ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರಿಗೂ ಮಾರಕ ಬ್ರುಸೆಲ್ಲೋಸಿಸ್

Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೋಲಾರದ ಶಾಸಕರ ಫಾರಂನಲ್ಲಿ ಬ್ರುಸೆಲ್ಲೋಸಿಸ್ ಕಾಯಿಲೆ ಪೀಡಿತವಾಗಿರುವ 48 ಹಸುಗಳಿಗೆ ದಯಾಮರಣ ನೀಡಬೇಕೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ತೀರಾ ಹಳೆಯ ಕಾಯಿಲೆಯಾದರೂ ಇದರ ಬಗ್ಗೆ ಸೂಕ್ತ ಅರಿವು ಇಲ್ಲ.

ಮನುಷ್ಯರ ಜೀವಕ್ಕೂ ಅಪಾಯ ತಂದೊಡ್ಡಬಲ್ಲ ಈ ಕಾಯಿಲೆ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ

**
ತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ ವಿಪರೀತ ಸುಸ್ತು ಕಾಣಿಸಿಕೊಂಡಿತು.

ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್‌ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ.

ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.

ಆದರೆ ಈ ಕಾಯಿಲೆ ಹೇಗೆ ಬಂತು ಎಂಬುದು ಇಲ್ಲಿ ಕುತೂಹಲವಾಗಿರುವ ವಿಷಯ. ಸಾಮಾನ್ಯವಾಗಿ ವೈದಿಕರು ಯಾವುದೇ ಮನೆಗೆ ಹೋದರೂ ಅಲ್ಲಿ ಗೋಮೂತ್ರ, ಗೋಮಯ ಮತ್ತಿತರ ವಸ್ತುಗಳಿಂದ ಕೂಡಿದ ಪಂಚಗವ್ಯವನ್ನು ಸೇವಿಸಿ ಶುದ್ಧಿ ಮಾಡಿಮುಂದಿನ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.

ಪಶುವೈದ್ಯ ಮಿತ್ರರೊಬ್ಬರ ಪತ್ನಿಗೆ ಪದೇ ಪದೇ ಗರ್ಭಪಾತವಾಗುತ್ತಿತ್ತು. ಹಲವಾರು ಚಿಕಿತ್ಸೆಯ ನಂತರವೂ ಪರಿಣಾಮಕಾರಿಯಾಗಲೇ ಇಲ್ಲ. ನಂತರ ಅವರ ರಕ್ತ ಪರೀಕ್ಷೆ ಮಾಡಿಸಿದಾಗ ಬ್ರುಸೆಲ್ಲಾ ಕಾಯಿಲೆಯಿರುವುದು ಪತ್ತೆಯಾಯಿತು.

ಪಶುವೈದ್ಯರು ರೋಗಪೀಡಿತ ಜಾನುವಾರಿಗೆ ಚಿಕಿತ್ಸೆ ಮಾಡುವಾಗ ಅಥವಾ ಗರ್ಭಪಾತವಾದ ಆಕಳಿನ ಸತ್ತೆ ತೆಗೆಯುವಾಗ ಈ ರೋಗ ಬಂದಿತ್ತು. ಇದೇ ರೀತಿ ಜಾನುವಾರುಗಳ ಸಂಪರ್ಕದಲ್ಲಿರುವ ಹಲವರಿಗೆ ಈ ಕಾಯಿಲೆಯಿಂದ ತೊಂದರೆಯಾಗಿರುವುದು ಪತ್ತೆಯಾಗಿದೆ. ಪಶುವೈದ್ಯಕೀಯ ವೃತ್ತಿಯಲ್ಲಿರುವ ಹಲವರಿಗೆ ಈ ರೋಗವು ಇರುವ ಬಗ್ಗೆ ವರದಿಗಳಿವೆ.

ಕಾಯಿಲೆ– ಲಕ್ಷಣ
ಕಾಯಿಲೆಯು ಮನುಷ್ಯರಿಗೆ ರೋಗಪೀಡಿತ ಹಸುವಿನ ಮೂತ್ರವನ್ನು ಸೇವಿಸುವುದರಿಂದ, ಹಾಲನ್ನು ಕಾಯಿಸದೇ ಕುಡಿಯುವುದರಿಂದ, ಸತ್ತೆ ಮತ್ತು ಇತರ ವಸ್ತುಗಳ ಸಂಪರ್ಕ ಇತ್ಯಾದಿಗಳಿಂದ ಬರುತ್ತದೆ.

ಮನುಷ್ಯರಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ ಪದೇ ಪದೇ ಜ್ವರ ಬರುವುದು, ಅಸಾಧ್ಯ ಬೆನ್ನು ನೋವು, ಕೀಲು ನೋವು, ರಾತ್ರಿ ಬೆವರುವುದು ಮತ್ತು ಶರೀರದ ತೂಕ ಕ್ರಮೇಣ ಕಡಿಮೆಯಾಗುವುದು ಇತ್ಯಾದಿ.

ಈ ಕಾಯಿಲೆಯನ್ನು ಅಂಡ್ಯುಲೇಂಟ್ ಜ್ವರವೆಂದೂ ಕರೆಯುತ್ತಾರೆ. ಸ್ತ್ರೀಯರಲ್ಲಿ ಈ ಎಲ್ಲ ರೋಗ ಲಕ್ಷಣಗಳ ಜೊತೆ ಗರ್ಭಿಣಿಯಾದರೆ ಗರ್ಭಪಾತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಮಲೇರಿಯಾ, ಕ್ಷಯ, ವಿಷಮಶೀತಜ್ವರ ಮತ್ತಿತರ ಕಾಯಿಲೆಗಳನ್ನು ಹೋಲುವ ಇದೇ ರೀತಿ ರೋಗ ಲಕ್ಷಣ ಹೊಂದಿರುವ ಇತರ ಕಾಯಿಲೆಗಳಿಗೆ ಬಹಳಷ್ಟು ಸಲ ಚಿಕಿತ್ಸೆ ನೀಡಲಾಗುತ್ತದೆ.

ಕೆಲವೇ ಆಸ್ಪತ್ರೆಗಳಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವ ಸೌಲಭ್ಯಗಳಿವೆ. ಈ ರೋಗದ ಬಗ್ಗೆ ಪರಿಕಲ್ಪನೆ ಹೊಂದಿರುವ ತಜ್ಞ ವೈದ್ಯರು ಮಾತ್ರ ಸೂಕ್ತ ಪ್ರಯೋಗಶಾಲಾ ಪರೀಕ್ಷೆಯ ಸಹಾಯದಿಂದ ಈ ರೋಗವನ್ನು ಪತ್ತೆಹಚ್ಚಿ ಉತ್ತಮ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲರು.

ಕಂದು ರೋಗ ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ.

ಆರಂಭದಲ್ಲಿ ಪತ್ತೆ ಕಷ್ಟ
ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ.

ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು.

ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.

ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.

ರೋಗಾಣು ವೃದ್ಧಿ ಹೀಗೆ...
ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ.

ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.

ಜಾನುವಾರುಗಳಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು.

ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ.

ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ  ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.

ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು. ಆದರೆ ಆಕಳು ಅಥವಾ ಇತರ ನಾಲ್ಕು ಹೊಟ್ಟೆ ಹೊಂದಿರುವ ಪ್ರಾಣಿಗಳಲ್ಲಿ ಅವುಗಳ ದೊಡ್ಡಹೊಟ್ಟೆಯಲ್ಲಿ(ರುಮೆನ್) ಈ ಔಷಧಿಗಳು ನಿಷ್ಕ್ರಿಯಗೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ.

ಆದರೂ  ಇತ್ತೀಚಿಗೆ ಮಾರುಕಟ್ಟೆಗೆ ಬಂದ ಹಲವು ಆಧುನಿಕ ಜೀವನಿರೋಧಕ ಚುಚ್ಚುಮದ್ದುಗಳನ್ನು ಬಳಸಿ ತಜ್ಞ ಪಶುವೈದ್ಯರು ಈ ರೋಗವನ್ನು ವಾಸಿ ಮಾಡಬಹುದಾದರೂ ಚಿಕಿತ್ಸಾವೆಚ್ಚ ದುಬಾರಿ.

ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಉಪಯುಕ್ತ ವಿಧಾನ. ಲಸಿಕಾ ಪ್ರಯೋಗವು ಅತಿ ಮುಖ್ಯವಾದ ಮಾರ್ಗ. ಬ್ರುಸೆಲ್ಲಾ ಅಬೊರ್ಟಸ್ ಪ್ರಬೇಧ 19 ಜೀವಂತ ರೋಗಾಣುವನ್ನು  ಹೊಂದಿದ ಲಸಿಕೆಯನ್ನು 4–8 ತಿಂಗಳಿನ ವಯಸ್ಸಿನಲ್ಲಿ ಕೊಮರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯ.

ತುಂಬು ಗರ್ಭಧರಿಸಿದ ರಾಸುಗಳಿಗೆ ಈ ಲಸಿಕೆಯನ್ನು ನೀಡಿದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಸದ್ಯ ಇತರ ಉತ್ತಮ ಲಸಿಕೆಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ. ಲೇಖಕರ ಸಂಪರ್ಕ ಸಂಖ್ಯೆ: 080 23410509.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT