ಸೋಮವಾರ, ಏಪ್ರಿಲ್ 12, 2021
29 °C
ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ನೌಕೆಗೆ ಹಸಿರು ನಿಶಾನೆ

ನೌಕಾಪಡೆ ಬಲವೃದ್ಧಿಗೆ ‘ಮರ್ಮಗೋವಾ’

ಪಿಟಿಐ Updated:

ಅಕ್ಷರ ಗಾತ್ರ : | |

ನೌಕಾಪಡೆ ಬಲವೃದ್ಧಿಗೆ ‘ಮರ್ಮಗೋವಾ’

ಮುಂಬೈ : ಅತ್ಯಾಧುನಿಕ ಕ್ಷಿಪಣಿಗಳನ್ನು ಅಳವಡಿಸಿದ ಸಂಪೂರ್ಣ ಸ್ವದೇಶಿ ನಿರ್ಮಿತ ವಿಶ್ವ ದರ್ಜೆಯ ಯುದ್ಧ ನೌಕೆ ‘ಮರ್ಮಗೋವಾ’ವನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸನೀಲ್ ಲಾಂಬಾ ಶನಿವಾರ ಇಲ್ಲಿ ಉದ್ಘಾಟಿಸಿದರು. ಸರ್ಕಾರಿ ಒಡೆತನದ ಮುಂಬೈನ ಮಜಗಾಂವ್ ಹಡಗುಗಟ್ಟೆಯಲ್ಲಿ ಇದನ್ನು ನಿರ್ಮಿಸಲಾಗಿದ್ದು,  ಐಎನ್‌ಎಸ್‌ ವಿಶಾಖಪಟ್ಟಣಂ ಶ್ರೇಣಿಗೆ ಈ ಹಡಗು ಸೇರುತ್ತದೆ.15ಬಿ ಯೋಜನೆಯಡಿ ನಿರ್ಮಿಸ ಲಾದ ಈ ನೌಕೆಯನ್ನು ಲಾಂಬಾ ಅವರು ಪತ್ನಿ ರೀನಾ ಜತೆ ಉದ್ಘಾಟನೆ ಮಾಡಿದ ನಂತರ ಅರಬ್ಬಿ ಸಮುದ್ರದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ಬಿಡಲಾಯಿತು. ಕೆಲವು ಪರೀಕ್ಷೆಗಳನ್ನು ನಡೆಸಿದ ನಂತರ ಈ  ಯುದ್ಧ ನೌಕೆಯನ್ನು ಅಧಿಕೃತವಾಗಿ ನೌಕಾಪಡೆಗೆ ಸೇರಿಸಿ ಕೊಂಡು ‘ಐಎನ್ಎಸ್ ಮರ್ಮಗೋವಾ’ ಎಂದು ಕರೆಯಲಾಗುತ್ತದೆ.7,300 ಟನ್ ಭಾರ ಇರುವ ಈ ನೌಕೆ ಗಂಟೆಗೆ 30 ನಾಟಿಕಲ್ ಮೈಲಿಗಿಂತಲೂ (55 ಕಿ.ಮೀ)  ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಡಗಿನಿಂದ ಹಡಗಿಗೆ, ಹಡಗಿನಿಂದ ವಿಮಾನಕ್ಕೆ ಮತ್ತು ಹಡಗಿನಿಂದ  ಜಲಾಂತರ್ಗಾಮಿಗೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.ಇದಲ್ಲದೆ ಜಲಾಂತರ್ಗಾಮಿಗಳನ್ನು ನಾಶ ಮಾಡುವ ಸಾಮರ್ಥ್ಯದ ಎರಡು ಹೆಲಿಕಾಪ್ಟರ್‌ಗಳನ್ನು ಈ ನೌಕೆ ಹೊಂದಿದೆ. ಉದ್ಘಾಟನೆಗೂ ಮೊದಲು ಮಾತನಾಡಿದ ಲಾಂಬಾ ಅವರು, ‘ಹಡಗು ಸಂಪೂರ್ಣ ಸ್ವದೇಶಿ ನಿರ್ಮಿತವಾ ಗಿದ್ದರಿಂದ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗ’ ಎಂದು ಹೇಳಿದರು.ಈ ನೌಕೆಯ ಕಾರ್ಯಾಚರಣೆಯ ನಂತರ ಸಾಗರ ಭದ್ರತೆ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ತಜ್ಞರು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ತಜ್ಞರು ಈ ನೌಕೆಯ ವಿನ್ಯಾಸಕ್ಕೆ ಶ್ರಮಿಸಿದ್ದಾರೆ ಎಂದು ಲಾಂಬಾ ತಿಳಿಸಿದರು.ಇದೇ ಶ್ರೇಣಿಯ ಇನ್ನೂ ನಾಲ್ಕು ನೌಕೆಗಳನ್ನು 2020–24ರ ಅವಧಿಯಲ್ಲಿ ನಿರ್ಮಿಸಿ ನೌಕಾಪಡೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು. ಈ ಶ್ರೇಣಿಯ ಮೊದಲ ಯುದ್ಧ ನೌಕೆ ವಿಶಾಖಪಟ್ಟಣಂನ್ನು  2015ರ ಏಪ್ರಿಲ್ 20ರಂದು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.