ಬುಧವಾರ, ಏಪ್ರಿಲ್ 21, 2021
23 °C

ಬೆಳ್ಳಿ ಪದಕ ಕುದುಕೊವ್‌ ಕುಟುಂಬದಲ್ಲೇ ಇರಲಿ: ಯೋಗೇಶ್ವರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿ ಪದಕ ಕುದುಕೊವ್‌ ಕುಟುಂಬದಲ್ಲೇ ಇರಲಿ: ಯೋಗೇಶ್ವರ್‌

ನವದೆಹಲಿ (ಪಿಟಿಐ): ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕುಸ್ತಿ ಪಟು ಯೋಗೇಶ್ವರ್ ದತ್‌ ತಮಗೆ ಬರಲಿದ್ದ ಬೆಳ್ಳಿ ಪದಕ ರಷ್ಯಾದ ಬೆಸಿಕ್‌ ಕುದುಕೊವ್‌ ಅವರ ಕುಟುಂಬಸ್ಥರಲ್ಲೇ ಉಳಿಯಲಿ ಎಂದಿದ್ದಾರೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ರಷ್ಯಾದ ಬೆಸಿಕ್‌ ಕುದುಕೊವ್‌ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದೆ. ಇದರಿಂದ ಆಗ ಮೂರನೇ ಸ್ಥಾನ ಪಡೆದಿದ್ದ ಯೋಗೇಶ್ವರ್‌ ಅವರಿಗೆ ಬೆಳ್ಳಿಯ ಪದಕದ ಅದೃಷ್ಟ ಒಲಿದು ಬಂದಿತ್ತು. ಆದರೆ, ಆ ಪದಕದ ಅವಕಾಶವನ್ನು ಯೋಗೇಶ್ವರ್‌ ನಯವಾಗಿಯೇ ನಿರಾಕರಿಸಿದ್ದಾರೆ.

‘ಬೆಸಿಕ್‌ ಕುದುಕೊವ್‌ ಉತ್ತಮ ಕಸ್ತಿಪಟು. ಅವರು ಸಾವನ್ನಪ್ಪಿದ ಬಳಿಕ ಉದ್ದೀಪನ ಮದ್ದು ಪರೀಕ್ಷೆಯ ವರದಿ ಬಂದಿರುವುದು ದುರಂತ. ಒಬ್ಬ ಕುಸ್ತಿ ಪಟುವಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದು ಯೋಗೇಶ್ವರ್‌ ಟ್ವೀಟ್‌ ಮಾಡಿದ್ದಾರೆ.


‘ಬೆಸಿಕ್‌ ಅವರಿಗೆ ಸಂದಿದ್ದ ಬೆಳ್ಳಿಯ ಪದಕ ಬೇಕಿದ್ದರೆ ಅವರ ಕುಟುಂಬಸ್ಥರಲ್ಲೇ ಇರಲಿ. ಅವರ ಕುಟುಂಬವನ್ನು ಗೌರವದಿಂದ ಕಾಣಲು ನಾನು ಬಯಸುತ್ತೇನೆ. ಮಾನವೀಯತೆಗಿಂತ ಯಾವುದೂ ನನಗೆ ದೊಡ್ಡದಲ್ಲ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಮತ್ತು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಕುದುಕೊವ್‌ ಅವರು 2013ರಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.