ಅತ್ಯುನ್ನತ ಕೋರ್ಟ್‌ನಲ್ಲೇ ಅನ್ಯಾಯವಾದರೆ ಹೇಗೆ?

7

ಅತ್ಯುನ್ನತ ಕೋರ್ಟ್‌ನಲ್ಲೇ ಅನ್ಯಾಯವಾದರೆ ಹೇಗೆ?

Published:
Updated:
ಅತ್ಯುನ್ನತ ಕೋರ್ಟ್‌ನಲ್ಲೇ ಅನ್ಯಾಯವಾದರೆ ಹೇಗೆ?

ಬೆಂಗಳೂರು: ‘ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವ ಆದೇಶ ನೀಡುವ ಮೂಲಕ ಸುಪ್ರೀಂಕೋರ್ಟ್‌ ತಾನೂ ಮುಗ್ಗರಿಸಿದ್ದಲ್ಲದೆ, ಜನರನ್ನೂ ಸಂಕಟಕ್ಕೆ ದೂಡಿದೆ.  ಅತ್ಯುನ್ನತ ನ್ಯಾಯಾಲಯದಲ್ಲಿಯೇ ಅನ್ಯಾಯ ಆದರೆ ನಾವೆಲ್ಲಿಗೆ ಹೋಗಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆತಂಕ ವ್ಯಕ್ತಪಡಿಸಿದರು.‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಈ ಆದೇಶದಿಂದಾಗಿ ರಾಜ್ಯದ ಜನರಲ್ಲಿ ಅನಾಥ ಪ್ರಜ್ಞೆ ಕಾಡಲಾರಂಭಿಸಿದೆ. ಜನಸಾಮಾನ್ಯರು ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ’ ಎಂದರು.‘ನ್ಯಾಯಮೂರ್ತಿಗಳು ಅಷ್ಟು ಕಠೋರ ತೀರ್ಮಾನ ಪ್ರಕಟಿಸುವ ಬದಲು ಬೇರೊಂದು ಪೀಠಕ್ಕೆ ಪ್ರಕರಣ ವರ್ಗಾಯಿಸಬಹುದಿತ್ತು. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರ ವಾದ ಮಂಡಿಸಿದ ವಕೀಲ ನಾರಿಮನ್‌ ಅವರು ತಮ್ಮ ವೃತ್ತಿಯ ಉದ್ದಕ್ಕೂ ನ್ಯಾಯಮೂರ್ತಿಗಳನ್ನು ಗೌರವದಿಂದಲೇ ಕಾಣುತ್ತಾ ಬಂದಿದ್ದಾರೆ. ಮಂಗಳವಾರ ಅವರು ಏರಿದ ಧ್ವನಿಯಲ್ಲಿ ಮಾತನಾಡಿದರು ಎಂದರೆ ಆದೇಶದ ಪರಿಣಾಮ ಏನೆಂದು ಊಹಿಸಬಹುದು.  ಅದನ್ನು ಮನಗಂಡೇ ನಾರಿಮನ್‌ ಉಗ್ರ ರೂಪ ತಾಳಿದರು’ ಎಂದು ಹೇಳಿದರು. ‘ನಮ್ಮಲ್ಲೇ  ನೀರು ಇಲ್ಲದಿರುವಾಗ  ನೆರೆಯ ರಾಜ್ಯಕ್ಕೆ ನೀರನ್ನು ಕೊಟ್ಟು ಬದುಕಲು ಸಾಧ್ಯವೇ?

ಸುಪ್ರೀಂಕೋರ್ಟ್‌ ರಚಿಸಿದ ಮೇಲುಸ್ತುವಾರಿ ಸಮಿತಿಯು ಎರಡೂ ರಾಜ್ಯಗಳ ಜಲಾಶಯಗಳಲ್ಲಿನ ನೀರಿನ ಸ್ಥಿತಿಗತಿ ಅಧ್ಯಯನ  ನಡೆಸಿಯೇ  3 ಸಾವಿರ ಕ್ಯುಸೆಕ್‌ ನೀರು ಬಿಡಲು ಸೂಚಿಸಿತ್ತು. ಆದರೆ, ಸಮಿತಿ ಆದೇಶವನ್ನೂ ಸುಪ್ರೀಂಕೋರ್ಟ್‌ ಮಾನ್ಯ ಮಾಡಲಿಲ್ಲ. ಇದು ಎಂಥ ಸಂದೇಶವನ್ನು ನೀಡುತ್ತದೆ. ಇದರಿಂದ ಜನರಲ್ಲಿ ಯಾವ ಭಾವನೆ ಮೂಡುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ ’ಎಂದು ಸದಾಶಿವ ಹೇಳಿದರು.

ರಾಜ್ಯವು ಕಷ್ಟಕರ ಸ್ಥಿತಿಯಲ್ಲಿ ಇರುವಾಗ ರಾಜ್ಯ ಸರ್ಕಾರ ಏನೇ ತೀರ್ಮಾನ ಪ್ರಕಟಿಸಿದರೂ ಕನ್ನಡಿಗರೆಲ್ಲರೂ ಏಕಧ್ವನಿಯಲ್ಲಿ ಸಮರ್ಥಿಸಬೇಕು. ಎಲ್ಲ ರಾಜಕೀಯ ಪಕ್ಷಗಳೂ ಒಮ್ಮತ ಪ್ರದರ್ಶಿಸಬೇಕು. ಒಡಕು ಧ್ವನಿ, ಭಿನ್ನಾಭಿಪ್ರಾಯ ವ್ಯಕ್ತಪಡಿಸಿದಲ್ಲಿ ರಾಜ್ಯವೇ ನಗೆಪಾಟಿಲಿಗೆ ಈಡಾಗುತ್ತದೆ ಎಂದು ಎಚ್ಚರಿಸಿದರು.‘ಈ ಹಂತದಲ್ಲಿ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುವುದು ಕಷ್ಟವಾಗಬಹುದು. ನೀರಿದ್ದರೆ ನೀವೇ ಬಿಟ್ಟುಕೊಳ್ಳಿ ಎಂದರೆ ದಂಗೆ ಎದ್ದಂತೆ ಆಗುತ್ತದೆ. ಆದರೆ, ನಮಗೆ ಆಗಿರುವ ಅನ್ಯಾಯದ ಬಗ್ಗೆ ನೋವನ್ನು ವ್ಯಕ್ತಪಡಿಸುವ ವಿಧಾನ ಅದು.  ಪರಿಣಾಮ ಎದುರಿಸಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ನೀಡದಂತೆ ಸುಪ್ರೀಂಕೋರ್ಟ್‌ ಎಚ್ಚರ ವಹಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಬ್ರಿಟಿಷರ ತಂತ್ರ

‘ಕಾವೇರಿ ನೀರಿನ ವಿಚಾರದಲ್ಲಿ ಬ್ರಿಟಿಷರ ಕಾಲದಿಂದಲೂ ನಮಗೆ ಅನ್ಯಾಯ ಆಗುತ್ತಲೇ ಬಂದಿದೆ. ಬ್ರಿಟಿಷರಿಗೆ ಆಗ ಮದ್ರಾಸ್‌ ಮೇಲೆ ವಿಶೇಷ ಪ್ರೀತಿ ಇತ್ತು. ಪ್ರಾಯಶಃ ತಾವು ಈ ದೇಶದಲ್ಲೇ ಕಾಯಂ ಆಗಿ ಇರುತ್ತೇವೆ ಎಂದು ಭಾವಿಸಿ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಮದ್ರಾಸ್‌ ರಾಜ್ಯಕ್ಕೆ ಅನುಕೂಲ ಮಾಡಿ ಮೈಸೂರಿಗೆ ಅನ್ಯಾಯ ಮಾಡಿದ್ದರು.  ಬ್ರಿಟಿಷ್‌ ನ್ಯಾಯಾಧೀಶರು ತೀರ್ಪಿನ ಪ್ರತಿಯನ್ನು ಇಂಗ್ಲೆಂಡಿಗೆ ಒಯ್ದಿದ್ದರು’ ಎಂದು ಸದಾಶಿವ ನೆನಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry