪರ್‌ ಹಿಟ್‌ ಆಗಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಬಾಲಿವುಡ್‌ ಚಿತ್ರಗಳ ಮೂಲಕ ಸುದ್ದಿಯಲ್ಲಿದ್ದರು. ಸಪೂರ ಸುಂದರಿಯಾಗಿದ್ದ ಈ ಅಮೆರಿಕನ್‌ ಬೆಡಗಿ ಒಮ್ಮೆ ತೂಕ ಹೆಚ್ಚಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಇದೀಗ ನರ್ಗಿಸ್‌ ಮತ್ತೆ ಸಪೂರ ಸೂತ್ರ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

’ದಪ್ಪಗಿದ್ದರೂ ಜನ ಮಾತಾಡುತ್ತಾರೆ, ಸಣ್ಣಗಿದ್ದರೂ ಟೀಕಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ಬಾಳ್ವೆ ನಡೆಸುವುದು ಬಹಳ ಕಷ್ಟದ ಕೆಲಸವಪ್ಪಾ‘ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಡುಸುಯ್ದಿದ್ದಾರೆ.

’ರಾಕ್‌ಸ್ಟಾರ್‌‘ ಮೂಲಕ 2011ರಲ್ಲಿ ಬಾಲಿವುಡ್‌ನ ಗಮನ ಸೆಳೆದ ಈ ನಟಿ ಅಮೆರಿಕ ಮೂಲದವರಾದರೂ ಮುಖ ಲಕ್ಷಣ ಮತ್ತು ಬಣ್ಣದಿಂದಾಗಿ ಪಾಕಿಸ್ತಾನಿ ಎಂದೇ ಎಲ್ಲರೂ ಭಾವಿಸಿದ್ದರು. ಇದಕ್ಕೆ ಅವರು ಸ್ಪಷ್ಟೀಕರಣವನ್ನೂ ಕೊಡಬೇಕಾಗಿ ಬಂದಿತ್ತು. 

ಅನಾಮತ್ತು ತೂಕ ಇಳಿಸಿಕೊಂಡಿರುವ ಈ ಸುಂದರಿ ಅದೇ ಉಮೇದಿನಲ್ಲಿ, ದಪ್ಪಗಿರುವವರಿಗೆ ಕಿವಿಮಾತನ್ನೂ ಹೇಳಿದ್ದಾರೆ. ಏನೆಂದರೆ, ‘ನಾನೇ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿರುವಾಗ ನೀವೂ ಯಾಕೆ ಪ್ರಯತ್ನಿಸಬಾರದು’ ಎಂದು ಅವರು ಉತ್ತೇಜಕ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ನರ್ಗಿಸ್‌ ನೃತ್ಯ ಮತ್ತು ಯೋಗಪ್ರಿಯೆ. ಪ್ರವಾಸವೆಂದರೆ ಅಚ್ಚುಮೆಚ್ಚು. ಆದರೆ ಈ ಬಾರಿಯ ಫಿಟ್‌ನೆಸ್‌ ಸೂತ್ರದಲ್ಲಿ ಅವರು ಆಯ್ದುಕೊಂಡಿರುವುದು ಶಾಂತಿಮಂತ್ರವನ್ನು.

’ನಿಮ್ಮ ದೇಹದೊಂದಿಗೆ ಮನಸ್ಸಿಗೂ, ಬುದ್ಧಿಗೂ ಕೆಲಸ ಕೊಡಿ. ಸದಾ ಸಕಾರಾತ್ಮಕವಾಗಿ ಯೋಚಿಸಿ. ಆರೋಗ್ಯಕರವಾದುದನ್ನೇ ಆಯ್ದುಕೊಳ್ಳಿ. ನಾನು ನನ್ನ ಅತ್ಯುತ್ತಮವಾದ ಮಾದರಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ. ನೀವೂ ನನ್ನನ್ನು ಅನುಸರಿಸಬಹುದು‘ ಎಂದು ನರ್ಗಿಸ್‌ ಉಪ‍ದೇಶ ಮಾಡಿದ್ದಾರೆ.

ರಾಜ್‌ಕುಮಾರ್‌ ರಾವ್‌ ಜೊತೆಗಿನ ’5 ವೆಡ್ಡಿಂಗ್ಸ್‌‘ನಲ್ಲಿ ನಟಿಸಿದ್ದ ನರ್ಗಿಸ್‌ ಇದೀಗ ’ಟಾರ್ಬಾಜ್‌‘ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸಂಜಯ್‌ ದತ್ ಮತ್ತು ರಾಹುಲ್‌ ದೇವ್‌ ಜೊತೆ ಈ ಸುಂದರಿ ಕಾಣಿಸಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !